Thursday, May 23, 2013
Last Updated: 9:14:34 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಆರ್ಥಿಕ ಸುಧಾರಣೆಯೆಂದರೆ ಬ್ಯಾನರ್ಜಿಗೆ ಅಲರ್ಜಿಯೇ?
  • ಪಿಂಚಣಿ ಮಸೂದೆಗೂ ಅಡ್ಡಿ
    • Udayavani | Jun 09, 2012

      ಮಮತಾ ಪ್ರತಿ ವಿಷಯದಲ್ಲೂ ಪ್ರತಿಷ್ಠೆಯನ್ನು ಅಡ್ಡ ತರುತ್ತಿದ್ದಾರೆ. ಆರ್ಥಿಕ ಸುಧಾರಣೆ ನೀತಿಯನ್ನು ಸರ್ಕಾರ ಒಪ್ಪಿಕೊಂಡು ಬಹಳ ವರ್ಷಗಳಾಗಿವೆ. ಅದನ್ನು ಹಂತಹಂತವಾಗಿ ಜಾರಿಗೊಳಿಸಿದೆ ವಿಧಿಯಿಲ್ಲ. ಪಿಂಚಣಿ ಸುಧಾರಣೆಯೂ ಅದರಲ್ಲೊಂದು.

      ಬಹು ನಿರೀಕ್ಷಿತ ಪಿಂಚಣಿ ಮಸೂದೆಯನ್ನು ಸದ್ಯಕ್ಕೆ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವುದಿಲ್ಲ. ಇನ್ನೇನಿದ್ದರೂ ಚಳಿಗಾಲದ ಅಧಿವೇಶನಕ್ಕೆ ಕಾಯಬೇಕು.

      ಸರ್ಕಾರದ ದಿಢೀರ್‌ ಹಿಂದೇಟಿಗೆ ಕಾರಣ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ. ಕೇಂದ್ರ ಸರ್ಕಾರದ ಜೊತೆ ಪ್ರತಿಷ್ಠೆಯ ಸಮರದಲ್ಲಿರುವ ಅವರು, ಈ ಮಸೂದೆ ಅಂತಿಮಗೊಳಿಸುವ ಮುನ್ನ ತಮ್ಮ ಒಪ್ಪಿಗೆ ಪಡೆದಿಲ್ಲ ಎಂಬ ಕಾರಣಕ್ಕೆ ಇದನ್ನು ವಿರೋಧಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯ ಸಿದ್ಧತೆಯಲ್ಲಿರುವ ಕಾಂಗ್ರೆಸ್‌, ಯುಪಿಎ ಅಂಗ ಪಕ್ಷಗಳನ್ನು ಈ ಸಂದರ್ಭದಲ್ಲಿ ಎದುರು ಹಾಕಿಕೊಳ್ಳುವುದು ಅಪಾಯಕಾರಿ ಎಂಬುದನ್ನು ಅರಿತು ಮಸೂದೆಯನ್ನೇ ಮುಂದಕ್ಕೆ ತಳ್ಳಿದೆ.

      ಮಮತಾ ಸೇರಿದಂತೆ ಎಲ್ಲ ಅಂಗಪಕ್ಷಗಳ ಮಾತನ್ನು ಈ ಸಂದರ್ಭದಲ್ಲಿ ಸ್ವಲ್ಪ ಹೆಚ್ಚೇ ಕೇಳುವುದು ಕಾಂಗ್ರೆಸ್ಸಿಗೇನೋ ಅನಿವಾರ್ಯ. ಆದರೆ, ಮೈತ್ರಿ ಪಕ್ಷಗಳಿಗೂ ಒಂದು ಧರ್ಮವಿದೆ. ಅದನ್ನವು ಪಾಲಿಸಬೇಕು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಭೂತ ಜಯ ಸಾಧಿಸಿ ಅಧಿಕಾರಕ್ಕೆ ಬಂದ ನಂತರ ಮಮತಾ ವರಸೆಯೇ ಬದಲಾಗಿದೆ. ಆರ್ಥಿಕ ಸುಧಾರಣೆಯ ಪ್ರತಿ ಹೆಜ್ಜೆಯಲ್ಲೂ ಅವರ ಅಪಸ್ವರ ಕೇಳಿಬರುತ್ತಿದೆ. ತಮ್ಮ ಮಾತು ನಡೆಯುತ್ತದೆ ಎಂಬ ಕಾರಣಕ್ಕೆ ಕಂಡಿದ್ದು-ಕೇಳಿದ್ದಕ್ಕೆಲ್ಲ ಹಠ ಮಾಡುತ್ತಿದ್ದಾರೆ.

      ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಮಮತಾ ವಿರೋಧಿಸಿದರು. ಪ್ರತಿಪಕ್ಷಗಳೂ ಅದನ್ನು ವಿರೋಧಿಸಿದ್ದವು. ಅದು ತರ್ಕಬದ್ಧವಾಗಿತ್ತು. ದೇಶದ ಎಲ್ಲಾ ಕೃಷಿಕರು ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಅದು ಪರಿಣಾಮ ಬೀರುತ್ತಿತ್ತು. ಆದರೆ, ಪಿಂಚಣಿ ಮಸೂದೆಯ ವಿಷಯದಲ್ಲಿ ಅಂತಹ ಆತಂಕವೇನೂ ಇಲ್ಲ. ಈ ಮಸೂದೆಯಲ್ಲಿರುವ ಪ್ರಮುಖ ಅಂಶಗಳಲ್ಲಿ ದೇಶದ ಪಿಂಚಣಿ ಕ್ಷೇತ್ರದಲ್ಲಿ ಶೇ.26ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವುದೂ ಒಂದು ಎಂಬುದೇನೋ ನಿಜ.

      2004ರಲ್ಲಿ ಆರಂಭವಾದ ಪಿಂಚಣಿ ಸುಧಾರಣೆಯ ಅಂತಿಮ ಹಂತವಿದು. ಆಗ ಪಿಂಚಣಿ ಮಸೂದೆಗೆ ತಿದ್ದುಪಡಿ ತರಲಾಗಿತ್ತು. ಅದರಲ್ಲಿ ಪಿಂಚಣಿ ವ್ಯವಸ್ಥೆಯನ್ನೇ ಆಮೂಲಾಗ್ರ ಬದಲಾವಣೆ ಮಾಡಿ ಅದರಲ್ಲಿ ಟೈರ್‌-1 ಮತ್ತು ಟೈರ್‌-2 ಎಂಬ ಎರಡು ವಿಧದ ಪಿಂಚಣಿ ಪರಿಚಯಿಸಲಾಗಿತ್ತು.  ಟೈರ್‌-1ನಲ್ಲಿ ಎಲ್ಲಾ ಸರ್ಕಾರಿ ನೌಕರರ ಸಂಬಳ ಹಾಗೂ ತುಟ್ಟಿಭತ್ಯೆಯ ಶೇ.10ರಷ್ಟು ಮೊತ್ತವನ್ನು ಕಡ್ಡಾಯವಾಗಿ ಸಂಬಳದಲ್ಲೇ ಕಡಿತಗೊಳಿಸಿ ಅದಕ್ಕೆ ಸರ್ಕಾರ ಅಷ್ಟೇ ಮೊತ್ತವನ್ನು ಸೇರಿಸಿ ಪಿಂಚಣಿ ಖಾತೆಯಲ್ಲಿರಿಸುತ್ತದೆ. ನಿವೃತ್ತಿಯ ನಂತರ ಇದನ್ನು ಪ್ರತಿ ತಿಂಗಳು ಪಿಂಚಣಿಯಾಗಿ ನೀಡಲಾಗುತ್ತದೆ. ಟೈರ್‌-2 ಯೋಜನೆ ಐಚ್ಛಿಕ. ಟೈರ್‌-1ನಲ್ಲಿರುವ ನೌಕರರೂ ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ನೌಕರರು ಪ್ರತಿ ತಿಂಗಳು ಎಷ್ಟಾದರೂ ಹಣವನ್ನು ಪಿಂಚಣಿ ಯೋಜನೆಯಲ್ಲಿ ತೊಡಗಿಸಬಹುದು. ಆದರೆ, ಸರ್ಕಾರ ಇದಕ್ಕೇನೂ ಕೊಡುಗೆ ನೀಡುವುದಿಲ್ಲ. ಈ ಎರಡೂ ಯೋಜನೆಗಳು ಕರ್ನಾಟಕದ ರಾಜ್ಯ ಸರ್ಕಾರಿ ನೌಕರರಿಗೂ 2006ರಿಂದ ಜಾರಿಗೆ ಬಂದಿವೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೂಡ ಇಂದು ಖಾಸಗಿ ಕ್ಷೇತ್ರದ ವಿವಿಧ ಪಿಂಚಣಿ ಯೋಜನೆಗಳಲ್ಲಿ ಹಣ ತೊಡಗಿಸಬಹುದು.

      ಹೀಗೆ ಸಂಗ್ರಹವಾದ ಹಣವನ್ನು ಸರ್ಕಾರ ಮತ್ತು ಖಾಸಗಿ ಕಂಪನಿಗಳು ಎಲ್ಲಿ ತೊಡಗಿಸಬೇಕು, ಅದರ ನಿರ್ವಹಣೆ ಹೇಗೆ, ಅದರಿಂದ ಗರಿಷ್ಠ ಆದಾಯ ತೆಗೆಯುವುದು ಹೇಗೆ ಎಂಬ ವಿಷಯಗಳಲ್ಲಿ ಹೊಸ ಪಿಂಚಣಿ ಮಸೂದೆ ವ್ಯವಹರಿಸುತ್ತದೆ. ಮಸೂದೆ ಜಾರಿಗೆ ಬಂದ ಮೇಲೆ ವಿದೇಶಿ ಹೂಡಿಕೆದಾರರು ಭಾರತದ ಪಿಂಚಣಿ ಕ್ಷೇತ್ರದಲ್ಲಿ ವ್ಯವಹಾರ ನಡೆಸಬಹುದು.

      ಕೋಟ್ಯಂತರ ಪಿಂಚಣಿದಾರರು ದೇಶದಲ್ಲಿರುವುದರಿಂದ ಅವರೆಲ್ಲರ ಉಳಿತಾಯದ ಜೊತೆಗೆ ಈ ಪಿಂಚಣಿ ಮಸೂದೆಗೆ ಸಂಬಂಧವಿದೆ. ಆದರೆ, ಇದಕ್ಕಾಗಿ ರಚಿಸಲಾದ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ತಮ್ಮ ಪಕ್ಷದವರಿಗೆ ಅವಕಾಶ ನೀಡಿಲ್ಲ ಮತ್ತು ಮಸೂದೆ ಅಂತಿಮಗೊಳಿಸುವ ಮುನ್ನ ತಮ್ಮನ್ನು ಕೇಳಿಲ್ಲ ಎಂಬ ಏಕೈಕ ಕಾರಣಕ್ಕೆ ಮಮತಾ ತಿರುಗಿ ನಿಂತಿದ್ದಾರೆ.

      ದೇಶದ ಆರ್ಥಿಕತೆ ಎಂಟು ವರ್ಷಗಳಲ್ಲೇ ಹದಗೆಟ್ಟಿರುವ ಹಾಗೂ ಒಂಬತ್ತು ವರ್ಷಗಳಲ್ಲಿ ಜಿಡಿಪಿ ಅತಿ ಕನಿಷ್ಠಕ್ಕೆ ಇಳಿದಿರುವ ಈ ಸಂದರ್ಭದಲ್ಲಿ ಆರ್ಥಿಕ ಸುಧಾರಣೆಗೆ ಹೀಗೆ ಅಡ್ಡಗಾಲು ಹಾಕುವುದನ್ನು ಮಮತಾ ಹೇಗೆ ಸಮರ್ಥಿಸಿಕೊಳ್ಳುತ್ತಾರೆ?

       


    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus