Saturday, May 25, 2013
Last Updated: 11:52:48 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಕಂಡಿದ್ದು ಕಾಡಿದ್ದು
  • ಪೊಲೀಸ್‌ ಠಾಣೆಯೆಂದರೆ ಹೀಗೇ ಇರೋದು...!
    • ನಿರಂಜನ ವಾನಳ್ಳಿ | Jun 09, 2012

      ಜವಾಬ್ದಾರಿಯುತ ನಾಗರಿಕನಾಗಿ ಲಂಚದಂಥ ಚಕ್ರವ್ಯೂಹದಲ್ಲಿ ಸೋಲುವ ಮನಃಸ್ಥಿತಿಗೆ ವಿಷಾದವಿತ್ತು. ವರ್ಷಕ್ಕೊಮ್ಮೆ ನಗರಪಾಲಿಕೆಗೆ ತೆರಿಗೆ ಕಟ್ಟಲು ಹೋಗಲು ಹಾಗೂ ಅಪರೂಪಕ್ಕೊಮ್ಮೆ ಪೊಲೀಸು ಸ್ಟೇಷನ್ನಿಗೆ ಕಾರ್ಯನಿಮಿತ್ತ ಹೋಗಬೇಕಾಗಿ ಬಂದರೆ ಯಾಕೆ ಮನಸ್ಸು ಮುದುಡಿಹೋಗುತ್ತದೆ ಎಂಬುದಕ್ಕೆ ಬೇರೆ ವಿವರಣೆ ಬೇಕೆ?

      ಅಲ್ಲಿದ್ದುದು ಸುಮಾರು ಒಂದು ಗಂಟೆ. ಅಷ್ಟರಲ್ಲಿ ನಾಲ್ಕು ಬಾರಿ ಫೋನು ರಿಂಗಣಿಸಿತು. ಯಾರು ಬಯ್ಯುವರೋ ಎಂದು ಅಳುಕುತ್ತಲೇ ಫೋನು ಎತ್ತಿಕೊಳ್ಳುತ್ತಿದ್ದೆ.

      "ಎಲ್ಲಿದ್ದೀರಿ?'- ಮೊದಲ ಸಾಮಾನ್ಯ ಪ್ರಶ್ನೆ

      "ಪೊಲೀಸ್‌ ಸ್ಟೇಷನ್ನು'- ನನ್ನ ಉತ್ತರ ಕೇಳಿ ಹೌಹಾರುವ ಪ್ರಮೇಯ ಅವರದಾಗಿರುತ್ತಿತ್ತು.
      "ಯಾಕೆ ಸ್ವಾಮಿ, ಚೆನ್ನಾಗೇ ಇದ್ದಿರಲ್ಲ, ಪೊಲೀಸು ಸ್ಟೇಷನ್ನಿಗೆ ಹೋಗುವ ಕೆಲಸ ಏನು ಮಾಡಿಕೊಂಡ್ರಿ?' ಎಂದು ಮೊದಲಿನವರು ಕೇಳಿದ್ರೆ, "ಬರಬೇಕಾ, ಏನಾದ್ರು ಸಹಾಯ ಬೇಕಾ' ಎಂದು ಎರಡನೆ ಯವರು ಸಾಂತ್ವನ ಹೇಳಲು ಬಂದರು. ಮೂರನೆಯವರು "ಆಲ್‌ ದಿ ಬೆಸ್ಟ್‌' ಎಂದು ಫೋನಿಟ್ರಾ. ನಾಲ್ಕನೆಯದಾಗಿ ಕರೆದವರು "ಹುಷಾರು-ಒಳಗೇ ಕೂರಿಸಿಬಿಟ್ಟಾರು, ಸಿಕ್ಕಿದ್ದೇ ಛಾನ್ಸು ಅಂತ ನಾಲ್ಕು ಬಿಗಿದು ಕೂರಿಸಬಹುದು, ನೀವು ಹಿಂದೆ ಪೊಲೀಸರ ಬಗ್ಗೆ ಏನೇನು ಬರೆದಿದ್ರೋ' ಎಂದು ತಮಾಷೆ ಮಾಡಿದರು.
      "ಇಲ್ಲ ಮಾರಾಯೆÅà... ಮಗಳ ಪಾಸ್‌ಪೋರ್ಟು ನವೀಕರಣ ಗೊಳ್ಳಬೇಕಿತ್ತು. ಅದಕ್ಕೆ ಬೆಂಗಳೂರಿಗೆ ಯಾತ್ರೆ ಮಾಡಿಬಂದ ಫ‌ಲ, ಪೊಲೀಸ್‌ ತಪಾಸಣೆಗೆ ಬಂದಿತ್ತು. ಪೊಲೀಸರ ಬುಲಾವಿನ ಮೇಲೆ ಮಗಳನ್ನು ಕರೆದುಕೊಂಡು ಬಂದಿದ್ದೆ.'

      "ಅಯ್ಯೋ ಅಷ್ಟೇನಾ ಒಳ್ಳೇದಾಗಲಿ' ಎಂಬುದು ಎಲ್ಲರೂ ಹೇಳುವ ಮಾತಾಗಿತ್ತು!
      ಹಿಂದಿನ ದಿನ ಬಂದ ಪೊಲೀಸು ಪೇದೆ, ಸ್ಟೇಷನ್ನಿಗೆ ಅಗತ್ಯ ದಾಖಲೆಗಳೊಡನೆ ಬನ್ನಿ ಎಂಬ ಸೂಚನೆ ನೀಡಿ ಹೋಗಿದ್ದ. ಆ ಕ್ಷಣದಿಂದ ಮನಸ್ಸಿನಲ್ಲಿ ಒಂಥರಾ ಗುಂಗು. ನಾಳೆ ಸ್ಟೇಷನ್ನಿಗೆ ಹೋಗಬೇಕಲ್ಲಾ ಎಂಬ ಆತಂಕ. ಅದೇನೂ ಕೊಲೆ-ಗಿಲೆ ಮಾಡಿ ಹೋಗುವುದಲ್ಲವಲ್ಲ ಎಂದು ಸಾವರಿಸಿಕೊಂಡರೂ ಪೊಲೀಸು ಸ್ಟೇಷನ್ನಿಗೆ ಹೋಗುವುದೆಂದರೆ ಸಾಮಾನ್ಯದ ವಿಷಯವೆ? ಮಾವನ ಮನೆಗೆ ಹೋಗುವ ಖುಷಿಯಲ್ಲಿ ಹೋಗಲಾದೀತೆ? ನಮ್ಮ ರಕ್ಷಣೆಗೇ ಇರುವ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಿಗೆ ಇರುವ ಅಪನಂಬಿಕೆಯೇ ಈ ಆತಂಕದ ಮೂಲ ಎನಿಸುತ್ತದೆ.

      ಅಂತೂ ಅವರು ಹೇಳಿದ ಹೊತ್ತಿಗೆ ಸರಿಯಾಗಿ, ಮಗಳ ಜೊತೆ ಸನಿಹದ ಪೊಲೀಸ್‌ ಸ್ಟೇಷನ್ನಿನ ಮೆಟ್ಟಿಲು ಹತ್ತಿದೆ. ಮಗಳಂತೂ ಮೊದಲ ಬಾರಿಗೆ ಇಲ್ಲಿಗೆ ಬಂದುದು. ಅವಳಿಗೆ ಪೊಲೀಸ್‌ ಸ್ಟೇಷನ್ನು ಹೇಗಿರುತ್ತದೆ ಎಂಬ ಕುತೂಹಲವಿತ್ತು. ಅ ಸಂಜೆ ಹತ್ತಿಪ್ಪತ್ತು ಜನ ಅಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ಒಬ್ಬರ ಮುಖದಲ್ಲೂ ಗೆಲುವಿರಲಿಲ್ಲ. ನಾವು ಚೀಟಿ ತೋರಿಸಿದ ಕೂಡಲೇ ಸ್ವಾಗತಕಾರಿಣಿಯಂತಿದ್ದ ಧಡೂತಿ ಹೆಂಗಸು ಆ ಕಡೆಯ ಮೂಲೆಯತ್ತ ಕೈತೋರಿ "ಹೋಗಿ ಕುಳಿತುಕೊಳ್ಳಿ' ಎಂದಳು. ಕುರ್ಚಿಯಿಲ್ಲದೆ ಕೂರುವುದೆಲ್ಲಿ? ಬಾಗಿಲ ಬಳಿ ನಿಂತೇ ಇದ್ದೆವು. ಅಲ್ಲಿಗೆ- ಸಂಪಾದಕರ ಕೃಪಾಕಟಾಕ್ಷ ಬೀಳುವುದನ್ನೇ ಕಾಯುತ್ತ ಫೈಲಲ್ಲಿ ಕೊಳೆಯುವ ಫ್ರೀಲಾನ್ಸಿಗಳ ಲೇಖನದಂತೆ ನಮ್ಮ ಪಾಡು ಎನಿಸಿತು. ಅವಳು ತೋರಿಸಿದ ಮೂಲೆಯಲ್ಲಿ ಅಕ್ಕಿ ಚೆಲ್ಲಿತ್ತು. ಎದುರಿಗೆ ಕತ್ತಲ ಕೋಣೆಯಿತ್ತು. ಅದು ತುಂಬಾ ಗಲೀಜಾಗಿತ್ತು. ಇಡೀ ವಾತಾವರಣದಲ್ಲಿ ಕಮಟು ವಾಸನೆಯಿತ್ತು. ಮಗಳು ಕುಳಿತಿರಲಾಗದೇ ಮೂಗು ಮುಚ್ಚಿಕೊಂಡಳು. ಪೊಲೀಸ್‌ ಸ್ಟೇಷನ್ನೆಂದರೆ ಹೀಗೇ ಇರೋದು ಎಂದು ಸಮರ್ಥಿಸಿಕೊಂಡೆ. ಪೊಲೀಸರು ಕೂರುವ ಜಾಗವನ್ನು ಸ್ವಲ್ಪ ಶುದ್ಧವಾಗಿಟ್ಟುಕೊಡರೆ ತೊಂದರೆ ಏನು ಎಂಬುದು ಅವಳ ಆಕ್ಷೇಪವಾಗಿತ್ತು.

      ಕಾಯುತ್ತ ನಿಂತು, ಸುತ್ತ ಕಣ್ಣು ಹಾಯಿಸಿದೆವು. ಇಬ್ಬರು ಆಫ್ರಿಕನ್‌ ವಿದ್ಯಾರ್ಥಿಗಳು ಕುಳಿತಿದ್ದರು. ಅವರೊಳಗೆ ಗಾಢ ಚಿಂತನೆ ನಡೆಯುತ್ತಿತ್ತು ಏನೋ ಸಮಸ್ಯೆಯಲ್ಲಿ ಸಿಲುಕಿಕೊಂಡಿರುವುದು ಸ್ಪಷ್ಟವಾಗಿತ್ತು. ಇನ್ನೊಬ್ಬಳು ಇರಾನಿಯನ್‌ ಮಹಿಳೆಯಂತಿದ್ದಳು. ಅವಳ ಗತ್ತುಗೈರತ್ತು- ಅವಳಿಗೆ ಸಿಕ್ಕ  ಗೌರವ- ಆಫ್ರಿಕನ್‌ ವಿದ್ಯಾರ್ಥಿಗಳಿಗೆ ಇರಲಿಲ್ಲ. ಅದರಲ್ಲಿ ಹಣ ಕೆಲಸ ಮಾಡಿರುವ ವಾಸನೆ ಇತ್ತು. ಇತ್ತ ಇಬ್ಬರು ಪಡ್ಡೆ ಹುಡುಗರು ಕುಳಿತಿದ್ದರು. ಪೇದೆಯೊಬ್ಬ ಅವರನ್ನು ಆಗ ತಾನೆ ಎಳೆದು ತಂದು ಕೂರಿಸಿದ್ದ. ಅವರಲ್ಲೊಬ್ಬ ತನ್ನ ಅಣ್ಣನಿಗೆ ಫೋನು ಮಾಡಿ ವಿಷಯ ತಿಳಿಸಿದ. "ನನ್ನಣ್ಣ ಪೋನಲ್ಲಿದ್ದಾರೆ' ಅಂತ ಎಳೆತಂದ ಪೇದೆಗೆ ಫೋನು ಕೊಡಲು ಹೋದ. "ಕೂತ್ಕೊಳೊ... ಹಲ್ಕಾ ಕೆಲ್ಸ ಮಾಡೋದಲೆªà ಇನ್‌ಫ‌ೂÉಯೆನ್ಸು ಮಾಡ್ತಾನೆ' ಎಂದು ಪೊಲೀಸು ದಬಾಯಿಸಿದ. ಅಲ್ಲಿಗೆ ಆ ಹೈಕಳ ಪುಂಗಿ ಬಂದಾಯ್ತು! ಒಬ್ಬಳು ತಾಯಿ ಮಾತ್ರ ಆತಂಕದಿಂದ ಅತ್ತಿತ್ತ ಓಡುತ್ತಿದ್ದಳು. ಅವಳ ಮಗಳು ಕಾಣೆಯಾಗಿದ್ದಳು. ಇನ್ನೊಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಅಲ್ಲಿ ಓಡಾಡುವುದನ್ನು ಕಂಡರೆ ಏನೋ ಡೀಲು ಮಾಡುವವ ಎಂಬುದು ಸ್ಪಷ್ಟವಾಗುತ್ತಿತ್ತು!
      ನಮ್ಮಂತೆಯೇ ಪಾಸ್‌ಪೋರ್ಟು ಕೆಲಸಕ್ಕೆ ಬಂದವರು ಎರಡು ಮೂರು ಜನ ನಮ್ಮ ಮುಂದೆ ಇದ್ದರು. ಇಬ್ಬರು ಕೂರಲು ಮಾತ್ರ ಕುರ್ಚಿಯಿತ್ತು. ನಮ್ಮ ಸರದಿ ಬಂದಾಗ ರೈಟರ್‌ ರೂಮಿನ ಒಳ ಹೋದೆವು. ಆತನೇನೂ ಕುಳಿತುಕೊಳ್ಳಿ ಅನ್ನಲಿಲ್ಲ. ನಾನೇ ಪಕ್ಕದ ಸ್ಟೂಲು ಎಳೆದುಕೊಂಡು ಕುಳಿತೆ. ದಾಖಲೆಗಳನ್ನು ಪರೀಕ್ಷಿಸುತ್ತ ಒಂದು ಅರ್ಜಿ ಫಾರಂ ತುಂಬಲಾರಂಭಿಸಿದ. ನಾನು ತುಂಬಲು ಸಹಾಯ ಮಾಡಬಹುದೇ ಎಂದು ಕೇಳಿದೆ. ಅವನಿಗೆ ಸಿಟ್ಟೇ ಬಂತು! ನೀವು ತುಂಬಿ ಕೊಡೋದಿದ್ದರೆ ನಾವಿರೋದು ಯಾಕೆ ಎಂದು ಗದರಿದ. ನಾನು ದಂಗಾದೆ. ಅವನಿಗೆ ನಮ್ಮ ಹೆಸರು-ವಿಳಾಸ ಸರಿಯಾಗಿ ಬರೆಯಲು ಬರಲಿಲ್ಲ. ನಾನೇ ಬರೆದು ತೋರಿಸಬೇಕಾಯ್ತು.   ತದನಂತರ ನಮ್ಮನ್ನು ಇನ್‌ಸ್ಪೆಕ್ಟರ್‌ ಅವರ ರೂಮಿಗೆ ಕರೆದೊಯ್ದ. ಅವರ ಪರಿಚಯವಿರಲಿಲ್ಲ. ಆದರೆ ಅವರ ಮುಖದಲ್ಲಿ ನಗುವಿತ್ತು. ನಡತೆಯಲ್ಲಿ ಸಜ್ಜನಿಕೆಯಿತ್ತು. ಕುಳಿತುಕೊಳ್ಳಿ ಎಂದರು. ಮಗಳನ್ನು ವಿಶ್ವಾಸದಿಂದ ಮಾತನಾಡಿಸಿದರು. ಅವಳ ಅರ್ಜಿಯ ಮೇಲೆ ಹಾಗೂ ದಫ‌¤ರದಲ್ಲಿ ಸಹಿ ಮಾಡಿ, ಇವರನ್ನು ಕಾಯಿಸಬೇಡಿ, ಬೇಗ ಸಹಿ ಮಾಡಿಸಿ ಕಳಿಸಿ ಎಂದು ರೈಟರಿಗೆ ಸೂಚಿಸಿದರು. ಅವರ ನಡತೆಗೂ ಅಲ್ಲಿರುವ ಕೆಳಗಿನವರ ನಡತೆಗೂ ಅಜಗಜಾಂತರವಿತ್ತು. ಪೊಲೀಸು ಇಲಾಖೆಯ ಬಗ್ಗೆ ವಿಶ್ವಾಸ ಮೂಡಿಸುವಂತಿತ್ತು.

      ಅವರ ಕೋಣೆಯಿಂದ ವಾಪಸು ಬಂದಮೇಲೆ ಮತ್ತೆ ನಮ್ಮನ್ನು ಹೊರಕಳುಹಿಸಿದ ರೈಟರು ಒಬ್ಬೊಬ್ಬರನ್ನಾಗಿ ಕರೆದ. ನನ್ನ ಎದುರಿನವರು ಹಣ ಕೊಟ್ಟಿದ್ದನ್ನು ಕಂಡೆ. ಈಗ ಫ‌ಜೀತಿಗೆ ಬಂತಲ್ಲಾ ಎಂದುಕೊಂಡೆ. ಅವನೇನೂ ಹಣಕ್ಕಾಗಿ ಪೀಡಿಸುವಂತಿರಲಿಲ್ಲ. ಈ ಕಾರಣಕ್ಕೆ ಪಾಸ್‌ಪೋರ್ಟ್‌ ಕಚೇರಿಗೆ ಉಲ್ಟಾ ಬರೆಯುವ ಸಾಧ್ಯತೆಯೂ ಇರಲಿಲ್ಲ. ಆದರೂ ಅವನಿಗೆ ಹಣ ಕೊಡದಿದ್ದರೆ ನಮ್ಮನ್ನು ಕ್ರಿಮಿಯ ರೀತಿ ನೋಡುವ ಸಾಧ್ಯತೆಯಿತ್ತು. ಅನಗತ್ಯವಾಗಿ ಕಾಯಿಸುವ, ಮತ್ತೆ ಬರಲು ಹೇಳುವ, ಅನಗತ್ಯ ಕಿರಿಕಿರಿ ಮಾಡುವ ಅಧಿಕಾರ ಅವನಿಗಿತ್ತು! ಅದಕ್ಕೆ ಈಗ ಏನು ಮಾಡುವುದೆಂದು ಯೋಚಿಸುವಾಗ ನಮ್ಮ ಪಾಳಿ ಬಂತು. ಬೇರೆ ಯೋಚಿಸಲು ಆಸ್ಪದವೇ ಇರಲಿಲ್ಲ. ಅವನ ಕೈಗೆ ನೂರು ರೂಪಾಯಿ ಇಟ್ಟಾಗ ಅವನು ಇಸಕೊಂಡ ರೀತಿ ಮಾತ್ರ ಅದು ಅವನ ಹಕ್ಕೆಂಬಂತೆ ಇತ್ತು. "ಅದು ಯಾಕಪ್ಪಾ$ನೀನು ದುಡ್ಡು ಕೊಟ್ಟೆ, ದುಡ್ಡು ಕೊಡದಿದ್ದರೆ ಏನಾಗ್ತಿತ್ತು?' ಎಂಬ ಮಗಳ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಿತ್ತು. ಜವಾಬ್ದಾರಿ ಯುತ ನಾಗರಿಕನಾಗಿ ಇಂಥ ಚಕ್ರವ್ಯೂಹದಲ್ಲಿ ಸೋಲುವ ಮನಃಸ್ಥಿತಿಗೆ ವಿಷಾದವಿತ್ತು.

      ವರ್ಷಕ್ಕೊಮ್ಮೆ ನಗರಪಾಲಿಕೆಗೆ ತೆರಿಗೆ ಕಟ್ಟಲು ಹೋಗಲು ಹಾಗೂ ಅಪರೂಪಕ್ಕೊಮ್ಮೆ ಪೊಲೀಸು ಸ್ಟೇಷನ್ನಿಗೆ ಕಾರ್ಯನಿಮಿತ್ತ ಹೋಗಬೇಕಾಗಿ ಬಂದರೆ ಯಾಕೆ ಮನಸ್ಸು ಮುದುಡಿಹೋಗುತ್ತದೆ ಎಂಬುದಕ್ಕೆ ಬೇರೆ ವಿವರಣೆ ಬೇಕೆ?

      ಮುಗಿಸುವ ಮುನ್ನ:

      ಹಿಂದೆಲ್ಲ ಪಾಸ್‌ಪೋರ್ಟು ಮಾಡಿಸುವಾಗ ಪೊಲೀಸ್‌ ಸ್ಟೇಷನ್ನಿಗೆ ಹೋಗಬೇಕಾದ ಅನಿವಾರ್ಯತೆ ಇರಲಿಲ್ಲ. ನಾವೇ ಖುದ್ದಾಗಿ ಪಾಸ್‌ಪೋರ್ಟು ಕಚೇರಿಗೆ ಯಾತ್ರೆ ಮಾಡುವ ಅಗತ್ಯವೂ ಇರಲಿಲ್ಲ. ಅಂಚೆ ಕಚೇರಿಯ ಮುಖಾಂತರ ಅರ್ಜಿ ಹಾಕಿದ್ದಷ್ಟೇ, ಮನೆ ಬಾಗಿಲಿಗೆ ಯಾವ ತೊಂದರೆಯಿಲ್ಲದೆ ಪಾಸ್‌ಪೋರ್ಟು ಬಂದಿತ್ತು. ಆದರೆ ಈಗ ಪಾಸ್‌ಪೋರ್ಟು ನೀಡುವುದನ್ನೂ ಹೊರಗುತ್ತಿಗೆಗೆ ವಹಿಸಿರುವುದರ ಹುನ್ನಾರವಿರಬೇಕು, ಪಾಸ್‌ಪೋರ್ಟು ಬೇಕಾದವರೆಲ್ಲ ಅವರ ಕಚೇರಿಗೆ ಅಲೆಯಲೇ ಬೇಕು. ಇನ್ನೊಂದು ವಿಚಿತ್ರ. ಇದೀಗ 18 ತುಂಬಿರುವ ಮಗಳ ಹೆಸರಿಗೆ ವಿಳಾಸದ ದಾಖಲೆ ಬೇಕೆಂದರು. ಅವಳ ಹೆಸರಲ್ಲಿ ಗ್ಯಾಸು, ಫೋನು ಅಥವಾ ಚಾಲನಾ ಪರವಾನಿಗೆ ಇರಲು ಹೇಗೆ ಸಾಧ್ಯ? ಇನ್ನು ಮುಂದೆ ಎಲ್ಲದಕ್ಕೂ ಇದೇ ಆಧಾರವೆಂದು ಭಾರೀ ಪ್ರಚಾರದೊಂದಿಗೆ ನಮ್ಮದೇ ಸರ್ಕಾರ ನೀಡಿರುವ "ಆಧಾರ್‌' ಕಾರ್ಡನ್ನು ನೀಡಿದರೆ ಅದನ್ನು ದಾಖಲೆಯಾಗಿ ಸ್ವೀಕರಿಸಲು ನಿರಾಕರಿಸಿದರು! ಹೀಗಾಗಿ ಮಗಳ ಹೆಸರಿಗೆ ವಿಳಾಸದ ದಾಖಲೆ ಒದಗಿಸುವಾಗ ಏಳೂಹನ್ನೊಂದಾಯ್ತು! ಉದಾರೀಕರಣ ಯುಗದಲ್ಲಿ ದಿನ ಕಳೆದಂತೆ ವ್ಯವಸ್ಥೆ ಸರಳೀಕರಣಗೊಳ್ಳುವ ಬದಲು ಕ್ಲಿಷ್ಟಗೊಂಡು ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಪ್ರಕರಣವಿದು.


    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009 Udayavani.All rights reserved.
    • Designed & Hosted By 4cplus