ಶ್ರೀಮತಿ ಅರುಣಾ ಮಯ್ಯ ,ಡಯಟೀಷಿಯನ್ | Jun 11, 2012
ಕೆಲವು ಮಹಿಳೆಯರು, ಋತುಬಂಧವೆಂದರೆ ಅದು ಯೌವನದ ಹಾಗೂ ಫಲವಂತಿಕೆಯ ಅಂತ್ಯ ಎಂದು ಗೊಣಗುತ್ತಾರೆ. ಇನ್ನು ಕೆಲವರು, ಈ ಸಮಯವನ್ನು ಸ್ವಾತಂತ್ರ್ಯ ಹಾಗೂ ಹೊಸ ಅವಕಾಶಗಳ ಆರಂಭ ಎಂದು ಅದನ್ನು ಸ್ವಾಗತಿಸುತ್ತಾರೆ. ಏನೇ ಆದರೂ, ಋತುಬಂಧ ಎನ್ನುವುದು ಮಹಿಳೆಯ ದೈಹಿಕ ಹಾಗೂ ಭಾವನಾತ್ಮಕ ಬದುಕಿನಲ್ಲಿ ಅನೇಕ ಬದಲಾವಣೆಗಳನ್ನು ತರುವ ಹಂತ. ದೇಹದಲ್ಲಿ ಆಗುವ ಬದಲಾವಣೆಗಳೊಂದಿಗೆ ಮಹಿಳೆಯು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮಹಿಳೆಯ ಋತುಸ್ರಾವ ಅಥವಾ ಮುಟ್ಟಾಗುವಿಕೆಯು ನಿಂತು ಹೋಗುವುದಕ್ಕೆ ಋತುಬಂಧ ಎಂದು ಹೆಸರು (ಋತುಸ್ರಾವ ಶಾಶ್ವತವಾಗಿ ನಿಂತು ಹೋಗುವುದು) ಇದು ಮಹಿಳೆಯು ಸಂತಾನೋತ್ಪತ್ತಿಯ ಪ್ರಕ್ರಿಯೆಯಿಂದ ನಿಧಾನವಾಗಿ ಹಿಂದೆ ಸರಿಯುವಂತಹ ಒಂದು ನೈಸರ್ಗಿಕ ಕ್ರಿಯೆಯಾಗಿದೆ.
ಈ ಹಂತದಲ್ಲಿ ಮಹಿಳೆಯ ದೇಹದಲ್ಲಿ ಆಗುವ ಹಾರ್ಮೋನುಗಳ ಏರುಪೇರಿನಿಂದಾಗಿ, ಅನೇಕ ಲಕ್ಷಣಗಳು ಕಂಡು ಬರುತ್ತವೆ. ಚೆನ್ನಾಗಿ ಆಹಾರ ಸೇವಿಸುವುದರಿಂದ ಕೆಲವಾರು ಲಕ್ಷಣಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಆಹಾರ ಸೇವನೆಗೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ, ಋತುಬಂಧದ ಮೊದಲು ಹಾಗೂ ಅನಂತರದ ನಿಮ್ಮ ಸುಗಮ ಹಾಗೂ ನೆಮ್ಮದಿಯ ಜೀವನಕ್ಕೆ ಸಹಾಯವಾಗಬಹುದು.
ಋತುಬಂಧದ ಹಂತದಲ್ಲಿ
ಪರಿಗಣಿಸಬೇಕಾದ ಸಲಹೆಗಳು
ಆದಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ. ಸಂಸ್ಕರಿಸಿದ ಹಾಗೂ ರಿಫೆೈನ್x ಆಹಾರಗಳಿಂದ ದೂರವಿರಿ. ಲೀನ್ ಮಾಂಸ, ಸೋಯಾ ಉತ್ಪನ್ನಗಳು, ಬೀನ್ಸ್ ಹಾಗೂ ಕೋಡುಗಳನ್ನು ಹೆಚ್ಚು ಸೇವಿಸಿ. ತಾಜಾ ಹಣ್ಣು-ತರಕಾರಿಗಳು, ಇಡೀ ಧಾನ್ಯಗಳು, ಕಡಿಮೆ ಕೊಬ್ಬು ಇರುವ ಹಾಲಿನ ಉತ್ಪನ್ನಗಳು ಹಾಗೂ ಆರೋಗ್ಯಕರ ಕೊಬ್ಬು ಇರುವ ಆಹಾರಗಳನ್ನು ಹೆಚ್ಚು ಸೇವಿಸಿ. ಈ ಆಹಾರಗಳು ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಣೆಯನ್ನು ಒದಗಿಸುವುದಷ್ಟೇ ಅಲ್ಲ, ನಿಮ್ಮ ಹಾರ್ಮೋನಿನ ಏರುಪೇರುಗಳನ್ನು ಸಮತೋಲನಕ್ಕೆ ತಂದು, ನಿಮ್ಮ ಮಾನಸಿಕ ಸ್ಥಿತಿಯನ್ನು ಸಹ ಉತ್ತಮಪಡಿಸುತ್ತವೆ.
ಸಂಸ್ಕರಿಸಿಲ್ಲದ ಕೆಲವು ಸಸ್ಯ ಜನ್ಯ ಆಹಾರಗಳಲ್ಲಿ ಫೈಟೋ ರಾಸಾಯನಿಕವಿದ್ದು, ಇದು ದೇಹವನ್ನು ಸಂರಕ್ಷಿಸುತ್ತದೆ. ಉದಾಹರಣೆಗೆ ಈ ಫೈಟೋ ಈಸ್ಟ್ರೋಜನ್ ಎಂಬುದು ಸಂರಚನೆಯಲ್ಲಿ ಈಸ್ಟ್ರೋಜನ್ ನಂತೆಯೇ ಇದ್ದು, ಅದು ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಈಸ್ಟ್ರೋಜನ್‌ನಂತೆಯೇ ವರ್ತಿಸುತ್ತದೆ. ಈ ರಾಸಾಯನಿಕಗಳು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈಸ್ಟ್ರೋಜನ್ ಇರುವ ಭಾವನೆಯನ್ನು ಮೂಡಿಸಿ, ಈಸ್ಟ್ರೋಜನ್ ಕೊರತೆಯಿಂದಾಗಿ ಉಂಟಾಗುವ ಕಿರಿಕಿರಿಯನ್ನು ಕಡಿಮೆಗೊಳಿಸುತ್ತವೆ.
ಆದರೆ ಈಸ್ಟ್ರೋಜನ್ ಪ್ರಮಾಣದ ಹೆಚ್ಚಳದಿಂದಾಗಿ, ಅಂದರೆ ಸಸ್ಯ ಜನ್ಯ ಈಸ್ಟ್ರೋಜನ್ ಅನ್ನು ಹೆಚ್ಚು ಸೇವಿಸುವುದರಿಂದ ಈಸ್ಟ್ರೋಜನ್ ಸಂವೇದನಾಶೀಲವಾದ ಕ್ಯಾನ್ಸರ್ ಬರಬಹುದಾದ ಅಪಾಯ ಇದೆ ಎಂದು ಇತ್ತೀಚಿನ ಸಂಶೋಧನೆಗಳ ವರದಿ ಹೇಳುತ್ತದೆ. ನಿಮಗೆ ಈಸ್ಟ್ರೋಜನ್‌ಗೆ ಸಂಬಂಧಿಸಿದ ಕ್ಯಾನ್ಸರ್ ಇದ್ದಲ್ಲಿ. ಹೆಚ್ಚುವರಿಯಾಗಿ ಸೋಯಾ ಅಥವಾ ಫೈಟೋ ಈಸ್ಟ್ರೋಜನ್‌ಯುಕ್ತ ಆಹಾರವನ್ನು ಸೇವಿಸುವುದಕ್ಕೆ ಮೊದಲು ನಿಮ್ಮ ವೈದ್ಯರಲ್ಲಿ ಅಥವಾ ಸೂಕ್ತ ಆಹಾರ ತಜ್ಞರಲ್ಲಿ ಈ ಬಗ್ಗೆ ಸಮಾಲೋಚನೆ ಮಾಡಿಕೊಳ್ಳಿ.
ಸೋಯಾ ಆಹಾರದಲ್ಲಿ ಐಸೋಫ್ಲೆàವನ್ಸ್ ಎಂಬ ಸಸ್ಯ ಜನ್ಯ ಹಾರ್ಮೋನ್ ಇದ್ದು, ಅದು ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಈಸ್ಟ್ರೋಜನ್‌ನಂತೆ ವರ್ತಿಸುತ್ತದೆ. ದಿನಕ್ಕೆ ಎರಡು ಸಲದಂತೆ ಈ ಆಹಾರವನ್ನು ಸೇವಿಸುವುದು, ಋತುಬಂಧದ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕ. ಆಹಾರದಲ್ಲಿ ವಿವಿಧ ಬಗೆಯಲ್ಲಿ ಇದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.
ಬೀನ್ಸ್‌ನ ರೀತಿಯ ಕೋಡುಗಳನ್ನು ಆಹಾರದಲ್ಲಿ ಹೆಚ್ಚು ಬಳಸಿ.ಇವು ನಾರು, ಪ್ರೊಟೀನ್, ಕ್ಯಾಲ್ಸಿಯಂ, ಫೋಲಿಕ್ ಆಸಿಡ್ ಹಾಗೂ ಫೈಟೋ ಈಸ್ಟ್ರೋಜನ್‌ಗಳ ಪುಟ್ಟ ಸಮಗ್ರ ಪೊಟ್ಟಣವಾಗಿದೆ. ಇವು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯಕ. ಈ ಕೋಡುಗಳನ್ನು ಸಲಾಡ್, ಪಾಸ್ತಾ, ಸೂಪ್, ಸ್ಟೂéಡಿಪ್ ಹಾಗೂ ಕಡಲೆ ಕಾಳಿನ ಜೊತೆಗೆ ಬೇಯಿಸಿ, ಬೆರೆಸಿ ಪುಡಿ ಮಾಡಿ, ವಾರಕ್ಕೆ ಐದು ಅಥವಾ ಹೆಚ್ಚು ಬಾರಿ ಸೇವಿಸಿದರೆ ಉತ್ತಮ.
ಈಸ್ಟ್ರೋಜನ್ ಸಮತೋಲನಕ್ಕೆ ಸಹಕರಿಸುವ ಪ್ರೊಜೆಸ್ಟರೋನ್ ಹಾರ್ಮೋನಿನ ಸಂತುಲನೆಗೆ ಝಿಂಕ್ ಸಹಕರಿಸುತ್ತದೆ. ಮಾತ್ರವಲ್ಲ, ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನೂ ಸಹ ಸರಿಯಾಗಿಸಲು ಸಹಕಾರಿ. ಲೀನ್ ಮಾಂಸ, ಸಮುದ್ರಾಹಾರಗಳು, ಮೊಟ್ಟೆ ಹಾಗೂ ಹಾಲಿನಲ್ಲಿ ಝಿಂಕ್ ಹೇರಳ ಪ್ರಮಾಣದಲ್ಲಿರುತ್ತದೆ.
ದೇಹದಲ್ಲಿ ಈಸ್ಟ್ರೋಜನ್ ಅನ್ನು ಹಿಡಿದಿಡಲು ಬೋರಾನ್ ಸಹಾಯ ಮಾಡುತ್ತದೆ. ಇದು ಪ್ರತಿನಿತ್ಯ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಪ್ರಮಾಣವನ್ನು ಪೂರೈಸಿ, ಮೂಳೆಗಳನ್ನು ದೃಢವಾಗಿರಿಸಲು ಸಹಾಯಕ. ವಿವಿಧ ರೀತಿಯ ಹಣ್ಣು, ತರಕಾರಿಗಳನ್ನು ಸೇವಿಸಿ ದೇಹಕ್ಕೆ ಅಗತ್ಯವಿರುವ ಬೋರಾನ್ ಅನ್ನು ಪೂರೈಸಬಹುದು.
ಋತುಬಂಧದ ಹಂತದಲ್ಲಿ ಕಾಣಿಸಿಕೊಳ್ಳುವ,ದೇಹವು ಬಿಸಿಯೇರುವ ಲಕ್ಷಣವನ್ನು ಕೆಲವು ಆಹಾರ ಹಾಗೂ ಪಾನೀಯಗಳು ಇನ್ನಷ್ಟು ಹೆಚ್ಚಿಸುತ್ತವೆ. ಮಸಾಲೆ ಪದಾರ್ಥಗಳು, ಕೆಫಿನ್, ಆಲ್ಕೋಹಾಲ್‌ಗಳಿಂದ ದೂರವಿರಿ ಅಥವಾ ಅವನ್ನು ಆದಷ್ಟು ಕಡಿಮೆ ಸೇವಿಸಿ. ವಿವಿಧ ರೀತಿಯ ಹಣ್ಣು ತರಕಾರಿಗಳಲ್ಲಿ ಅವಶ್ಯವಿರುವ ಸಸ್ಯಜನ್ಯ ಈಸ್ಟ್ರೋಜನ್ ಇರುವ ಕಾರಣ, ಋತುಬಂಧಕ್ಕೆ ಮೊದಲ ದಿನದಲ್ಲಿ ಕನಿಷ್ಠ ಐದು ಬಾರಿ ಈ ರೀತಿಯ ಆಹಾರವನ್ನು ಸೇವಿಸಿ. ಹಾಗೆಯೇ ಋತುಬಂಧವಾಗುವಾಗ ಈ ಆಹಾರವನ್ನು ದಿನಕ್ಕೆ ಏಳು ಬಾರಿ ಕಡ್ಡಾಯವಾಗಿ ಸೇವಿಸಬೇಕು.
ಮೂಳೆಗಳನ್ನು ದೃಢವಾಗಿರಿಸಿಕೊಳ್ಳಿ
ಈಸ್ಟ್ರೋಜನ್ ಕೊರತೆಯಿಂದ ಮಹಿಳೆಯರಿಗೆ ಆಸ್ಟಿಯೋಪೊರೋಸಿಸ್ ಅಥವಾ ಮೂಳೆಗಳು ಸವೆದು ದುರ್ಬಲಗೊಳ್ಳುವ ಕಾಯಿಲೆ ಬರುವ ಅಪಾಯವಿದೆ. ಆರೋಗ್ಯಕರ ಆಹಾರ ಹಾಗೂ ನಿಯಮಿತ ವ್ಯಾಯಾಮಗಳ ಜೊತೆಗೆ ಕ್ಯಾಲ್ಸಿಯಂ ಹಾಗೂ ವಿಟಾಮಿನ್ ಡಿ. ಸೇವನೆಯಿಂದ ಈ ಕಾಯಿಲೆಯನ್ನು ತಡೆಯಬಹುದು. ಋತುಬಂಧವಾದ ಮಹಿಳೆಯು ದಿನಕ್ಕೆ 1200-1500 ಮಿಲಿ ಗ್ರಾಂ. ನಷ್ಟು ಕ್ಯಾಲ್ಸಿಯಂ ಅನ್ನು ಸೇವಿಸುವುದು ಆವಶ್ಯಕ. ಈ ಬಗ್ಗೆ ನಿಮ್ಮ ವೈದ್ಯರಲ್ಲಿ ಮೊದಲು ಚರ್ಚಿಸಿಕೊಳ್ಳಿ. ನೀವು ಕ್ಯಾಲ್ಸಿಯಂ ಕಾಬೊìನೇಟ್ ಹಾಗೂ ಕ್ಯಾಲ್ಸಿಯಂ ಸಿಟ್ರೇಟ್ ಪೂರಣಗಳನ್ನು ಸೇವಿಸಬಹುದು. ಇವು ಚೆನ್ನಾಗಿ ದೇಹಗತವಾಗಲು, ದೇಹಕ್ಕೆ ವಿಟಾಮಿನ್ ಡಿ.ಯನ್ನು ಒದಗಿಸುವುದು ಆವಶ್ಯಕ. ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳುವ ಮೂಲಕ ವಿಟಾಮಿನ್ ಡಿ.ಯನ್ನು ಪಡೆಯಬಹುದು. ವಾರಕ್ಕೆ ಎರಡು-ಮೂರು ಸಲ 15 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ನಿಮ್ಮ ಮುಖ ಹಾಗೂ ಕೈ-ಕಾಲುಗಳನ್ನು ಒಡ್ಡಿಕೊಳ್ಳಿ. ಹಾಲಿನಲ್ಲಿ-ಕ್ಯಾಲ್ಸಿಯಂ, ಬಹು ವಿಟಮಿನ್ ಹಾಗೂ ಬಹು ಖನಿಜಗಳು ಹೇರಳವಾಗಿದ್ದು, ಇದರಲ್ಲಿ ವಿಟಾಮಿನ್ ಡಿ. ಸಹ ದೊರಕುತ್ತದೆ.
ಭಾವನೆಗಳ ನಿಯಂತ್ರಣ ಹಾಗೂ ನಿದ್ರಾಹೀನತೆಯ ಪರಿಹಾರಕ್ಕೆ ಮೆಗ್ನೇಷಿಯಂ ಸಹಾಯಕ. ಮೂಳೆಯನ್ನು ದೃಢವಾಗಿರಿಸುವಲ್ಲಿಯೂ ಇದರ ಪಾತ್ರ ದೊಡ್ಡದು. ಬೀನ್ಸ್, ಕೋಡುಗಳು, ಬೀಜಗಳು, ಹಸಿರು ತರಕಾರಿ ಹಾಗೂ ಇಡೀ ಧಾನ್ಯಗಳನ್ನು ಸೇವಿಸಿ, ದೇಹಕ್ಕೆ ಅಗತ್ಯವಿರುವ ಮೆಗ್ನೇಷಿಯಂ ಅನ್ನು ಪೂರೈಸಿ.
ನಿಮ್ಮ ಒಟ್ಟು ಕ್ಯಾಲೊರಿಯಲ್ಲಿ 30% ದಷ್ಟು ಕೊಬ್ಬನ್ನು ದೇಹಕ್ಕೆ ಒದಗಿಸಿದರೆ ಸಾಕು. ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಸ್ಯಾಚುರೇಟೆಡ್ ಹಾಗೂ ಟ್ರಾನ್ಸ್ ಕೊಬ್ಬನ್ನು ಸೇವಿಸಬೇಡಿ. ಋತುಬಂಧ ಪೂರ್ವ ಹಂತದಲ್ಲಿರುವ ಮಹಿಳೆಗೆ ಇವುಗಳಿಂದ ಹೃದಯದ ಕಾಯಿಲೆ ಬರುವ ಅಪಾಯವಿದೆ. ಹಾಗಾಗಿ, ಕೊಬ್ಬುಯುಕ್ತ ಮಾಂಸ, ಇಡೀ ಹಾಲು, ಐಸ್‌ಕ್ರೀಂ, ಮ್ಯಾರ್ಗಾರಿನ್, ಬೆಣ್ಣೆ ಹಾಗೂ ಮಸಾಲೆ ಪದಾರ್ಥಗಳನ್ನು ಮಿತವಾಗಿ ಸೇವಿಸಿ. ಕೊಬ್ಬಿನ ಪ್ರಮಾಣವನ್ನು ತಗ್ಗಿಸಿಕೊಳ್ಳಬೇಕು. ಹಾಗೆಯೇ, ಒಳ್ಳೆಯ ಕೊಬ್ಬು ಹೃದಯದ ಕಾಯಿಲೆ ಹಾಗೂ ಕೆಲವು ರೀತಿಯ ಕ್ಯಾನ್ಸರ್‌ಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ಋತುಬಂಧವಾದ ಮಹಿಳೆಯರಿಗೆ ಮೋನೊಸ್ಯಾಚುರೇಟೆಡ್ ಕೊಬ್ಬು ಹಾಗೂ ಒಮೇಗ-3 ಫ್ಯಾಟಿ ಆಸಿಡ್ ಬಹಳ ಉಪಯುಕ್ತ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ.
ಅತಿಯಾಗಿ ಸಿಹಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚುತ್ತದೆ. ಇದು ಮೇದೋಜೀರಕ ಗ್ರಂಥಿಯು ಹೆಚ್ಚು ಹಾರ್ಮೋನ್ ಅನ್ನು ಬಿಡುಗಡೆ ಮಾಡಲು ಪ್ರಚೋದಿಸುತ್ತದೆ. ಹಾಗಾಗಿ, ತಂಪು ಪಾನೀಯ, ಸಿರಪ್, ಜ್ಯಾಮ್, ಸಕ್ಕರೆ, ಚಾಕೋಲೇಟ್, ಸಿಹಿ ಯೋಗರ್ಟ್ ಹಾಗೂ ಸಿಹಿಯಾದ ತಿನಿಸುಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ.
ಋತುಬಂಧದ ಹಂತದಲ್ಲಿ ನಿಮ್ಮ ಹಾರ್ಮೋನ್ ಅನ್ನು ಸರಿಯಾದ ಹಾಗೂ ಸುರಕ್ಷಿತ ಮಟ್ಟದಲ್ಲಿ ಇರಿಸಲು, ನಿಮ್ಮ ಆಹಾರದಲ್ಲಿ ಫ್ಲಾéಕ್ಸ್ ಸೀಡ್ ಅಥವಾ ಅಗಸೆ ಬೀಜವನ್ನು ಹೆಚ್ಚು ಬಳಸಿ. ಇದರಲ್ಲಿ ಫ್ಯಾಟಿ ಆಸಿಡ್ ಹಾಗೂ ಲಿಗ್ನಾನ್ ಅಧಿಕ ಪ್ರಮಾಣದಲ್ಲಿರುತ್ತದೆ. ಲಿಗ್ನಾನ್ ಅಂದರೆ ಒಂದು ರೀತಿಯ ನೈಸರ್ಗಿಕ ಆಕ್ಸಿಡಾಂಟ್ ಹಾಗೂ ಫೈಟೋಈಸ್ಟ್ರೋಜನ್.ನಿತ್ಯದ ಆಹಾರದಲ್ಲಿ ಒಂದೆರಡು ಚಮಚ ಅಗಸೆ ಬೀಜವನ್ನು ಸೇರಿಸಿ.
ಬದುಕಿನಲ್ಲಿ ಋತುಬಂಧದ ಈ ಹಂತವನ್ನು ಎದುರಿಸಲೇಬೇಕು. ಋತುಬಂಧದ ಅವಧಿಯಲ್ಲಿ ಕ್ಷುಲ್ಲಕ ಎನಿಸುವ ಹಲವಾರು ಲಕ್ಷಣಗಳು ನಿಮ್ಮನ್ನು ಸತಾಯಿಸಬಹುದು. ಆದರೆ, ಈ ಬದಲಾವಣೆಗಳ ಬಗ್ಗೆ ನಿಮಗೆ ಮೊದಲೇ ತಿಳಿವಳಿಕೆ ಇದ್ದಲ್ಲಿ, ಹಾಗೂ ಆರೋಗ್ಯಕರ ಆಹಾರವನ್ನು ಸೇವಿಸಿ ಅವುಗಳನ್ನು ಎದುರಿಸಿದಲ್ಲಿ, ಈ ಬದಲಾವಣೆಯ ಸಮಯವೂ ಸಹ ನಿಮ್ಮ ಒಳ್ಳೆಯದಕ್ಕಾಗಿಯೇ ಬಂದಿದೆ ಎಂಬುದು ನಿಮಗೆ ಅರಿವಾಗಲಿದೆ.