Udayavani | Jun 11, 2012
ಎಜ್‌ಬಾಸ್ಟನ್ : ಇಂಗ್ಲಂಡ್ ಹಾಗೂ ಪ್ರವಾಸಿ ವೆಸ್ಟ್ ಇಂಡೀಸ್ ತಂಡಗಳ ನಡುವಿನ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದ್ದು, ಇಂಗ್ಲಂಡ್ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿತು.

ಈ ಪಂದ್ಯದಲ್ಲಿ ಆಡಲು ಅವಕಾಶ ಲಭಿಸಿದ್ದು 3ನೇ ಹಾಗೂ 4ನೇ ದಿನದಂದು ಮಾತ್ರ. ಒಟ್ಟು 3 ದಿನಗಳ ಆಟ ಮಳೆಯಿಂದ ಕೊಚ್ಚಿ ಹೋಯಿತು.

ವೆಸ್ಟ್ ಇಂಡೀಸಿನ 426ಕ್ಕೆ ಉತ್ತರವಾಗಿ ಇಂಗ್ಲಂಡ್ 4ನೇ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 221 ರನ್ ಮಾಡಿತ್ತು. ಈ ಹಂತಕ್ಕೇ ಆಟ ನಿಂತಿತು. 95 ರನ್ ಹಾಗೂ 2 ವಿಕೆಟ್ ಸಂಪಾದಿಸಿದ ವಿಂಡೀಸಿನ ಟಿನೊ ಬೆಸ್ಟ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸರಣಿಶ್ರೇಷ್ಠ ಪ್ರಶಸ್ತಿಯನ್ನು ವಿಂಡೀಸಿನ ಮಾರ್ಲಾನ್ ಸಾಮ್ಯುಯೆಲ್ಸ್ ಮತ್ತು ಇಂಗ್ಲಂಡಿನ ಆಂಡ್ರ್ಯೂ ಸ್ಟ್ರಾಸ್ ಅವರಿಗೆ ಜಂಟಿಯಾಗಿ ನೀಡಲಾಯಿತು.

ಜೂ. 16ರಂದು ಆರಂಭವಾಗಲಿರುವ ಏಕದಿನ ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ಜೂ. 13ರಂದು ಲಾರ್ಡ್ಸ್‌ನಲ್ಲಿ ಮಿಡ್ಲ್ಸೆಕ್ಸ್ ವಿರುದ್ಧ ಏಕದಿನ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ.

ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-426. ಇಂಗ್ಲಂಡ್-5 ವಿಕೆಟಿಗೆ 221 (ಪೀಟರ್‌ಸನ್ 78, ಬೆಲ್ ಅಜೇಯ 76, ಬೆಸ್ಟ್ 37ಕ್ಕೆ 2).