Wednesday, May 22, 2013
Last Updated: 12:32:25 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಡಾಲ್‌ ನರ್ತನ
    • 7ನೇ ಫ್ರೆಂಚ್‌ ಓಪನ್‌ ಕಿರೀಟ
    • ವಿಶ್ವದ ನಂ.2 ಟೆನಿಸಿಗ ಸ್ಪೇಯ್ನ ರಫೆಲ್‌ ನಡಾಲ್‌ 7ನೇ ಬಾರಿಗೆ ಸಿಂಗಲ್ಸ್‌ ಕಿರೀಟ ಏರಿಸಿಕೊಂಡು ಹೊಸ ಇತಿಹಾಸ ನಿರ್ಮಿಸಿ

      • Udayavani | Jun 11, 2012

        ಪ್ಯಾರಿಸ್‌ : ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ತನ್ನನ್ನು ಮೀರಿಸುವವರಿಲ್ಲ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದ ವಿಶ್ವದ ನಂ.2 ಟೆನಿಸಿಗ ಸ್ಪೇಯ್ನ ರಫೆಲ್‌ ನಡಾಲ್‌ 7ನೇ ಬಾರಿಗೆ ಸಿಂಗಲ್ಸ್‌ ಕಿರೀಟ ಏರಿಸಿಕೊಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಳೆಯಿಂದ ಸೋಮವಾರಕ್ಕೆ ಮುಂದುವರಿಯಲ್ಪಟ್ಟ ಪ್ರಶಸ್ತಿ ಸೆಣಸಾಟದಲ್ಲಿ ಅವರು ವಿಶ್ವದ ಅಗ್ರಜ, ಸರ್ಬಿಯಾದ ನೊವಾಕ್‌ ಜೊಕೋವಿಕ್‌ ಅವರಿಗೆ 6-4, 6-3, 2-6, 7-5 ಅಂಕಗಳ ಸೋಲುಣಿಸಿದರು.



        ಈ ಫ‌ಲಿತಾಂಶದಿಂದಾಗಿ ಸತತ ಎಲ್ಲ 4 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದ 3ನೇ ಟೆನಿಸಿಗನೆಂಬ ಇತಿಹಾಸ ನಿರ್ಮಿಸಲು ಹೊರಟಿದ್ದ ಜೊಕೋವಿಕ್‌, ನಡಾಲ್‌ ನರ್ತನದೆದುರು ಮಂಡಿಯೂರಲೇ ಬೇಕಾಯಿತು. ಇದಕ್ಕೂ ಹಿಂದಿನ ವಿಂಬಲ್ಡನ್‌, ಯುಎಸ್‌ ಓಪನ್‌ ಹಾಗೂ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಗಳಲ್ಲಿ ಜೊಕೋವಿಕ್‌ ಅವರೇ ಚಾಂಪಿಯನ್‌ ಆಗಿ ವಿಜೃಂಭಿಸಿದ್ದರು. ಈ ಎಲ್ಲ ಫೈನಲ್‌ಗ‌ಳಲ್ಲಿ ಅವರು ನಡಾಲ್‌ ವಿರುದ್ಧವೇ ಜಯ ಸಾಧಿಸಿದ್ದನ್ನು ಮರೆಯುವಂತಿಲ್ಲ. ಅಂದಹಾಗೆ ಜೊಕೋವಿಕ್‌ ಮೊದಲ ಸಲ ಫ್ರೆಂಚ್‌ ಓಪನ್‌ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು.



        1938ರಲ್ಲಿ ಡಾನ್‌ ಬಜ್‌, 1962 ಹಾಗೂ 69ರಲ್ಲಿ ರಾಡ್‌ ಲೆವರ್‌ ನಾಲ್ಕೂ ಗ್ರ್ಯಾನ್‌ಸ್ಲಾಮ್‌ ಗೆಲುವಿನ ಆವೃತ್ತವನ್ನು ಪೂರೈಸಿದ್ದರು. ಇವರ ಸಾಲಿಗೆ ಸೇರುವ ಅದೃಷ್ಟ ಜೊಕೋವಿಕ್‌ಗೆ ಇಲ್ಲದೇ ಹೋಯಿತು.



        ನಡಾಲ್‌ ಪಾಲಿಗೆ ಇದು 16ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಈವರೆಗಿನ 8 ಫ್ರೆಂಚ್‌ ಓಪನ್‌ ಕೂಟಗಳಲ್ಲಿ 7 ಪ್ರಶಸ್ತಿಗಳ ಸಾಧನೆ ಮಾಡಿರುವುದು ಸ್ಪೇಯ್ನ ಟೆನಿಸಿಗನ 'ಪ್ಯಾರಿಸ್‌ ಪ್ರೀತಿ'ಗೆ ಸಾಕ್ಷಿ. ಅಂದರೆ, ಇಲ್ಲಿ ಆಡಿದ ಒಟ್ಟು 53 ಪಂದ್ಯಗಳಲ್ಲಿ ನಡಾಲ್‌ ಸೋತದ್ದು ಒಂದನ್ನು ಮಾತ್ರ. ಅದು 2009ರ 4ನೇ ಸುತ್ತಿನ ಮುಖಾಮುಖೀಯಾಗಿತ್ತು.

        11ನೇ ಗ್ರ್ಯಾನ್‌ಸ್ಲಾಮ್‌



        26ರ ಹರೆಯದ ನಡಾಲ್‌ ಪಾಲಿಗೆ ಇದು 11ನೇ ಗ್ರ್ಯಾನ್‌ಸ್ಲಾಮ್‌ ಕಿರೀಟ. ಅವರೀಗ ರಾಯ್‌ ಎಮರ್ಸನ್‌ ಅವರ ಗ್ರ್ಯಾನ್‌ಸ್ಲಾಮ್‌ ದಾಖಲೆಗಿಂತ ಕೇವಲ ಒಂದು, ಪೀಟ್‌ ಸಾಂಪ್ರಸ್‌ ಅವರ ಸಾಧನೆಗಿಂತ 3 ಹಾಗೂ ರೋಜರ್‌ ಫೆಡರರ್‌ ಅವರ ವಿಶ್ವದಾಖಲೆಯ 16 ಪ್ರಶಸ್ತಿಗಳಿಂದ 5 ಮೆಟ್ಟಿಲು ಹಿಂದಿದ್ದಾರೆ.



        ರವಿವಾರ ರಾತ್ರಿ ಮಳೆಯಿಂದ ಆಟ ನಿಂತಾಗ ನಡಾಲ್‌ 6-4, 6-3, 2-6, 1-2 ಅಂಕಗಳ ಮುನ್ನಡೆಯಲ್ಲಿದ್ದರು. ಸೋಮವಾರ ಆಟ ಪುನರಾರಂಭಗೊಂಡಾಗ ಜೊಕೋವಿಕ್‌ ತಮ್ಮ 4ನೇ ಸೆಟ್‌ ಮುನ್ನಡೆಯನ್ನು 3-1ಕ್ಕೆ ಒಯ್ದರು. ಆದರೆ ಇವರ 'ಫೋರ್‌ಹ್ಯಾಂಡ್‌ ಎರರ್‌' ಒಂದು ನಡಾಲ್‌ಗೆ ಬ್ರೇಕ್‌ ಪಾಯಿಂಟ್‌ ಒದಗಿಸಿತು.

        ನಡಾಲ್‌ ಮುನ್ನಡೆ 5-4ಕ್ಕೆ ಏರಿದಾಗ ಮತ್ತೆ ಮಳೆ ಹಾಜರ್‌. ಇಬ್ಬರೂ ಜಾರುವ ಅಂಗಳದ ಬಗ್ಗೆ ರೆಫ್ರಿ ಸ್ಟೀಫ‌ನ್‌ ಫ್ರಾನ್‌ಸೆನ್‌ ಅವರಿಗೆ ದೂರು ಸಲ್ಲಿಸಿದರು. ಮಳೆ ನಿಂತ ಬಳಿಕ ಮತ್ತೆ ಆಟ ಸಾಗಿತು. ನಡಾಲ್‌ಗೆ ಪ್ರಶಸ್ತಿ ಒಲಿಯಿತು.

        3ನೇ ವಾರಕ್ಕೆ ಫ್ರೆಂಚ್‌ ಓಪನ್‌



        ಫ್ರೆಂಚ್‌ ಓಪನ್‌ ಪಂದ್ಯಾವಳಿ 3ನೇ ವಾರಕ್ಕೆ ಕಾಲಿಟ್ಟದ್ದು ಇದು ಎರಡನೇ ಸಲ. 1973ರಲ್ಲಿ ಮೊದಲ ಬಾರಿಗೆ ಪುರುಷರ ಫೈನಲ್‌ ಮಂಗಳವಾರಕ್ಕೆ ಮುಂದೂಡಲ್ಪಟ್ಟಿತ್ತು. ಅಂದು ಇಲೀ ನಾಸ್ಟೇಸ್‌ ಅವರು ನಿಕಿ ಪಿಲಿಕ್‌ ವಿರುದ್ಧ ಜಯ ಸಾಧಿಸಿದ್ದರು.

        ಆದರೆ ಯುಎಸ್‌ ಓಪನ್‌, ವಿಂಬಲ್ಡನ್‌ ಕೂಟಗಳು ಸೋಮವಾರ ಮುಗಿಯುವುದು ಮಾಮೂಲು. ನ್ಯೂಯಾರ್ಕ್‌ನಲ್ಲಿ ಕಳೆದ ನಾಲ್ಕೂ ಫೈನಲ್‌ಗ‌ಳು ಮಳೆಯಿಂದಾಗಿ ಮೀಸಲು ದಿನಕ್ಕೆ ಮುಂದುವರಿದಿದ್ದವು. ಹಾಗೆಯೇ 2001ರ ವಿಂಬಲ್ಡನ್‌ ಪಂದ್ಯಾವಳಿ ಕೂಡ.



        ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ಈ ಸಮಸ್ಯೆ ತಲೆದೋರಬಾರದೆಂಬ ಉದ್ದೇಶದಿಂದ ಪ್ರಧಾನ ಅಂಗಳಕ್ಕೆ ಮೇಲ್ಛಾವಣಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದು 2017ರಲ್ಲಿ ಪೂರ್ತಿಗೊಳ್ಳಲಿದೆ.

        ಫ್ರೆಂಚ್‌ ಓಪನ್‌: ನಡಾಲ್‌ ಗೆಲುವುಗಳು

        ವರ್ಷ ಎದುರಾಳಿ ಅಂತರ
        2005 ಮರಿಯಾನೊ ಪ್ಯೂರ್ಟ (ಆರ್ಜೆಂಟೀನಾ) 6-7 (6-8), 6-3, 6-1, 7-5
        2006 ರೋಜರ್‌ ಫೆಡರರ್‌ (ಸಿಟ್ಸರ್ಲಂಡ್‌) 1-6, 6-1, 6-4, 7-6 (7-4)
        2007 ರೋಜರ್‌ ಫೆಡರರ್‌ (ಸಿಟ್ಸರ್ಲಂಡ್‌) 6-3, 4-6, 6-3, 6-4
        2008 ರೋಜರ್‌ ಫೆಡರರ್‌ (ಸಿಟ್ಸರ್ಲಂಡ್‌) 6-1, 6-3, 6-0
        2010 ರಾಬಿನ್‌ ಸೊಡರ್ಲಿಂಗ್‌ (ಸ್ವೀಡನ್‌) 6-4, 6-2, 6-4
        2011 ರೋಜರ್‌ ಫೆಡರರ್‌ (ಸಿಟ್ಸರ್ಲಂಡ್‌) 7-5, 7-6 (7-3), 5-7, 6-1
        2012 ನೊವಾಕ್‌ ಜೊಕೋವಿಕ್‌ (ಸರ್ಬಿಯಾ) 6-4, 6-3, 2-6, 7-5

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus