Udayavani | Jun 11, 2012
ಉಡುಪಿ : ವಿಧಾನ ಪರಿಷತ್ತಿಗೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಲು ಜೂ.10ರಂದು ನಡೆದ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ. ಮತಪೆಟ್ಟಿಗೆಗಳು ಚುನಾವಣಾಧಿಕಾರಿಯವರಾದ ಆಯಾ ವಿಭಾಗಾಧಿಕಾರಿಗಳ ಕಚೇರಿ ತಲುಪಿದೆ. ಪ್ರಮುಖ ಪಕ್ಷಗಳು, ಪಕ್ಷದ ಅಭ್ಯರ್ಥಿಗಳು ಗೆಲುವಿನ ಗುಂಗಿನಲ್ಲಿದ್ದಾರೆ.
ನೈಋತ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಯ ಎರಡು ತಾಲೂಕುಗಳು ಇವೆ. ಪದವೀಧರ ಕ್ಷೇತ್ರದಲ್ಲಿದ್ದ 57,277 ಮತದಾರರ ಪೈಕಿ 29,290 ಮತದಾರರು ಮತಚಲಾಯಿಸಿದ್ದಾರೆ. ಇಲ್ಲಿ ಶೇ.50.39 ಮತದಾನ ದಾಖಲಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿದ್ದ 15,888 ಮತದಾರರ ಪೈಕಿ ಶೇ.60.26 ಮತದಾನವಾಗಿದೆ.
ಈ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಹಾಲಿ ಪ್ರತಿನಿಧಿಗಳು ಪುನರಾಯ್ಕೆ ಬಯಸಿದ್ದರೆ ಪ್ರತಿಪಕ್ಷಗಳು ಪ್ರಬಲವಾಗಿ ಸ್ಪರ್ಧೆಯನ್ನೊಡ್ಡಿವೆ. ಪಕ್ಷೇತರರೂ ಸಾಕಷ್ಟು ಪ್ರಚಾರವನ್ನು ನಡೆಸಿದ್ದಾರೆ.
ಪದವೀಧರ ಕ್ಷೇತ್ರದ ಅಭ್ಯರ್ಥಿ ಬಿಜೆಪಿಯ ಡಿ.ಎಚ್.ಶಂಕರಮೂರ್ತಿಯವರು 'ತುಂಬಾ ಸಮಾಧಾನದಲ್ಲಿದ್ದೇನೆ. ನಾವು ಮಾಡಿದ ಪ್ರಚಾರ, ಮತದಾರರ ಪ್ರತಿಸ್ಪಂದನ, ಕಾರ್ಯಕರ್ತರ ಶ್ರಮಗಳು ನನ್ನ ಗೆಲುವಿಗೆ ಕಾರಣವಾಗಲಿದೆ' ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್ ಅವರು 'ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಜನರು ನನ್ನ ಕುರಿತು ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿರುವುದು ಪ್ರಚಾರದ ವೇಳೆ ಕಂಡುಬಂದಿದೆ. ನಾನು ಹೊಸ ಮುಖ. ಕಳೆದ 20-25 ವರ್ಷಗಳಲ್ಲಿ ವಿ.ವಿ. ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯನಾಗಿ ಮಾಡಿದ ಕೆಲಸ, ಮತದಾರರ ನೋಂದಣಿಯಲ್ಲಿ ತೋರಿದ ಆಸಕ್ತಿಯಿಂದ ಗೆಲುವು ಸಾಧ್ಯ' ಎನ್ನುತ್ತಾರೆ.
ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡರು 'ಮತದಾನ ಕಡಿಮೆಯಾಗಿದೆ. ಮತದಾರರ ಪಟ್ಟಿ ತುಂಬಾ ದೋಷಪೂರಿತವಾಗಿತ್ತು. ಹೊಸದಾಗಿ ನೋಂದಣಿ ಮಾಡಿದವರಲ್ಲಿ ಶೇ.75 ಜನರು ಮತದಾನ ಮಾಡಿದ್ದಾರೆ. ಮೊದಲ ಸುತ್ತಿನಲ್ಲಿ ಗೆಲುವು ಯಾರಿಗೂ ಸಾಧ್ಯವಿಲ್ಲ. ಪ್ರಾಶಸ್ತ್ಯ ಮತಗಳ ನೆರವು ಬೇಕಾಗುತ್ತದೆ. ನನ್ನ ಗೆಲುವು ನಿರೀಕ್ಷಿತ' ಎಂದು ಹೇಳಿದ್ದಾರೆ.
ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ|ಗಣೇಶ್ ಕಾರ್ಣಿಕ್ ಅವರು 'ನಾನು ಮಂಗಳೂರಿನಲ್ಲಿ ಆರಾಮವಾಗಿ ಮ್ಯಾಚ್ ನೋಡುತ್ತಿದ್ದೇನೆ. ಚುನಾವಣೆ ಫಲಿತಾಂಶದ ಬಗ್ಗೆ ಅನಗತ್ಯ ತಲೆ ಕಡಿಸಿಕೊಳ್ಳುವುದು ಅಗತ್ಯವಿಲ್ಲ. ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಮತದಾನವಾಗಿದೆ. ಕಳೆದ ಬಾರಿ ಶೇ.72 ಮತದಾನವಾಗಿತ್ತು. ಈ ಬಾರಿ ಕಾಲೇಜುಗಳಿಗೆ ರಜೆ ಇದ್ದ ಕಾರಣ ನಗರಗಳಲ್ಲಿ ಕಡಿಮೆ ಮತದಾನವಾಗಿದೆ. ಗ್ರಾಮಾಂತರದಲ್ಲಿ ಚೆನ್ನಾಗಿ ಮತದಾನವಾಗಿದೆ. ವಾತಾವರಣ ನನ್ನ ಗೆಲುವಿಗೆ ಪೂರಕವಾಗಿದೆ' ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಜೋಯಪ್ಪ ಅವರು 'ನಾನು ಕಾಂಗ್ರೆಸ್ ಅಭ್ಯರ್ಥಿ. ಈ ಬಾರಿ ಬಿಜೆಪಿ ವಿರುದ್ಧದ ಅಲೆ ಇದೆ. ಶಿಕ್ಷಕರೂ ಕೂಡ ಬಿಜೆಪಿ ವಿರುದ್ಧವಿದ್ದಾರೆ. ಆದ್ದರಿಂದ ಕಾಂಗ್ರೆಸ್‌ಗೆ ಗೆಲುವು ನಿರೀಕ್ಷಿತ' ಎಂದು ಹೇಳುತ್ತಾರೆ.
ಜೆಡಿಎಸ್ ಅಭ್ಯರ್ಥಿ ಪಂಚಾಕ್ಷರಯ್ಯನವರು 'ಮೊದಲ ಸುತ್ತಿನಲ್ಲಿ ಫಲಿತಾಂಶ ಬರುವುದಿಲ್ಲ. 2, 3ನೆಯ ಪ್ರಾಶಸ್ತ್ಯದ ಮತ ಹಾಕಬೇಕೆಂದು ಮತದಾರರನ್ನು ಜಾಗೃತಿ ಮಾಡಲಿಲ್ಲ. ನನ್ನ ಶಿವಮೊಗ್ಗ ಕ್ಷೇತ್ರದಲ್ಲಿ ಹೆಚ್ಚಿಗೆ ಮತ ನನಗೆ ಬಿದ್ದಿರುತ್ತದೆ. ಈ ಬಾರಿ ಅನಿರೀಕ್ಷಿತ ಫಲಿತಾಂಶ ಬರಲಿದೆ' ಎಂದು ಹೇಳಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಅವರೂ ತಮ್ಮದೇ ಆದ ಲೆಕ್ಕಾಚಾರದಲ್ಲಿದ್ದಾರೆ. ಇನ್ನೊಂದೆ ದಿನ ಬಿಟ್ಟು ಜೂ.13ರ ಬೆಳಗ್ಗೆ ಮೈಸೂರಿನಲ್ಲಿ ಮತ ಎಣಿಕೆ ನಡೆಯಲಿದೆ. ವಿಭಾಗೀಯ ಕೇಂದ್ರದಲ್ಲಿ ಮತ ಎಣಿಕೆ ನಡೆಯುವುದರಿಂದ ಅಭ್ಯರ್ಥಿಗಳೆಲ್ಲರೂ ಮೈಸೂರಿನಲ್ಲಿರುತ್ತಾರೆ. ಹೀಗಾಗಿ ಜಿಲ್ಲಾ ಕೇಂದ್ರಗಳಲ್ಲಿ ವಿಜಯೋತ್ಸವ ಭಾರೀ ಪ್ರಮಾಣದಲ್ಲಿ ಕಂಡುಬರುವುದು ಕಷ್ಟ.