Thursday, June 20, 2013
Last Updated: 4:57:05 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಿ.ಸಿ. ರೋಡ್‌ ಚಾರ್ಮಾಡಿ : ದ್ವಿಪಥವಾಗಲಿ
    • ಗುರುವಾಯನಕೆರೆ - ಬೆಳ್ತಂಗಡಿ - ಉಜಿರೆ ರಸ್ತೆಯಲ್ಲಿ ವಾಹನ ದಟ್ಟಣೆ ಮಾಮೂಲಿಯಾಗಿದೆ.

      • ಲಕೀÒ$¾ ಮಚ್ಚಿನ | Jun 11, 2012

        ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ರಾಜ್ಯ ಹೆದ್ದಾರಿ ಸ್ಥಾನಮಾನದಲ್ಲಿರುವ ಬಂಟ್ವಾಳ ಕಡೂರು ರಸ್ತೆ ಬಿಸಿರೋಡಿನಿಂದ ಚಾರ್ಮಾಡಿ ತನಕ ದ್ವಿಪಥವಾಗಬೇಕಿದೆ.

        ಹತ್ತು ವರ್ಷಗಳ ಹಿಂದೆ ಮಂಗಳೂರು ನಗರದಲ್ಲಿ ವಾಹನದಟ್ಟಣೆ ಇದ್ದಂತೆ ಇದೀಗ ಗುರುವಾಯನಕೆರೆ - ಬೆಳ್ತಂಗಡಿ - ಉಜಿರೆ ರಸ್ತೆಯಲ್ಲಿ ಕೂಡಾ ವಾಹನ ದಟ್ಟಣೆ ಕಂಡುಬರುತ್ತಿದೆ. ಹೀಗಾಗಿ ಈ ರಸ್ತೆಯನ್ನು ಅತಿ ಶೀಘ್ರವಾಗಿ ದ್ವಿಪಥ ಮಾಡಬೇಕಾಗಿದೆ.

        ಮೇಲ್ದರ್ಜೆಗೆ:

        ಕಡೂರು ಬಂಟ್ವಾಳ ರಾಜ್ಯ ಹೆದ್ದಾರಿ ಮಂಗಳೂರಿನಿಂದ ತಿರುವಣ್ಣಮಲೈ ರಸ್ತೆಯಾಗಿ 2010 ಮೇ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ 234 ಎಂದು ಪರಿವರ್ತಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ರೀತಿಯಲ್ಲಿ ಮಾಡಲು ಸರ್ವೆ ಇತ್ಯಾದಿ ಸಿದ್ಧತೆಗಳು ನಡೆದಿವೆಯಾದರೂ ಕಾಮಗಾರಿ ನಡೆಯುವುದು ಸದ್ಯಕ್ಕಿಲ್ಲ ಎನ್ನುವ ಮಾತು ಕೇಳಿಬರುತ್ತಿವೆ. ಈ ಹೆದ್ದಾರಿಯಲ್ಲಿ ಬಿ.ಸಿ. ರೋಡಿನಿಂದ ಚಾರ್ಮಾಡಿ ತನಕ ಅನೇಕ ಪೇಟೆಗಳು ಸಿಗುತ್ತವೆ. ಅಂತಹ ಪ್ರದೇಶದಲ್ಲಿ ಅಂಗಡಿಗೆ ಹೋಗುವವರ ವಾಹನಗಳ ಪಾರ್ಕಿಂಗ್‌ ಸೇರಿದಂತೆ ವಾಹನ ದಟ್ಟಣೆ, ಜನಜಂಗುಳಿ ನಿತ್ಯ ನಿರಂತರವಾಗಿದೆ.

        ಅಪಘಾತ ವಲಯಗಳು:

        ಬಿ.ಸಿ. ರೋಡ್‌ನಿಂದ ಚಾರ್ಮಾಡಿ ತನಕ ಹದಿನೈದಕ್ಕೂ ಅಧಿಕ ಅಪಘಾತ ವಲಯಗಳಿವೆ. ಇಲ್ಲಿ ದಿನಕ್ಕೊಂದಾದರೂ ಅಪಘಾತ ನಡೆಯುತ್ತಿರುತ್ತದೆ. ಉಜಿರೆಯಿಂದ ಬೆಳ್ತಂಗಡಿ - ಗುರುವಾಯನಕೆರೆಗೆ ಹಾದು ಹೋಗುವ 9 ಕಿ.ಮೀ. ರಸ್ತೆಯಲ್ಲಿಯೇ ವಾಹನ ದಟ್ಟಣೆ ಸಂಚಾರ ಮಾಡುವ ಪ್ರಯಾಣಿಕರ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದ್ದು, ಇರುವ ರಸ್ತೆ ಸಂಚಾರಕ್ಕೆ ಸಾಲದಾಗಿದೆ. ಪ್ರಸ್ತುತ ಹೆದ್ದಾರಿಯ ಕಾಮಗಾರಿ ಸದ್ಯಕ್ಕಿಲ್ಲವಾದರೂ ಮುಖ್ಯ ರಸ್ತೆ ಅಗಲಗೊಳಿಸುವ ಕಾರ್ಯ ಅತೀ ತುರ್ತು ಅಗಬೇಕಾಗಿದೆ.

        ಬೆಳ್ತಂಗಡಿಯಿಂದ :

        ಈ ರಸ್ತೆಯ ಮೂಲಕ ಧರ್ಮಸ್ಥಳ, ಚಿಕ್ಕಮಗಳೂರಿನಿಂದ ಮಂಗಳೂರಿಗೆ, ಪುತ್ತೂರಿಗೆ; ಬೆಳ್ತಂಗಡಿಯಿಂದ ಉಪ್ಪಿನಂಗಡಿ, ವೇಣೂರು ನಾರಾವಿ ಮೂಲಕ ಕಾರ್ಕಳಕ್ಕೆ ಸರಕಾರಿ ಮತ್ತು ಖಾಸಗಿ ಬಸ್ಸುಗಳ ದಿನವಹಿ ಸುಮಾರು 375 ಸರ್ವೀಸ್‌ ಇವೆ. ಅಷ್ಟೇ ಅಲ್ಲದೆ ಅಟೋರಿûಾ, ಟೆಂಪೋ ಹಾಗೂ ಇನ್ನಿತರ ವಾಹನಗಳು ಅಪಾರ ಸಂಖ್ಯೆಯಲ್ಲಿ ಓಡಾಡುತ್ತಿವೆ. ವಾಹನಗಳ ದಟ್ಟಣೆ ಮೀತಿ ಮೀರಿದೆ. ಆದರೆ ರಸ್ತೆ ಮಾತ್ರ ಹಿಂದಿನಂತೆ ಕಿರಿದಾಗಿಯೇ ಇದೆ. ಉಜಿರೆಯಿಂದ ಗುರುವಾಯನಕರೆಯ ತನಕ ವಾಹನಗಳು ಸಂಚರಿಸುವುದೆಂದರೆ ಹರ ಸಾಹಸವೇ ಸರಿ. ಪಾದಚಾರಿಗಳಿಗೆ ರಸ್ತೆ ಅಡ್ಡದಾಟಲೂ ಹೊತ್ತು ತಗುಲುತ್ತದೆ.

        ವಿರೋಧಿಸುವವರ ಗಮನಕ್ಕೆ:

        ರಸ್ತೆ ಅಗಲಗೊಳಿಸಲು ಸರ್ವಾನುಮತದ ಸಹಮತವಿದೆ ಎನ್ನಲಾಗದು. ಏಕೆಂದರೆ ಅಂಗಡಿ ಮಾಲಕರು, ರಸ್ತೆ ಅಗಲಗೊಳ್ಳುವಾಗ ಜಾಗ ಕಳೆದುಕೊಳ್ಳುವವರ ಒಂದು ಲಾಬಿಯೇ ಇದೆ. ಅವರು ರಸ್ತೆ ಅಗಲಗೊಳಿಸುವ ಕಾರ್ಯವನ್ನು ಸದಾ ವಿರೋಧಿಸುತ್ತಾರೆ. ಹಾಗಂತ ಜನಸಾಮಾನ್ಯರ ಗೋಳಿಗೂ, ಜೀವಕ್ಕೂ ಒಂದು ಬೆಲೆಯಿದೆ. ಶಾಲೆ - ಕಾಲೇಜುಗಳು ಇರುವ ದಿನಗಳಲ್ಲಿ, ಬೆಳ್ತಂಗಡಿಯ ಸೋಮವಾರದ ಸಂತೆಯ ದಿನ, ವಿವಿಧ ಸಂಘ, ಸಂಸ್ಥೆಗಳ ಸಮಾವೇಶ, ಸಮಾರಂಭದ ದಿನಗಳಲ್ಲಿ, ಜಾತ್ರೆ, ಉತ್ಸವಗಳ ಸಂದರ್ಭ, ಮದುವೆಗಳ ಸೀಸನ್‌ಗಳಲ್ಲಂತೂ ಕೈ ಜೀವ ಹಿಡಿದುಕೊಂಡಂತೆ ಹೋಗಬೇಕಾದ ಸ್ಥಿತಿ ಇಲ್ಲಿಯದು ಎಂಬುದನ್ನು ಸ್ವತಃ ಅಂಗಡಿಯವರು ಗಮನಿಸುತ್ತಾರೆ.

        ಕಳೆದೆರಡು ವರ್ಷಗಳಿಂದ ಈ ರಸ್ತೆಯಲ್ಲಿ ಅಪಘಾತಗಳು ನಡೆಯುವುದು ಹೆಚ್ಚಾಗುತ್ತಿದೆ. ಅದೆಷ್ಟೋ ಜೀವಗಳು ಹೋಗಿವೆ, ಗಂಭೀರ ಗಾಯಗೊಂಡು ಆಸ್ಟತ್ರೆ ಸೇರಿದವರೂ ಸಾಕಷ್ಟು ಮಂದಿ ಇದ್ದಾರೆ. ಸಣ್ಣಪುಟ್ಟ ಅಪಘಾತಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿನ ವಾಹನ ದಟ್ಟಣೆೆ ನೋಡಿದವರು ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲೂ ಇದೇ ರೀತಿ ಇತ್ತು ಎಂದು ಹೇಳುತ್ತಿರುವುದು ಮಾಮೂಲಾಗಿ ಹೋಗಿದೆ. ವಾಹನ ಸಂಚಾರ ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಹೀಗಾಗಿ ಇನ್ನಷ್ಟು ಜೀವಗಳು ಹೋಗುವುದರ ಮೊದಲು, ಮತ್ತಷ್ಟು ಜನರು ಕೈಕಾಲು ಕಳೆದುಕೊಳ್ಳುವುದರ ಮೊದಲು, ವಾಹನಗಳು ಜಖಂ ಆಗುವುದರ ಮುನ್ನ ಇಲ್ಲಿ ದ್ವಿಪಥ ಆಗುವುದು ಅತಿ ಅನಿವಾರ್ಯವಾಗಿದೆ.

        ಮಂಗಳೂರು - ತಿರುವಣ್ಣಾಮಲೈ ಪೂರ್ತಿ ರಸ್ತೆ ರಾಷ್ಟ್ರೀಯ ಹೆದ್ದಾರಿ ಮಾಡುವುದೇನೋ ಸರಿ. ಆದರೆ ಅದಕ್ಕಿಂತಲೂ ಮೊದಲು ಗುರುವಾಯನಕರೆಯಿಂದ ಉಜಿರೆ ತನಕದ 9 ಕಿ.ಮೀ ರಸ್ತೆಯನ್ನಾದರೂ ಅಗಲಗೊಳಿಸುವುದು ಜರೂರಾಗಿದೆ. ನಾಗರಿಕರ ಜೀವಕ್ಕೆ ಕಿಂಚಿತ್ತಾದರೂ ಬೆಲೆ ಕೊಡುವ ಪ್ರಯತ್ನ ಆಗಲಿ.

        7ಮೀ. ಅಗಲ:

        ಈಗ ಇರುವ ರಸ್ತೆ 5.5 ಮೀ. ಅಗಲವಿದೆ. ಇದಕ್ಕೆ ಇಂಟರ್‌ಮೀಡಿಯೇಟ್‌ ರಸ್ತೆ ಎನ್ನಲಾಗುತ್ತದೆ. ಇದನ್ನು ದ್ವಿಪಥ ಎಂದರೆ 7 ಮೀ. ಅಗಲಗೊಳಿಸುವ ಕಾರ್ಯ ನಡೆಯಬೇಕಿದೆ. ಈಗಾಗಲೇ ನಡೆದ ವಾಹನ ಗಣತಿಯ ಪ್ರಕಾರ ಇದು ಚತುಷ್ಪಥವಾಗಲು ಅರ್ಹತೆ ಪಡೆದಿದೆ. ಆದರೆ ಅದಕ್ಕೂ ಮುನ್ನ ದ್ವಿಪಥಗೊಂಡರೂ ಸಾಕು.

        ಮಂಗಳೂರಿನಿಂದ ಬಿಸಿ ರೋಡು ತನಕ ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣಗೊಂಡಿದೆ. ಬೇಲೂರಿನಿಂದ ಇದೇ ರಸ್ತೆ ಅಗಲಗೊಂಡಿದೆ. ಚಾರ್ಮಾಡಿ ಬಿ.ಸಿ. ರೋಡು ಮಧ್ಯೆ ಮಾತ್ರ ಬಾಕಿ ಇದೆ ಎಂಬ ಮಾಹಿತಿಯನ್ನು ಇಲಾಖೆಯವರು ಕೊಡುತ್ತಾರೆ. ವಿಶ್ವಬ್ಯಾಂಕ್‌ ಆರ್ಥಿಕ ನೆರವಿನಿಂದ ಈ ರಸ್ತೆ ಚತುಷ್ಪಥಗೊಳ್ಳುವುದು ಎಂದು ಎಲ್ಲ ಸಿದ್ಧತೆ ನಡೆದಿತ್ತು. ಸರ್ವೆ ನಡೆಸಲಾಗಿತ್ತು. ಅಂಗಡಿ ಮಾಲಕರ ಸಭೆ ಕೂಡಾ ಕರೆದಾಗಿತ್ತು. ಆದರೆ ಯಾಕೋ ಯೋಜನೆ ನನೆಗುದಿಗೆ ಬಿತ್ತು.

        11,500 ವಾಹನ ಪ್ರತಿದಿನ :

        ಈ ರಸ್ತೆ ಮುಖಾಂತರ ಪ್ರತಿದಿನ ಸರಾಸರಿ 11,500 ವಾಹನಗಳು ಓಡಾಟ ನಡೆಸುತ್ತವೆ ಎನ್ನುತ್ತವೆ ರಾಷ್ಟ್ರೀಯ ಹೆದ್ದಾರಿ ಇಲಾಖೆ. ಇವರು ನಡೆಸಿದ ವಾಹನ ಗಣತಿಯಂತೆ ಈ ರಸ್ತೆಯಲ್ಲಿ ಚತುಷ್ಪಥಗೊಳ್ಳಲು ಬೇಕಾದಷ್ಟು ವಾಹನಗಳ ಓಡಾಟ ನಡೆಯುತ್ತಿದೆ. 2010ರಲ್ಲಿ 12,557 ವಾಹನಗಳ ಸರಾಸರಿ ಓಡಾಟ ಪ್ರತಿದಿನ ನಡೆದಿದೆ. ಪ್ರಯಾಣಿಕ ವಾಹನಗಳ ಸರಾಸರಿ ಓಡಾಟ 16,444 ಇತ್ತು.

        ಅರ್ಹತೆ ಇದೆ:

        ಬಿ.ಸಿ. ರೋಡ್‌ ಚಾರ್ಮಾಡಿ ರಸ್ತೆ ಚತುಷ್ಪಥಗೊಳ್ಳಲು ಅರ್ಹತೆ ಇದೆ. ದ್ವಿಪಥಗೊಳಿಸುವ ಕಾರ್ಯವೂ ನಡೆಸಬಹುದು. ಈಗಾಗಲೇ ಚತುಷ್ಪಥಗೊಳ್ಳಬೇಕಿದ್ದ ಯೋಜನೆ ಸದ್ಯ ಜಾರಿಯಾದಂತೆ ಕಾಣುತ್ತಿಲ್ಲ. ಬೇಲೂರಿನಿಂದ ರಸ್ತೆ ಅಭಿವೃದ್ಧಿ ಆಗಿದ್ದು ಬಿ.ಸಿ. ರೋಡ್‌ ಚಾರ್ಮಾಡಿ ಮಾತ್ರ ಬಾಕಿ ಇದೆ.
        - ಉಮೇಶ್‌ ಭಟ್‌. ಸಹಾಯಕ ಎಂಜಿನಿಯರ್‌. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಇಲಾಖೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus