Udayavani | Jun 11, 2012
- ಬಿಜೆಪಿಯಿಂದ 12, ಕಾಂಗ್ರೆಸ್‌ನಿಂದ 6 ಅಡ್ಡಮತಗಳ ಚಲಾವಣೆ
- ಪಕ್ಷೇತರ ಅಭ್ಯರ್ಥಿಗೆ ಎಲ್ಲರಿಗಿಂತ ಹೆಚ್ಚು ಮತ ಗಳಿಕೆ
- ಸ್ಥಾನ ಗಳಿಕೆ ಲೆಕ್ಕದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ
- ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲು
- ಸರಡಗಿ ಸೋಲಿನ ಹೊಣೆ ಪರಮೇಶ್ವರ್, ಸಿದ್ದು ಹೆಗಲಿಗೆ ಸಂಭವ
- ಬಿಎಸ್‌ವೈ ಬಣದ ಮೂವರಿಗೆ ಮೊದಲ ಪ್ರಾಶಸ್ತ್ಯ ಗೆಲುವು
- ಬಿಜೆಪಿಯ 3, ಕಾಂಗ್ರೆಸ್ಸಿನ ಒಬ್ಬರು ಎರಡನೇ ಪ್ರಾಶಸ್ತ್ಯದ ಮತಗಳಿಂದ ಜಯ
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆದ ಚುನಾವಣೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಾಯಕರಿಗೆ ಅಕ್ಷರಶಃ ನೀರಿಳಿಸಿದ್ದು, ಉಭಯ ಪಕ್ಷಗಳಿಗೂ ಅಡ್ಡಮತದಾನದ ಬಿಸಿ ತೀವ್ರವಾಗಿ ತಟ್ಟಿದೆ.

ವಿಚಿತ್ರ ಎಂದರೆ, ವ್ಯಾಪಕವಾಗಿ ಅಡ್ಡಮತದಾನ ನಡೆದರೂ ಉಭಯ ಪಕ್ಷಗಳಿಗೆ ದಕ್ಕಬೇಕಾಗಿದ್ದ ಸ್ಥಾನಗಳಲ್ಲಿ ನಷ್ಟ ಉಂಟಾಗಿಲ್ಲ. ಬಿಜೆಪಿಯಿಂದ ಕಣಕ್ಕಿಳಿದಿದ್ದ ಆರೂ ಮಂದಿ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ಗೆ ಬರಬೇಕಾಗಿದ್ದ ಮೂರು ಸ್ಥಾನಗಳು ದಕ್ಕಿವೆ. ಆದರೆ, ಅಧಿಕೃತ ಅಭ್ಯರ್ಥಿ ಸೋಲು ಅನುಭವಿಸಿ ಹೆಚ್ಚುವರಿಯಾಗಿ ಕಣಕ್ಕಿಳಿದಿದ್ದ ಅಭ್ಯರ್ಥಿ ಜಯ ಗಳಿಸಿದ್ದಾರೆ.
ಹನ್ನೊಂದನೇ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಎಂ.ಆರ್.ಸೀತಾರಾಂ ಮತ್ತು ಪಕ್ಷೇತರ ಅಭ್ಯರ್ಥಿ ಬೈರತಿ ಸುರೇಶ್ ಅವರ ನಡುವೆ ಪೈಪೋಟಿ ನಡೆದು ಇಬ್ಬರ ಪೈಕಿ ಒಬ್ಬರು ಗೆಲ್ಲಲಿದ್ದಾರೆ ಎಂಬ ಸರಳ ಲೆಕ್ಕಾಚಾರ ಹಾಗೂ ನಿರೀಕ್ಷೆ ಹುಸಿಯಾಗಿದ್ದು, ಇಬ್ಬರೂ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್ ಹಾಗೂ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬೈರತಿ ಸುರೇಶ್ ಅವರು ಇತರ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಗಳಿಸುವ ಮೂಲಕ ಚುನಾವಣೆಯಲ್ಲಿ ಕುದುರೆ ವ್ಯಾಪಾರ ಅಥವಾ ಅಡ್ಡಮತದಾನ ಭರ್ಜರಿಯಾಗಿ ನಡೆಯಲಿದೆ ಎಂಬ ಆರೋಪಗಳನ್ನು ಪುಷ್ಟೀಕರಿಸಿದಂತಾಗಿದೆ.

ಈ ಚುನಾವಣೆಯಲ್ಲಿ ಬಿಜೆಪಿಯಿಂದ 12 ಮತ್ತು ಕಾಂಗ್ರೆಸ್‌ನಿಂದ ಆರು ಮತಗಳು ಅಡ್ಡಮತದಾನವಾಗಿವೆ ಎನ್ನಲಾಗಿದ್ದು, ಪಕ್ಷೇತರ ಅಭ್ಯರ್ಥಿ ಬೈರತಿ ಸುರೇಶ್ ಅವರಿಗೆ ಬಿಜೆಪಿಯಿಂದಲೇ ಹೆಚ್ಚಿನ ಮತಗಳು ಹೋಗಿವೆ ಎಂದು ತಿಳಿದು ಬಂದಿದೆ. ಆದರೆ, ಈ ಸಂಖ್ಯೆಯನ್ನು ಕರಾರುವಾಕ್ಕಾಗಿ ಹೇಳುವುದಕ್ಕೆ ಸಾಧ್ಯವಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ.

ಪಕ್ಷಕ್ಕಿಂತ ವ್ಯಕ್ತಿ ಮುಖ್ಯ
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸೋಮವಾರ ಆಯ್ಕೆಯಾದ 11 ಸದಸ್ಯರ ಚುನಾವಣೆ ಆಡಳಿತಾರೂಢ ಬಿಜೆಪಿ ಮಟ್ಟಿಗೆ 'ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನು' ಎಂಬುದನ್ನು ಸಾಬೀತುಪಡಿಸಿದಂತಿದೆ. ಯಾಕೆಂದರೆ, ಬಿಜೆಪಿಯಿಂದ ಆಯ್ಕೆಯಾದ ಆರು ಅಭ್ಯರ್ಥಿಗಳ ಪೈಕಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಿಗರಾದ ಮೂವರು ಸುಲಲಿತವಾಗಿ ಗೆದ್ದಿದ್ದು, ಇನ್ನು ಮೂವರು ತಿಣುಕಾಡಿ ಗೆದ್ದಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಪಕ್ಷದ ಮೊದಲ ಮೂರು ಅಭ್ಯರ್ಥಿಗಳ ಪೈಕಿ ಒಬ್ಬರಿಗೆ ಸೋಲಾಗಿದ್ದು, ಹೆಚ್ಚುವರಿ ಮತಗಳನ್ನು ನೆಚ್ಚಿಕೊಂಡಿದ್ದ ನಾಲ್ಕನೇ ಅಭ್ಯರ್ಥಿ ಗೆದ್ದಿದ್ದಾರೆ. ಅತ್ತ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬೈರತಿ ಸುರೇಶ್ ಅವರು ಬಿಜೆಪಿ, ಕಾಂಗ್ರೆಸ್ ಸದಸ್ಯರ ಅಡ್ಡ ಮತದ ಪರಿಣಾಮವಾಗಿ ಗೆಲುವು ಸಾಧಿಸಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಕೆಲ ಸದಸ್ಯರಿಗೆ 'ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ' ಎಂದೆನಿಸಿದ್ದನ್ನು ಸಾರಿ ಹೇಳಿದೆ.
ಬಿಎಸ್‌ವೈ ಬೆಂಬಲಿಗರಿಗೆ ಸುಲಭ ಜಯ:
ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಣಕ್ಕೆ ಸೇರಿದ ಡಿ.ಎಸ್. ವೀರಯ್ಯ, ಬಿ.ಜೆ.ಪುಟ್ಟಸ್ವಾಮಿ ಮತ್ತು ಸೋಮಣ್ಣ ಬೇವಿನಮರದ ಅವರು ಮೊದಲ ಪ್ರಾಶಸ್ತ್ಯ ಮತಗಳಿಂದಲೇ ಗೆಲುವು ಸಾಧಿಸಿದ್ದು, ಇನ್ನುಳಿದ ಅಭ್ಯರ್ಥಿಗಳಾದ ವಿಮಲಾಗೌಡ, ಎಂ.ಬಿ.ಭಾನುಪ್ರಕಾಶ್ ಹಾಗೂ ರಘುನಾಥ್‌ರಾವ್ ಮಲ್ಕಾಪುರೆ ಅವರು ಎರಡನೇ ಪ್ರಾಶಸ್ತ್ಯದ ಮತಗಳ ನೆರವಿನಿಂದ ಹರಸಾಹಸ ಮಾಡಿ ಗೆಲುವು ಸಾಧಿಸಬೇಕಾಯಿತು.
ಅದೇ ರೀತಿ ಕಾಂಗ್ರೆಸ್‌ನಲ್ಲಿ ನಾಲ್ಕನೇ ಹೆಚ್ಚುವರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂ.ಆರ್.ಸೀತಾರಾಂ ಅವರು ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ಸರಡಗಿ ಅವರು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಬೆಂಬಲಿಗ ಅಭ್ಯರ್ಥಿ. ಈ ಸೋಲು ಸಹಜವಾಗಿಯೇ ಪಕ್ಷದ ನಾಯಕರಿಗೆ ತೀವ್ರ ಮುಜುಗರ ಉಂಟು ಮಾಡಿದ್ದು, ಇದರ ಹೊಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಗಲಿಗೆ ಹೊರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಯಾರಿಗೆ ಎಷ್ಟು ಮತ?
ಬಿಜೆಪಿ: ಬಿ.ಜೆ.ಪುಟ್ಟಸ್ವಾಮಿ- 20, ಡಿ.ಎಸ್.ವೀರಯ್ಯ- 19, ಸೋಮಣ್ಣ ಬೇವಿನಮರದ- 19, ರಘುನಾಥ್‌ರಾವ್ ಮಲ್ಕಾಪುರೆ- 18, ವಿಮಲಾಗೌಡ- 17 ಹಾಗೂ ಭಾನುಪ್ರಕಾಶ್- 17.
ಕಾಂಗ್ರೆಸ್: ಎಂ.ಆರ್.ಸೀತಾರಾಂ- 20, ಮೋಟಮ್ಮ- 19, ಗೋವಿಂದರಾಜು- 17 ಮತ್ತು ಇಕ್ಬಾಲ್ ಅಹಮದ್ ಸರಡಗಿ- 15.
ಜೆಡಿಎಸ್: ಸೈಯದ್ ಮುದೀರ್ ಆಗಾ- 19.
ಪಕ್ಷೇತರ: ಬೈರತಿ ಸುರೇಶ್- 23.
ಜಾರಕಿಹೊಳಿ, ರಾಮುಲು ಬಣಗಳಿಂದ ಅಡ್ಡಮತದಾನ ಶಂಕೆ
ಬಿಜೆಪಿಯಿಂದ 12 ಮತಗಳು ಅಡ್ಡ ಮತದಾನವಾಗಿರುವುದರಿಂದ ಪಕ್ಷದಲ್ಲಿನ ಸಚಿವ ಬಾಲಚಂದ್ರ ಜಾರಕಿಹೊಳಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಬಣಗಳ ಮೇಲೆ ಅನುಮಾನದ ದೃಷ್ಟಿ ನೆಟ್ಟಿದೆ.
ಜಾರಕಿಹೊಳಿ ಬಣದಲ್ಲಿ ಸುಮಾರು 10 ಶಾಸಕರಿದ್ದಾರೆ. ಜತೆಗೆ ರಾಮುಲು ಪಾಳೆಯದಲ್ಲಿ ಗಾಲಿ ಸೋಮಶೇಖರರೆಡ್ಡಿ, ಸುರೇಶ್‌ಬಾಬು ಮತ್ತು ನಾಗೇಂದ್ರ ಗುರುತಿಸಿಕೊಂಡಿದ್ದಾರೆ. ಜಾರಕಿಹೊಳಿ ಬಣದ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸವಿಲ್ಲ. ಇನ್ನು ರಾಮುಲು ಬೆಂಬಲಿಗ ಶಾಸಕರಿಗೆ ಬಿಜೆಪಿ ಟಿಕೆಟ್‌ನ ಅಗತ್ಯವಿಲ್ಲ. ಹೀಗಾಗಿ ಉಭಯ ಬಣಗಳ ಶಾಸಕರು ಅಡ್ಡ ಮತದಾನ ಮಾಡುವ ಧೈರ್ಯ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಡ್ಡಮತದಾನ ಮಾಡಿದವರ ವಿರುದ್ಧ ಕ್ರಮವಿಲ್ಲ!
ಈ ಚುನಾವಣೆಯಲ್ಲಿ ವಿಪ್ ಜಾರಿಗೊಳಿಸಿದ್ದರೂ ಅದನ್ನು ಉಲ್ಲಂ ಸಿ ತಮ್ಮ ಪಕ್ಷ ಬಿಟ್ಟು ಅಡ್ಡಮತದಾನ ಮಾಡಿದ ತಪ್ಪಿಗಾಗಿ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ತೀರಾ ಕಡಮೆ ಎನ್ನಲಾಗುತ್ತಿದೆ.
ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರಿಂದಲೇ ಅಡ್ಡಮತದಾನ ಆಗಿದ್ದರೂ 'ರಹಸ್ಯ ಮತದಾನ' ಎಂಬ ಸಮಜಾಯಿಷಿ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳದೇ ಇರುವ ಸಂಭವವೇ ಹೆಚ್ಚು. ಮೇಲಾಗಿ ಶಾಸಕತ್ವ ರದ್ದತಿಗೆ ಕ್ರಮ ಕೈಗೊಳ್ಳಲು ಮುಂದಾದರೆ ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಕಷ್ಟವಾಗುತ್ತದೆ ಎಂಬ ಮಾತೂ ಕೇಳಿಬರುತ್ತಿದೆ.
ಆದರೆ, ಅಡ್ಡ ಮತದಾನ ಮಾಡಿದ ಶಾಸಕರ ಬಗ್ಗೆ ಆಯಾ ಪಕ್ಷಗಳ ನಾಯಕರಿಗೆ ಸರಿಯಾದ ಮಾಹಿತಿ ಲಭಿಸುವುದು ನಿಚ್ಚಳವಾಗಿದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಂಥವರ ಟಿಕೆಟ್‌ಗೆ ಕತ್ತರಿ ಬೀಳುವ ನಿರೀಕ್ಷೆಯಿದೆ.
ಆಡಳಿತಾರೂಢ ಬಿಜೆಪಿಯಿಂದಲೇ ಅಡ್ಡಮತದಾನ ಆಗಿರುವುದು ಹೆಚ್ಚು. ಯಾರು ಅಡ್ಡ ಹೋಗಿದ್ದಾರೆ ಎಂಬುದು ಗೊತ್ತಾದರೂ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂಬ ಏಕೈಕ ಕಾರಣಕ್ಕಾಗಿ ಜಾಣ ಕುರುಡನಂತೆ ವರ್ತಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ಕೂಡ ಚುನಾವಣೆ ಸಮೀಪಿಸುತ್ತಿರುವುದರಿಂದ ಈಗ ಯಾವುದೇ ಕ್ರಮ ಕೈಗೊಳ್ಳದೇ ಆ ಸಂದರ್ಭದಲ್ಲೇ ಕ್ರಮ ಕೈಗೊಳ್ಳುವ ಚಿಂತನೆಯಲ್ಲಿದೆ.
ಸುರೇಶ್‌ಗೆ 10 'ಅಡ್ಡ'ಮತಗಳು
ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬೈರತಿ ಸುರೇಶ್ ಅವರಿಗೆ ಬಿದ್ದ 10 ಪ್ರಥಮ ಪ್ರಾಶಸ್ತ್ಯದ ಮತಗಳು ಎಲ್ಲಿಂದ ಬಂದವು?
ವಿಧಾನಪರಿಷತ್ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ವಲಯಗಳಲ್ಲಿ ಕೇಳಿ ಬರುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಯಿದು.
ಸ್ಪರ್ಧಾಕಣದಲ್ಲಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳಿಗಿಂತ ಅತಿ ಹೆಚ್ಚು 23 ಮತ ಪಡೆದ ಬೈರತಿ ಸುರೇಶ್‌ರತ್ತ ವಾಲಿದ ಮತಗಳು ಯಾರವು ಎಂಬ ಬಗ್ಗೆ ಎರಡೂ ಪಕ್ಷಗಳು ತೀವ್ರವಾಗಿ ತಲೆಕೆಡಿಸಿಕೊಂಡಿವೆ.
ಬೈರತಿ ಸುರೇಶ್‌ಗೆ ಜೆಡಿಎಸ್ ನೀಡಿದ್ದು 7 ಮತ, ಪಕ್ಷೇತರರದ್ದು 6 ಮತ. ಎರಡೂ ಸೇರಿದರೂ 13 ಮೊದಲ ಪ್ರಾಶಸ್ತ್ಯದ ಮತಗಳು. ಆದರೆ, ಸುರೇಶ್‌ಗೆ 23 ಮೊದಲ ಪ್ರಾಶಸ್ತ್ಯದ ಮತ ದೊರೆತಿದ್ದು, ಮೊಟ್ಟ ಮೊದಲು ವಿಜಯಿಯಾಗಿ ಹೊರಹೊಮ್ಮಿದರು. ಹೀಗಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಇವರ ಪಾಲಿಗೆ ಬಂದ 'ಅಡ್ಡ ಮತಗಳ'ದ್ದೇ ದೊಡ್ಡ ಸುದ್ದಿ.
ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಬೈರತಿ ಸುರೇಶ್ ಅವರಿಗೆ ಮತಗಳು ಬಂದಿದ್ದು, ಯಾವ ಪಕ್ಷದ ಪಾಲು ಎಷ್ಟು ಎಂಬುದನ್ನು ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ, ಬಿಜೆಪಿಯ ಪಾಲೇ ಹೆಚ್ಚು ಎನ್ನಲಾಗುತ್ತಿದೆ. ಅದರಲ್ಲೂ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಬಣದ ಶಾಸಕರೇ ಬಿಜೆಪಿಗೆ ಕೈಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಲಿಸಿದ ಎಚಿxಕೆ ತಂತ್ರ
ವಿಧಾನಸಭೆಯಲ್ಲಿ ಕೇವಲ 26 ಶಾಸಕ ಬಲ ಹೊಂದಿರುವ ಜೆಡಿಎಸ್ ವಿಧಾನಪರಿಷತ್ ಚುನಾವಣೆಯಲ್ಲಿ ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಮೇಲುಗೈ ಸಾಧಿಸಿದೆ.
ರಾಜಕೀಯ ಲೆಕ್ಕಾಚಾರ ಹಾಕಿಕೊಂಡೇ ಬೈರತಿ ಸುರೇಶ್ ಅವರನ್ನು ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಂತ್ರ ಫಲಿಸಿದೆ.
ಬೈರತಿ ಸುರೇಶ್ ಅವರನ್ನು ಕಣಕ್ಕಿಳಿಸಿ ಅವರ ಗೆಲುವಿಗಾಗಿ ಮೊದಲ ದಿನದಿಂದಲೇ ತಂತ್ರಗಾರಿಕೆ ರೂಪಿಸಿದ್ದ ಕುಮಾರಸ್ವಾಮಿ, ಅದಕ್ಕಾಗಿಯೇ ತಮ್ಮ ಆಪ್ತ ಜಮೀರ್ ಅಹಮದ್‌ಖಾನ್ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ಬಾಬು ಅವರನ್ನು ನಿಯೋಜಿಸಿದ್ದರು.
ಆಪರೇಷನ್ ಜೆಡಿಎಸ್ ತಂತ್ರ ಸಿದ್ಧಪಡಿಸಿಕೊಂಡು ಅಖಾಡಕ್ಕಿಳಿದಿದ್ದ ಈ ಇಬ್ಬರು, ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿರುವ ಅತೃಪ್ತರನ್ನು ಸಂಪರ್ಕಿಸಿ ಬೈರತಿ ಸುರೇಶ್‌ರತ್ತ ವಾಲುವಂತೆ ಮಾಡಿದರು. ಅಚ್ಚರಿಯ ರೀತಿಯಲ್ಲಿ ಬೈರತಿ ಗೆಲುವು ಸಾಧಿಸಿದ್ದಾರೆ. ಬೈರತಿ ಸುರೇಶ್ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕುಮಾರಸ್ವಾಮಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದು, ಸಿದ್ದರಾಮಯ್ಯ ಅವರನ್ನು ನಂಬಿದವರಿಗೆ ಕಾಂಗ್ರೆಸ್‌ನಲ್ಲಿ ಏನೂ ಆಗುವುದಿಲ್ಲ. ಆದರೆ, ತಮ್ಮನ್ನು ನೆಚ್ಚಿ ಬಂದರೆ ಏನಾದರೂ ಮಾಡಿ ಸ್ಥಾನಮಾನ ಕಲ್ಪಿಸುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ.
ಬೈರತಿ ಸುರೇಶ್ ಅವರು ಸಿದ್ದರಾಮಯ್ಯಗೆ ಆಪ್ತರು. ಜತೆಗೆ ಕುರುಬ ಸಮುದಾಯಕ್ಕೆ ಸೇರಿದವರು. ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟ ನಂತರ ಕುರುಬ ಸಮುದಾಯದ ಪಾಲಿಗೆ ಜೆಡಿಎಸ್ ಒಂದು ರೀತಿಯ ವಿಲನ್‌ನಂತಾಗಿತ್ತು. ಆ ಭಾವನೆ ತೊಡೆದು ಹಾಕುವ ಸಲುವಾಗಿ ಬಂಡೆಪ್ಪ ಕಾಶೆಂಪುರ್, ಸುರೇಶ್‌ಬಾಬು ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿ ವಿಧಾನಪರಿಷತ್‌ನಲ್ಲಿ ಹುಲಿನಾಯ್ಕರ್ ಅವರಿಗೆ ಅವಕಾಶ ನೀಡಲಾಗಿತ್ತು. ಇಷ್ಟಾದರೂ ಸಮುದಾಯದ ವಿಶ್ವಾಸ ಗಳಿಸಲು ಸಾಧ್ಯವಾಗಿರಲಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ಖುದ್ದು ಬೈರತಿ ಸುರೇಶ್ ಅವರು ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ನಾಲ್ಕನೇ ಅಭ್ಯರ್ಥಿಯನ್ನಾಗಿ ಮಾಡಿ ಐವರು ಪಕ್ಷೇತರರ ಬೆಂಬಲ ಪಡೆಯುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದಿದ್ದರು. ಐವರು ಪಕ್ಷೇತರರು ಸಹ ಬೈರತಿ ಸುರೇಶ್ ಅವರನ್ನು ನಾವು ಬೆಂಬಲಿಸುತ್ತೇವೆ. ಕಾಂಗ್ರೆಸ್‌ನ ನಾಲ್ಕನೇ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಮನವಿ ಮಾಡಿದ್ದರು.
ಆದರೆ, ಕಾಂಗ್ರೆಸ್‌ನ ನಾಲ್ಕನೇ ಅಭ್ಯರ್ಥಿಯಾಗುವಲ್ಲಿ ಎಂ.ಆರ್.ಸೀತಾರಾಂ ಯಶಸ್ವಿಯಾಗಿದ್ದರು. ಇದರಿಂದ ಬೇಸರಗೊಂಡ ಬೈರತಿ ಸುರೇಶ್ ಜೆಡಿಎಸ್‌ನತ್ತ ಮುಖ ಮಾಡಿದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಜೆಡಿಎಸ್ ತಮ್ಮ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.