ವಿಜಯಕುಮಾರ ಚಂದರಗಿ | Jun 12, 2012
ಬೆಂಗಳೂರು: ವಿಧಾನಸೌಧದ ಎದುರು ನಡೆಯುತ್ತಿರುವ 'ನಮ್ಮ ಮೆಟ್ರೋ' ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ವಾಸ್ತವವಾಗಿ ಅಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾರಣವೇ?
ಥಟ್ಟನೆ 'ಹೌದು' ಎಂದು ಉತ್ತರಿಸುತ್ತದೆ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಯಮಿತ (ಬಿಎಂಆರ್‌ಸಿಎಲ್). ಆದರೆ, ಅದರ ಹಿನ್ನೆಲೆಗೆ ಸಂಬಂಧಿಸಿದ ಪೂರಕ ಪ್ರಶ್ನೆಗಳನ್ನು ಕೇಳಿದರೆ ಬಿಎಂಆರ್‌ಸಿಎಲ್ ಬಳಿ ಉತ್ತರಗಳಿಲ್ಲ!
ಮಾನವ ಹಕ್ಕುಗಳ ಹೋರಾಟಗಾರ ಟಿ. ನರಸಿಂಹಮೂರ್ತಿ ಅವರು, ಡಾ.ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕೇಳಿದ ಹಲವು ಪ್ರಶ್ನೆಗಳೇ ಈ ಮಾತಿಗೆ ಪುಷ್ಠಿ ನೀಡುತ್ತವೆ. ನರಸಿಂಹಮೂರ್ತಿ, ಮಾಹಿತಿ ಹಕ್ಕಿನಡಿ 2010ರ ಅಕ್ಟೋಬರ್‌ನಿಂದ 2011ರ ಡಿಸೆಂಬರ್‌ವರೆಗೆ ನಾಲ್ಕು ಪ್ರಶ್ನೆಗಳನ್ನು ಬಿಎಂಆರ್‌ಸಿಎಲ್ ಮುಂದಿಟ್ಟಿದ್ದಾರೆ. ಆದರೆ, ಈವರೆಗೆ ಅದಾವುದಕ್ಕೂ ಉತ್ತರ ಕೊಡುವ ಗೋಜಿಗೆ ಬಿಎಂಆರ್‌ಸಿಎಲ್ ಹೋಗಿಲ್ಲ. ಸ್ವತಃ ರಾಜ್ಯ ಮಾಹಿತಿ ಆಯೋಗ ಈ ಸಂಬಂಧ ಬಿಎಂಆರ್‌ಸಿಎಲ್‌ಗೆ ಸಮನ್ಸ್ ನೀಡಿದ್ದರೂ ಕ್ಯಾರೆ ಎಂದಿಲ್ಲ. ಈ ನಡೆ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಶ್ನೆಗಳಿವು....
'ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರ ಮಾಡುತ್ತೀರಾ? ಮಾಡುವುದಾದರೆ ಅದನ್ನು ಬೇರೆ ಯಾವ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುತ್ತೀರಿ?' ಎಂದು 2010ರ ಡಿಸೆಂಬರ್ 4ರಂದು ನರಸಿಂಹಮೂರ್ತಿ ಮಾಹಿತಿ ಹಕ್ಕಿನಡಿ ಬಿಎಂಆರ್‌ಸಿಎಲ್‌ಗೆ ಕೇಳಿದ್ದಾರೆ. ಇದಕ್ಕೆ ಉತ್ತರ ಬಾರದಿದ್ದಾಗ, ಅನಿವಾರ್ಯವಾಗಿ 2011ರ ನವೆಂಬರ್ 19ರಂದು ನರಸಿಂಹಮೂರ್ತಿ, ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗಿದ್ದಾರೆ. ಮಾಹಿತಿ ನೀಡದ ಬಿಎಂಆರ್‌ಸಿಎಲ್‌ಗೆ ಸಮನ್ಸ್ ನೀಡಿದ ಆಯೋಗ, ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ. ಇದಕ್ಕೂ ಕಿವಿಗೊಡದ ಸಂಸ್ಥೆಯ ಅಧಿಕಾರಿಗಳಿಗೆ, 'ಮಾಹಿತಿ ಹಕ್ಕು ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ನಿಮಗೆ ಯಾಕೆ ದಂಡ ವಿಧಿಸಬಾರದು?' ಎಂದೂ ಕೇಳಿದೆ.
ಇನ್ನು 'ಅಂಬೇಡ್ಕರ್ ಪ್ರತಿಮೆ ಸ್ಥಳಾಂತರದಲ್ಲಿನ ವಿಳಂಬದಿಂದಲೇ ಕಾಮಗಾರಿ ಕುಂಠಿತಗೊಂಡಿದ್ದು, ಹತ್ತು ದಿನಗಳಲ್ಲಿ ಸ್ಥಳಾಂತರಿಸದಿದ್ದರೆ, ಕಾಮಗಾರಿ ಸ್ಥಗಿತಗೊಳ್ಳಲಿದೆ' ಎಂದು ಈ ಹಿಂದೆ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರೆ, ಆ ಪ್ರತಿಯನ್ನು ನೀಡುವಂತೆ 2011ರ ಡಿಸೆಂಬರ್ 31ರಂದು ನರಸಿಂಹಮೂರ್ತಿ ಕೇಳಿದ್ದಾರೆ. ಆದರೆ, ಇದಕ್ಕೂ ಬಿಎಂಆರ್‌ಸಿಎಲ್ ಮೌನವಹಿಸಿದೆ.
100 ಕೋಟಿ ಯಾವ್ಯಾವುದಕ್ಕೆ?- ಗೊತ್ತಿಲ್ಲ!
ಅದೇ ರೀತಿ, ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸದಿದ್ದರೆ ನೂರು ಕೋಟಿ ರೂ. ಹೆಚ್ಚುವರಿ ಖರ್ಚಾಗುತ್ತದೆ ಎಂದೂ ಬಿಎಂಆರ್‌ಸಿಎಲ್ ಪತ್ರಿಕೆ ಮೂಲಕ ಹೇಳಿದೆ. ಹಾಗಿದ್ದರೆ, 'ಹೆಚ್ಚುವರಿ ನೂರು ಕೋಟಿ ರೂ. ಯಾವ್ಯಾವ ಕೆಲಸಗಳಿಗೆ ಖರ್ಚಾಗಲಿದೆ ಎಂಬುದರ ವಿವರಣೆ ಕೊಡಿ' ಎಂದು 2011ರ ನವೆಂಬರ್ 23ರಂದು ಕೇಳಲಾಗಿದೆ. ಅಲ್ಲದೇ, ಅಂಬೇಡ್ಕರ್ ಪ್ರತಿಮೆಯಿಂದ ವಿಧಾನಸೌಧದ ಮೆಟ್ಟಿಲುಗಳು ಎಷ್ಟು ದೂರದಲ್ಲಿವೆ ಎಂದು ಮಾಹಿತಿ ಕೇಳಿದ ಬಗ್ಗೆಯೂ ಬಿಎಂಆರ್‌ಸಿಎಲ್ ಉತ್ತರಿಸಿಲ್ಲ. ಈ ಹಿನ್ನೆಲೆಯಲ್ಲಿ ನರಸಿಂಹಮೂರ್ತಿ ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗಿದ್ದಾರೆ.
ಗಡುವು ಮುಗಿದರೆ ನಿತ್ಯ 250 ರೂ.
'ಮಾಹಿತಿ ಹಕ್ಕು' ಕಾಯ್ದೆ ಮೂಲಭೂತ ಹಕ್ಕು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಇದರಡಿ ಕೇಳಿದ ಮಾಹಿತಿಗೆ 30 ದಿನಗಳಲ್ಲಿ ಉತ್ತರಿಸಬೇಕೆಂಬ ನಿಯಮವೂ ಇದೆ. ನಿಯಮ ಉಲ್ಲಂ ಸಿದರೆ ಗಡುವು ಮುಗಿದ ನಂತರದ ದಿನಗಳಿಂದ ನಿತ್ಯ 250 ರೂ.ವರೆಗೆ ಗರಿಷ್ಠ 25 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಆದರೆ, ಬಿಎಂಆರ್‌ಸಿಎಲ್ ಮೇಲಿನ ಯಾವ ಪ್ರಶ್ನೆಗಳಿಗೂ ಮಾಹಿತಿ ನೀಡದಿರುವ ಮೂಲಕ ಉದ್ಧಟತನ ಪ್ರದರ್ಶಿಸಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಟಿ. ನರಸಿಂಹಮೂರ್ತಿ ಆರೋಪಿಸುತ್ತಾರೆ.