Saturday, December 20, 2014
Last Updated: 9:40:47 AM IST
 • ನಾನೆಲ್ಲಿರುವೆ:
 • ಮುಖಪುಟ ಪುರವಣಿಗಳು ಕಲಾವಿಹಾರ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಅರುವತ್ತರ ಅರಳು
   • ಕೋಡು ಭೋಜ ಶೆಟ್ಟಿ | Jun 15, 2012

    ಬದುಕು ಎಂಬುದು ಮೂಲರೂಪದಲ್ಲಿ ಭಾವವಿಲ್ಲದ ಭಾವಚಿತ್ರದಂತೆ, ಬಣ್ಣ ವಿಲ್ಲದ ರೇಖಾಚಿತ್ರದಂತೆ ಇರುವಂತಹದು ಎಂದು ಹೇಳಬಹುದು. ಬದುಕನ್ನು ಭಾವಪೂರ್ಣವಾಗಿಸುವ, ವರ್ಣರಂಜಿತವಾಗಿಸುವ ಕಾರ್ಯ ವೈಯಕ್ತಿಕವಾಗಿ ಆಯಾ ವ್ಯಕ್ತಿಗೆ ಸಂದದ್ದು. ವಿದ್ಯೆ, ಸಾಹಿತ್ಯ, ಕಲೆ, ಸಂಸ್ಕೃತಿ ಇವುಗಳಲ್ಲಿ ಭಾವ ಮೂಡಿಸುವ, ಬಣ್ಣಗೂಡಿಸುವ ಜೀವಕಳೆ ಅಡಕವಾಗಿದೆ. ಒಬ್ಬ ವ್ಯಕ್ತಿ ವಿವಿಧ ವಿದ್ಯಾ ಪಾರಂಗತನಾಗಿ, ಕವಿ, ಸಾಹಿತಿ, ನಾಟಕಕರ್ತ, ನಟನಾಗಿ, ಯಕ್ಷಗಾನ, ಜಾನಪದ ಪ್ರಸಾರಕನಾಗಿ, ನಾಡ ಸಂಸ್ಕೃತಿಯನ್ನು ಉಳಿಸುವ ರೂವಾರಿಯಾಗಿ, ನಿಷ್ಕಾಮವಾಗಿ ಸಾಗುವ ನೆಲೆಯಲ್ಲಿ ಪರಿಪೂರ್ಣವೆನಿಸುತ್ತಾನೆ. ಅವನ ಬದುಕು ನಿಜ ಅರ್ಥದಲ್ಲಿ ಭಾವಪೂರ್ಣವಾಗುತ್ತದೆ. ರೇಖಾಚಿತ್ರ ಬಣ್ಣಗೂಡಿ ಮನ ಸೆಳೆಯುತ್ತದೆ. "ಅಭಿರಾಮ' ವಾಗುತ್ತದೆ. ಇಂತಹ ಭಾವಪೂರ್ಣ, ವರ್ಣರಂಜಿತ ವ್ಯಕ್ತಿ ನಮ್ಮ ಆದರದ ಸೀತಾರಾಮ ಆರ್‌. ಶೆಟ್ಟಿಯವರು ಎಂದು ಅಭಿಮಾನದಿಂದ ಹೇಳಬಯಸುತ್ತೇನೆ.

    ಸೀತಾರಾಮ ಆರ್‌. ಶೆಟ್ಟಿ  ಅವರೀಗ 60ನೆಯ ಸಂವತ್ಸರದ ಹೊಸಗೆಯಲ್ಲಿ ಅರುವತ್ತರ ಅರಳಾಗಿ ನಿಂತಿರುವರು. ಒಬ್ಬ ವ್ಯಕ್ತಿಯ ಜೀವನದ ಸಾಧನೆಗಳನ್ನು ಬರೆದು ವ್ಯಕ್ತಪಡಿಸಲು, ತೆರೆದು ರುಜುಪಡಿಸಲು ಪ್ರಶಸ್ತ ಕಾಲ ಇದೇ ತಾನೆ? ಹಾಗಾಗಿ ಸೀತಾರಾಮ ಆರ್‌. ಶೆಟ್ಟಿಯವರನ್ನು ಹತ್ತಿರದಿಂದ ಕಂಡವರು, ಅವರ ಅಖಾಡದಲ್ಲಿ ಪಳಗಿದವರು, ಅವರ ಸಾಧನೆಯಲ್ಲಿ ಸಹಭಾಗಿಯಾದವರು, ಚಿಣ್ಣರ ಬಿಂಬದ ಹೆತ್ತವರು, ಅವರ ಸಾಧನೆಯನ್ನು ವಿವಿಧ ಮಗ್ಗುಲುಗಳಿಂದ ಪರಾಮರ್ಶಿಸಿದವರು ಒಟ್ಟಾಗಿ ರೂಪುಗೊಳಿಸಿದ ಕೃತಿ ರತ್ನ "ಅಭಿರಾಮ'.

    ಒಂದೂವರೆ ದಶಕಕ್ಕಿಂತಲೂ ಹೆಚ್ಚುಕಾಲ ಮುಂಬಯಿಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಅಲ್ಲಿ ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಜಾನಪದಗಳ ಅಭಿರುಚಿಯನ್ನು ಬೆಳೆಸಿ, ಕವನ, ಕತೆ, ನಾಟಕಗಳನ್ನು ರಚಿಸಿ, ನಾಟಕ, ಯಕ್ಷಗಾನಗಳಲ್ಲಿ ಪಾತ್ರ ವಹಿಸಿ, ಕನ್ನಡ ಪತ್ರಿಕೆಗಳಲ್ಲಿ ತನ್ನ ಅಧ್ಯಯನಪೂರ್ಣ, ಹೊಸ ತಿರುವಿನ ಭಾಷಾ ಸೌಂದರ್ಯ ಕೂಡಿದ ಪ್ರಬುದ್ಧ ಲೇಖನಗಳನ್ನು ಪ್ರಕಟಿಸಿ, ಭಾಷಾಪ್ರಭುತ್ವವನ್ನು ಈತನಕ ಕಾಯ್ದುಕೊಂಡು ಬಂದವರು ಅವರು. ಸಾಹಿತ್ಯ-ಸಮಾಜ ಸೇವೆಯಲ್ಲಿ ನಿಮಗ್ನ ರಾಗಿರುವ ಸೀತಾರಾಮ ಅವರು ನಡೆದು ಬಂದ ದಾರಿ ಅಭಿರಾಮವಾಗಿದೆ.

    ಸೀತಾರಾಮ ಅವರ ಜನನ 11-6- 1952ರಂದು ಈಗಿನ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಆಯಿತು. ತಂದೆ ಇನ್ನಾ ಬರಿಮಾರು ರಾಜು ಶೆಟ್ಟಿಯವರು, ತಾಯಿ ಇನ್ನಾ ಕಾಚೂರು ಪಡುಮನೆ ಕಲ್ಯಾಣಿ ಶೆಟ್ಟಿಯವರು. ಇನ್ನಾ ಹೈಯರ್‌ ಎಲಿಮೆಂಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಸೀತಾರಾಮ ಮುಂಬಯಿಗೆ ಬಂದು ಎಸ್‌ಎಸ್‌ಎಲ್‌ಸಿ ಮುಗಿಸಿ, ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದರು. 1975ರಲ್ಲಿ ಮುಂಬಯಿ ವಿವಿಯಿಂದ ಎಂ.ಎ. ಡಿಗ್ರಿ ಪಡೆದು ಘಾಟ್‌ಕೋಪರ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆನೇಜ್‌ಮೆಂಟ್‌ನಿಂದ ಪರ್ಸನಲ್‌ ಮೆನೇಜ್‌ಮೆಂಟ್‌ನಲ್ಲಿ ಡಿಪ್ಲೋಮಾ ಪಡೆದರು.

    ಮುಂದೆ ಉದ್ಯೋಗಾಸಕ್ತನಾಗಿ ಮುಂಬಯಿಯ ಹಿಂದುಜಾ ಕಾಲೇಜು, ರೂಪಾರೆಲ್‌ ಕಾಲೇಜು, ಆರ್‌.ಜೆ. ಕಾಲೇಜು, ಸೋಮಯ್ಯ ಕಾಲೇಜು, ಜುನ್‌ಜುನ್‌ವಾಲ ಕಾಲೇಜುಗಳಲ್ಲಿ ಕನ್ನಡದ ಪ್ರಾಧ್ಯಾಪಕರಾಗಿ ದುಡಿದುದಲ್ಲದೆ, ಅಲ್ಲೆಲ್ಲ ಕನ್ನಡದ ಕಂಪನ್ನು ಪಸರಿಸಿದರು. ಮುಂದೆ ತನ್ನದೇ ಆದ ಆಶಿಷ ಪ್ರಿಂಟರ್ ಎಂಬ ಕನ್ನಡದ ಮುದ್ರಣ ಸಂಸ್ಥೆಯನ್ನು ಹುಟ್ಟು ಹಾಕಿದರು.

    ಸೀತಾರಾಮ ತನ್ನ ನಿಲುವನ್ನು ಪೂರ್ಣವಾಗಿ ಸಮರ್ಥಿಸುವ ಧ್ಯೇಯವಾದಿ. ಶಿಕ್ಷಣ ತಜ್ಞರಾಗಿ ಬದುಕ ಬಗೆದರು. ತನ್ನ ಮೇಧಾವಿ, ಸಾಹಿತ್ಯಪ್ರಿಯೆ ಕಾಲೇಜು ಸಂಗಾತಿಯನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು.

    ಇವರು ಕನ್ನಡ ಕಲಾ ಭಾರತಿಯ ಅಧ್ಯಕ್ಷರು. ಇನ್ನಾ ಗ್ರಾಮ ಹಿತವರ್ಧಕ ಸಂಘ, ಮುಂಬಯಿ ಇದರ ಕಾರ್ಯಾಧ್ಯಕ್ಷರು. ಇನ್ನದ ಎಂ.ವಿ. ಶಾಸ್ತ್ರಿ   ಹೈಸ್ಕೂಲಿನ ಬೆಟರ್‌ವೆಂಟ್‌

    ಕಮಿಟಿಯ ಮಾಜಿ ಗೌರವ ಅಧ್ಯಕ್ಷರು. ವಿದ್ಯಾಪ್ರಸಾರಕ ಮಂಡಳದ ಕನ್ನಡ ಹೈಸ್ಕೂಲಿನ ಹಳೆ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ, ಥಾಣೆ ಬಂಟ್ಸ್‌ ಎಸೋಸಿಯೇಶನ್‌, ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಕಲಾ ಜಗತ್ತು ರಜತ ಮಹೋತ್ಸವ ಸಮಿತಿ ಇವುಗಳ ಮಾಜಿ ಪ್ರಧಾನ ಕಾರ್ಯದರ್ಶಿ. ಕರ್ನಾಟಕ ಸಂಘ ಮುಂಬಯಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಮಹಾರಾಷ್ಟ್ರ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ, ಕನ್ನಡ ಸಂಘ ಮಾಟುಂಗ ಇದರ ವಜ್ರ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಾಗೂ ಹಲವಾರು ವರ್ಷಗಳಿಂದ ಕಲಾ ಜಗತ್ತು, ಮುಲುಂಡ್‌ ಫ್ರೆಂಡ್ಸ್‌, ತುಳುನಾಡ ಫ್ರೆಂಡ್ಸ್‌ ಥಾಣೆ ಇವುಗಳ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವುದಲ್ಲದೆ, ಥಾಣೆ ಬಂಟ್ಸ್‌ ಅಧ್ಯಕ್ಷರಾಗಿ, ಚಿಣ್ಣರ ಬಿಂಬದ ವಿಶ್ವಸ್ಥರಾಗಿ ಸಮಾಜ ಸೇವೆ, ಸಾಹಿತ್ಯ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿರುವರು.

    ಬಂಟರ ವಾಣಿಯ ಸಂಪಾದಕ ಮಂಡಳಿ ಸದಸ್ಯರಲ್ಲದೆ, ಸ್ನೇಹ ಸೌರಭ ಪತ್ರಿಕೆಯ ಪ್ರಧಾನ ಸಂಪಾದಕರು. ಈ ಹಿಂದೆ ನಿತ್ಯವಾಣಿ ದೈನಿಕ, ಪತ್ರಪುಷ್ಪ ಮಾಸಿಕ ಮತ್ತು ಹೊಟೇಲು ಪತ್ರಿಕೆ ಪಾಕ್ಷಿಕದ ಸಂಪಾದಕರಾಗಿಯೂ ದುಡಿದಿರುವರು.

    ಒಂದು ಶಿಶುವಿನ ಅಪಹರಣ, ಏನೇ ಹೇಳಲಿ (ಅಂಕಣ, ಬರಹಗಳು), ಬರಿ¤àರಾ ನಮ್ಮ  ಊರಿಗೆ (ಕವನ ಸಂಕಲನ), ಧೂಮಕೇತು (ನಾಟಕ), ಒಂದು ಶಾಲೆಯ ಕತೆ (ನೈಜ ಚಿತ್ರಣ) ಇವರ ಪ್ರಕಟಿತ ಕೃತಿಗಳು. ಅಲ್ಲದೆ ಡಾ| ಸುನೀತಾ ಶೆಟ್ಟಿ ಅವರ ಅಭಿನಂದನಾ ಗ್ರಂಥ ಪಡೆದ ದಾರಿಯ ಹೂಗಳು, ಡಾ| ಜಿ. ಡಿ. ಜೋಶಿ ಅವರ ಅಭಿನಂದನಾ ಗ್ರಂಥ ಸಾರ್ಥಕತೆಯ ಹೆಜ್ಜೆ ಗುರುತುಗಳು. ಇನ್ನಾ ಜಿಲ್ಲಾ ಪಂಚಾಯತ್‌ ಮಾದರಿ ಶಾಲೆಯ ಶತಮಾನೋತ್ಸವ ಸ್ಮರಣ ಸಂಚಿಕೆ "ಶತಕವೀರ' ಇವುಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವರು ಹಾಗೂ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರ ಅಭಿನಂದನ ಗ್ರಂಥ "ನಾದಲೋಲ' ಇದರ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿರುವರು. ಕರ್ನಾಟಕ ಮಲ್ಲ ದೈನಿಕದಲ್ಲಿ "ಏನೇ ಹೇಳಲಿ?' ಎಂಬ ಅಂಕಣ ಬರೆಯುತ್ತಿದ್ದರು.

    ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಪ್ರಶಸ್ತಿ, ಸಮ್ಮಾನಗಳನ್ನು ಪಡೆದಿರುವ ಸೀತಾರಾಮ ಶೆಟ್ಟಿಯವರಿಗೆ ಬಂಟರ ಸಂಘ ಮುಂಬಯಿ ಇವರು ಕೊಡಮಾಡುವ ವೈ.ಜಿ. ಶೆಟ್ಟಿ ಸ್ಮಾರಕ ಪ್ರಶಸ್ತಿ ದೊರಕಿರುವುದು ಪ್ರಶಸ್ತಿಗೊಂದು ಸಾರ್ಥಕ ಅನುಭವವನ್ನು ನೀಡಿದೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • ಈ ವಿಭಾಗದಲ್ಲಿಯೂ ಇದೆ
   • Copyright @ 2009 Udayavani.All rights reserved.
   • Designed & Hosted By 4cplus