Sunday, May 19, 2013
Last Updated: 7:46:26 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮತದಾನ ಪ್ರಮಾಣ ಕಡಮೆ; ಎಚ್ಚರಿಕೆ ಗಂಟೆ- ಈಶ್ವರಪ್ಪ
    • ಚುನಾವಣೆಯಲ್ಲಿ ಮತ ಗಳಿಕೆ ಪ್ರಮಾಣ ಕಡಮೆಯಾಗಿರುವುದು ಪಕ್ಷದ ನಾಯಕರಿಗೆ ಎಚ್ಚರಿಕೆಯ ಗಂಟೆ...

      • Udayavani | Jun 15, 2012

        ಬೆಂಗಳೂರು : ವಿಧಾನಪರಿಷತ್‌ ಚುನಾವಣೆಯಲ್ಲಿ ಮತ ಗಳಿಕೆ ಪ್ರಮಾಣ ಕಡಮೆಯಾಗಿರುವುದು ಪಕ್ಷದ ನಾಯಕರಿಗೆ ಎಚ್ಚರಿಕೆಯ ಗಂಟೆ ಎಂದು ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

        ಇದೇ ವೇಳೆ ಆರು ಸ್ಥಾನಗಳ ಪೈಕಿ ಐದರಲ್ಲಿ ಪಕ್ಷ ಜಯಭೇರಿ ಬಾರಿಸಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಈ ಗೆಲುವಿನಿಂದ ಹುಮ್ಮಸ್ಸು ಬಂದಿದೆ. ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಂಡು ಒಗ್ಗಟ್ಟಾಗಿ ಮುಂದೆ ಸಾಗುತ್ತೇವೆ ಎಂಬ ಭರವಸೆಯನ್ನೂ ಈ ಮೂಲಕ ನೀಡುವುದಾಗಿ ತಿಳಿಸಿದರು.

        ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಗೆಲುವಿನಲ್ಲಿ ನಾಯಕತ್ವ ಪ್ರಶ್ನೆ ಉದ್ಭವಿಸಿಲ್ಲ. ಪ್ರಜ್ಞಾವಂತ ಮತದಾರರ ಆಶೀರ್ವಾದ ಮತ್ತು ಪಕ್ಷದ ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧಿಸಿದ್ದೇವೆ. ಪಕ್ಷದಲ್ಲಿನ ಗೊಂದಲಗಳ ನಡುವೆಯೂ ಗೆಲುವು ತಂದಿರುವುದನ್ನು ಗಮನಿಸಿದರೆ ಪ್ರಜ್ಞಾವಂತ ಮತದಾರರು ಬಿಜೆಪಿಗೆ ಇನ್ನೂ ಅವಕಾಶ ಉಳಿಸಿಕೊಂಡಿದ್ದಾರೆ. ಆದರೆ, ನಿರೀಕ್ಷೆಯಷ್ಟು ಮತಗಳು ಲಭಿಸಿಲ್ಲ ಎನ್ನುವುದು ವಾಸ್ತವ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆ ಎಂದರು.

        ಕಾಂಗ್ರೆಸ್‌ ನಾಯಕರ ಹೇಳಿಕೆಯಿಂದ ಸಾಮರಸ್ಯಕ್ಕೆ ಧಕ್ಕೆ

        ಪ್ರತಿಪಕ್ಷದ ಕಾಂಗ್ರೆಸ್‌ ನಾಯಕರು ಜಾತಿ ರಾಜಕಾರಣದ ಹಿನ್ನೆಲೆಯಲ್ಲಿ ನೀಡುತ್ತಿರುವ ಹೇಳಿಕೆಗಳಿಂದ ಸಮಾಜದಲ್ಲಿನ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಇದೇ ಸಂದರ್ಭ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

        ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಶ್ಯಾಮನೂರು ಶಿವಶಂಕರಪ್ಪ ಹಾಗೂ ಹಾಲಿ ಅಧ್ಯಕ್ಷ ಪರಮೇಶ್ವರ ಅವರು ನೀಡಿದ ಹೇಳಿಕೆಗಳು ಸರಿಯಲ್ಲ. ಯಾವುದೇ ಒಂದು ಸಮುದಾಯಕ್ಕೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿದಲ್ಲಿ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವುದು ತಮ್ಮ ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಅರ್ಥೈಸುತ್ತದೆ ಎಂದು ಅಭಿಪ್ರಾಯಪಟ್ಟರು.

        ಅಡ್ಡದಾರಿ ಶಾಸಕರಿಗೆ; ಟಿಕೆಟ್‌ ಇಲ್ಲ-

        ಕಳೆದ ವಾರ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಪಕ್ಷದ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಿಲ್ಲ ಎಂಬ ಇಂಗಿತವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ.

        ಅಡ್ಡಮತದಾನ ಮಾಡಿದ ಶಾಸಕರು ಯಾರು ಎಂಬಿತ್ಯಾದಿ ಮಾಹಿತಿ ಲಭಿಸಿದೆ. ಈ ಶಾಸಕರ ವಿರುದ್ಧ ಪಕ್ಷದ ನಾಯಕರು ಚರ್ಚಿಸಿ ಸೂಕ್ತ ಕ್ರಮ ನಿರ್ಧಾರ ಕೈಗೊಳ್ಳಲಾಗುವುದು. ಹಿಂದೆ ರಾಜ್ಯಸಭಾ ಚುನಾವಣೆ ಸಂದರ್ಭ ಅಡ್ಡಮತದಾನ ಮಾಡಿದ್ದ ಪಕ್ಷದ ಶಾಸಕರಿಗೆ ನಂತರ ಚುನಾವಣೆಯಲ್ಲಿ ಟಿಕೆಟ್‌ ನೀಡಿರಲಿಲ್ಲ. ಹೀಗಾಗಿ ಆ ಎಲ್ಲ ಶಾಸಕರೂ ಮುಂದೆ ರಾಜಕಾರಣದಲ್ಲಿ ಕಣ್ಮರೆಯಾದರು ಎಂದು ಅವರು ಪರೋಕ್ಷವಾಗಿ ಸುಳಿವು ನೀಡಿದರು.

        22ರಂದು ಜೈಲ್‌ಭರೋ ಚಳವಳಿ-

        ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇದೇ ತಿಂಗಳ 22ರಂದು ಬಿಜೆಪಿ ಜೈಲ್‌ಭರೋ ಚಳವಳಿ ನಡೆಸಲಿದೆ.

        ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫ‌ಲವಾಗಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus