Udayavani | Jun 15, 2012
ಮಂಡ್ಯ : ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅಡ್ಡಮತದಾನವನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲವೆಂದು ಸಂಸದ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.
ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕರ ವಿರುದ್ಧ ಎರಡೂ ಪಕ್ಷಗಳು ಕಣ್ಣು ಕೆಂಪಗಾಗಿಸಿಕೊಂಡಿವೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿವೆ. ಅಡ್ಡಮತದಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿವೆ. ಆ ಪಕ್ಷದ ಶಾಸಕರು ಚುನಾವಣೆಯಲ್ಲಿ ಅಡ್ಡಮತದಾನ ನಡೆಸಿದ್ದರೆ ಅದಕ್ಕೆ ಎರಡೂ ಪಕ್ಷಗಳೇ ನೇರ ಹೊಣೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸೋಲನ್ನು ಮುಕ್ತವಾಗಿ ಒಪ್ಪಿಕೊಳ್ಳದ ರಾಷ್ಟ್ರೀಯ ಎರಡೂ ಪಕ್ಷಗಳು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು. ಅಷ್ಟಕ್ಕೂ ಈ ಅಡ್ಡಮತದಾನಕ್ಕೆ ಸ್ಫೂರ್ತಿ ಬಿಜೆಪಿ ಮತ್ತು ಕಾಂಗ್ರೆಸ್ಸೇ ಎಂದು ದೂರಿದ ಅವರು, ಹಿಂದೆ ಮನಮೋಹನ್‌ಸಿಂಗ್ ಸರ್ಕಾರ ಉಳಿಸಿಕೊಳ್ಳಲು ಬಹುಮತದ ಕೊರತೆ ಎದುರಾದಾಗ ಲೋಕಸಭಾ ಸದಸ್ಯರ ಮತಗಳನ್ನು ಸೆಳೆಯಲು ಹಣ ಕೊಟ್ಟು ಬುಟ್ಟಿಗೆ ಹಾಕಿಕೊಳ್ಳಲು ಕಾಂಗ್ರೆಸ್ ಯತ್ನಿಸಿದ್ದು ಗುಟ್ಟಾಗೇನೂ ಉಳಿದಿಲ್ಲ. ಆ ವೇಳೆ ಜೆಡಿಎಸ್‌ನ ಶಿವಣ್ಣ ಮತ್ತು ಬಿಜೆಪಿಯ ಕಾರವಾರ ಭಾಗದ ಇಬ್ಬರು ಸಂಸದರನ್ನು ಓಲೈಸಿಕೊಳ್ಳಲು ಅಡ್ಡದಾರಿ ಹಿಡಿದಿರಲಿಲ್ಲವೇ. ಅದರ ಬಗ್ಗೆ ಚಕಾರ ಎತ್ತದೆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದು ಎಷ್ಟು ಸಮಂಜಸ ಎಂದು ಕಿಡಿಕಾರಿದರು.
ಇನ್ನು ಬಿಜೆಪಿ ಕಳೆದ ಚುನಾವಣೆ ವೇಳೆ 110 ಸೀಟುಗಳನ್ನು ಪಡೆದುಕೊಂಡು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಉತ್ತಮ ಆಡಳಿತ ನೀಡಬಹುದಿತ್ತು. ಅದನ್ನು ಬಿಟ್ಟು ಸರ್ಕಾರವನ್ನು ಉಳಿಸಿಕೊಳ್ಳಲು ಆಪರೇಷನ್ ಕಮಲದ ಹೆಸರಿನಲ್ಲಿ ವಿವಿಧ ಪಕ್ಷಗಳಿಂದ ಸದಸ್ಯರನ್ನು ಹಣ ಕೊಟ್ಟು ಎಳೆದುಕೊಂಡರು. ಇದಕ್ಕೆ ರಾಷ್ಟ್ರೀಯ ನಾಯಕರೂ ಕುಮ್ಮಕ್ಕು ನೀಡಿದರು. ಶಾಸಕರನ್ನು ಖರೀದಿ ಮಾಡಿ ತರಕಾರಿ ವ್ಯಾಪಾರ ಮಾಡುವಂತೆ ಮಾಡಿದರು. ಈಗ ಅಡ್ಡಮತದಾನವನ್ನು ಪ್ರಶ್ನಿಸುವವರು ಆಗ ಏಕೆ ಪ್ರಶ್ನಿಸಲಿಲ್ಲ. ಆಗ ಬೇರೆಯವರಿಗೆ ಸೂಜಿಯಿಂದ ಚುಚ್ಚುವಾಗ ಇವರಿಗೆ ನೋವು ಕಾಣಲಿಲ್ಲ. ಈಗ ಅವರಿಗೆ ನೋವುಂಟಾಗುತ್ತಿದೆ ಎಂದು ಅಡ್ಡಮತದಾನದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನ್ಯಾಯಸಮ್ಮತವೇ ಎಂದು ಪ್ರಶ್ನಿಸಿದರು.
ಮುಖಭಂಗ: ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ ಆಕಾಶದಲ್ಲಿ ಹಾರಾಡುತ್ತಿತ್ತು. ಪದವೀಧರ, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಒಂದು ಸ್ಥಾನದಲ್ಲೂ ಗೆಲ್ಲದೆ ಕಾಂಗ್ರೆಸ್ ಮುಖಭಂಗಕ್ಕೊಳಗಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವಲ್ಲ. ಅದು ಜಯಪ್ರಕಾಶ್‌ಗೌಡರ ವರ್ಚಸ್ಸಿನ ಗೆಲುವು ಎಂದ ಅವರು, ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲುವು ಕಂಡಿರುವುದು ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ ಎಂದರಲ್ಲದೆ, ಪದವೀಧರರು, ಶಿಕ್ಷಕರೆಲ್ಲರೂ ತಮ್ಮ ಪಕ್ಷದ ಪರವಾಗಿದ್ದಾರೆಂದು ಬೀಗುತ್ತಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಗೆಲುವು ಕಂಡಿದ್ದರೂ ಶೇ.30ರಷ್ಟು ಮತದಾರರು ಮಾತ್ರ ಆ ಪಕ್ಷದ ಪರವಾಗಿದ್ದು, ಉಳಿದ ಶೇ.70ರಷ್ಟು ಮತದಾರರು ಬೇರೆ ಬೇರೆ ಪಕ್ಷಗಳ ಪರವಾಗಿದ್ದಾರೆ ಎಂದರು.
ಇದೇ ವೇಳೆ ವಿಧಾನಪರಿಷತ್ತಿಗೆ ಆಯ್ಕೆಯಾದ ಮರಿತಿಬ್ಬೇಗೌಡ ತಮ್ಮ ಗೆಲುವಿಗೆ ಸಹಕರಿಸಿದ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಅರ್ಪಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಅಧ್ಯಕ್ಷ ಸುರೇಶ್, ಸದಸ್ಯೆ ಚಂದ್ರಕಲಾ ನಂಜುಂಡಾಚಾರ್ ಇತರರಿದ್ದರು.