ಲಂಡನ್ : ಸೆಂಚುರಿ ಹೊಡೆದರೂ ತಾನೇನೂ ಆಕಾಶದಲ್ಲಿ ತೇಲಾಡುತ್ತಿಲ್ಲ ಎಂಬುದಾಗಿ ಇಂಗ್ಲಂಡಿನ ಏಕದಿನ ತಂಡದ ನಾಯಕ ಅಲಸ್ಟೇರ್ ಕುಕ್ ಹೇಳಿದ್ದಾರೆ. ಕೇವಲ 'ಟೆಸ್ಟ್ ಕ್ರಿಕೆಟ್ ಬ್ರ್ಯಾಂಡ್' ಎಂಬ ಹಣೆಪಟ್ಟಿಯಿಂದ ಮುಕ್ತನಾಗುವುದು ತನ್ನ ಸದ್ಯದ ಗುರಿ ಎಂಬುದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿನ ಬಳಿಕ ಕುಕ್ ಪ್ರತಿಕ್ರಿಯಿಸುತ್ತಿದ್ದರು.ಓವಲ್‌ನಲ್ಲಿ ಮಂಗಳವಾರ ಅಹರ್ನಿಶಿಯಾಗಿ ಸಾಗಿದ ದ್ವಿತೀಯ ಏಕದಿನ ಪಂದ್ಯವನ್ನು ಇಂಗ್ಲಂಡ್ 8 ವಿಕೆಟ್‌ಗಳಿಂದ ಗೆದ್ದಿತ್ತು. ಎಡಗೈ ಓಪನರ್ ಕುಕ್ 112 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದ್ದರು. ಇದು 47ನೇ ಪಂದ್ಯದಲ್ಲಿ ಕುಕ್ ಹೊಡೆದ 5ನೇ ಶತಕ. ವಿಂಡೀಸ್ ವಿರುದ್ಧ ಮೊದಲನೆಯದು. ಹಾಗೆಯೇ ಕಳೆದ 6 ಪಂದ್ಯಗಳಲ್ಲಿ ಬಾರಿಸಿದ 3ನೇ ಶತಕವೂ ಹೌದು.ಟೆಸ್ಟ್ ನಾಯಕ ಆ್ಯಂಡ್ರೂé ಸ್ಟ್ರಾಸ್ ಕಳೆದ ವರ್ಷ ಏಕದಿನಕ್ಕೆ ವಿದಾಯ ಹೇಳಿದಾಗ ನಾಯಕರಾಗಿ ಆಯ್ಕೆಯಾದವರೇ ಅಲಸ್ಟೇರ್ ಕುಕ್. ಆದರೆ ಈ ಆಯ್ಕೆ ಇಂಗ್ಲಂಡಿನ ಮಾಜಿಗಳನೇಕರ ಅಚ್ಚರಿ ಹಾಗೂ ಟೀಕೆಗೆ ಮೂಲವಾಗಿತ್ತು. ಮಾಜಿ ನಾಯಕ, ಓಪನರ್ ಕೂಡ ಆಗಿದ್ದ ಮೈಕಲ್ ಆಥರ್ಟನ್ ಅವರಂತೂ ಕುಕ್ ಆಯ್ಕೆಯನ್ನು ಪ್ರಹಸನವಾಗಿಯೇ ಪರಿಗಣಿಸಿದ್ದರು. ಏಕದಿನದ ಮಟ್ಟಿಗೆ ಕುಕ್ ಬ್ಯಾಟಿಂಗ್‌ನಲ್ಲಿ 'ಕತ್ತೆ ಚಾಕರಿ' ಮಾಡುವವರಾದರೆ, ಫೀಲ್ಡಿಂಗ್‌ನಲ್ಲಿ ಥೇಟ್ 'ಕತ್ತೆ' ಎಂಬುದಾಗಿ ವ್ಯಂಗ್ಯವಾಡಿದ್ದರು. ಆದರೆ ಆಥರ್ಟನ್ ಮಾತ್ರ 54 ಏಕದಿನ ಪಂದ್ಯಗಳಿಂದ ಹೊಡೆದದ್ದು 2 ಶತಕ ಮಾತ್ರ ಎಂಬುದು ಬೇರೆ ಮಾತು!ಇಂಥ ವ್ಯಂಗ್ಯಗಳಿಂದ ಮುಕ್ತನಾಗಬೇಕಾರದೆ ಟೀಕಾಕಾರರಿಗೆ ಬ್ಯಾಟಿನಿಂದಲೇ ಉತ್ತರ ನೀಡಬೇಕಾದುದು ಅನಿವಾರ್ಯ ಎಂಬುದಾಗಿ ಕುಕ್ ಹೇಳಿದರು. ಅವರು 120 ಎಸೆತಗಳಿಂದ 112 ರನ್ ಮಾಡಿದರು. ಇದರಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.ಸ್ಫೋಟಕ ಆರಂಭಕಾರ ಕ್ರಿಸ್ ಗೇಲ್ ಅವರ ಪುನರಾಗಮನಕ್ಕೆ ಸಾಕ್ಷಿಯಾದ ಈ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ವಿಂಡೀಸ್ 9 ವಿಕೆಟಿಗೆ 238 ರನ್ ಮಾಡಿದರೆ, ಇಂಗ್ಲಂಡ್ 45 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 239 ರನ್ ಬಾರಿಸಿ ವಿಜಯಿಯಾಯಿತು. ಶತಕವೀರ ಕುಕ್ ಪಂದ್ಯಶ್ರೇಷ್ಠರೆನಿಸಿದರು. ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಇಂಗ್ಲಂಡ್ 114 ರನ್ನುಗಳಿಂದ ಗೆದ್ದಿತ್ತು.ರನ್ ಕಡಿಮೆ ಆಯ್ತು: ಸಮ್ಮಿಸಾಕಷ್ಟು ರನ್ ಗಳಿಸಲು ವಿಫಲರಾದ್ದರಿಂದಲೇ ಸೋಲು ಕಾಣಬೇಕಾಯಿತು ಎಂಬುದು ವೆಸ್ಟ್ ಇಂಡೀಸ್ ನಾಯಕ ಡ್ಯಾರನ್ ಸಮ್ಮಿ ಪ್ರತಿಕ್ರಿಯೆ.'ಪಂದ್ಯವನ್ನು ಉಳಿಸಿಕೊಳ್ಳಬೇಕಾದರೆ ಸ್ಕೋರ್‌ಬೋರ್ಡ್‌ನಲ್ಲಿ ಸಾಕಷ್ಟು ರನ್ ಅಗತ್ಯ. ಇಲ್ಲಿ ನಾವು 280ರ ತನಕವಾದರೂ ಸಾಗಬೇಕಿತ್ತು. ಏಕೆಂದರೆ ಓವಲ್ ಟ್ರ್ಯಾಕ್ ಬ್ಯಾಟಿಂಗಿಗೆ ಅನುಕೂಲಕರವಾಗಿತ್ತು...' ಎಂಬುದಾಗಿ ಸಮ್ಮಿ ಹೇಳಿದರು.