ಮಂಗಳೂರು : ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ರಸ್ತೆಯ (ಬಿಜೈ- ವಿವೇಕನಗರ ರಸ್ತೆ) ಬದಿ ಕಸದ ತೊಟ್ಟಿ ಸಮೀಪ ಬುಧವಾರ ಬೆಳಗ್ಗೆ ಮಾನವನ ಹಳೆಯ ತಲೆ ಬುರುಡೆಗಳು ಮತ್ತು ಎಲುಬುಗಳು ಪತ್ತೆಯಾಗಿವೆ.4 ತಲೆ ಬುರುಡೆ ಮತ್ತು ಕಾಲು ಹಾಗೂ ಕೈಯ ಕೆಲವು ಎಲುಬುಗಳು ರಸ್ತೆ ಬದಿ ಪತ್ತೆಯಾಗಿದ್ದು, ಕುತೂಹಲ ಕೆರಳಿಸಿದ್ದರಿಂದ ಅವುಗಳನ್ನು ನೋಡಲು ಅಧಿಕ ಸಂಖ್ಯೆಯ ಜನರು ಸೇರಿದ್ದರು.ಈ ತಲೆ ಬುರುಡೆಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಅಥವಾ ವೈದ್ಯಕೀಯ ಕಾಲೇಜಿನ ಸಿಬಂದಿ ರಸ್ತೆ ಬದಿ ತಂದು ಎಸೆದಿರಬೇಕೆಂದು ಶಂಕಿಸಲಾಗಿದೆ.ಬರ್ಕೆ ಪೊಲೀಸರು ಸ್ಥಳಕ್ಕೆ ತೆರಳಿ ತಲೆ ಬುರುಡೆ ಮತ್ತು ಎಲುಬುಗಳನ್ನು ಸಂಗ್ರಹಿಸಿ ಪೊಲೀಸ್ ಠಾಣೆಗೆ ಕೊಂಡು ಹೋಗಿದ್ದಾರೆ.ನಗರದಲ್ಲಿ ಇದು ಮಾನವ ಬುರುಡು ಪತ್ತೆಯ ಎರಡನೇ ಪ್ರಕರಣವಾಗಿದೆ. ವರ್ಷದ ಹಿಂದೆ ಮೋರ್ಗನ್ಸ್‌ಗೆàಟ್‌ನ ಕಸದ ತೊಟ್ಟಿಯ ಬಳಿ ಇದೇ ರೀತಿಯ ತಲೆ ಬುರುಡೆ ಮತ್ತು ಎಲುಬುಗಳು ಗೋಣಿ ಚೀಲದಲ್ಲಿ ತುಂಬಿಸಿ ಎಸೆದಿರುವುದು ಪತ್ತೆಯಾಗಿತ್ತು.