Sunday, May 19, 2013
Last Updated: 11:48:07 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಭವಿಷ್ಯ ಎಂಬ ಚಕ್ಕಡಿ, ಮಾಧ್ಯಮ ಎಂಬ ಎರಡೆತ್ತು...
  • ಭವಿಷ್ಯ ಎಂಬ ಚಕ್ಕಡಿ, ಮಾಧ್ಯಮ ಎಂಬ ಎರಡೆತ್ತು...

    • ವಿಕಾಸ ನೇಗಿಲೋಣಿ | Jun 24, 2012

      ಭಾಷೆಯನ್ನೂ ಒಂದು ವ್ಯವಹಾರದ ಬಣ್ಣದ ಪಾತ್ರೆಯಲ್ಲಿಟ್ಟು ನೋಡಲೇಬೇಕು. ಅದು ಅನಿವಾರ್ಯ. ಅನುಭವ ಕೊಡುವ ಭಾವಕ್ಕಿಂತ ಅನ್ನ ಕೊಡುವ ಗಳಿಕೆಯಷ್ಟೇ ಇವತ್ತು ನಮ್ಮನ್ನಾಳುತ್ತಿರುವುದು. ಹಾಗಂತ ಕನ್ನಡ ಅನ್ನಕೊಡುವ ಭಾಷೆ ಎನ್ನುವುದಕ್ಕೆ ಸಾಧ್ಯವಿಲ್ಲ, ಅನ್ನ ಕೊಡದ ಭಾಷೆಯನ್ನು ಕೊಲ್ಲುವುದಕ್ಕೆ ಇಂಗ್ಲಿಷ್‌ ಎಂಬ ಭಾಷೆ ಬರುತ್ತಿದೆ ಎಂದೂ ವಾದಿಸುವ ಹಾಗಿಲ್ಲ.

      ಅವನು ಪೇಟೆಯಿಂದ ಬರುವಾಗ ಜೊತೆಗೆ ಲ್ಯಾಪ್‌ಟಾಪ್‌ ತಂದಿದ್ದಾನೆ. ತಂದಿಟ್ಟು ಎಲ್ಲೋ ಹೋದಾಗ ಊರಲ್ಲೇ ಸ್ಕೂಲಿಗೆ ಹೋಗುತ್ತಿರುವ ಅವನ ತಮ್ಮ ಅದನ್ನು ತನಗೆ ಕಂಡಂತೆ ಓಪನ್‌ ಮಾಡಿ, ಅದರಲ್ಲಿರುವ ಹಾಡುಗಳ ರಾಶಿಯೊಳಗೆ ತನಗೆ ಬೇಕಾದ ಯಾವುದೋ ರಾಗವನ್ನು ಅರಸುತ್ತಾನೆ, ಸಿಗುತ್ತಿಲ್ಲ. ಫೋನ್‌ ಮಾಡಿ ಏನೇನೋ ಕೇಳುತ್ತಾನೆ, ಆಪರೇಷನ್‌ ಗೊತ್ತಾಗುತ್ತಿಲ್ಲ. ಅವನ ಆ ಕಡೆಯಿಂದ ಕೊಡುವ ಇನ್‌ಷ್ಟ್ರಕ್ಷನ್‌ಗಳೆಲ್ಲಾ ಅವನ ಪೇಟೆಯ ಪ್ರಪಂಚದ ವೇಗದಿಂದ ರೂಪಿತವಾಗಿದ್ದು. ಈ ಕಡೆ ಇವನು ಅರ್ಥ ಮಾಡಿಕೊಳ್ಳುತ್ತಿರುವುದೆಲ್ಲಾ ಇವನ ಪ್ರಪಂಚಕ್ಕೆ ದೊರಕಿದ ಜ್ಞಾನದ ಮಟ್ಟದ್ದು.

      ಹೀಗೆ ಎರಡು ಧ್ರುವಗಳ ನಡುವೆ ಒಂದು ಕಷ್ಟಕರ ಸಂವಹನ ನಡೆಯಲು ಹವಣಿಸುತ್ತಿರುವಾಗ ಆರನೇ ತರಗತಿಯಿಂದಲೇ ಇಂಗ್ಲಿಷ್‌ ಮೀಡಿಯಂ ಬರಬೇಕಾ ಬೇಡವಾ ಅಂತ ಸರ್ಕಾರವೂ, ಬುದ್ಧಿಜೀವಿಗಳೂ ಚರ್ಚೆ ಮಾಡುತ್ತಾರೆ. ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ  ಶಾಲೆಯನ್ನು ಇನ್ನೊಂದು ಸ್ಟ್ರೆಂಥ್‌ ಇರುವ ಶಾಲೆ ಜೊತೆ ವಿಲೀನಗೊಳಿಸಬಹುದು ಅಂತ ಕೋರ್ಟು ತೀರ್ಪು ಕೊಡುತ್ತದೆ. ಎಷ್ಟೋ ಹಳ್ಳಿಯ ಮಕ್ಕಳನ್ನು ಸ್ಥಿತಿವಂತರು ಅವರ ಇಂಗ್ಲಿಷ್‌ ವಿದ್ಯಾಭ್ಯಾಸದ ಕಾರಣಕ್ಕೇ ದೂರದ ಪೇಟೆಗೆ ತಂದು ಓದುವುದಕ್ಕೆ ಬಿಡುತ್ತಿದ್ದಾರೆ. ಹಳ್ಳಿಯ ಕೆಳವರ್ಗದ ಮಕ್ಕಳನ್ನು ಶಾಲೆ ದೂರ ಎನ್ನುವ ಕಾರಣ ಕೊಟ್ಟು ಓದು ಬಿಡಿಸುತ್ತಿದ್ದಾರೆ. ಶಿಕ್ಷಣದ ಹಕ್ಕು ಎಲ್ಲರದಾಗಬೇಕು ಅಂತ ಸರ್ಕಾರ ಯೋಜನೆಗಳ ಮೇಲೆ ಯೋಜನೆ ಹಾಕಿ ಮಕ್ಕಳಿಗೆ ಶಿಕ್ಷಣ ಕಲ್ಪಿಸುತ್ತೇವೆ ಎನ್ನುತ್ತದೆ. ಖಾಸಗಿ ಶಾಲೆಗಳಿಗೆ ಬಡ ಮಕ್ಕಳನ್ನು ಉಚಿತವಾಗಿ ಸೇರಿಸಿಕೊಳ್ಳಬೇಕು ಅಂತ ಸರ್ಕಾರ ಆದೇಶ ಹೊರಡಿಸುತ್ತದೆ, ಈ ಸಲ ಅಲ್ಲ ಮುಂದಿನ ಸಲದಿಂದ ಈ ಕ್ರಮ ಕೈಗೊಳ್ಳುತ್ತೇವೆ ಅಂತ ಖಾಸಗಿ ಶಾಲೆಗಳು ತಲೆತಪ್ಪಿಸಿಕೊಳ್ಳುತ್ತವೆ.

      ಹೀಗೆಲ್ಲಾ ಘಟನೆಗಳು ನಡೆಯುತ್ತಿರುವಾಗ ಮಕ್ಕಳ ಪಾಲಿಗೆ ಉಳಿಯುವುದೊಂದೇ- ಅವರ ವರ್ತಮಾನದ ಕನ್ನಡಿಯಲ್ಲಿ ಪ್ರತಿಫ‌ಲಿಸುತ್ತಿರುವ ಶೈಕ್ಷಣಿಕ ಸಂದಿಗ್ಧ.

      ಸುಮ್ಮನೆ ಒಂದು ಊರು ಅಂತ ಕಲ್ಪಿಸಿಕೊಳ್ಳೋಣ. ಬದುಕುವುದಕ್ಕೆ ಏನೋ ಒಂದು ಆಹಾರ ಪಡೆದುಕೊಳ್ಳೋಣ ಅಂತ ದುಡಿದೇ ದುಡಿಯುವ ಒಂದು ವರ್ಗ ಇದೆ. ಅಂದರೆ ಅವರ ಮಕ್ಕಳಿಗೆ ಹೊಟ್ಟೆ ತುಂಬುತ್ತದೆಯೇ ವಿನಃ ಬೆಳವಣಿಗೆಗೆ ಬೇಕಾದ ಪೌಷ್ಠಿಕಾಂಶ ಸಿಗುವುದಿಲ್ಲ. ಹೊಟ್ಟೆಗೆ ಅನ್ನವೇ ಇಲ್ಲದವನು ಪೌಷ್ಠಿಕಾಂಶದ ಆಹಾರ ಅರಸಿ ಹೊರಡುವುದು ದುಬಾರಿ ಬದುಕಾಗುತ್ತದೆ. ತಾಯಿ ಭಾಷೆಯ ಶಿಕ್ಷಣ ಮತ್ತು ಇಂಗ್ಲಿಷ್‌ ಶಿಕ್ಷಣವೂ ಸದ್ಯದ ಸಾಮಾಜಿಕ ನೆಲೆಗಟ್ಟಿನಲ್ಲಿ ಜೀವನ ನಿರ್ವಹಣೆಯ ಆಹಾರ ಮತ್ತು ಪೌಷ್ಠಿಕಾಂಶಯುಕ್ತ ಆಹಾರವೆಂಬ ಎರಡು ಬಗೆಯಂತೇ ಆಗಿದೆ. ಒಂದು ಅಗಾಧ ಜನಸಂಖ್ಯೆಗೆ ಆಹಾರ ಒದಗಿಸುವುದು ಸರ್ಕಾರದ ಕೆಲಸವೋ, ಪೌಷ್ಠಿಕಾಂಶವನ್ನೊದಗಿಸುವುದು ಸರ್ಕಾರದ ಮುಂದಿರುವ ಸವಾಲೋ ಎಂಬ ಸಂದಿಗ್ಧದಲ್ಲೇ ಇದೆಲ್ಲಾ ಮುಗಿದು ಹೋಗುತ್ತದೆ. ದಿನಂಪ್ರತಿ ಹೋರಾಟ, ಸರ್ಕಾರದ ಆಡಳಿತದ ಪತನ, ದೂರದೃಷ್ಟಿ ಕೊರತೆ, ಬೇಕಾಬಿಟ್ಟಿ ನಿರ್ಧಾರ- ನಿರ್ಣಯಗಳ ಮಧ್ಯೆ ತಾಯಿಬೇರೇ ಆಗಿರುವ ಶಿಕ್ಷಣದ ವಿಚಾರದಲ್ಲಿ ಒಂದು ಜನರೇಷನ್‌ ಸಂದಿಗ್ಧದ ಉರಿಗೆ ಸಿಕ್ಕು ಬೇಯುತ್ತಿದೆ.

      ಜಾಗತೀಕರಣ ಬಂದಿದೆ ಅಂತ ನಾವು ಹತ್ತು ಹನ್ನೆರಡು ವರ್ಷಗಳ ಹಿಂದೆಯೇ ಹೇಳಿಕೊಂಡು ತಿರುಗಿದೆವು, ಪಾಠದಲ್ಲೂ ಅದರ ಪ್ರಸ್ತಾಪ ಆಯಿತು, ಭಾಷಣ ಸ್ಪರ್ಧೆ, ಚರ್ಚೆ, ಕಮ್ಮಟ ನಡೆದವು. ಆದರೆ ಇವತ್ತು ನಿಜವಾಗಿಯೂ ನಮ್ಮ ನಿಮ್ಮ ಮನೆಯ ಜಗಲಿಯ ಮೇಲೆ ಜಾಗತೀಕರಣ ಬಂದು ಪಟ್ಟಾಗಿ ಕುಳಿತಿದೆ. ಒಳಗೆ ಕರೆದುಕೊಳ್ಳಿ ಎನ್ನುವುದು ಅಹವಾಲು, ಕರೆಯದಿದ್ದರೆ ತಾನೇ ಒಳಗೆ ಬಂದುಬಿಡುತ್ತದೆ ಎನ್ನುವುದು ಸವಾಲು. ಜಾಗತೀಕರಣ ಮಾಡುವ ಮೊತ್ತಮೊದಲ ಮೇಲಾಟ ಭಾವ ಮತ್ತು ಬುದ್ಧಿಯ ನಡುವಿನದ್ದು, ವ್ಯವಹಾರ ಮತ್ತು ಭಾವನಾತ್ಮಕತೆಗಳ ಮಧ್ಯದ್ದು. ಕೊನೆಗೂ ಜಾಗತೀಕರಣ ಗೆಲಿಸುವುದು ವ್ಯವಹಾರದ ಕೈಯನ್ನೇ.

      ಒಂದು ತಾಯಿಭಾಷೆಗೆ ವ್ಯವಹಾರ ಭಾಷೆಯೂ ಆಗುವ ಸಾಮರ್ಥ್ಯ ಇದ್ದಾಗ ಅದು ಗೆಲ್ಲುತ್ತದೆ, ಆ ಜನರೇಷನ್‌ ತಾಯ್ನಾಡಿನ ಭಾಷೆ ಮತ್ತು ಭಾವದೊಂದಿಗೇ ವ್ಯವಹಾರವೂ ಅರಳುತ್ತದೆ. ಅಂಥ ಸಾಮರ್ಥ್ಯ ಇದ್ದಿದ್ದು ಚೀನಾಗೆ. ಜಪಾನ್‌ಗೆ. ಉಳಿದೆಲ್ಲಾ ಏಶ್ಯಾ ರಾಷ್ಟ್ರಗಳೂ ಇಂಗ್ಲಿಷ್‌ಗೆ ತಲೆಬಾಗಿ ನಮಿಸಬೇಕಾಗಿ ಬಂದಿದ್ದು ಶತಮಾನದ ದುರಂತ. ಆ ದುರಂತದಿಂದ ತಪ್ಪಿಸಿಕೊಳ್ಳಲಾಗದೇ ಹೋಗಿದ್ದು ಬಹುತೇಕ ಭಾಷೆಗಳ ವೈಫ‌ಲ್ಯ.

      ಇವತ್ತು ಎಲ್ಲ ವಿಷಯಗಳೂ ಬುಡಮೇಲಾಗುತ್ತಿರುವುದು ಇದೇ ಭಾವ ಮತ್ತು ಬುದ್ಧಿಯ ವಿಚಾರವಾಗಿ. ಸುಮ್ಮನೆ ಕಲ್ಪಿಸಿಕೊಳ್ಳಿ. ನಮ್ಮ ಮನೆಯ ಎದುರೊಂದು ಮನೆ ಇರುತ್ತದೆ. ಅದರಲ್ಲೊಂದು ಬಡ ಕುಟುಂಬ ವಾಸ ಮಾಡುತ್ತಿರುತ್ತದೆ. ಆ ಮನೆಗೂ ನಮ್ಮ ಮನೆಗೂ ಮಧ್ಯೆ ಭಾವನಾತ್ಮಕ ಸಂಬಂಧ ಬೇರುಬಿಟ್ಟಿರುತ್ತದೆ. ನಮ್ಮ ಮಗಳಿಗೂ ಆ ಮನೆಯ ಇವಳ ಓರಗೆಯ ಹುಡುಗಿಗೂ ಆತ್ಮೀಯತೆ ಮೊಳೆತಿರುತ್ತದೆ. ಆದರೆ ಒಂದು ದಿನ ಆ ಮನೆಯನ್ನು ಕೆಡವಲಾಗುತ್ತದೆ. ಕೆಡವಿದ ಮೇಲೆ ಅವರೆಲ್ಲೋ ಮರೆಯಾಗುತ್ತಾರೆ, ಈ ಜಗತ್ತಿನ ಅಸಂಖ್ಯ ಚುಕ್ಕಿಗಳಂತೆ ಲೀನವಾಗುತ್ತಾರೆ. ಬಿಗ್‌ಬ್ಯಾಂಗ್‌ ಥಿಯರಿ ಗಹಗಹಿಸುತ್ತದೆ. ನಾಳೆ ಆ ಜಾಗದಲ್ಲಿ ಅಪಾರ್ಟ್‌ಮೆಂಟ್‌ ಏಳಬಹುದು, ಕಮರ್ಷಿಯಲ್‌ ಕಾಂಪ್ಲೆಕ್ಸ್‌ ತಲೆಯೆತ್ತಬಹುದು. ಅಲ್ಲಿನ ಒಂದು ಭಾಗಕ್ಕೆಷ್ಟು ಬಾಡಿಗೆ, ಡಬಲ್‌ ಬೆಡ್‌ರೂಂಗೆ ಎಷ್ಟು ರೇಟು ಅಂತ ವ್ಯವಹಾರದ ಮನಸ್ಸು ಯೋಚಿಸುತ್ತದೆ. ಆ ಮನೆಯಲ್ಲಿದ್ದ ಪುಟ್ಟ ಹುಡುಗಿ ಈಗೇನು ಮಾಡಬಹುದು ಅಂತ ಭಾವನೆಯ ಮನಸ್ಸು ಪರಿತಪಿಸುತ್ತದೆ.

      ಈ ಭಾವನೆಯ ಮನಸ್ಸು ಜಾಗತೀಕರಣದ ಅಸಂಖ್ಯ ಕಾಯದಲ್ಲಿ ಕರಗಲೇಬೇಕು. ಹಾಗೆ ಕರಗಿದರಷ್ಟೇ ಜಾಗತೀಕರಣದ ಗೆಲುವು. ನಿಮಗೆ ಇಷ್ಟವೋ, ಇಲ್ಲವೋ- ಅದು ಕರಗಿಸಿಯೇ ತೀರುತ್ತದೆ ಕೂಡ. ಅದರ ಇಂಥ ಗೆಲುವಿಗೆ ಮುಂದಿನ ಜನರೇಷನ್ನು ಸಿದ್ಧಗೊಳ್ಳಬೇಕು. ಆ ಸಿದ್ಧತೆಯ ಸ್ಥಿತಿಯನ್ನು ನಾವು ಕಷ್ಟಕರವಾದರೂ ಅರ್ಥಮಾಡಿಕೊಳ್ಳಬೇಕು, ಅರಗಿಸಿಕೊಳ್ಳಬೇಕು. ಈ ಭಾವನೆ-ಬುದ್ಧಿ, ಭಾವುಕತೆ-ವ್ಯವಹಾರದ ನಡುವಿನ ಗೆರೆಯನ್ನು ಅರ್ಥ ಮಾಡಿಕೊಳ್ಳುವ ಒಳನೋಟ ಸರ್ಕಾರಕ್ಕೆ ಇರಬೇಕಾಗುತ್ತದೆ.

      ಶಿಕ್ಷಣ ಬಿಟ್ಟು ಬೇರೆ ಕಡೆಯ ಆಗುಹೋಗುಗಳನ್ನು ಗಮನಿಸಿ. ನಾವು ತೆಗೆದುಕೊಂಡ ನಿಲುವು ಕೊನೆಗೊಂಡಿದ್ದು ಹೇಗೆ ಅಂತ ಗಮನಿಸಿ. ಪ್ರಾರಂಭದಲ್ಲಿ ಶುರುವಾದ ಬೀಜಗಳ ಬಗೆಗಿನ ಗ್ಯಾಟ್‌ ಒಪ್ಪಂದ, ಆಮೇಲೆ ಕಾಲಿಟ್ಟು ಸಂಚಲನಕ್ಕೆ ಕಾರಣವಾದ ಮೆಟ್ರೋ. ಕೊನೆಗೂ ಯಾವುದು ಬೇಡವೋ ಅದೇ ಆಯಿತು. ಈಗ ಮೊನ್ನೆ ಬಿಟಿ ಬದನೆ, ನಿನ್ನೆ ವಾಲ್‌ಮಾರ್ಟ್‌, ಇವತ್ತು ಪೋಸ್ಕೋ.. ಅಂತ ವಿವಾದ ನಡೆಯುತ್ತಿದೆ. ಕೊನೆಗೂ ವ್ಯವಹಾರಕ್ಕೇ ಜಯ.

      ಭಾಷೆಯನ್ನೂ ಒಂದು ವ್ಯವಹಾರದ ಬಣ್ಣದ ಪಾತ್ರೆಯಲ್ಲಿಟ್ಟು ನೋಡಲೇಬೇಕು. ಅದು ಅನಿವಾರ್ಯ. ಅನುಭವ ಕೊಡುವ ಭಾವಕ್ಕಿಂತ ಅನ್ನ ಕೊಡುವ ಗಳಿಕೆಯಷ್ಟೇ ಇವತ್ತು ನಮ್ಮನ್ನಾಳುತ್ತಿರುವುದು. ಹಾಗಂತ ಕನ್ನಡ ಅನ್ನಕೊಡುವ ಭಾಷೆ ಎನ್ನುವುದಕ್ಕೆ ಸಾಧ್ಯವಿಲ್ಲ, ಅನ್ನ ಕೊಡದ ಭಾಷೆಯನ್ನು ಕೊಲ್ಲುವುದಕ್ಕೆ ಇಂಗ್ಲಿಷ್‌ ಎಂಬ ಭಾಷೆ ಬರುತ್ತಿದೆ ಎಂದೂ ವಾದಿಸುವ ಹಾಗಿಲ್ಲ. ಆದರೆ ನಾವು ವಾದ ಮಂಡಿಸುವ ವಿಚಾರದಲ್ಲಿ ಇಡೀ ಜಗತ್ತಿನ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ನೋಡಬೇಕು. ಇಂಗ್ಲಿಷ್‌ ನಮ್ಮ ಶಿಕ್ಷಣದೊಳಗೆ ಅವಿನಾಭಾವವಾಗಬೇಕಾಗಿರುವುದು ಎಷ್ಟು ಮುಖ್ಯವೋ ಹಾಗೇ ನಮ್ಮ ಮನೆಭಾಷೆಯನ್ನೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದೆಲ್ಲದರ ಕೊಂಡಿ ಮಕ್ಕಳಿಗೆ ಕಲ್ಪಿಸುವ ಶಿಕ್ಷಣದಲ್ಲಿದೆ. ಸರ್ವಶಿಕ್ಷಾ ಅಭಿಯಾನ ಸುಮ್ಮನೆ ಒಂದು ಅಭಿಯಾನವಾಗುವುದಲ್ಲ, ಅದು ಯಾವುದೇ ಪಕ್ಷದಿಂದ ರೂಪಿತವಾದ ಸರ್ಕಾರಗಳ ಮೂಲಮಂತ್ರವಾಗಬೇಕು. ಅಂಥ ಅಭಿಯಾನ ಸಾಧ್ಯವಾಗುವುದಕ್ಕೆ ಸರ್ಕಾರಕ್ಕೆ ದೂರದರ್ಶಿತ್ವ ಬೇಕಾಗುತ್ತದೆ. ಒಂದು ಕಾಲಕ್ಕೆ ಶಿಕ್ಷಣದಂಥ ಅತ್ಯಂತ ಅಂತರ್ಗತ ವಿಚಾರವಾಗಿ ಸಾಹಿತ್ಯ ವಲಯ ಅಥವಾ ಚಿಂತಕ ವಲಯವನ್ನು ಸಂಪರ್ಕಿಸುವುದು, ಅವರ ನಿಲುವು ಪುರಸ್ಕರಿಸುವುದು, ಅಳವಡಿಸಿಕೊಳ್ಳುವುದು ಸಾಧ್ಯವಾಗುತ್ತಿತ್ತು. ಆದರೆ ಇವತ್ತು ಅದು ಇಲ್ಲ, ತನಗೆ ಅನಿಸಿದ್ದನ್ನು ಸುಮ್ಮನೆ ಕಾರ್ಯರೂಪಕ್ಕೆ ತರುವ ದಾರ್ಷrÂವೇ ಕಾಣುತ್ತದೆ. ಹಾಗಾಗಿ ಸಿಲಬಸ್‌ ಬೇಕಾದಂತೆ ಬದಲಾಗುತ್ತದೆ, ಥಟ್ಟನೆ ಸೆಮಿಸ್ಟರ್‌ ಪದ್ಧತಿ ತರುತ್ತೇವೆ ಅಂತ ಹೊರಡುತ್ತಾರೆ. ಕೇಂದ್ರೀಯ ಪಠ್ಯಕ್ರಮವನ್ನು ಪ್ರಾಯೋಗಿಕವಾಗಿ ಅಳವಡಿಸಿ, ಅದರ ಫ‌ಲಿತಾಂಶ ನೋಡಿಕೊಳ್ಳದೇ ನೇರ ಅಳವಡಿಕೆಗೆ ತೊಡಗುತ್ತಾರೆ.

      ಶಿಕ್ಷಣ ವ್ಯವಸ್ಥೆಯ ಇಂಥ ಆತುರದ ಹಲವು ಕ್ರಮಗಳಿಂದಾಗಿ ಒಂದು ಜನರೇಷನ್‌ ಸಂದಿಗ್ಧದಲ್ಲಿ ನರಳುತ್ತದೆ.

      ಇನ್ನೊಂದು ಕಡೆಯಿಂದ ಇಂಗ್ಲಿಷ್‌-ಕನ್ನಡ ಎಂಬ ವಿಚಾರವಾಗಿ ಬುದ್ಧಿಜೀವಿಗಳ ವಲಯದಿಂದ ಬರುತ್ತಿರುವ ವಾದ ಪ್ರತಿವಾದಗಳಿಗೆ ಒಂದು ಪ್ರಾಮಾಣಿಕತೆ ಇಲ್ಲ. ಆಳ ಅಧ್ಯಯನ, ಜಾಗತಿಕ ಕೇಂದ್ರದಿಂದ ಯೋಚಿಸಿ ತಾಳುವ ನಿಲುವುಗಳಿಲ್ಲದೇ ಆ ವಲಯದಿಂದ ಕೇಳಿಬರುವ ದನಿ ಯಾಕೋ ಕ್ಷೀಣವಾಗುತ್ತಿದೆ. ಇದನ್ನು ಈಗ ಕೇವಲ ಭಾವನೆಯ ಮೂಸೆಯಿಂದ ಚಿಂತಿಸಿ, ದೊಡ್ಡ ಧ್ವನಿಯಲ್ಲಿ ಕೂಗಾಡುವುದಲ್ಲ. ಒಬ್ಬ ಖ್ಯಾತ ಚಿಂತಕ ಭಾಷಣದ ತುಂಬ ಭಾವನೆ, ಸಂವೇದನೆಯನ್ನೇ ಹರಿಯಬಿಟ್ಟು, ಭಾಷಣ ಮುಗಿದು ಮನೆಗೆ ಹೊರಡುತ್ತಲೇ ಸಂಭಾವನೆಯ ಬಗ್ಗೆ ವಿಚಾರಿಸಿಕೊಳ್ಳುತ್ತಾ ಪಕ್ಕಾ ವ್ಯವಹಾರಸ್ಥ ಆಗಿಬಿಡುತ್ತಾನಲ್ಲಾ, ಆ ಸಂದಿಗ್ಧ ಕನ್ನಡ ಮತ್ತು ಇಂಗ್ಲಿಷ್‌ ಮಧ್ಯೆಯೂ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

      ಹಾಗೆಂದಾಕ್ಷಣ ನಾಳೆಯಿಂದ ಎಲ್ಲವೂ ಬದಲಾಗಿ ಇಂಗ್ಲಿಷ್‌ ಮೆರೆಯಬೇಕಿಲ್ಲ. ಪೇಟೆಯ ಹುಡುಗ ಮತ್ತು ಹಳ್ಳಿಯ ಹುಡುಗನ ನಡುವಿನ ಪ್ರಾರಂಭದ ಮಾತುಕತೆ ನಡುವೆ ಎರಡು ಬೇರೆಬೇರೆ ಲೋಕ ಕುಳಿತಿರುತ್ತದಲ್ಲಾ-ಆ ಆತಂಕಕಾರಿ ಕಂದಕವನ್ನು ಮುಚ್ಚುವ ಉಪಾಯವನ್ನು ಹುಡುಕಿಕೊಳ್ಳಬೇಕಷ್ಟೇ.

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
    image
    image
    • Copyright @ 2009 Udayavani.All rights reserved.
    • Designed & Hosted By 4cplus