ಲಂಡನ್: ದಾಖಲೆ ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ಸ್ವಿಟ್ಸರ್ಲಂಡ್‌ನ ರೋಜರ್ ಫೆಡರರ್ ಇತ್ತೀಚಿನ ವೈಫಲ್ಯಗಳನ್ನು ಮರೆತು 7ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಎತ್ತಿ ಹಿಡಿಯುವ ಕನಸು ಕಾಣುತ್ತಿದ್ದಾರೆ. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ಪೈಪೋಟಿ ನಡೆಸುತ್ತಿರುವ ಸರ್ಬಿಯಾದ ನೊವಾಕ್ ಜೊಕೋವಿಕ್ ಮತ್ತು ಸ್ಪೇಯ್ನನ ರಫೆಲ್ ನಡಾಲ್ ಇದಕ್ಕೆ ಅವಕಾಶ ನೀಡುತ್ತಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.ಸೋಮವಾರದಿಂದ ಹುಲ್ಲಿನ ಅಂಗಣದಲ್ಲಿ ಆರಂಭಗೊಳ್ಳಲಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಯಾರು ಫೇವರಿಟ್ ಎಂದು ಸ್ಪಷ್ಟವಾಗಿ ಹೇಳುವುದು ಅಸಾಧ್ಯ. ಏಕೆಂದರೆ ಸತತ ಮೂರು ಗ್ರ್ಯಾನ್‌ಸ್ಲಾಮ್ ಗೆದ್ದಿರುವ ಜೊಕೋವಿಕ್ ವಿಶ್ವದ ಅಗ್ರಮಾನ್ಯ ಆಟಗಾರನಾಗಿದ್ದರೆ, 7ನೇ ಬಾರಿ ಫ್ರೆಂಚ್ ಓಪನ್ ಗೆದ್ದು ಇತಿಹಾಸ ಬರೆದ ನಡಾಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇವರಿಬ್ಬರು ಕಳೆದ 9 ಗ್ರ್ಯಾನ್‌ಸ್ಲಾಮ್ ಹಂಚಿಕೊಂಡಿದ್ದಾರೆ. ಇದರಲ್ಲಿ ನಾಲ್ಕು ಬಾರಿ ಫೈನಲ್‌ನಲ್ಲಿ ಮುಖಾಮುಖೀಯಾಗಿದ್ದಾರೆ.6 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಫೆಡರರ್ ವಿಂಬಲ್ಡನ್‌ನಲ್ಲಿ ಪ್ರಭುತ್ವ ಸಾಧಿಸಿದ್ದು ಅದನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಫೆಡರರ್ ಇದುವರೆಗೆ 22 ಬಾರಿ ಫೈನಲ್ ತಲುಪಿದ್ದಾರೆ. ಒಂದು ವರ್ಷದ ಹಿಂದಿನವರೆಗೂ ಫೈನಲ್‌ಗೆ ಕಾಯಂ ಆಟಗಾರನಾಗಿದ್ದ ಫೆಡರರ್ ಈಗ ಆ ಸಾಧನೆ ಮಾಡಲು ವಿಫಲರಾಗುತ್ತಿದ್ದಾರೆ. ಒಂದು ವೇಳೆ ಈ ಬಾರಿ ಪ್ರಶಸ್ತಿ ಗೆದ್ದರೆ ಫೆಡರರ್ 7 ಬಾರಿ ವಿಂಬಲ್ಡನ್ ಗೆದ್ದ ಪೀಟ್ ಸಾಂಪ್ರಸ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.ಶರಪೋವಾ ಫೇವರಿಟ್:ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಫ್ರೆಂಚ್ ಓಪನ್ ಗೆದ್ದು ಎಲ್ಲ ನಾಲ್ಕೂ ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದ ವಿಶ್ವದ 10ನೇ ಆಟಗಾರ್ತಿ ಎಂಬ ಪಟ್ಟಿಗೆ ಸೇರಿದ ರಶ್ಯದ ಮರಿಯಾ ಶರಪೋವಾ ಹಾಟ್ ಫೇವರಿಟ್ ಆಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ದೇಶದ ಧ್ವಜ ಹಿಡಿಯುವ ಅವಕಾಶ ಪಡೆದಿರುವ ಶರಪೋವಾಗೆ ಈ ಬಾರಿ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ.ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ 17ನೇ ವಯಸ್ಸಿಗೆ (2004) ವಿಂಬಲ್ಡನ್ ಪ್ರಶಸ್ತಿ ಎತ್ತಿ ಹಿಡಿದಿದ್ದ ಶರಪೋವಾ ಪ್ರಸ್ತುತ ನಂ. 1 ಸ್ಥಾನದಲ್ಲಿದ್ದಾರೆ. ಅಲ್ಲದೇ ಅನುಭವ ಕೂಡ ಹೊಂದಿರುವುದರಿಂದ ಗೆಲುವು ಸುಲಭವಾಗಲಿದೆ ಎಂದೇ ಭಾವಿಸಲಾಗಿದೆ.