ಹೊಸದಿಲ್ಲಿ: ಭಾರತ ಈ ಹಿಂದಿನ ಏಕದಿನ ಕೂಟ (ಏಶ್ಯ ಕಪ್) ಆಡಿದ ವೇಳೆ ಫಿಟ್‌ನೆಸ್ ಕಾರಣಕ್ಕಾಗಿ ಆರಂಭಿಕ ಆಟಗಾರ ವೀರೇಂದ್ರ ಸೆಹವಾಗ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು ಮತ್ತು ಆಸ್ಟ್ರೇಲಿಯ ಸರಣಿ ವೇಳೆ ಕಳಪೆ ಬ್ಯಾಟಿಂಗಿನಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು ಎಂಬ ಸಂಶಯ ಮೂಡಿ ಬಂದಿದ್ದವು.ಆದರೆ ಐಪಿಎಲ್‌ನಲ್ಲಿ ನೀಡಿದ ಗಮನಾರ್ಹ ನಿರ್ವಹಣೆಯಿಂದಾಗಿ ದಿಲ್ಲಿಯ ಈ ಸ್ಫೋಟಕ ಬ್ಯಾಟ್ಸ್‌ಮನ್ ಶ್ರೀಲಂಕಾದಲ್ಲಿ ನಡೆಯುವ ಐದು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಏಕದಿನವಲ್ಲದೇ ಭಾರತ ಒಂದು ಟ್ವೆಂಟಿ20 ಪಂದ್ಯ ಕೂಡ ಆಡಲಿದೆ.ಜುಲೈ ಮೊದಲ ವಾರದಲ್ಲಿ ಆಯ್ಕೆ ಸಮಿತಿ ಸಭೆ ಸೇರಿ ಭಾರತೀಯ ತಂಡವನ್ನು ಆಯ್ಕೆ ಮಾಡಲಿದೆ. ಮುಂಬರುವ ಟ್ವೆಂಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಟ್ವೆಂಟಿ20 ವಿಶ್ವಕಪ್ ಶ್ರೀಲಂಕಾದಲ್ಲಿಯೇ ಸಪ್ಟೆಂಬರ್‌ನಲ್ಲಿ ನಡೆಯಲಿದೆ.ಏಶ್ಯ ಕಪ್ ವೇಳೆ ಅವರು ಪೂರ್ಣವಾಗಿ ಫಿಟ್ ಆಗಿರಲಿಲ್ಲ. ಆಸ್ಟ್ರೇಲಿಯ ಪ್ರವಾಸದ ವೇಳೆ ಭುಜದ ಗಾಯಕ್ಕೆ ಆಗಾಗ್ಗೆ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದರು. ಹಾಗಾಗಿ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆಗಾರರು ನಿರ್ಧರಿಸಿದ್ದರು. ಆದರೆ ಐಪಿಎಲ್‌ನಲ್ಲಿ ಅವರು ಅದ್ಭುತ ಆಟದ ಪ್ರದರ್ಶನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಐಪಿಎಲ್‌ನಲ್ಲಿ ಅವರು ಆಡಿದ 16 ಪಂದ್ಯಗಳಿಂದ ಸತತ ಐದು ಅರ್ಧಶತಕ ಸೇರಿದಂತೆ 495 ರನ್ ಗಳಿಸಿದ್ದರು.