ಲಂಡನ್: ಒಲಿಂಪಿಕ್ಸ್‌ಗೆ ಪ್ರಕಟಿಸಿದ ತಂಡದಿಂದ ಉದ್ಭವಿಸಿರುವ ಗೊಂದಲಕ್ಕೆ ಇನ್ನೂ ತೆರೆಬಿದ್ದಿಲ್ಲ ಆಗಲೇ ಆಟಗಾರರು ಸೋಮವಾರದಿಂದ ಆರಂಭಗೊಳ್ಳಲಿರುವ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಮ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪಣಕೊಡ್ಡಲು ಸಜ್ಜಾಗಿದ್ದಾರೆ. 'ಲಂಡನ್ ಜೋಡಿ' ಬಗ್ಗೆ ತಮ್ಮ ನಿಲುವು ಸರಿ ಎಂಬುದನ್ನು ಸಾಬೀತುಪಡಿಸಲು ಆಟಗಾರರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ.ಮುಂದಿನ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಲಿರುವ ಒಲಿಂಪಿಕ್ಸ್‌ನಲ್ಲಿ ಟೆನಿಸ್ ಸ್ಪರ್ಧೆಗಳು ಇದೇ ಅಂಕಣದಲ್ಲಿ ನಡೆಯಲಿವೆ. ಹಾಗಾಗಿ ಆಟಗಾರರಿಗೆ ಕ್ರೀಡಾ ಮಹೋತ್ಸವಕ್ಕೆ ಸಜ್ಜಾಗಲು ಉತ್ತಮ ಅವಕಾಶವಾಗಿದೆ. ಆದರೆ ಭಾರತೀಯ ಆಟಗಾರರಿಗೆ ಸಿದ್ಧತೆ ಮಾತ್ರವಲ್ಲ ಆಯ್ಕೆ ಪ್ರಕ್ರಿಯೆ ವೇಳೆ ಹೇರಿದ್ದ ಒತ್ತಡವನ್ನು ಸಮರ್ಥಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ.ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆದಿದ್ದ ಲಿಯಾಂಡರ್ ಪೇಸ್ ಜತೆ ಆಡಲು ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ನಿರಾಕರಿಸಿದ್ದರು. ತಾವಿಬ್ಬರು ಜತೆಯಾಗಿ ಆಡುವುದಾಗಿ ಪಟ್ಟು ಹಿಡಿದಿದ್ದರು. ಇವರಿಗೆ ಮಣೆ ಹಾಕಿದ ಅಖೀಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಕಿರಿಯ ಆಟಗಾರ ವಿಷ್ಣುವರ್ಧನ್ ಜತೆ ಆಡುವಂತೆ ಪೇಸ್ ಅವರನ್ನು ಒಪ್ಪಿಸಿತ್ತು.ಭೂಪತಿ ಮತ್ತು ಬೋಪಣ್ಣಗೆ ತಮ್ಮ ನಿಲುವು ಸಮರ್ಥಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಅಲ್ಲದೇ ಕ್ರೀಡಾ ಮಹೋತ್ಸವಕ್ಕೆ ನಾವೇ ಸರಿಯಾದ ಜೋಡಿ ಎಂದು ನಿರೂಪಿಸಬೇಕಾಗಿದೆ. ಇದಕ್ಕೂ ಮುನ್ನ ದುಬೈ ಎಟಿಪಿ ಗೆದ್ದಿದ್ದ ಈ ಜೋಡಿ ಇತರ ಮೂರು ಟೂರ್ನಿಗಳಲ್ಲಿ ಪ್ರಮುಖ ಘಟ್ಟ ತಲುಪಿದ ಸಾಧನೆ ಮಾಡಿತ್ತು.ವಿಂಬಲ್ಡನ್‌ನಲ್ಲಿ ಭೂಪತಿ ಮತ್ತು ಬೋಪಣ್ಣಗೆ 7ನೇ ಶ್ರೇಯಾಂಕ ಲಭಿಸಿದೆ. ಮೊದಲ ಸುತ್ತಿನಲ್ಲಿ ಶ್ರೇಯಾಂಕ ರಹಿತ ಉರುಗ್ವೆಯ ಮಾರ್ಸೆಲ್ ಫೆಲ್ಡರ್ ಮತ್ತು ಟುನಿಸಿಯಾದ ಮಾಲೆಕ್ ಜಜಿರಿ ಅವರ ಸುಲಭ ಸವಾಲು ಪಡೆದಿದೆ.ವಿಷ್ಣುವರ್ಧನ್ ಜತೆ ಆಡಲು ಪೇಸ್‌ಗೆ ಇಷ್ಟವಿಲ್ಲ. ಆದರೆ ಮೈದಾನಕ್ಕೆ ಇಳಿದರೆ ಈ ಎಲ್ಲ ಮನಸ್ತಾಪವನ್ನು ಮರೆತು ಆಡುತ್ತಾರೆ. ಅಲ್ಲದೇ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಫಾನೆಕ್ ಅವರೊಂದಿಗೆ ಆಡುತ್ತಿರುವುದರಿಂದ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ. ಈ ಜೋಡಿ ಆಸ್ಟ್ರೇಲಿಯನ್ ಓಪನ್ ಅಲ್ಲದೇ ಇತರ ಟೂರ್ನಿಗಳಲ್ಲೂ ಗಮನಾರ್ಹ ಪ್ರದರ್ಶನ ನೀಡಿರುವುದರಿಂದ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ.ಈ ಟೂರ್ನಿಯಲ್ಲಿ ಪೇಸ್ ಜೋಡಿ ನಾಲ್ಕನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನಲ್ಲಿ ಶ್ರೇಯಾಂಕ ರಹಿತ ಕೊಲಂಬಿಯಾದ ಅಲೆಜಾಂಡ್ರೊ ಫಲ್ಲಾ ಮತ್ತು ಸ್ಯಾಂಟಿಯಾಗೊ ಗಿರಾಲ್ಡೊ ಅವರನ್ನು ಎದುರಿಸಲಿದ್ದಾರೆ.ಆದರೆ ಫ್ರೆಂಚ್ ಓಪನ್ ಚಾಂಪಿಯನ್ ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ಮಿಕ್ಸೆಡ್ ಡಬಲ್ಸ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಒಲಿಂಪಿಕ್ಸ್‌ಗೆ ಈ ಜೋಡಿ ಬೇರ್ಪಡಲಿದೆ. ವೈಲ್ಡ್‌ಕಾರ್ಡ್ ದೊರೆತರೆ ಸಾನಿಯಾ, ಹೊಸ ಜತೆಗಾರ ಪೇಸ್ ಜತೆ ಆಡಬೇಕಿದೆ. ಅಲ್ಲದೇ ಸಾನಿಯಾ ವನಿತೆಯರ ಡಬಲ್ಸ್‌ನಲ್ಲಿ ಅಮೆರಿಕದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಅವರೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಮಿಕ್ಸೆಡ್ ಡಬಲ್ಸ್ ಆಟಗಾರರ ರ್‍ಯಾಂಕಿಂಗ್ ಅನ್ನು ಜುಲೈ 23ರನ್ನು ಪರಿಗಣಿಸಿ ಕ್ರಮಾಂಕ ನಿರ್ಧಾರವಾಗಲಿದೆ.