ಯಕ್ಷಪ್ರೇಮಿ | Jun 29, 2012
ಕೋಟೆಕಣಿ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಜೂ.3ರಂದು ಸಂಜೆ ನಡೆದ ಸರಣಿ ಕಾರ್ಯಕ್ರಮದ 10ನೇ ಸಮಾರಂಭದ ಅಂಗವಾಗಿ ಜರಗಿದ ಯಕ್ಷಗಾನ ಪೂರ್ವರಂಗ (ತೆಂಕುತಿಟ್ಟು) ಕಾರ್ಯಕ್ರಮ ಜನಮನ ಸೆಳೆಯಿತು.
ವೃತ್ತಿಪರ ಯಕ್ಷಗಾನ ಮೇಳಗಳಲ್ಲಿ ಪರಂಪರಾಗತವಾಗಿ ನಡೆಸಲಾಗುತ್ತಿದ್ದ ಪೂರ್ವ ರಂಗದ ಪರಿಚಯ ಮಾಡಿ ಕೊಡುವ ನಿಟ್ಟಿನಲ್ಲಿ ಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ನಿರ್ದೇಶನದಲ್ಲಿ ಈ ಕಾರ್ಯಕ್ರಮ ನಡೆಸಲಾಗಿತ್ತು.
ಹಿಮ್ಮೇಳದಲ್ಲಿ ಸುರತ್ಕಲ್ಲಿನ ಬಾಲ ಪ್ರತಿಭೆಗಳಾದ ಕು| ಅಪೂರ್ವ ಮತ್ತು ಮಾ| ಅಮೋಘ ಅವರು ಚೆಂಡೆ- ಮದ್ದಲೆಯಲ್ಲಿ ತಮ್ಮ ಕೈಚಳಕ ತೋರಿದರು.
ಚೌಕಿ ಪೂಜೆಯಿಂದ ಕೋಡಂಗಿ ನೃತ್ಯ, ಅನಂತರ ನಿತ್ಯವೇಷ, ಕುಣಿತ, ಮುಖ್ಯ ಸ್ತ್ರೀವೇಷ ಇತ್ಯಾದಿಗಳ ಹಾಡು ಗಳು ಮತ್ತು ಕುಣಿತ ಪ್ರಾತ್ಯಕ್ಷಿಕೆ ನಡೆ ಯಿತು. ಚೌಕಿ ಪೂಜೆಯ ಅಂಗವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಗಜಮುಖ ದವಗೆ ಗಣಪಗೆ... ಹಾಡನ್ನು ಭಾವವತರು ಹಾಡಿದರೆ, ಅಪೂರ್ವ-ಅಮೋಘ ಅವರು ಹಿಮ್ಮೇಳ ವಾದನವನ್ನು ತಕ್ಕಂತೆ ಮಾಡಿದರು. ಅನಂತರ ಕೋಡಂಗಿ ವೇಷಗಳನ್ನು ಕುಣಿಸುವ ಹಾಡುಗಳನ್ನು ಶುದ್ಧಿಯೊಂದಿಗೆ ಮಯ್ಯರು ಹಾಡಿದರು.
ದೇವರನ್ನು ವೇದಿಕೆಗೆ ಕರೆತಂದು ನಿತ್ಯವೇಷಗಳು ಕುಣಿಯುವ ಸಂದರ್ಭ ಗಜಮುಖದವಗೆ ಗಣಪಗೆ..., ನೆನೆಯಿರೋ ಜನರೆಲ್ಲ..., ಗಜಮುಖನಾ ನಿನ್ನ..., ಪಾಲಿಸು ಗಜವದನ... ಹಾಡು ಗಳು ಸುಶ್ರಾವ್ಯವಾಗಿ, ಸಂಪ್ರದಾಯ ಬದ್ಧವಾಗಿ ಮೂಡಿಬಂದವು.
ಅಡ್ಕತ್ತಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು|
ಶ್ರೀರಕ್ಷಾ ಮತ್ತು ನಗರದ ಬಿಎಂಎಂ ಪ್ರೌಢ ಶಾಲೆಯ ವಿದ್ಯಾರ್ಥಿ ಮಾ| ಅನೀಶ್ ರೈ ವೇಷಧಾರಿಗಳಾಗಿ ಅಚ್ಚುಕಟ್ಟಿನ ಕುಣಿತದೊಂದಿಗೆ ಕರ ತಾಡನಕ್ಕೆ ಭಾಜನರಾದರು. ಕಲಾವಿದ ಚಂದ್ರಮೋಹನ ಕೂಡ್ಲು ಅವರು ವೇಷಧಾರಣೆ ಮತ್ತು ಪ್ರಸಾಧನದಲ್ಲಿ, ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಘದ ಪದಾಧಿಕಾರಿ ಗಳು ವಸ್ತ್ರಧಾರಣೆಯಲ್ಲಿ ಸಹಕರಿಸಿದರು. ಪತ್ರಕರ್ತ ವಿ. ಟಿ. ಕಾಸರಗೋಡು ಅವರು ಉತ್ತಮವಾಗಿ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸುರತ್ಕಲ್‌ನ ಅಪೂರ್ವ ಮತ್ತು ಅಮೋಘ ಅವರಿಂದ ನಡೆದ ಚೆಂಡೆ ಜುಗಲ್ ಬಂದಿಯೂ ಗಮನ ಸೆಳೆಯಿತು. ಗಟ್ಟಿ ಪೆಟ್ಟುಗಳು, ಸ್ಪಷ್ಟವಾದ ಉರುಳಿಕೆ, ಹೊಂದಾಣಿಕೆ ಗಮನ ಸೆಳೆದವು. ತಾಳ ದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಮದ್ದಲೆಯಲ್ಲಿ ಮಧೂರು ಗೋಪಾಲ ಕೃಷ್ಣ ನಾವಡ ಸಹಕರಿಸಿದರು.
ಅಪೂರ್ವ ಮತ್ತು ಅಮೋಘರ ತಂದೆ ಟಿ. ಎನ್.ರಮೇಶ್, ತಾಯಿ ರೂಪಾ ರಮೇಶ್ ನೇತೃತ್ವ ವಹಿಸಿದ್ದರು.
ಹಿಂದೆ ಎರಡು, ಮೂರು ತಾಸು ನಡೆಯುತ್ತಿದ್ದ ಪೂರ್ವ ರಂಗಕ್ಕೆ ಈಗ ಕೆಲವೇ ಬಯಲಾಟ ಮೇಳಗಳಲ್ಲಿ ಸೀಮಿತ ಅವಧಿಯ ಅವಕಾಶ ಮಾತ್ರವಿದೆ. ಮುಂದೆ ಎಲ್ಲಾ ಮೇಳಗಳಲ್ಲಿಯೂ ಕಾಲಮಿತಿ ಪ್ರದರ್ಶನಗಳು ಪ್ರಾರಂಭವಾದರೆ ಪೂರ್ವರಂಗ ಮಾಯವಾಗುವುದರಲ್ಲಿ ಸಂದೇಹವಿಲ್ಲ. ಪೂರ್ವರಂಗದಂತಹ ಕ್ರಮಗಳಿಗೆ ಪುನಶ್ಚೇತನ ನೀಡಬಹುದು ಎಂಬುದನ್ನು ಈ ಕಾರ್ಯಕ್ರಮ ಖಚಿತಪಡಿಸಿದೆ. ಭಾರೀ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕ ವೃಂದವೂ ಸಮಾರಂಭದ ಯಶಸ್ಸಿಗೆ ಮತ್ತೂಂದು ಕಾರಣವಾಗಿತ್ತು.