Udayavani | Jun 29, 2012
ಚೇಮ್ಸ್‌ಫೋರ್ಡ್ : ದ್ವಿತೀಯ ಟಿ-20 ಪಂದ್ಯದಲ್ಲೂ ಶೋಚನೀಯ ಬ್ಯಾಟಿಂಗ್ ಪ್ರದರ್ಶಿಸಿದ ಪ್ರವಾಸಿ ಭಾರತದ ವನಿತೆಯರು ಇಂಗ್ಲಂಡಿಗೆ 8 ವಿಕೆಟ್‌ಗಳಿಂದ ಶರಣಾಗಿ ವೈಟ್‌ವಾಶ್ ಮುಖಭಂಗಕ್ಕೀಡಾಗಿದ್ದಾರೆ.
ಚೇಮ್ಸ್‌ಫೋರ್ಡ್‌ನಲ್ಲಿ ಗುರುವಾರ ನಡೆದ ಮುಖಾಮುಖೀಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಸರಿಯಾಗಿ 20 ಓವರ್‌ಗಳಲ್ಲಿ 114ಕ್ಕೆ ಸರ್ವಪತನ ಕಂಡರೆ, ಇಂಗ್ಲಂಡ್ 17.1 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 117 ರನ್ ಪೇರಿಸಿ ಜಯಭೇರಿ ಮೊಳಗಿಸಿತು.

ಚೇಸಿಂಗ್ ಹಾದಿಯಲ್ಲಿ ಇಂಗ್ಲಂಡ್ ತನ್ನ ಆರಂಭಿಕರಾದ, ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ (15) ಮತ್ತು ಲಾರಾ ಮಾರ್ಷ್ (5) ಅವರನ್ನು ಬಹಳ ಬೇಗ ಕಳೆದುಕೊಂಡಿತು. ಆದರೆ ಕೀಪರ್ ಸರಾಹ್ ಟಯ್ಲರ್ ಮತ್ತು ಲಿಡಿಯಾ ಗ್ರೀನ್‌ವೇ ತಂಡಕ್ಕೆ ಮತ್ತೆಲ್ಲೂ ಹಾನಿ ಆಗದಂತೆ ನೋಡಿಕೊಂಡರು. ಓವರಿಗೆ ಎಂಟರ ಸರಾಸರಿಯಲ್ಲಿ ರನ್ ಪೇರಿಸುತ್ತ, ಮುರಿಯದ 3ನೇ ವಿಕೆಟಿಗೆ 85 ರನ್ ಪೇರಿಸಿ ತಂಡವನ್ನು ನಿರಾಯಾಸವಾಗಿ ದಡ ಮುಟ್ಟಿಸಿದರು.
ಟಯ್ಲರ್ ಕೊಡುಗೆ ಸರ್ವಾಧಿಕ 67 ರನ್. 48 ಎಸೆತಗಳನ್ನು ನಿಭಾಯಿಸಿದ ಅವರು 9 ಬೌಂಡರಿ ಸಿಡಿಸಿದರು. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಗೌರವಗಳೆರಡೂ ಟಯ್ಲರ್‌ಗೆ ಒಲಿದವು. ಗ್ರೀನ್‌ವೇ ಕಾಣಿಕೆ 31 ಎಸೆತಗಳಿಂದ 30 ರನ್.

ಭಾರತದ ಬ್ಯಾಟಿಂಗ್ ಸರದಿಯನ್ನು ಸೀಳಿದವರು ಸೀಮರ್ ಕ್ಯಾಥರಿನ್ ಬ್ರಂಟ್ (4-1-18-3). ಹರ್ಮನ್‌ಪ್ರೀತ್ ಕೌರ್ ಭಾರತದ ಪರ ಸರ್ವಾಧಿಕ 34 ರನ್ ಹೊಡೆದರು.
ಎರಡೂ ತಂಡಗಳಿನ್ನು 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಲಿದ್ದು, ಮೊದಲ ಪಂದ್ಯ ರವಿವಾರ ಐತಿಹಾಸಿಕ ಲಾರ್ಡ್ಸ್‌ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ-114 (ಹರ್ಮನ್‌ಪ್ರೀತ್ 34, ಮಿಥಾಲಿ 21, ಬ್ರಂಟ್ 18ಕ್ಕೆ 3). ಇಂಗ್ಲಂಡ್-17.1 ಓವರ್‌ಗಳಲ್ಲಿ 2 ವಿಕೆಟಿಗೆ 117 (ಟಯ್ಲರ್ ಔಟಾಗದೆ 67, ಗ್ರೀನ್‌ವೇ ಔಟಾಗದೆ 30).