ಪ್ರಕಾಶ್ ಮಂಜೇಶ್ವರ್ | Jun 29, 2012
ಮಂಗಳೂರು : ನಿರಂತರ ಪರಿಶ್ರಮ, ಪೂರಕ ಪರಿಸರ, ಕುಟುಂಬದ ಬೆಂಬಲ ದೊರೆತರೆ ಓರ್ವ ಮಹಿಳೆ ಮದುವೆ, ಮಗುವಿನ ಅನಂತರವೂ ರಾಷ್ಟ್ರೀಯ ಮಟ್ಟದ ದಾಖಲೆಯ ಸಾಧನೆ ನಡೆಸಬಹುದು ಎನ್ನುವುದಕ್ಕೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಜರಗಿದ 52 ನೇ ರಾಷ್ಟ್ರೀಯ ಮಟ್ಟದ ಅಂತರ್‌ರಾಜ್ಯ ಹಿರಿಯರ ಆತ್ಲೆಟಿಕ್ಸ್ ಸಾಕ್ಷಿಯಾಯಿತು. ವನಿತಾ ಹೈಜಂಪ್‌ನಲ್ಲಿ 1.92 ಮೀ. ಜಿಗಿದ ಮಂಗಳೂರು ಮೂಲದ ಸಹನಾ ಕುಮಾರಿ ಲಂಡನ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿ ಈ ಸಾಧನೆ ಮೆರೆದಿದ್ದಾರೆ.
ನಿರ್ವಹಣೆ ಪೂರ್ವ ತರಬೇತಿಯ ಅವಧಿಯಲ್ಲಿ ಸಹನಾ 1. 95 ಮೀ ಜಿಗಿತದ ಸಾಧನೆ ನಡೆಸಿದ್ದರು. ಅಂತಿಮವಾಗಿ ಸ್ಪರ್ಧಾ ಕಣದಲ್ಲಿ ಸ್ಪರ್ಧಿಗಳು ಅನಗತ್ಯ 2 ಗಂಟೆ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ಸ್ಪರ್ಧಿಗಳ ಮಾನಸಿಕ ಪರಿಸ್ಥಿತಿಯ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿದೆ. ಆದರೂ ದಾಖಲೆ ನಿರ್ವಹಣೆ ತೋರುವಲ್ಲಿ ನಮ್ಮ ಹುಡುಗಿ ಯಶಸ್ವಿಯಾದಳು ಎಂದು ಅಭಿಮಾನದಿಂದ ಹೇಳಿಕೊಂಡವರು ಆಕೆಯ ಕಾಲೇಜು ಅವಧಿಯ ತರಬೇತುದಾರ ಪುರುಷೋತ್ತಮ ಪೂಜಾರಿ.
ಕಳೆದ ಮೇಯಲ್ಲಿ ಥಾಯ್ಲಂಡ್‌ನಲ್ಲಿ ಜರಗಿದ ಏಶ್ಯನ್ ಗ್ರ್ಯಾನ್ ಪ್ರೀ ಸರಣಿಯಲ್ಲಿ 1.89 ಮೀ. ಜಿಗಿತ ಈಕೆ ಸ್ಪರ್ಧಾ ಕೂಟದಲ್ಲಿ ಇಲ್ಲಿವರೆಗೆ ಮಾಡಿರುವ ಗರಿಷ್ಠ ಸಾಧನೆಯಾಗಿತ್ತು.
ಪ್ರಸ್ತುತ ರಶ್ಯನ್ ಹೈಜಂಪ್ ತರಬೇತುದಾರ ನಿಕಿತಿನ್ ಅವರಿಂದ ತರಬೇತಿ ಪಡೆಯುತ್ತಿರುವ ಸಹನಾ ಮುಂದಿರುವ ಗುರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು. ಈಗ ವಿಶೇಷ ತರಬೇತಿಗಾಗಿ ಕಜಾಕ್‌ಸ್ಥಾನ ತಲುಪಿರುವ ಸಹನಾ ಜು. 9 ರಂದು ಮಂಗಳೂರಿಗೆ ಆಗಮಿಸಿ ತವರು ಜಿಲ್ಲೆಯ ಗೌರವ ಸ್ವೀಕರಿಸಲಿದ್ದಾರೆ.
ಕ್ರೀಡಾ ಕುಟುಂಬ: ಸಹನಾ ರೈಲ್ವೇ ಉದ್ಯೋಗಿ. ಪತಿ, ರಾಷ್ಟ್ರೀಯ ಆತ್ಲೀಟ್, ಮಾಜಿ ರಾಷ್ಟ್ರೀಯ ಸ್ಪ್ರಿಂಟ್ ಚಾಂಪಿಯನ್ ನಾಗರಾಜ್ ಮತ್ತು ನಾಲ್ಕು ವರ್ಷದ ಹೆಣ್ಣು ಮಗು ಪಾವನಾ ಅವರ ಜತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂಗಿ ಹರ್ಷಿಣಿ ಅಂತರ್ ವಿವಿ ಮಟ್ಟದಲ್ಲಿ ದಾಖಲೆ ಸಹಿತ ಚಿನ್ನದ ಪದಕ ವಿಜೇತೆ. ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು, ಕೊನೆಯ ಹಂತದಲ್ಲಿ ಟೂರ್ನಿ ರದ್ದುಗೊಂಡಿತು. ಸಹೋದರ ಉತ್ತಮ ವಾಲಿಬಾಲ್ ಆಟಗಾರ.
ಸಹನಾ ಸಾಧನೆ ಕ್ರೀಡಾಪಟುಗಳಿಗೆ ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳಿಗೆ ಮಾದರಿಯಾಗಿದೆ ಎನ್ನುತ್ತಾರೆ ಆತ್ಲೆಟಿಕ್ ತರಬೇತುದಾರ ವಸಂತ್ ಮಂಗಳೂರು. ಸಹನಾರ ಕ್ರೀಡಾ ಭವಿಷ್ಯ ರೂಪಿಸುವಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಆತ್ಲೆಟಿಕ್ ಕೋಚ್ ಶ್ರೀಧರ ರೈ ಪಾತ್ರ ಮುಖ್ಯವಾಗಿತ್ತು.
ಸಹನಾ ತಂದೆ ರಾಜೇಂದ್ರ ಕುಮಾರ್ ಮಾಜಿ ಯೋಧ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ. ತಾಯಿ ಯಶೋಧಾ. ಮಕ್ಕಳ ಕ್ರೀಡಾ ಭವಿಷ್ಯ ರೂಪಿಸುವಲ್ಲಿ ಈಕೆಯ ಪಾತ್ರವೇ ನಿರ್ಣಾಯಕ. ಉದ್ಯೋಗ ನಿಮಿತ್ತ ರಾಜೇಂದ್ರ ಅವರು ಕುಟುಂಬದದಿಂದ ದೂರವೇ ಇದ್ದರೂ ಯಶೋಧಾ ಅವರು ಮಕ್ಕಳನ್ನು ಬೆಳಗ್ಗೆ 4 ಗಂಟೆಗೇ ಎಬ್ಬಿಸಿ ಸ್ವತಃ ಮೈದಾನಕ್ಕೆ ಕರೆದುಕೊಂಡು ಕರೆತರುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಆಕೆಯ ತರಬೇತುದಾರರು.

ಮಂಗಳೂರು ಉಳ್ಳಾಲ ಸೋಮೇಶ್ವರ ಸಹನಾ ಊರು. ಸೋಮೇಶ್ವರ ಆನಂದಾಶ್ರಮ ಶಾಲೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಪೂರೈಸಿರುವ ಸಹನಾ ಅವರು ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ಬಿಕಾಂ ಪದವೀಧರೆಯಾಗಿರುವ ಈಕೆ ದೂರ ಶಿಕ್ಷಣದ ಮೂಲಕ ಎಂಬಿಎ ಶಿಕ್ಷಣ ಪಡೆಯುತ್ತಿದ್ದಾರೆ. 1999- 2001 ತನಕ 3 ವರ್ಷ ನಿರಂತರ ಮಂಗಳೂರು ವಿ.ವಿ. ಮಟ್ಟದಲ್ಲಿ ಹೈಜಂಪ್‌ನಲ್ಲಿ ಚಿನ್ನದ ಪದಕ ಸಹಿತ ಹೊಸ ದಾಖಲೆ. ಅಖೀಲ ಭಾರತ ಮಟ್ಟದ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ 3 ವರ್ಷ ನಿರಂತರ ಚಿನ್ನದ ಪದಕ ಸಹಿತ ಹೊಸ ದಾಖಲೆ ನಿರ್ಮಾಣ ಈಕೆಯ ಸಾಧನೆ.
ಸಾಧನೆ: ರಾಷ್ಟ್ರೀಯ ಮಟ್ಟದ ದಾಖಲೆಗಳನ್ನು ಈಗಾಗಲೇ ಮಾಡಿರುವ ಸಹನಾ ಅವರು 2004 ರಲ್ಲಿ ಪಾಕಿಸ್ಥಾನದಲ್ಲಿ ಜರಗಿದ ಸ್ಯಾಫ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದಿದ್ದಾರೆ. ಅದೇ ವರ್ಷ ಇರಾನ್‌ನಲ್ಲಿ ನಡೆದ ಏಶ್ಯನ್ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, 2008ರಲ್ಲಿ ಕೊಚ್ಚಿಯಲ್ಲಿ ಜರಗಿದ ಎಸ್‌ಎಎಫ್ ಆತ್ಲೆಟಿಕ್ ಕೂಟದಲ್ಲಿ ಚಿನ್ನದ ಪದಕ, 2009ರ ದೋಹಾ ಏಶ್ಯನ್ ಇಂಡೋರ್ ಗೇಮ್ಸ್‌ನಲ್ಲಿ 4ನೇ ಸ್ಥಾನ, 2010ರಲ್ಲಿ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 4ನೇ ಸ್ಥಾನ, 2010ರ ಬಾಂಗ್ಲಾ ಸ್ಯಾಫ್ ಗೇಮ್ಸ್‌ನಲ್ಲಿ ಬೆಳ್ಳಿ, 2011ರ ಚೀನ ಏಶ್ಯನ್ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನ, 2012ರ ಮೇ ಏಶ್ಯನ್ ಗ್ರ್ಯಾನ್‌ಪ್ರೀ ಆತ್ಲೆಟಿಕ್ಸ್ ಮೀಟ್‌ನಲ್ಲಿ 2, 3 ಮತ್ತು 4ನೇ ಸ್ಥಾನಗಳು ಸಹನಾರ ಈವರೆಗಿನ ಅಂತಾರಾಷ್ಟ್ರೀಯ ಮಟ್ಟದ ಕೆಲವು ಸಾಧನೆಗಳು.