ತಾಯಿ ಮಕ್ಕಳ ಆತ್ಮಹತ್ಯೆ ಯತ್ನದ ಕಾರಣ ಬಯಲುಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ನದಿಗೆ ಮಂಗಳವಾರ ಹಾರಿದ ತಾಯಿ ಮಗುವಿನ ಸುಳಿವು ಬುಧವಾರವೂ ಪತ್ತೆಯಾಗಲಿಲ್ಲ. ಹುಡುಕಾಟ ಮುಂದುವರಿದಿದೆ.ಬೆಂಗಳೂರಿನ ಮೆಜೆಸ್ಟಿಕ್‌ನ ವೆಂಕಟೇಶ್ ಅವರ ಪತ್ನಿ ಮಾಲಾ ಯಾನೆ ರೇವತಿ (28) ತನ್ನ ಅವಳಿ ಮಕ್ಕಳಾದ ವಿ. ರಂಜಿತ್ (ಎರಡೂವರೆ ವರ್ಷ) ಹಾಗೂ ವಿ. ರಮ್ಯಾ ಜತೆಗೆ ನೇತ್ರಾವತಿ ನದಿಗೆ ಹಾರಿದ್ದರು. ಈ ಪೈಕಿ ಬಾಲಕ ರಂಜಿತ್‌ನನ್ನು ಮಾಹಿತಿ ಕಚೇರಿ ಸಿಬಂದಿ ಬದುಕಿಸಿದ್ದರು. ಇನ್ನಿಬ್ಬರ ಸುಳಿವು ಬುಧವಾರವೂ ಪತ್ತೆಯಾಗಲಿಲ್ಲ. ಇವರ ನಾಪತ್ತೆ ಕುರಿತು ಬೆಂಗಳೂರಿನ ಅಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಬಂಧುಗಳು ಬುಧವಾರ ಬೆಳಗ್ಗೆಯೇ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಮುಳುಗುತಜ್ಞರು ಹಾಗೂ ಪೊಲೀಸರು ಹುಡುಕಾಟ ನಿರತರಾಗಿದ್ದಾರೆ.ಮಾಲಾ ಅವರು ಅತ್ತೆ ಕಾಟ ತಾಳಲಾರದೇ ನೇತ್ರಾವತಿ ನದಿಗೆ ಹಾರಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಅತ್ತೆಯ ನಿರಂತರ ಕಾಟದಿಂದ ಬೇಸತ್ತು ಮಾಲಾ ಮಕ್ಕಳ ಜತೆಗೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದ್ದು ಬಳಿಕ ರಾಜಿ ಮಾತುಕತೆಯ ಮೂಲಕ ಪತಿ ಮನೆಗೆ ಕರೆಯಿಸಲಾಗಿತ್ತು. ಹಾಗಿದ್ದರೂ 1 ವಾರದ ಹಿಂದೆ ಮಾಲಾ ಅವರ ಅತ್ತೆ ಎಳೆಯ ಪ್ರಾಯದ ಮೊಮ್ಮಕ್ಕಳಿಗೆ ಕಬ್ಬಿಣ ಕಾಯಿಸಿ ಬರೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ತನ್ನ ಅವಳಿ ಮಕ್ಕಳ ಜತೆಗೆ ನೇತ್ರಾವತಿ ನದಿಗೆ ಹಾರಿದ್ದಾರೆ. ಈ ಮಕ್ಕಳು ಬೆಂಗಳೂರಿನಲ್ಲಿ ಶಿಶು ವಿಹಾರಕ್ಕೆ ಹೋಗುತ್ತಿದ್ದರು.