ಕೋಲ್ಕತಾ : ನ್ಯಾಯಾಂಗ ಬಂಧನದ ಅವಧಿಯಲ್ಲಿ ಏಶ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಪಿಂಕಿ ಪ್ರಾಮಾಣಿಕ್ ಮೇಲೆ ನಡೆದ ಅಮಾನವೀಯ ದೌರ್ಜನ್ಯದ ಬಗ್ಗೆ ತನಿಖೆ ನಡೆಸುವಂತೆ ಗೃಹ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಿಗೆ ಪಶ್ಚಿಮ ಬಂಗಾಳದ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.ಜೈಲು ಮತ್ತು ಪೊಲೀಸರ ವಶದಲ್ಲಿ ಪಿಂಕಿ ಪ್ರಾಮಾಣಿಕ್ ಮೇಲೆ ನಡೆಯುತ್ತಿರುವ ಅಮಾನವೀಯ ದೌರ್ಜನ್ಯದ ಕುರಿತು ತನಿಖೆ ನಡೆಸಿದ 2 ವಾರದಲ್ಲಿ ವರದಿ ನೀಡುವಂತೆ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಕುಮಾರ್ ಗಂಗೂಲಿ, ಸದಸ್ಯರಾದ ನ್ಯಾಯಮೂರ್ತಿ ಎನ್.ಸಿ. ಸಿಲ್ ಮತ್ತು ಎಸ್.ಎನ್. ರಾಯ್ ಅವರನ್ನೊಳಗೊಂಡ ರಾಜ್ಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯ ಪ್ರಕರಣ ಇದಾಗಿದ್ದು, ಗಂಭೀರವಾಗಿ ಸ್ವೀಕರಿಸಲಾಗಿದೆ. ಎರಡು ವಾರಗಳಲ್ಲಿ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಜೈಲು ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರ ಹುದ್ದೆಗಳ ನೇತೃತ್ವ ವಹಿಸಿರುವ ಗೃಹ ಇಲಾಖೆಗೂ ನಿರ್ದಶನ ನೀಡಲಾಗಿದೆ ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.ಪಿಂಕಿ ಮೇಲೆ ನಡೆಯುತ್ತಿರುವ ದೌರ್ಜನ್ಯ ನಾಚಿಗೇಡಿನದ್ದು. ಪಿಂಕಿ ಅವರ ಸ್ಥಿತಿ ನೆನೆದರೆ ನೋವಾಗುತ್ತದೆ. ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುವನ್ನು ಈ ರೀತಿ ನಡೆಸಿಕೊಳ್ಳುವುದೇ? ಇದೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಕೂಡ ಹೌದು ಎಂದು ಎರಡು ಬಾರಿಯ ಒಲಿಂಪಿಯನ್ ಸರಸ್ವತಿ ಸಾಹಾ ಡೇ ಆರೋಪಿಸಿದ್ದಾರೆ.ಪಿಂಕಿಗೆ ಪುರುಷ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯುವಾಗ ಎಳೆದಾಡಲಾಗುತ್ತಿದೆ. ಅಲ್ಲದೇ ಆಕೆಯನ್ನು ಪುರುಷರ ಕೋಣೆಯಲ್ಲಿ ಇರಿಸಲಾಗುತ್ತಿದ್ದು, ಕೂಡಲೇ ಆಕೆಯನ್ನು ಮಹಿಳೆಯರ ಕೋಣೆಗೆ ಸ್ಥಳಾಂತರಿಸಬೇಕು ಎಂದು ಮಾಜಿ ರಾಷ್ಟ್ರೀಯ ಈಜು ಚಾಂಪಿಯನ್ ಬುಲಾ ಚೌಧರಿ ಆಗ್ರಹಿಸಿದ್ದಾರೆ.