ಫಾಸಿಹ್ ಗಡೀಪಾರಿಗೆ ಅಗತ್ಯ ಕ್ರಮಹೊಸದಿಲ್ಲಿ : 2008ರ ಮುಂಬೈ ದಾಳಿಯ ನಿಯಂತ್ರಣ ಕೊಠಡಿ ಪಾಕಿಸ್ಥಾನದಲ್ಲಿ ಕಾರ್ಯಾಚರಿಸಿರುವುದು ಖಚಿತವಾಗಿದ್ದು, ಅಲ್ಲಿನ ಸರಕಾರದ ಸಹಕಾರವಿಲ್ಲದೆ, ಉಗ್ರಗಾಮಿಗಳ ನಿಯಂತ್ರಣ ಕೊಠಡಿಯೊಂದು ಕಾರ್ಯ ನಿರ್ವಹಿಸಲು ಸಾಧ್ಯವೇ ಇಲ್ಲ ಎಂದು ಭಾರತ ಮತ್ತೂಮ್ಮೆ ಪುನರುಧಿಚ್ಚರಿಸಿದೆ.ಮುಂಬೈನಲ್ಲಿ ದಾಳಿ ನಡೆಸಲು ಅಜ್ಮಲ್ ಅಮೀರ್ ಕಸಬ್ ಹಾಗೂ ಇತರ 9 ಮಂದಿ ಉಗ್ರರಿಗೆ ಯಾರು ತರಬೇತಿ ನೀಡಿದ್ದರು, ಇಡೀ ದಾಳಿಯನ್ನು ಯಾರು ನಿರ್ವಹಿಸುತ್ತಿದ್ದರು ಹಾಗೂ ದಾಳಿಗೆ ನಿಯೋಜನೆಗೊಂಡಿದ್ದ ಉಗ್ರರನ್ನು ನಿಯಂತ್ರಿಸುತ್ತಿದ್ದವರಾರು ಹಾಗೂ ಯಾವ ನಿಯಂತ್ರಣ ಕೊಠಡಿಯಿಂದ ನಿರ್ದೇಶಗಳನ್ನು ನೀಡಲಾಗುತ್ತಿತ್ತು ಎಂಬ ಬಗ್ಗೆ ಭಾರತಕ್ಕೆ ಸ್ಪಷ್ಟವಾಗಿ ತಿಳಿದಿದೆ. ಮುಂಬೈ ದಾಳಿಯ ಕುರಿತಂತೆ ಇನ್ನು ಪಾಕಿಸ್ಥಾನಕ್ಕೆ ಮುಚ್ಚಿಡಲು ಏನೂ ಉಳಿದಿಲ್ಲ ಎಂದು ಗೃಹ ಸಚಿವ ಪಿ.ಚಿದಂಬರಂ ಹೇಳಿದರು.ಮುಂಬೈ ದಾಳಿಗೂ ಮುನ್ನ ಹಾಗೂ ದಾಳಿಯ ಸಂದರ್ಭದಲ್ಲಿ ಪಾಕಿಸ್ಥಾನದಲ್ಲಿ ಉಗ್ರಗಾಮಿಗಳ ನಿಯಂತ್ರಣ ಕೊಠಡಿ ಕಾರ್ಯಾಚರಿಸುತ್ತಿತ್ತು ಎಂಬುದು ಈಗಾಗಲೇ ಸ್ಪಷ್ಟವಾಗಿದ್ದು, ಸರಕಾರದ ಸಹಕಾರವಿಲ್ಲದೆ ಇಂತಹ ನಿಯಂತ್ರಣ ಕೊಠಡಿಯೊಂದು ಕಾರ್ಯ ನಿರ್ವಹಿಸಲು ಸಾಧ್ಯವೇ ಇಲ್ಲ ಎಂದರು.ಕಸಬ್‌ನ ವಿಚಾರಣೆಯ ಬಳಿಕ ಮುಂಬೈ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿರುವುದು ಬಹಿರಂಗಗೊಂಡಿತ್ತು. ಕಳೆದ ಜೂನ್ 21ರಂದು ಬಂಧನಕ್ಕೊಳಗಾದ ಸೈಯ್ಯದ್ ಜಬೀಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್‌ನ ವಿಚಾರಣೆಯ ಬಳಿಕವಂತೂ ಈ ವಿಚಾರ ಮತ್ತಷ್ಟು ಸ್ಪಷ್ಟಗೊಂಡಿದೆ. ಅಲ್ಲದೆ ಮುಂಬೈ ದಾಳಿಯ ಹಿಂದಿನ ಸಂಚಿನ ಪೂರ್ಣ ಚಿತ್ರಣ ಇದೀಗ ಬಯಲಾಗಿದ್ದು, ಪಾಕಿಸ್ಥಾನದ ಸಹಕಾರ ಇರುವುದು ಸಾಬೀತಾಗಿದೆ ಎಂದು ಚಿದಂಬರಂ ಹೇಳಿದರು.ಯಾವುದೇ ಸಾರ್ವಭೌಮತೆಯುಳ್ಳ ದೇಶದ ಸರಕಾರ, ತನ್ನ ನೆಲವನ್ನು ಕೇಂದ್ರವನ್ನಾಗಿಟ್ಟುಕೊಂಡು ಇತರ ದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾರದು. ಭಾರತವಂತೂ ಇಂತಹ ಕಾರ್ಯದಲ್ಲಿ ತೊಡಗದು ಎಂದು ನುಡಿದ ಅವರು, ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ವೇಳೆ ಪಾಕಿಸ್ಥಾನಕ್ಕೆ ಜುಂದಾಲ್‌ನ ಬಗೆಗೆ ಯಾವುದೇ ದಾಖಲೆಪತ್ರಗಳನ್ನು ಹಸ್ತಾಂತರಿಸುವ ಪರಿಸ್ಥಿತಿ ಸದ್ಯಕ್ಕಂತೂ ಉದ್ಭವವಾಗಿಲ್ಲ ಎಂದರು. ಆದರೆ ಭಾರತದ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯಿ ಅವರು ಮಾತುಕತೆಯ ವೇಳೆ ಪಾಕಿಸ್ಥಾನದ ತನ್ನ ಸಹವರ್ತಿಯೊಂದಿಗೆ ಯಾವುದೇ ವಿಚಾರಗಳ ಬಗೆಗೆ ಚರ್ಚೆ ನಡೆಸಲು ಮುಕ್ತರಾಗಿದ್ದಾರೆ ಎಂದು ಅವರು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು.ಫಾಸಿಹ್ ಗಡೀಪಾರಿಗೆ ಕ್ರಮ :ಇದೀಗ ಸೌದಿ ಅರೇಬಿಯಾದಲ್ಲಿ ಬಂಧನದಲ್ಲಿರುವ ಬೆಂಗಳೂರು ಮತ್ತು ದಿಲ್ಲಿ ಸ್ಫೋಟಗಳ ಪ್ರಮುಖ ಆರೋಪಿ ಫಾಸಿಹ್ ಮೊಹಮ್ಮದ್‌ನನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಅಲ್ಲಿನ ಸರಕಾರವನ್ನು ಕೋರಲು ನಿರ್ಧರಿಸಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಚಿದಂಬರಂ ತಿಳಿಸಿದರು. ಫಾಸಿಹ್‌ಗಾಗಿ ಈಗಾಗಲೇ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಲಾಗಿದೆ. ದೇಶದಲ್ಲಿನ ಹಲವು ಪ್ರಕರಣಗಳಲ್ಲಿ ಈತ ಭಾರತೀಯ ಪೊಲೀಸರಿಗೆ ಬೇಕಾಗಿದ್ದಾನೆ. ಕರ್ನಾಟಕ ಹಾಗೂ ದಿಲ್ಲಿ ಸರಕಾರಗಳ ಮನವಿಯ ಮೇರೆಗೆ ಸಿಬಿಐ, ರೆಡ್ ಕಾರ್ನರ್ ನೊಟೀಸಿಗಾಗಿ ಇಂಟರ್‌ಪೋಲ್‌ನ್ನು ಕೋರಿಕೊಂಡಿತ್ತು ಎಂದವರು ತಿಳಿಸಿದರು.ಇತ್ತ ಫಾಸಿಹ್‌ನ ಪತ್ನಿ ಪರ್ವೀನ್, ಸುಪ್ರೀಂಕೋರ್ಟ್‌ಗೆ ಮನವಿಯೊಂದನ್ನು ಸಲ್ಲಿಸಿ, ತನ್ನ ಪತಿ ಫಾಸಿಹ್, ಕೇಂದ್ರೀಯ ಸುರಕ್ಷಾ ಸಂಸ್ಥೆಗಳ ವಶದಲ್ಲಿದ್ದು, ಆತನನ್ನು ಬಿಡುಗಡೆಗೊಳಿಸುವಂತೆ ಭಿನ್ನವಿಸಿಕೊಂಡಿದ್ದಾಳೆ. ಸೌದಿ ಹಾಗೂ ಭಾರತದ ಸುರಕ್ಷಾ ಸಂಸ್ಥೆಗಳ ಸಿಬಂದಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತನ್ನ ಪತಿಯನ್ನು ಮೇ 13ರಂದು ಉಗ್ರಗಾಮಿ ಚಟುವಟಿಕೆಗಳ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪರ್ವೀನ್ ದೂರಿಕೊಂಡಿದ್ದಾಳೆ.