Thursday, May 23, 2013
Last Updated: 1:07:09 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಗಳು ಶಾಲೆಗೆ ಹೋಗಲಿ...
    • ಮಗಳು ಶಾಲೆಗೆ ಹೋಗಲಿ...

      • ವಿಜಯಲಕ್ಷ್ಮೀ ಶ್ಯಾನ್‌ಭೋಗ್‌ | Jul 06, 2012

        ದೂರವಾಣಿ ಕರೆಗೆ ಫೋನ್‌ ಎತ್ತಿ "ಹಲೋ' ಎಂದೆ. ಆ ಕಡೆಯಿಂದ ನನ್ನ ಗೆಳತಿ ರಾಧಾ ಮಾತನಾಡುತ್ತಿದ್ದಳು. ಆಕೆ ಕರಾವಳಿ ಕಿನಾರೆಯ ಕಡಲಗಾಳಿ ಸೇವಿಸುತ್ತ, ರಜೆಯ ಮಜಾ ಅನುಭವಿಸಲು ದೂರದ ಗುಲ್ಬರ್ಗಾದಿಂದ ಕುಟುಂಬ, ಮಕ್ಕಳ ಸಮೇತ ನಮ್ಮಲ್ಲಿಗೆ ಬರುವ ವಿಚಾರ ತಿಳಿಸಿದಾಗ ನನಗೆ ಸಂತೋಷವಾಯಿತು. ಬಹಳ ದಿನಗಳಿಂದ ಭೇಟಿಯಾಗದ ಗೆಳತಿಯ ಆಗಮನವನ್ನು ಕಾದು ಕುಳಿತೆ.
        ಸ್ವಲ್ಪ ದಿನಗಳಲ್ಲಿ ರಾಧಾ, ಆಕೆಯ ಪತಿ, ಇಬ್ಬರು ಮಕ್ಕಳೊಂದಿಗೆ ಮನೆಗೆ ಬಂದಿಳಿದಾಗ ಅವಳನ್ನು ಸಂಭ್ರಮದಿಂದ ಸ್ವಾಗತಿಸಿದೆ. ಉಭಯ ಕುಶಲೋಪರಿ, ಆಪ್ತ ಮಾತುಕತೆಗಳಾದವು. ಅನಂತರ ಅತಿಥಿಗಳ ಉಪಚಾರಕ್ಕೆ ತೊಡಗಿಕೊಂಡೆ. ಈ ನಡುವೆ ಅವರಿದ್ದಷ್ಟು ನಾಲ್ಕೈದು ದಿನಗಳೂ ನನ್ನ ಕೆಲಸದವಳು ಬರಲೇ ಇಲ್ಲ. ಅಡುಗೆಯಲ್ಲದೆ ಬಟ್ಟೆ, ಪಾತ್ರೆ ಅಂತೆಲ್ಲ ಬಿಡುವಿಲ್ಲದೆ ಕೆಲಸ ಮಾಡುವ ನನ್ನನ್ನು  ನೋಡಿ ರಾಧಾ, ""ಕೆಲಸದವಳನ್ನಿಟ್ಟುಕೊಂಡಿಲ್ವೇನೆ...? ಒಬ್ಬಳೇ ಎಲ್ಲಾ ಮಾಡ್ತಾ ಇದ್ದಿ' ಎಂದು ಕೇಳಿದಾಗ ನಾನು,
        ""ಒಬ್ಬಳು ಕೆಲಸದವಳಿದ್ದಾಳೆ. ನನಗೆ ಅಗತ್ಯ ಇರುವಾಗ ಕೈ ಕೊಡುವುದು ಅವಳ ಹುಟ್ಟುಗುಣ' ಎಂದೆ.
        ""ಅಯ್ಯೋ, ಈ ಕೆಲಸದವರು ಎಲ್ಲಿ ಹೋದ್ರೂ ಹಾಗೆ. ನನ್ನ ಕೆಲಸದವಳೊಬ್ಬಳು ಇದುÉ. ಅವಳ ಕತೆ ಕೇಳಿದ್ರೆ ನೀನು ಏನು ಹೇಳ್ತಿಯೋ ಏನೋ?'

        ""ಹೀಗೆ ಕೈ ಕೊಡುವುದು ತಾನೆ?'

        ""ಒಂದ್ಸಲ ಏನಾಯ್ತು ಅಂದ್ರೆ ಒಂದ್‌ ನಾಲ್ಕೈದು ದಿನ ಅವಳು ಬರಲೇ ಇಲ್ಲ'

        ""ಬರುವಾಗ ಸೊಂಟನೋವು, ಕಾಲುನೋವು ಅಂತ ಏನೇನೋ ನೆವ ಇತ್ತು ಅಲ್ವಾ?'

        ""ಸಾಮಾನ್ಯವಾಗಿ ಹಾಗೇ. ಆದ್ರೆ ಈ ಬಾರಿ ಹೇಳಿದ ಕಾರಣ ಕುತೂಹಲವಾಗಿತ್ತು. ಆಕೆ ಪಂಚಾಯತ್‌ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲುವ ತಯಾರಿಯಲ್ಲಿದ್ದಳು. ರಾಜಕೀಯ ಪಕ್ಷದವರು ಅವಳ ಗಂಡನಿಗೆ ಹೇಳಿ ಆಕೆಯನ್ನು ಚುನಾವಣೆಗೆ ನಿಲ್ಲಿಸುತ್ತಾರಂತೆ. ಅದನ್ನು ಕೇಳಿ ನಾನು ದಂಗಾಗಿ ಬಿಟ್ಟೆ'

        ""ಹೌದಾ, ಹೂಂ..ಅದು ಮಹಿಳಾ ಮೀಸಲಾತಿ ಸ್ಥಾನದಿಂದ ಆಗಿರಬಹುದು'

        ""ಹೌದು, ಯಾವಾಗ ನಮ್ಮ ರಾಜ್ಯ ಸರಕಾರ ಮಹಿಳಾ ಮೀಸಲಾತಿಯನ್ನು ಶೇ.33ರಿಂದ ಶೇ. 50ಕ್ಕೇರಿಸಿತೋ ಆವಾಗಿನಿಂದ ಈ ನನ್ನ ಕೆಲಸದವಳಂತಹ ಅವಿದ್ಯಾವಂತ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದು ನಮ್ಮ ಗುಲ್ಬರ್ಗಾದಲ್ಲಂತೂ ಜಾಸ್ತಿಯಾಗಿಬಿಟ್ಟಿದೆ'

        ""ಹೌದಾ...ಮತ್ತೆ ಚುನಾವಣೆಗೆ ನಿಂತ್ಲಾ ? ಗೆದ್ಲಾ...?'

        ""ಹೂಂ...ಮತ್ತೆ, ನಿಂತೂ ಆಯ್ತು, ಗೆದ್ದೂ ಆಯ್ತು. ನನ್ನ ಮನೆ ಕೆಲಸ ಬಿಟ್ಟೂ ಆಯ್ತು. ಈಗ ನನ್ನದೂ ನಿನ್ನ ಹಾಗೆ'

        ""ಇರಲಿ, ಇಂತಹ ಮಹಿಳೆಯರಿಗೂ ಆಡಳಿತ ಜ್ಞಾನ ದೊರೆಯಬೇಕು. ಅವರ ಹಕ್ಕನ್ನು ಅವರಿಗೆ ದೊರಕಿಸಿ ಕೊಡಬೇಕೆಂಬ ಸರಕಾರದ ಧೋರಣೆ ಒಳ್ಳೆಯದೇ'

        ""ಹೌದು. ಆದ್ರೆ ಈ ಅವಿದ್ಯಾವಂತ ಮಹಿಳೆಯರು ಮೀಸಲಾತಿ ಸ್ಥಾನದಿಂದ ಗೆದ್ದು ಬಂದ್ರೆ ಏನು ಪ್ರಯೋಜನ?'

        ""ಯಾಕೆ? ಪ್ರಾತಿನಿಧ್ಯವಾದರೂ ಸಿಗೋಲ್ವಾ?'

        ""ನಮ್ಮ ಗುಲ್ಬರ್ಗಾದಲ್ಲಿ ಹೆಸರಿಗೆ ಮಾತ್ರ ಈ ಮಹಿಳೆಯರು. ಸಂಪೂರ್ಣ ಕಾರುಬಾರು ಅವರ ಗಂಡಂದಿರದು'

        ""ಅಂದರೆ?'

        ""ಅದನ್ನ ಏನಂತ ಹೇಳ್ಳೋದು! ನನಗೆ ಕೊನೆಗೆ ಗೊತ್ತಾಗಿದ್ದು , ಇದರ ಹಿಂದಿನ ಯೋಜನೆ ಬೇರೆಯೇ ಇದೆಯೆಂದು. ನಮ್ಮ ಕೆಲಸದವಳ ಕಥೆ ಮಾತ್ರವಲ್ಲ. ನಮ್ಮೂರ ಸುತ್ತ ಮುತ್ತಲಿನ ಐದಾರು ಪಂಚಾಯತ್‌ಗಳಲ್ಲಿಯೂ ಇಂತಹ ನಿರಕ್ಷರಕುಕ್ಷಿ ಮಹಿಳೆಯರೇ ಗೆದ್ದು ಬಂದಿದ್ದಾರೆ. ಇಂತಹ ಮಹಿಳೆಯರಿಗೆ ರಾಜಕೀಯವಾಗಿ ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳುವುದಾಗಲಿ, ಸಲಹೆ-ಸೂಚನೆಗಳನ್ನು ನೀಡುವುದಾಗಲಿ ಸಾಧ್ಯವಿಲ್ಲ. ಅದ್ಯಾವುದೂ ಅವರಿಗೆ ಅರ್ಥವಾಗುವುದೂ ಇಲ್ಲ. ಹೆಬ್ಬೆರಳ ಸಹಿ ಹಾಕುವವರು ಸುತ್ತೋಲೆಗಳನ್ನು ಓದುವುದಾಗಲಿ, ಕಾನೂನುಗಳನ್ನು  ಅರ್ಥ ಮಾಡಿಕೊಳ್ಳುವುದಾಗಲಿ ಹೇಗೆ ಸಾಧ್ಯ? ಇವರ ಈ ದೌರ್ಬಲ್ಯವನ್ನು ಪುರುಷರು ದುರುಪಯೋಗಪಡಿಸಿಕೊಳ್ಳುತ್ತಾ ಇದ್ದಾರೆ'.

        ""ಹೇಗೆ?'

        ""ನಮ್ಮ ಗುಲ್ಬರ್ಗಾ ಜಿಲ್ಲಾ ಪಂಚಾಯತ್‌ ಸದಸ್ಯೆಯರು ಪ್ರತೀ ಬಾರಿ ನಡೆಯುವ ಪಂಚಾಯತ್‌ ಸಭೆಯಲ್ಲಿ ಹಾಗೂ ಸ್ಥಾಯೀ ಸಮಿತಿ ಸಭೆಯಲ್ಲಿ ತಮ್ಮ ಗಂಡಂದಿರು ಭಾಗವಹಿಸಲು ಅವಕಾಶ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸುತ್ತಿದ್ದಾರಂತೆ!'

        ""ಅಂದರೆ ನಿಮ್ಮೂರಲ್ಲಿ ಮಹಿಳಾ ಮೀಸಲಾತಿ ಎನ್ನುವುದು ವಿಪರ್ಯಾಸದ ಅರ್ಥ ಪಡೆಯುತ್ತಿದೆ ಅನ್ನು '
        ""ಹೌದು. ಸರಕಾರದ ಪ್ರಚಾರಕ್ಕೆ ಮಾತ್ರ ಮಹಿಳಾ ಮೀಸಲಾತಿ. ಲಾಭ ಪಡೆಯುವವರು ಪುರುಷರು'
        ರಾಧಾಳ ಮಾತು ಕೇಳಿ ನಾನು ಈ ಬಗ್ಗೆ ಚಿಂತನೆ ನಡೆಸತೊಡಗಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾದ ಸ್ಥಳೀಯಾಡಳಿತ ಘಟಕದಲ್ಲಿ ಸದಸ್ಯೆಯರ ಗಂಡಂದಿರಿಗೂ ಪಾತ್ರವಿರಬೇಕೆಂಬ ಆಗ್ರಹ ನ್ಯಾಯವಲ್ಲದ್ದು ಹಾಗೂ ಮಹಿಳಾ ಮೀಸಲಾತಿಯನ್ನು ಅಲ್ಲಗಳೆಯುವಂಥದ್ದು ಎಂದು ಸಚಿವರೊಬ್ಬರ ಹೇಳಿಕೆ ಪತ್ರಿಕೆಯೊಂದರಲ್ಲಿ ಬಂದಿದ್ದು ನೆನಪಾಯಿತು.

        ಇವರು ಮೀಸಲಾತಿಯ ಒಟ್ಟು ಯೋಜನೆಯ ಆಶಯವನ್ನೇ ದಾರಿ ತಪ್ಪಿಸುತ್ತಿದ್ದಾರೆ ಎನಿಸಿತು. ಸರಕಾರ ಎಲ್ಲಾದರೂ ಗುಲ್ಬರ್ಗಾ ಜಿಲ್ಲಾ ಪಂಚಾಯತ್‌ ಸದಸ್ಯೆಯರ ಆಗ್ರಹಕ್ಕೆ ಮಣಿದರೆ ರಾಜ್ಯದ ಇತರ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್‌ ಘಟಕಗಳಿಗೆ ಇದು ಅನುಕರಣೀಯ ಮಾದರಿಯಾಗಬಹುದು. ಇಂಥ ಪರಿಸ್ಥಿತಿಯಲ್ಲಿ ಜನರಿಂದ ಆಯ್ಕೆಯಾದ ಮಹಿಳೆಯರ ಪಾತ್ರ ಇದರಲ್ಲೆಷ್ಟು ಎಂದು ಯೋಚಿಸಬೇಕಾಗುತ್ತದೆ. ಜಿಲ್ಲೆಯ ಜನರು ಆಯ್ಕೆ ಮಾಡಿ ಕಳುಹಿಸುವುದು ಮಹಿಳೆಯರನ್ನು. ಆಡಳಿತ ನಡೆಸುವುದು ಅವರ ಗಂಡಂದಿರು. ಹಾಗಾದರೆ ಈ ಮಹಿಳಾ ಮೀಸಲಾತಿಯ ಅರ್ಥವಾದರೂ ಏನು? ಇದರಿಂದ ಮಹಿಳೆಯರಿಗೆ ಸಾಮಾಜಿಕ ನ್ಯಾಯವನ್ನೇನೋ ಕಲ್ಪಿಸಿದಂತಾಗುತ್ತದೆ. ಆದರೆ, ಅವರಿಂದ ಕಾರ್ಯ ನಿರ್ವಹಣಾ ಚಾತುರ್ಯದ ಲಾಭವನ್ನು ಪಡೆಯುವಂತಿಲ್ಲ. ಇದಕ್ಕೆ ಮುಖ್ಯ ಕಾರಣ ಮಹಿಳಾ ಮೀಸಲಾತಿ ಸ್ಥಾನದಿಂದ ಆಯ್ಕೆಯಾದ ಅನೇಕ ಮಹಿಳೆಯರು ಓದುಬರಹ ಬಾರದ ಅವಿದ್ಯಾವಂತರು. ಇಂಥವರಿಂದ ಆಡಳಿತ ಸೂತ್ರವನ್ನು  ಅರ್ಥ ಮಾಡಿಕೊಳ್ಳುವುದಾಗಲಿ, ಕಾನೂನು ಸೂಕ್ಷ್ಮವನ್ನು  ಅರಿತುಕೊಳ್ಳುವುದಾಗಲಿ ಹೇಗೆ ಸಾಧ್ಯ? ಇಂಥವರು ಆಯ್ಕೆಗೆ ಅರ್ಹರೆ?

        ಈಗ ಎಲ್ಲ ಹಂತಗಳಲ್ಲೂ, ಎಲ್ಲ ಮಟ್ಟಗಳಲ್ಲೂ ನಮಗೆ ಸ್ವಂತ ನೆಲೆಯಲ್ಲಿ ಯೋಚಿಸಿ ನಿರ್ಧಾರಕ್ಕೆ ಬರುವಂತಹ ವಿದ್ಯಾವಂತ ಮಹಿಳೆಯರು ಬೇಕು. ಹಾಗಾದರೆ, ವಿದ್ಯಾವಂತ ಮಹಿಳೆಯರು ಲಕ್ಷಗಟ್ಟಲೆ ಸಂಖ್ಯೆಯಲ್ಲಿದ್ದರೂ ಕೂಡ ಆಯ್ಕೆಯಾಗಲು ಬೇಕಾದ ಮೀಸಲಾತಿ ಸೌಲಭ್ಯವಿದ್ದೂ ಅವರಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಕಾರಣ, ವಿವಿಧ ಪಂಗಡಗಳಿಗೆ ನಿಗದಿಪಡಿಸಲಾಗಿರುವ ಮೀಸಲಾತಿ.
        ಮಹಿಳಾ ಮೀಸಲಾತಿಯೊಂದು ಸಾಲದೆ? ಈ ಒಳ ಮೀಸಲಾತಿಯೆಲ್ಲ ಯಾಕೆ? ಇದರಿಂದಾಗಿ ಅನೇಕ ಅರ್ಹ, ಸಮರ್ಥ, ವಿದ್ಯಾವಂತ ಮಹಿಳೆಯರು ಅವಕಾಶ ವಂಚಿತರಾಗುತ್ತಾರೆ. ಈ ಕಾರಣದಿಂದಲೇ ವಿದ್ಯಾವಂತ ಮಹಿಳೆಯರು ವಾರ್ಡುಗಳಿಗಾಗಲಿ, ಪಂಚಾಯತ್‌ ಸ್ಥಾನಗಳಿಗಾಗಲಿ ಸ್ಪರ್ಧಿಸಲು "ಅರ್ಹತೆ' ಕಳೆದುಕೊಂಡಿರುತ್ತಾರೆ.

        ಮೊದಲು ಸುಶಿಕ್ಷಿತ, ವಿದ್ಯಾವಂತ ಮಹಿಳೆಯ ಕೈಗೆ ಸರಕಾರ ಆಡಳಿತ ಚುಕ್ಕಾಣಿಯನ್ನು ನೀಡಲಿ. ಆಗ ಗೊತ್ತಾಗುತ್ತದೆ, ಮಹಿಳೆ ಎಷ್ಟು ಸಮರ್ಥಳು ಎನ್ನುವುದು.

        1961ರಷ್ಟು ಹಿಂದೆಯೇ ಬೆಂಗಳೂರಿನ ಮೊತ್ತ ಮೊದಲ ಮಹಿಳಾ ಮೇಯರ್‌ ಆಗಿದ್ದ  ಬಿ. ಇಂದಿರಮ್ಮ ಅತ್ಯುತ್ತಮ ಶಿಕ್ಷಣ ಪಡೆದವರಾಗಿದ್ದರು. ಬ್ರಿಟಿಷ್‌ ವಿಶ್ವವಿದ್ಯಾಲಯದಲ್ಲಿ ಪದವೀಧರೆಯಾದ ಇವರು ರಾಜ್ಯ ಶಿಕ್ಷಣ ಇಲಾಖೆಯಿಂದ ನಿವೃತ್ತರಾದ ಬಳಿಕ ಪೌರಾಡಳಿತ ರಾಜಕಾರಣ ಪ್ರವೇಶಿಸಿದರು. ಇವರು ತಮ್ಮ ಅವಧಿಯಲ್ಲಿ ದಕ್ಷ ಹಾಗೂ ಸಮರ್ಥ ಆಡಳಿತ ನಡೆಸಿದವರೆಂದು ಹೆಸರು ಪಡೆದವರು.

        ನಾಮ್‌ಕಾವಾಸ್ಥೆಗೆ ಮಾತ್ರ ನಮ್ಮ ದೇಶ ಜಾತ್ಯತೀತ ರಾಷ್ಟ್ರ. ಆದರೆ "ಜಾತಿ'ಯನ್ನು ಹೆಸರಿಸದೆ ಸರಕಾರದ ಮೊದಲ ಮೆಟ್ಟಿಲಿನಿಂದ ಕೊನೆಯ ಮೆಟ್ಟಿಲಿನ ತನಕದ ಯಾವ ಅರ್ಜಿಯೂ ಪೂರ್ಣವಾಗುವುದಿಲ್ಲ ಎನ್ನುವುದು ದುರದೃಷ್ಟದ ಸಂಗತಿ. ಮಹಿಳಾ ಮೀಸಲಾತಿ ಎಂಬಲ್ಲಿಯೂ ಮಹಿಳೆಯರನ್ನು ಜಾತಿ ಆಧರಿಸಿ ವಿಂಗಡಿಸುವ ಅರ್ಥಾತ್‌ ವಿಘಟಿಸುವ ಪೂರ್ವಾಗ್ರಹಪೀಡಿತ ಧೋರಣೆಯನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸಮಾಜದ, ದೇಶದ ಅಭಿವೃದ್ಧಿಯ ವೇಗ ಕುಂಠಿತವಾಗುತ್ತಿರುವುದು ಈ ಕಾರಣದಿಂದಲೇ ಎಂದರೆ ತಪ್ಪಾಗಲಾರದು. ಇದೊಂದು ಅನಪೇಕ್ಷಿತ ಕಟುವಾಸ್ತವ.

        ಒಳ ಮೀಸಲಾತಿ ಬೇಕೇ ಬೇಕು ಎನಿಸಿದರೆ ಜಾತಿ ಆಧರಿಸಿ ಅಲ್ಲ. ವಿದ್ಯಾರ್ಹತೆ ಆಧರಿಸಿ ನೀಡಲಿ. ಇಲ್ಲಿ ಕನಿಷ್ಠ ವಿದ್ಯಾರ್ಹತೆಯ ರೇಖೆಯೂ ಇರಬೇಕು. ಅಕ್ಷರ ಆಧಾರದಲ್ಲಿ ಪರಿಸರದ ಗೃಹಿಕೆಗೆ ಕಡಿಮೆಯೆಂದರೆ ಹತ್ತನೇ ತ‌ರಗತಿಯ ತನಕವಾದರೂ ವಿದ್ಯಾಭ್ಯಾಸವಿದ್ದರೆ ಒಳ್ಳೆಯದು. ಇಂಥ ಕನಿಷ್ಠ ಮಿತಿಯನ್ನಿಟ್ಟುಕೊಂಡು, ವಿದ್ಯಾರ್ಹತೆಯ ಆಧಾರದಲ್ಲಿ ಮಹಿಳಾ ಮೀಸಲಾತಿಯನ್ನು ಕಲ್ಪಿಸಬೇಕು. ಹಾಗಾದರೆ, ನಮ್ಮ ದಿನ ನಿತ್ಯದ ಸಾಮಾಜಿಕ ಹಕ್ಕು, ಸೌಲಭ್ಯಗಳನ್ನು ಹೆಚ್ಚು ಹೋರಾಟವಿಲ್ಲದೆ ಪಡೆಯಲು ಅಥವಾ ಕೊಡಲು ಸಾಧ್ಯ. ಆ ಮೂಲಕ ದೇಶದ ಪ್ರಗತಿಯ ಗತಿಯನ್ನು ಬದಲಾಯಿಸಲು ಸಾಧ್ಯ ಎನಿಸುತ್ತದೆ.

        ಈ ನಿಟ್ಟಿನಲ್ಲಿ ಮನೆಗೊಂದು ಮಗು ಎಂದು ಕಡ್ಡಾಯ ಮಾಡಿದ ಹಾಗೆ ಮಗುವಿಗೆ ಸರಕಾರ ವಿಧಿಸಿದ ಕನಿಷ್ಠ ಮಿತಿಯ ವಿದ್ಯಾಭ್ಯಾಸವೂ ಕಡ್ಡಾಯ ಎಂಬ ಕಾನೂನು ನಿರ್ಮಿಸುವುದು ಸದ್ಯೋಭವಿಷ್ಯದಲ್ಲಿ ಮಹಿಳೆಯರ ಹಿತದೃಷ್ಟಿಯಿಂದಲೂ ಉತ್ತಮ ಎನಿಸುತ್ತದೆ.

         

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      • Copyright @ 2009 Udayavani.All rights reserved.
      • Designed & Hosted By 4cplus