Wednesday, May 22, 2013
Last Updated: 4:58:32 AM IST
  • ನಾನೆಲ್ಲಿರುವೆ:
  • ಮುಖಪುಟ ಮನೋರಂಜನೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಂಪೆನಿ ಡ್ರಾಮಾ
    • ಯೋಗರಾಜ ವೈಭವ ಎಂಬ ಕಿರುಪ್ರಹಸನವು!
    • 3ದೃಶ್ಯಗಳಲ್ಲಿ ಒಂದು ಶೂಟಿಂಗ್‌ ಕತೆ
    • ಡ್ರಾಮ ಚಿತ್ರದ ನಾಯಕ ಯಶ್ ಹಾಗು ನಾಯಕಿ ರಾಧಿಕಾ ಪಂಡಿತ್.

      • Udayavani | Jul 06, 2012

        ದೃಶ್ಯ 1

        ಟಾಟಾ ಸುಮೋ, ಟವೇರಾಗಳಿಂದ ಪತ್ರಕರ್ತರು ಇಳಿದು ಕೋಟೇಶ್ವರದ ಸನ್‌ ಕ್ಯಾಸಲ್‌ ರಿಸಾರ್ಟ್‌ನ ಒಳ ಹೋಗುತ್ತಿದ್ದಂತೆ ಓಡಿ ಬಂದರು ನಿರ್ಮಾಪಕ ಜಯಣ್ಣ. ಒಬ್ಬೊಬ್ಬರ ಕೈಕುಲುಕಿ ಅದೋ ನೋಡಿ ಭಟ್ಟರು ಅಲ್ಲಿದ್ದಾರೆ ಅಂತ ತೋರಿಸುತ್ತಿದ್ದರು. ಆಗ ಮಧ್ಯಾಹ್ನ 12 ಗಂಟೆ. ಭಟ್ಟರು "ಡ್ರಾಮಾ' ಮಾಡುತ್ತಿದ್ದರು. ಯಶ್‌, ಸತೀಶ್‌, ಕಲ್ಯಾಣಿ, ಮಿತ್ರರನ್ನು ಕೃತಕ ಮಳೆಯಲ್ಲಿ ತೋಯಿಸುತ್ತಿದ್ದರು. ದೃಶ್ಯ ಓಕೆಯಾಗುತ್ತಿದ್ದಂತೆ ಭಟ್ಟರು ಬೆಂಗಳೂರಿನಿಂದ ಬಂದವರ ಬಳಿ ಬಂದರು. ಬೆಂಗಳೂರಿನಿಂದ ಎಷ್ಟೊತ್ತಿಗೆ ಹೊರಟ್ರಿ, ಕುಂದಾಪುರಕ್ಕೆ ಎಷ್ಟೊತ್ತಿಗೆ ಬಂದ್ರಿ, ಕಾಫಿ ಆಯ್ತಾ, ತಿಂಡಿ ಆಯ್ತಾ, ನಾಕು ದಿನದಿಂದ ಮಳೆ ಮಾರಾಯೆ, ಇವತ್ತು ಸ್ವಲ್ಪ ಕಡಿಮೆ, ಮಳೆ ದೃಶ್ಯವಾದ್ದರಿಂದ ಕೃತಕ ಮಳೆ ... ಎಂಬಂಥ ಮಾತುಗಳು ಅವರಿಂದ ಬಂದವು. ಅಷ್ಟರಲ್ಲಿ ಇನ್ನೊಂದು ದೃಶ್ಯಕ್ಕೆ ಸಿದ್ಧತೆ ಮುಗಿದಿತ್ತು. ಭಟ್ಟರು ಮತ್ತೆ ಬಿಝಿಯಾದರು. ಪತ್ರಕರ್ತರು ಎದುರಿದ್ದ ಬೀಚಿಗೆ ಹೋದರು. ಅಲ್ಲಿಂದ ಊಟಕ್ಕೆ, ನಂತರ ಕೊಲ್ಲೂರಿಗೆ ...

        ದೃಶ್ಯ 2

         ಪತ್ರಕರ್ತರು ಮತ್ತದೇ ರೆಸಾರ್ಟಿಗೆ ಬಂದಾಗ ರಾತ್ರಿ ಏಳು. ಅಷ್ಟರಲ್ಲಿ ಚಿತ್ರೀಕರಣ ಮುಗಿಸಿ ಪತ್ರಿಕಾಗೋಷ್ಠಿಗೆ ಅಣಿಯಾಗಿದ್ದರು ಭಟ್ಟರು. ರಿಸಾರ್ಟಿನ ಮಧ್ಯದಲ್ಲಿ ಸಣ್ಣ ಬೆಳಕಿರುವ ಒಂದು ಹೋಟೆಲ್‌. ಹೊರಗೆ ಸಣ್ಣ ಮಳೆ. ಪತ್ರಕರ್ತರು ಒದ್ದೆ ಮುದ್ದೆ. ಪತ್ರಿಕಾಗೋಷ್ಠಿ ಶುರುವಾಯಿತು.

         ಯೋಗರಾಜ್‌ ಭಟ್‌ (ಸೂತ್ರಧಾರ): ವಿಶೇಷವಾಗಿ ಹೇಳ್ಳೋದೇನಿಲ್ಲ. ನನ್ನ ಪಾಲಿಗೆ ದೊಡ್ಡ ಬಜೆಟ್‌ನ, ದೊಡ್ಡ ತಾರಾಗಣದ ಸಿನಿಮಾ.

         ಯೋಗರಾಜ್‌ ಭಟ್‌ ಮುನ್ನುಡಿ ಬರೆಯುತ್ತಿದ್ದಂತೆ ರಂಗದ ಮೇಲಿದ್ದ ಯಶ್‌, ರಾಧಿಕಾ ಪಂಡಿತ್‌, ಸತೀಶ್‌ ನೀನಾಸಂ, ಕ್ಯಾಮೆರಾಮನ್‌ ಕೃಷ್ಣ, ಜಯಣ್ಣ ಒಬ್ಬೊಬ್ಬರೇ ಬಂದು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಭಟ್ಟರ ಜೊತೆಗೆ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಲ್ಲರ ಪರಿಚಯ ಮಾತು ಮುಗಿದ ಮೇಲೆ ಮತ್ತೆ ಸೂತ್ರಧಾರ ಭಟ್ಟರು "ಡ್ರಾಮಾ' ಮುಂದುವರೆಸಿದರು.

        ಯೋಗರಾಜ್‌ ಭಟ್‌: ಇಲ್ಲಿ ಬದುಕಿನ ರಾಜಕೀಯದ ಬಗ್ಗೆ ಹೇಳ್ಳೋಕೆ ಹೊರಟಿದ್ದೇನೆ. 20ರಿಂದ 30 ವರ್ಷದ ಯುವಕರಿಗೆ ತಮಗೆ ಎಲ್ಲಾ ಗೊತ್ತಿರತ್ತೆ ಅನ್ನೋ ಭ್ರಮೆ ಇರುತ್ತೆ. ಆದರೆ, ಏನೂ ಗೊತ್ತಿರಲ್ಲ. ಮೊದಲಾರ್ಧ ಸತ್ಯ, ಇನ್ನರ್ಧ ಮಿತ್ಯ. ಇದೊಂದು ತರಹ ಮಲ್ಟಿ ಡೈಮೆನÒನಲ್‌ ಕಥೆ. ಬದುಕು ನಾಟಕ, ನಾವೆಲ್ಲಾ ಪಾತ್ರಧಾರಿಗಳು ಅನ್ನೋ ಜನಜನಿತ ವೇದವಾಕ್ಯವೇ ಇದಕ್ಕೆ ಸ್ಫೂರ್ತಿ.

        ಯಶ್‌: ನಾನಿಲ್ಲಿ  ಟೀಕೆ ವಂಕಟೇಶ ಅನ್ನೋ ಅಪ್ಪಟ ಹಳ್ಳಿ ಹುಡುಗನ ಪಾತ್ರ ಮಾಡ್ತಿದ್ದೀನಿ. ಯಾವುದೇ ಹಿಡಿತಕ್ಕೆ ಸಿಗದ ಪಾತ್ರ ಅದು. ಅವನನ್ನು ಪುಟಗೋಸಿ ಕವಿ ಅಂತಾರೆ ಭಟ್ಟರು. ಇಲ್ಲೂ ಅವರ ಎಂದಿನ ಉಡಾಫೆ ಸ್ಟೈಲ್‌ ಮುಂದುವರೆದಿದೆ. "ದೇವರೌನೆ ಮನೆ ಮಾರಿಬಿಡಿ ...' ಅಂತ ಅವರ ಸಾಹಿತ್ಯ ಕೇಳಿ ಶಾಕ್‌ ಆಗಿದ್ದೆ ನಾನು. ಇಲ್ಲೂ ಆ ತರಹದ ಒಂದಿಷ್ಟು ಉಡಾಫೆ ಇದೆ.

        ಯೋಗರಾಜ್‌ ಭಟ್‌: ನಾನು ಬೇರೆ ತರಹ ಪಾಠ ಹೇಳ್ತೀನಿ. ಜನ ಸಹ ಕನೆಕ್ಟ್ ಮಾಡ್ಕೊà ತಾರೆ ಅನ್ನೋದು ವಿಶೇಷ. ಇಲ್ಲಿ ಉಡಾಫೆ ಇದೆ. ಬಟ್‌ ಈ ಬಾರಿ ಒಂದು ಕಥೆ ಮಾಡಿ ಟ್ಟುಕೊಂಡಿದ್ದೀನಿ.

        "ಮುಂಗಾರು ಮಳೆ'ಯಿಂದ "ಪರಮಾತ್ಮ'ನವರೆಗೆ ಹೆಚ್ಚು ಪಾತ್ರ ಪೋಷಣೆಯ ಬಗ್ಗೆ ಗಮನಹರಿಸಿದ್ದೆ. ಇಲ್ಲಿ ಬಲವಾದ ಎಳೆ ಇದೆ. ಅದೇ ಕೈಹಿಡಿದು ಕರೆದುಕೊಂಡು ಹೋಗುತ್ತಿದೆ. ಇನ್ನೊಂದು ವಿಷಯ ಅಂದರೆ ಇಲ್ಲಿ ಹಾಸ್ಯದ ಜೊತೆಗೆ ಡಾರ್ಕ್‌ ಫಿಲಾಸಫಿ ಸಹ ಇದೆ.

        ಅಷ್ಟರಲ್ಲಿ ಪ್ರೇಕ್ಷಕರು ಅಲಲ್ಲ, ಪತ್ರಕರ್ತರ ಗ್ಯಾಲರಿಯಿಂದ ಪ್ರಶ್ನೆ ಬಂತು

        ಪ್ರೇಕ್ಷಕರು: ಹಾಗಾದರೆ ಇಲ್ಲಿ ಮಿಥ್ಯ ಗೆಲ್ಲುತ್ತೋ? ಸತ್ಯ ಗೆಲ್ಲುತ್ತೋ? ಅಥವಾ ಮಾತು ಗೆಲ್ಲುತ್ತೋ?

        ಯೋಗರಾಜ್‌ ಭಟ್‌: ಬದುಕು ಗೆಲ್ಲತ್ತೆ. ಮಾತಿಗೆ ಇಲ್ಲಿ ಹೆಚ್ಚು ಪ್ರಾಧಾನ್ಯತೆ ಇಲ್ಲ. ಎಷ್ಟು ಬೇಕೋ ಅಷ್ಟಿದೆ. ಇಲ್ಲಿ ಪಾತ್ರಗಳಿಗೆ, ಅಭಿನಯಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ. ಹಾಂ ಮರೆತಿದ್ದೆ. ಇಲ್ಲಿ ರಾಧಿಕಾ ಪಾತ್ರ ಬಹಳ ವಿಕ್ಷಿಪ್ತ. ರಾಧಿಕಾಗೆ ತಾನೆಂಥಾ ನಟಿ ಎಂದೇ ಗೊತ್ತಿಲ್ಲ. ಆಕೆಯ ಪಾತ್ರಕ್ಕೆ ಎರಡು ಶೇಡ್‌ಗಳಿವೆ. ಎರಡನ್ನೂ ಅದ್ಭುತವಾಗಿ ಬ್ಲೆಂಡ್‌ ಮಾಡುವ ಶಕ್ತಿ ಆಕೆಗಿದೆ.

        ರಾಧಿಕಾ ಪಂಡಿತ್‌ (ಭಟ್ಟರ ಕಾಂಪ್ಲಿಮೆಂಟ್‌ನಿಂದ ಖುಷಿಯಾಗುತ್ತಾ): ನನ್ನದು ಬೋಲ್ಡ್‌ ಪಾತ್ರ. ಜೊತೆಗೆ ಫ್ಲರ್ಟ್‌ ಮಾಡುವ ಹುಡುಗಿ ನಾನು. ಕಲಾವಿದೆಯಾಗಿ ಇದೊಂದು ಚಾಲೆಂಜಿಂಗ್‌ ಪಾತ್ರ.

        ಯೋಗರಾಜ್‌ ಭಟ್‌: ಅಂಬರೀಷಣ್ಣನ ಪಾತ್ರ ಹೇಗಿದೆ ಗೊತ್ತಾ. ಗೊಂಬೆ ಶಾಸ್ತ್ರ ಹೇಳುವ ಪಾತ್ರ ಅದು. ಸ್ವಲ್ಪ ಮೂಢನಂಬಿಕೆಯ ಪಾತ್ರ ಎನಿಸಬಹುದು. ಆದರೆ, ಅದಲ್ಲ ... ಒಟ್ನಲ್ಲಿ ಮಜಾ ರೋಲು ಅದು.

        ಯಶ್‌: ನಾನು ಅಂಬಿ ಸಾರ್‌ರನ್ನ ನೋಡಿ ಬೆಳೆದವನು. ಅವರಿಗಿಲ್ಲಿ ಒಳ್ಳೆಯ ಪಾತ್ರವಿದೆ. ಅವರ ಪಾತ್ರದಲ್ಲೂ ಉಡಾಫೆ ಮತ್ತು ಸೀರಿಯಸ್‌ ಆದ ಸಂದೇಶವಿದೆ. "ಪ್ರೇಮ ಕೇಸರಿಬಾತು, ಕಾಮ ಖಾರಾಬಾತು ...' ಎಂಬ ಡೈಲಾಗ್‌ ಇದೆ. ಇನ್ನು ಕಿಟ್ಟಪ್ಪನ ಛಾಯಾಗ್ರಹಣ ಬಗ್ಗೆ ಹೇಳಬೇಕು.

        ಯೋಗರಾಜ್‌ ಭಟ್‌: (ಯಶ್‌ ಮಾತು ಮುಂದುವರೆಸುತ್ತಾ): ನಮ್ಮ ಕಣ್ಣು ಹೇಗೆ ನೋಡ್ತವೋ, ಅದೇ ತರಹ ಛಾಯಾಗ್ರಹಣ ಇದೆ. ಕದ್ದು ಚಿತ್ರೀಕರಣ ಮಾಡಿದರನೋ ಎಂದನಿಸಬಹುದು. ಹೊಸ ರೀತಿ ಪ್ರಯೋಗ ಇದು.

        ಕೃಷ್ಣ: ಹೌದು, ಹೊಸ ರೀತಿ ಪ್ರಯೋಗ. ಸ್ಕ್ರಿಪ್ಟ್ ಚೆನ್ನಾಗಿದೆ. ಹೊಸ ರೀತಿಯಲ್ಲಿ ಇದೆ. ಅದಕ್ಕಿಂತ ಚೆನ್ನಾಗಿ ಮಾಡೋ ಜವಾಬ್ದಾರಿ ಇದೆ. ಈ ಸಿನಿಮಾ ಹೊಸ ಅನುಭವ ಕೊಡತ್ತೆ ನೋಡ್ತಾ ಇರಿ ...

        ಸತೀಶ್‌ ನೀನಾಸಂ: ಹೌದು, ತುಂಬಾ ಒಳ್ಳೆಯ ತಂಡ ಇದೆ. ಇಲ್ಲಿ ನನ್ನ ಪೇರ್‌ ಸಿಂದು. ಆಕೆ ಚಿತ್ರದಲ್ಲಿ ಮೂಗಿ. ಹಾಗಾಗಿ ಇಬ್ಬರದ್ದೂ ನಾನೊಬ್ಬನೇ ಮಾತಾಡಬೇಕು.

        ಅಷ್ಟರಲ್ಲಿ ಪ್ರೇಕ್ಷಕರು ಅಲಲ್ಲ, ಪತ್ರ ಕರ್ತರ ಗ್ಯಾಲರಿಯಿಂದ ಪ್ರಶ್ನೆ ಬಂತು

        ಪ್ರೇಕ್ಷಕರು: ಇವತ್ತಿನ ಚಿತ್ರೀಕರಣವೇನಿತ್ತು?

        ಯೋಗರಾಜ್‌ ಭಟ್‌: ಯಂಕ್ಟ, ಸತೀಶ ಇಬ್ರೂ ಕಿತಾಪತಿ ಮಾಡಿ ಮಾಡಿ ಓಡಿ ಓಡಿ ಕರಾವಳಿಗೆ ಬಂದಿರ್ತಾರೆ. ಬೊಂಬೆ ಶಾಸ್ತ್ರ ಹೇಳ್ಳೋನು ಅವರಿಬ್ಬರಿಗೆ ನೀವು ಪಶ್ಚಿಮ ದಿಕ್ಕಿಗೆ ಹೋಗ್ತಿàರಾ, ಅಲ್ಲಿ ಸಾವು ಕಾದಿದೆ ಎಂದು ಭವಿಷ್ಯ ಹೇಳಿರ್ತಾನೆ. ಇದು ಕ್ಲೈಮ್ಯಾಕ್ಸ್‌ ಲೀಡು. ಇನ್ನೂ ಕ್ಲೈಮ್ಯಾಕ್ಸಿನಲ್ಲಿ ಏನೇನಾಗುತ್ತೋ

        ಎಂದು ಸೂತ್ರಧಾರ ಪರದೆ ಎಳೆದು ಮಿಕ್ಕಿದ್ದೆಲ್ಲವನ್ನೂ ಪ್ರೇಕ್ಷಕರಿಗೆ ಬಿಟ್ಟರು.

        ದೃಶ್ಯ 3

         ಅಲ್ಲಿಗೆ "ಡ್ರಾಮಾ' ಮುಗಿದಿತ್ತು. ಪಾತ್ರಧಾರಿಗಳೆಲ್ಲಾ ಒಬ್ಬೊಬ್ಬರೇ ಮಳೆಯ ಮಧ್ಯೆಯೇ ತಮ್ಮ ಹೋಟೇಲು ದಾರಿ ಹಿಡಿದರು. ಇನ್ನು ಪತ್ರಕರ್ತರ ಎದುರು ಸೂತ್ರಧಾರ ಮಾತ್ರ ಬಂದು ಕುಳಿತರು. ಅಲ್ಲಿಂದ ಮಧ್ಯರಾತ್ರಿ ಬೆಂಗಳೂರಿಗೆ ಬಸ್ಸು ಹೊರಡುವವರೆಗೂ ಮದ್ಯ ಮದ್ಯ ಮಾತು, ಮದ್ಯ ಮದ್ಯ ನಗು ...

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus