ಉಪಾಧ್ಯಾಯ ಮೂಡುಬೆಳ್ಳೆ | Jul 06, 2012
ಬಾನಿಂದ ಭುವಿಗೆ ಧುಮ್ಮಿಕ್ಕುವ ವರ್ಷಧಾರೆಯು ಜೀವಸಂಕುಲದಲ್ಲಿ ಹರ್ಷಧಾರೆಯನ್ನು ಹೊಮ್ಮಿಸುತ್ತದೆ. ವರ್ಷಧಾರೆಯ ವೈಖರಿಗೆ ಮನ ಸೋಲದ ಮಾನವರಿಲ್ಲ. ಅದೆಷ್ಟು ಚೆಂದ, ಅದೆಷ್ಟು ಅಂದ, ಆ ನೋಟ! ನೆನೆದು ಕುಪ್ಪಳಿಸಿ ಕುಣಿದು ಮೈಮನ ತಂಪುಗೊಳಿಸಿ ಮಹದಾನಂದವನ್ನು ಅನುಭವಿಸುವ ತವಕ ಯಾರಿಗಿಲ್ಲ ಹೇಳಿ! ಈ ಸುಖವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅನುಭವಿಸುತ್ತಾರೆ. ಮುಂಗಾರು ಮಳೆ, ಚಿರಿ ಚಿರಿ ಮಳೆ, ಕುಂಭದ್ರೋಣ ಮಳೆ, ಬಿರುಗಾಳಿ ಮಳೆ - ಜುಳು ಜುಳು ಹರಿವ ನೀರು, ಉಕ್ಕಿ ಹರಿವ ನದಿಗಳು, ಭೋರ್ಗರೆವ ಜಲಪಾತ, ಅಬ್ಬರದಲೆಗಳ ಸಾಗರ, ಎಲ್ಲೆಂದರಲ್ಲಿ ಕಾಣುವ ಹಚ್ಚಹಸುರಿನ ನಿಸರ್ಗ, ಎಲ್ಲೆಲ್ಲೂ ತಂಪು ತಂಪು-ಚಳಿ ಚಳಿ ಇವೆಲ್ಲವನ್ನು ಅನುಭವಿಸಿ ಎಲ್ಲರೂ ಪುಳಕಿತಗೊಳ್ಳುತ್ತಿರುವಾಗ ಕವಿ ತನ್ನ ಅನುಭವದ ತಂಪುಕಾವ್ಯವನ್ನು ಬರೆಯುತ್ತಾನೆ. ಸಂಗೀತಜ್ಞ ಮೇಘಮಲ್ಹಾರ ರಾಗವನ್ನು ಹಾಡುತ್ತಾನೆ. ಚಿತ್ರಕಲಾವಿದ ವರ್ಷಧಾರೆಯ ಚಿತ್ರಕಾವ್ಯವನ್ನು ಬರೆಯುತ್ತಾನೆ.
ವರ್ಷಧಾರೆಯಿಂದ ಈ ಭುವಿಯ ಮಣ್ಣು ಮೆದುವಾಗಿ -ಹದವಾಗಿ, ಮಕ್ಕಳಿಗೆ ಮಣ್ಣಾಟವಾಗಿ, ರೈತರಿಗೆ ಕೃಷಿಯಾಟವಾಗಿ, ವಾಹನಗಳಿಗೆ ಕೆಸರಿನ ಎರಚಾಟವಾಗಿ, ಕಾಲ್ನಡಿಗೆಯವರಿಗೆ ಪೇಚಾಟವಾಗುವುದಿದೆ. ಆದರೆ ಕಲಾವಿದನ ಕಣ್ಣು ಇವೆಲ್ಲದರ ಹಿಂದೆ ಕಲಾತ್ಮಕವಾಗಿ ಕೆಲಸ ಮಾಡುತ್ತದೆ. ಒಮ್ಮೆ ಹೀಗೆ ನಡೆಯಿತು. ಕಲಾವಿದನೊಬ್ಬ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ವೇಗ ವಾಗಿ ಬಂದ ವಾಹನವೊಂದು ಅವನಿಗೆ ಕೆಸರೆರಚಿ ಹೋಯಿತು. ಆತನ ಬಿಳಿ ಅಂಗಿಯೆಲ್ಲಾ ಕೆಸರಾಯಿತು. ಆದರೆ ಆತನ ಕಲಾತ್ಮಕ ಕಣ್ಣು ಕೆಲಸ ಮಾಡಿತು. ಆತ ಸಿಟ್ಟಾಗಲಿಲ್ಲ. ಸೀದಾ ಮನೆಗೆ ಬಂದು ಅಂಗಿಯನ್ನು ಹಾಗೇ ಒಣಗಲು ಹಾಕಿದ. ಅದರ ತುಂಬಾ ಇದ್ದ ಕೆಸರಿನ ಟೆಕÏ$cರ್ ಒಣಗಿದಾಗ ವಿಚಿತ್ರರೂಪ ಕಂಡಿತು. ಅಲ್ಲೊಂದು ಅಮೂರ್ತ ಕೃತಿ ಮೂಡಿತ್ತು. ಆ ಅಂಗಿಯನ್ನು ಬೇಕಾದಂತೆ ಕತ್ತರಿಸಿ ಚೌಕಟ್ಟಿಗೆ ಬಿಗಿದು, ಫ್ರೆಮ್ ಹಾಕಿ ಕಲಾ ಪ್ರದರ್ಶನಕ್ಕೆ ಕಳುಹಿಸಿದ. ಅದೊಂದು ವಿಶಿಷ್ಟ ಕಲಾಕೃತಿಯಾಗಿ ಗಮನ ಸೆಳೆಯಿತು.
ಸೋರುವ ಮನೆಗಳಿಗೆ ವರ್ಷಧಾರೆ ಶಾಪವೇ ಸರಿ. ಮನೆಯ ಗೋಡೆಗೆ ಮಳೆಯ ನೀರು ಸೋರಿ ಸೋರಿ ಅಲ್ಲಿ ಪಾಚಿ ಹಿಡಿಯಿತು. ದಿನ ಹೋದಂತೆ ಪಾಚಿ ದಪ್ಪವಾಯಿತು. ಕಲಾವಿದನೊಬ್ಬ ಅದನ್ನು ಗಮನಿಸಿದ. ಆತನ ಕಲಾತ್ಮಕ ಕಣ್ಣು ಕೆಲಸ ಮಾಡಿತು. ಪಾಚಿಯಲ್ಲಿ ವಿಶಿಷ್ಟ ಅಮೂರ್ತ ಕಲಾಕೃತಿ ತೋರಿಬಂತು. ಕೂಡಲೆ ಆ ಮನೆಯವರನ್ನು ಒಪ್ಪಿಸಿ ಆ ಪಾಚಿ ಹಿಡಿದ ಜಾಗದ ಗೋಡೆಯನ್ನು ಕತ್ತರಿಸಿ ತೆಗೆದ. ಅದಕ್ಕೆ ಸೂಕ್ತ ಫ್ರೆàಮ್ ಹಾಕಿ ಕಲಾಪ್ರದರ್ಶನಕ್ಕೆ ಇಟ್ಟ. ಇಲ್ಲಿಯೂ ಸಹಾ ಆ ಕಲಾಕೃತಿ ಎಲ್ಲರ ಮೆಚ್ಚುಗೆ ಪಡೆಯಿತು. ಇಂತಹ ಅನೇಕ ಘಟನೆಗಳು ನಮ್ಮೆದುರು ಇವೆ. ಇವಕ್ಕೆಲ್ಲಾ ಮಳೆಗಾಲವೇ ಸ್ಫೂರ್ತಿ.
ಆರ್ಭಟಿಸುವ ಮಳೆಯ ರಭಸವನ್ನು ಚಿತ್ರ ಕಲಾವಿದ ಬ್ರಶ್ ಸ್ಟ್ರೋಕ್‌ಗಳಿಂದ ಸಾದೃಶ್ಯವಾಗಿ-ಸೃಜನಾತ್ಮಕವಾಗಿ ವರ್ಣಮೇಳದಲ್ಲಿ ಮೂಡಿಸು ತ್ತಾನೆ. ಪ್ರಕೃತಿಯ ಚೆಲುವನ್ನು ಮತ್ತಷ್ಟು ಗಂಭೀರಗೊಳಿಸಿ ರೂಪಿಸುತ್ತಾನೆ. ಮಳೆಯ ರಭಸಕ್ಕೆ ಕಾಣುವ ಅಸ್ಪಷ್ಟ ನಿಸರ್ಗ ಕಲಾವಿದನ ಕುಂಚದಲ್ಲಿ ಪಾರದರ್ಶಕವಾಗಿ ಕಾಣುತ್ತದೆ. ಆ ದೃಶ್ಯವನ್ನು ಕಾಣುವಾಗ ನಾವೂ ಮಳೆ ಯಲ್ಲಿ ತೋಯ್ತಿದ್ದೇವೋ ಎಂದು ಅನ್ನಿಸುತ್ತದೆ. ಇದನ್ನೆಲ್ಲಾ ಕಾಣುವಾಗ ಶ್ರೀ ವಿಷ್ಣುಧರ್ಮೋತ್ತರ ಪುರಾಣದ ಶ್ಲೋಕವೊಂದು ನೆನಪಾಗುತ್ತದೆ.
ತರಂಗಾಗ್ನಿ - ಶಿಖಾಧೂಮ - ವೈಜಯಂತ್ಯಂಬರಾಧಿಕಂ|
ವಾಯುಗತ್ಯಾ ಲಿಖೇದ್ಯಸ್ತು ವಿಜ್ಞೆàಯಃ ಸ ತು ಚಿತ್ರವಿತ್||
ಅಲೆ, ಬೆಂಕಿ, ಹೊಗೆ, ಮೋಡ, ಬಾವುಟ ಮೊದಲಾದವುಗಳು ಗಾಳಿಯ ಹೊಡೆತಕ್ಕೆ ಸಿಕ್ಕಿದಂತೆ ಚಿತ್ರಿಸಬಲ್ಲವನೇ ದಿಟವಾದ ಚಿತ್ರಕಾರ - ಎಂಬುದಾಗಿ ಶ್ರೀ ವಿಷ್ಣುಧರ್ಮೋತ್ತರದಲ್ಲಿ ಕಲಾವಿದನ ಲಕ್ಷಣಗಳನ್ನು ತಿಳಿಸಿದ್ದಾರೆ. ಆ ರೀತಿ ಚಿತ್ರಿಸಬಲ್ಲ ಕಲಾವಿದರು ನಮ್ಮ ನಡುವೆ ಇಂದಿಗೂ ಇದ್ದಾರೆ. ಅವರು ಚಿತ್ರಿಸಿರುವ ಜೀವನ ಚಿತ್ರಗಳು, ನಿಸರ್ಗದೃಶ್ಯಗಳು ಆಕರ್ಷಕವಾಗಿವೆ. ನಮ್ಮ ಕರಾವಳಿ ತೀರದ ಕಲಾವಿದರು ಕಂಡಷ್ಟು ಮಳೆಯ ಸೊಬಗನ್ನು ಬೇರಾವ ಪ್ರದೇಶದ ಕಲಾವಿದರು ಕಾಣಲಿಕ್ಕಿಲ್ಲ. ಹಾಗಾಗಿ ಇಲ್ಲಿನ ಕಲಾವಿದರ ಅನೇಕ ಕಲಾಕೃತಿಗಳು ಹಚ್ಚಹಸುರಿನ ಭೂದೃಶ್ಯ, ಮಳೆಗಾಲದ ದೃಶ್ಯಗಳಿಂದ ಕೂಡಿರುತ್ತವೆ. ಜಲವರ್ಣದ ಪಾರದರ್ಶಕ ತಂತ್ರದಲ್ಲಿ ಸೊಗಸಾಗಿ ಮೂಡಿರುತ್ತದೆ. ಭೋರ್ಗರೆಯುವ ಕಡಲಲ್ಲಿ ಬಿದ್ದು -ಎದ್ದು ಬರುತ್ತಿರುವ ಮೀನುಗಾರನ ದೋಣಿ, ಬೀಸುವ ಮಳೆಗೆ ತಲೆಯೊಡ್ಡಿ ಬಾಗಿರುವ ತೆಂಗಿನಮರಗಳು, ಬಯಲು ತುಂಬೆಲ್ಲಾ ನಿಂತಿರುವ ನೆರೆ, ಬಾನು-ಬಯಲು ಒಂದಾಗಿಸಿರುವ ಕುಂಭದ್ರೋಣ ಮಳೆ, ಪೇಟೆಯ ಬೀದಿಗಳಲ್ಲಿ ನಿರ್ಜನ ಸಂಚಾರ, ಬೀದಿಯ ರಸ್ತೆ-ಚರಂಡಿಗಳೆಲ್ಲಾ ಒಂದಾಗಿರುವ ನೋಟ, ಬಾಲ ಎತ್ತಿ ಓಡುತ್ತಿರುವ ದನಕರುಗಳು, ದಾರಿಹೋಕನ ಕೊಡೆ ಮೇಲ್ಮುಖ ಎದ್ದಿರುವ ದೃಶ್ಯ... ಇವೆಲ್ಲಾ ನೋಟಗಳು ಕಲಾವಿದನ ಕುಂಚದಲ್ಲಿ ಮನೋಜ್ಞವಾಗಿ ಮೂಡುತ್ತವೆ. ಪೆರ್ಮುದೆ ಮೋಹನ ಕುಮಾರ್ ರಚಿಸಿರುವ ಮಳೆಗಾಲದ ದೃಶ್ಯಗಳು ಅಮೂರ್ತ ನೋಟದಲ್ಲಿ ಅತಿಸುಂದರವಾಗಿವೆ. ಅದೇರೀತಿ ಪ್ರಕೃತಿದೃಶ್ಯ ಚಿತ್ರರಚನೆಯಲ್ಲಿ ಪರಿಶ್ರಮ ಸಾಧಿಸಿರುವ ನಮ್ಮ ಕಲಾವಿದರಾದ ಬಿ. ಗಣೇಶ ಸೋಮಯಾಜಿ, ಕೇರಳದ ಪಿ. ಎಸ್. ಪುಣಿಂಚಿತ್ತಾಯ, ರಮೇಶ್ ರಾವ್, ಕುಂಬ್ಳೆ ಪಾಂಡುರಂಗ ರಾವ್, ಪಿ. ಎನ್. ಆಚಾರ್ಯ, ಶಬ್ಬೀರ್ ಅಲಿ, ಸೈಯ್ಯದ್ ಅಸಿಫ್ ಅಲಿ, ಎ. ಪಿ. ರಾವ್, ವಿಶ್ವಾಸ್ ಎ.ಎಸ್, ಶರತ್ ಹೊಳ್ಳ, ತಾರಾನಾಥ್ ಕೈರಂಗಳ, ಶ್ರೀನಾಥ್ ಮಣಿಪಾಲ, ಶರತ್, ಭೋಜು ಹಾಂಡ, ಡಿ. ಎಲ್. ಆಚಾರ್ಯ, ವಿಶ್ವೇಶ್ವರ ಪರ್ಕಳ, ರಮೇಶ್ ಕಿದಿಯೂರ್, ಶೈಲೇಶ್, ಬಿರಾದಾರ್, ಸುಲೋಚನಾ ವೇಣುಗೋಪಾಲ್, ಲಲಿತಾ ಕಾರ್ಕಳ, ಮನೋರಂಜಿನಿ, ಆಶಾ ಶೆಟ್ಟಿ ಮುಂತಾದವರ ಕಲಾಕೃತಿಗಳು ಸಹಾ ನಮಗೆ ನಿಸರ್ಗದ ಚಿತ್ರ ಕಾವ್ಯವನ್ನು ತೋರಿಸುತ್ತವೆ.