Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸೂಡಾದಲ್ಲಿ ಗಾಢವಾಗಿ ಕಾಡಿದ ತುಳು ಆಟ -ಕಜ್ಜ ಕೊಟ್ಯ
    • ಶ್ರೀ ಸುಬ್ರಹ್ಮಣ್ಯ ಯಕ್ಷಕಲಾಭಾರತಿ, ಸೂಡಾ ಇವರು ಸಂಘಟಿಸಿದ ಕಾರ್ಯಕ್ರಮಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರ ನ

      • ಭಾಸ್ಕರ ರೈ ಕುಕ್ಕುವಳ್ಳಿ | Jul 06, 2012

        ಸುಮಾರು ಆರೇಳು ದಶಕಗಳಿಂದ ತೆಂಕು ತಿಟ್ಟು ಯಕ್ಷರಂಗವನ್ನು ಗಾಢವಾಗಿ ಆವರಿಸಿ ಇದೀಗ ಮರೆಯಾಗುತ್ತಿರುವ ಅಪರೂಪದ ತುಳು ಯಕ್ಷಗಾನ ಪ್ರಸಂಗಗಳನ್ನು ಮರಳಿ ಪ್ರೇಕ್ಷಕರ ಮನದಂಗಳಕ್ಕೆ ಕೊಂಡೊಯ್ಯುವ ಅಪರೂಪದ "ಯಕ್ಷಗಾನ ಕಾರ್ಯಾಗಾರ' ವೊಂದು "ತುಳು ಆಟ - ಕಜ್ಜ ಕೊಟ್ಯ'ವೆಂಬ ಹೆಸರಿನಲ್ಲಿ  ಈಚೆಗೆ ಕಾರ್ಕಳ ತಾಲೂಕಿನ ಸೂಡಾ ಸುಬ್ರಹ್ಮಣ್ಯ ದೇವಾಲಯ ವಠಾರ ದಲ್ಲಿ ಸಂಪನ್ನಗೊಂಡಿತು. ತುಳು ಭಾಷೆಗೆ ತುಳು ಪ್ರಸಂಗಗಳು ಮತ್ತು ತುಳು ಯಕ್ಷಗಾನ ಕಲಾವಿದರು ನೀಡಿದ ಮಹತ್ವದ ಕೊಡುಗೆಯನ್ನು ಪರಿಚಯಿಸುವುದೇ ಈ ಕಾರ್ಯಾಗಾರದ ಮೂಲ ಆಶಯವಾಗಿತ್ತು. ತೆರೆಮರೆಗೆ ಸರಿದ ಸತ್ವಯುತ ತುಳು ಯಕ್ಷಗಾನ ಪ್ರಸಂಗಗಳ ಕೆಲವು ನಿರ್ದಿಷ್ಟ ಪಾತ್ರಗಳಲ್ಲಿ  ದಾಖಲೆಗೈದ ಪ್ರಸಿದ್ಧ ಕಲಾವಿದರಿಂದಲೇ ಅವನ್ನು ಮತ್ತೆ ಮಾಡಿಸಿ ಕಲಾಭಿಮಾನಿಗಳ ಮೈಪುಳಕಗೊಳಿಸಿದ ಅಪೂರ್ವ ಕ್ಷಣಕ್ಕೆ ಇದು ಸಾಕ್ಷಿಯಾಯಿತು. ಶ್ರೀ ಸುಬ್ರಹ್ಮಣ್ಯ ಯಕ್ಷಕಲಾಭಾರತಿ, ಸೂಡಾ ಇವರು ಸಂಘಟಿಸಿದ ಕಾರ್ಯಕ್ರಮಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರ ನೀಡಿತ್ತು.

        ತುಳು ಯಕ್ಷಗಾನ ಸಾಗಿ ಬಂದ ಹಾದಿಯ ಬಗ್ಗೆ  ಬೆಳಕು ಚೆಲ್ಲಲು ಆಯೋಜಿಸಿದ ಗೋಷ್ಠಿಯಲ್ಲಿ ಕೆ. ಅನಂತರಾಮ ಬಂಗಾಡಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಮತ್ತು ಸರಪಾಡಿ ಅಶೋಕ ಶೆಟ್ಟಿ ವಿಭಿನ್ನ ನೆಲೆಯಲ್ಲಿ ಮಂಡಿಸಿದ ವಿಚಾರಧಾರೆ ಏಕಮುಖವಾಗಿದ್ದರೂ, ಈ ಬಗ್ಗೆ ಇನ್ನಷ್ಟು  ಗಂಭೀರ ಚಿಂತನೆ - ಚರ್ಚೆಗಳು ನಡೆಯಬೇಕಾದ ಆವಶ್ಯಕತೆಯನ್ನು ಬೆಟ್ಟು ಮಾಡುವಲ್ಲಿ ಸಫ‌ಲವಾಯ್ತು.

        ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಮೂರು ಬಗೆಯ ಯಕ್ಷಗಾನ ಪ್ರಸಂಗಗಳ ಪ್ರದರ್ಶನ ನಡೆಯಿತು. ಪೌರಾಣಿಕ, ಜಾನಪದ (ಪಾಡªನಾಧಾರಿತ) ಮತ್ತು ಕಾಲ್ಪನಿಕ ಕಥೆಗಳನ್ನಾಧರಿಸಿದ ಈ ತುಳು ಪ್ರಸಂಗಗಳು ಎಲ್ಲೂ ಸೊರಗದೆ, ಒಂದಿಷ್ಟೂ ಎಡವದೆ ಹಿಂದಿನ ಜಾಪು ಮತ್ತು ಛಾಪಿನಲ್ಲಿಯೇ ಮೂಡಿಬಂದವು. ಪ್ರಸಂಗ ಗಳ ಮುಖ್ಯ ಸನ್ನಿವೇಶಗಳನ್ನು ಆಯ್ದು ಒಂದು -ಒಂದೂವರೆ ತಾಸಿನ ಅವಧಿಯಲ್ಲಿ ಕಲಾವಿದರು ಬಲು ಚೆನ್ನಾಗಿ ಪ್ರಸ್ತುತಪಡಿಸಿದರು.

        ಒಂದನೇ ಸುತ್ತಿನ ಕಜ್ಜ ಕೊಟ್ಯದಲ್ಲಿ  ಅದ್ಭುತವಾಗಿ ಮೂಡಿಬಂದ ಪ್ರಸಂಗ "ಮಾನಿಷಾದ'. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಇದೇ ಹೆಸರಿನ ಕನ್ನಡ ಪ್ರಸಂಗದ ಒಂದು ಸನ್ನಿವೇಶವನ್ನು ತುಳುವಿನಲ್ಲಿ  ಅಭಿನಯಿಸಲಾಗಿತ್ತು. ಕೊಳ್ತಿಗೆ ನಾರಾಯಣ ಗೌಡ (ಶತ್ರುಘ್ನ), ಅರುವ ನಾರಾಯಣ ಶೆಟ್ಟಿ (ರಾಮ), ಅಂಬಾಪ್ರಸಾದ್‌ ಪಾತಾಳ (ಸೀತೆ), ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ (ವಾಲ್ಮೀಕಿ), ಪ್ರಜ್ವಲ್‌ ಕುಮಾರ್‌ (ಲವಣಾಸುರ), ವಾಮನ ಕುಮಾರ್‌ ಮತ್ತು ಶಿವಕುಮಾರ (ಲವ - ಕುಶ) ತುಳು ಮಾತುಗಾರಿಕೆಯಲ್ಲಿ ಮಿಂಚಿದರು.

        ನಲ್ವತ್ತು ವರ್ಷಗಳ ಹಿಂದೆ ರಂಗದಲ್ಲಿ  ಮೆರೆದ ತುಳು ಜನಪದ ಜಗತ್ತಿನ
        ವೀರಪ್ರಬಂಧ "ದೇವುಪೂಂಜ ಪ್ರತಾಪ' ಕಾರ್ಯಾಗಾರದ ಎರಡನೇ ಸುತ್ತಿನಲ್ಲಿ ಸುಂದರವಾಗಿ ಮೂಡಿ ಬಂತು. ಸರಪಾಡಿ ಅಶೋಕ ಶೆಟ್ಟಿ (ದುಗ್ಗಣ ಕೊಂಡೆ) ಮತ್ತು ಪೆರ್ಲ ಜಗನ್ನಾಥ ಶೆಟ್ಟಿ (ದೇವುಪೂಂಜ) ಸಮರ್ಥ ಪಾತ್ರ ನಿರ್ವಹಣೆ ಯಿಂದ ಮುದ ನೀಡಿದರು. ಪೋಷಕ ಪಾತ್ರಗಳಲ್ಲಿ ಪ್ರಜ್ವಲ್‌ ಕುಮಾರ್‌, ಹರಿಶ್ಚಂದ್ರ ನಾಯಕ ಮಾಡೂರು ಕಾಣಿಸಿಕೊಂಡರು.

        ಮೂರನೇ ಸುತ್ತಿನಲ್ಲಿ ಪ್ರೇಕ್ಷಕರ ಮನಸೂರೆ ಗೊಂಡ ಪ್ರಸಂಗ "ಗೆಜ್ಜೆ ಪೂಜೆ'. ಪ್ರಸಂಗ ಹೆಣೆದ ಡಿ. ಮನೋಹರ ಕುಮಾರ್‌ ಅವರ "ನಾಗ'ನ ಪಾತ್ರವು ಸುಮಾರು 25 ವರ್ಷಗಳ ಹಿಂದಿನ ಅದ್ಭುತ ಪರಿಣಾಮವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತು. ಯಕ್ಷರಂಗದ ಖ್ಯಾತ ಹಾಸ್ಯನಟ ಸೀತಾರಾಮ ಕುಮಾರ್‌ "ಕಾಳು' ಪಾತ್ರದಲ್ಲಿ ಎಲ್ಲರೂ ಮನಸಾರೆ ನಗುವಂತೆ ಮಾಡಿದರು. ತುಳಸಿಯಾಗಿ ಶಶಿಕಾಂತ ಶೆಟ್ಟಿ ಕಾರ್ಕಳ, ಚಂದ್ರವರ್ಮನಾಗಿ ಗಣೇಶ ಚಂದ್ರಮಂಡಲ, ಕೀರ್ತಿಯಾಗಿ ವಾಮನ ಕುಮಾರ್‌ ತಮ್ಮ ಭಾವಾಭಿನಯಗಳಿಂದ ಗಮನಸೆಳೆದರು. ಈ ಮೂರು ಪ್ರಸಂಗಗಳಿಗೆ ಹಿಮ್ಮೇಳದ ರಸಾನಂದ ನೀಡಿದವರು ರವಿಚಂದ್ರ ಕನ್ನಡಿಕಟ್ಟೆ, ಪದ್ಮನಾಭ ಉಪಾಧ್ಯಾಯ ಉಜಿರೆ ಮತ್ತು ಸುದಾಸ್‌ ಕಾವೂರು.

        ನಲ್ವತ್ತರ ದಶಕದಲ್ಲಿ ತುಳು ಯಕ್ಷಗಾನಕ್ಕೆ ಹೆಬ್ಟಾಗಿಲು ತೆರೆದುಕೊಟ್ಟ ಪ್ರಸಂಗ ಪಂದಬೆಟ್ಟು  ವೆಂಕಟ್ರಾಯರ "ಕೋಟಿ - ಚೆನ್ನಯ'. ಈಗಲೂ ಅದಕ್ಕಿರುವ ಜನಾಕರ್ಷಣೆ ಕಡಿಮೆಯಾಗಿಲ್ಲ. ನಾಲ್ಕನೇ ಸುತ್ತಿನಲ್ಲಿ ಕಜ್ಜಕೊಟ್ಯದ ಆಶಯಕ್ಕೆ ಪುಷ್ಟಿಕೊಟ್ಟ  "ಕೋಟಿ ಚೆನ್ನಯ' ಭಾಷೆಯ ಅಂದ, ಕಥೆಯ ಸೌಂದರ್ಯ ಸಂಭಾಷಣೆಯ ಜೋಡಣೆಗಳಿಂದ ನಿತ್ಯನೂತನವಾಗಿ ಹೊರಹೊಮ್ಮಿತು. ಕೆ. ಎಚ್‌. ದಾಸಪ್ಪ ರೈ ಮತ್ತು ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ  ಯುಗಳ ಪಾತ್ರಗಳಿಗೆ ಜೀವ ತುಂಬಿದರು. ಸಂಜಯಕುಮಾರ್‌ ಶೆಟ್ಟಿ ಗೋಣಿಬೀಡು ಅವರ ಕಿನ್ನಿದಾರು, ಬಡಗಿನ ಐರೋಡಿ ಗೋವಿಂದಪ್ಪರ ಪೆರುಮಳ ಬಲ್ಲಾಳ, ಸುಬ್ರಹ್ಮಣ್ಯ ಬೈಪಡಿತ್ತಾಯರ ರಾಮ ಜೋಯಿಸ ಸೀಮಿತ ಅವಧಿಯಲ್ಲಿ ಕಳೆಗಟ್ಟಿದ ಪಾತ್ರಗಳು. ತೆಂಕಬೈಲು ತಿರುಮಲೇಶ್ವರ ಶಾಸಿŒ, ಮಿಜಾರು ಮೋಹನ ಶೆಟ್ಟಿಗಾರ್‌ ಮತ್ತು ಕುದ್ರೆಕೂಡ್ಲು  ರಾಮಮೂರ್ತಿಯವರ ಚೊಕ್ಕ ಹಿಮ್ಮೇಳ ಪ್ರದರ್ಶನದ ಒಟ್ಟಂದಕ್ಕೆ ಕಾರಣವಾಯ್ತು.

        ಅಂತಿಮ ಸುತ್ತಿನಲ್ಲಿ ಜನಪ್ರಿಯ ಪೌರಾಣಿಕ ಪ್ರಸಂಗ "ದ್ರೌಪದೀ ವಸ್ತ್ರಾಪಹಾರ'ವನ್ನು ತುಳು ಭಾಷೆಯಲ್ಲಿ ದುಡಿಸಿಕೊಂಡದ್ದು ಒಂದು ಸಾರ್ಥಕ ಪ್ರಯೋಗವೆನಿಸಿತು. ಡಾ| ಕೋಳ್ಯೂರು ರಾಮಚಂದ್ರ ರಾಯರ ಅನುಭವೀ ದ್ರೌಪದಿ ತುಳುನಾಡ ಸಿರಿಯಂತೆ ರಂಗದಲ್ಲಿ ಮಿಂಚಿನ ಸಂಚಾರವುಂಟು ಮಾಡಿದುದು ಕಾರ್ಯ ಕ್ರಮದ ಮತ್ತೂಂದು ಅವಿಸ್ಮರಣೀಯ ಕ್ಷಣ. ಅದೇ ಕಂಠ, ಅದೇ ನೋಟ, ಮತ್ತದೇ ಮಾಟ! ತುಳುವಿನ ಅಸ್ಖಲಿತ ವಾಕ್ಸರಣಿ ಅವರ ಎಂದಿನ ದ್ರೌಪದಿಯನ್ನು ಅದೇ ಎತ್ತರದಲ್ಲಿ ಕಟೆದು ನಿಲ್ಲಿಸಿತು. ಕೌರವನಾಗಿ ಜಗದಭಿರಾಮ ಪಡುಬಿದ್ರಿ, ದುಶ್ಯಾಸನನಾಗಿ ಗಣೇಶ ಚಂದ್ರಮಂಡಲ ಪಾತ್ರೋಚಿತ ಗಾಂಭೀರ್ಯ ಮೆರೆದರು. ಕುರಿಯ ಗಣಪತಿ ಶಾಸಿŒಯವರ ಭಾಗವತಿಕೆ ಪ್ರದರ್ಶನಕ್ಕೆ ಪೂರಕವಾಗಿತ್ತು.

        ಕಾರ್ಯಾಗಾರದುದ್ದಕ್ಕೂ ಯಕ್ಷಗಾನದ ಹಿರಿಯ ಕಿರಿಯ ಚಿಂತಕರು "ನೆಂಪುದ ಪೂಮಾಲೆ'ಯನ್ನು ಪೋಣಿಸುತ್ತಾ ಗತಕಾಲದ ತುಳು ಯಕ್ಷಗಾನಗಳ ಚಿತ್ರಣವನ್ನು ಮೆಲುಕು ಹಾಕಿ ದರು. ಕೆ. ಎಲ್‌. ಕುಂಡಂತಾಯ, ವಿಠಲ ಬೇಲಾಡಿ, ಮನೋಹರ ಕುಂದರ್‌, ಜಿನರಾಜ ಸಿ. ಸಾಲ್ಯಾನ್‌, ರಮೇಶ ಶಾಸಿŒ ಕಿಗ್ಗ-ಇವರೆಲ್ಲ  ಈ ನೆನಪಿನ ಹಾರದಲ್ಲಿ ಚೆಂಗುಲಾಬಿಗಳಾಗಿ ತಾವು ಕಂಡುಂಡ ರಸ ನಿಮಿಷಗಳನ್ನು ಪ್ರೇಕ್ಷಕ ರೊಂದಿಗೆ ಹಂಚಿಕೊಂಡರು. ಪ್ರಸಂಗ-ಸನ್ನಿವೇಶ ಗಳ ವಿವರಣೆಯ ಹೊಣೆಯನ್ನು ಸಮುಚಿತ ವಾಗಿ ನಿಭಾಯಿಸಿದ ಸಾರ್ಥಕ ಭಾವ ಈ ಲೇಖಕ ನದು. ಕಜ್ಜ ಕೊಟ್ಯದ ವಿವಿಧ ಮಜಲುಗಳ ಕೊಂಡಿಗಳನ್ನು ಜೋಡಿಸುತ್ತಾ ತುಳು ಯಕ್ಷಗಾನದ ಯಶೋಗಾಥೆಯ ಸಂದೇಶಗಳನ್ನು ಯಥಾಸಾಧ್ಯ ನೀಡಲು ಒದಗಿ ಬಂದ ಸದವಕಾಶ ಇದಾಗಿತ್ತು.

        ತುಳು ಯಕ್ಷಗಾನಕ್ಕೆ ಗಮನಾರ್ಹ ಕೊಡುಗೆ ನೀಡಿದ ವೃತ್ತಿ ಮತ್ತು ಪ್ರವೃತ್ತಿಯ ಪ್ರಸಿದ್ಧ ಕಲಾವಿದ ರಿಗೆ "ತುಳುನಾಡ ಸಿರಿ ಪ್ರಶಸ್ತಿ' ನೀಡಿ ಸಮ್ಮಾನಿಸಿ ರುವುದು ಕಾರ್ಯಕ್ರಮದ ಇನ್ನೊಂದು ಧನಾಂಶ. ದಿನವಿಡೀ ನಡೆದ ತುಳು ಯಕ್ಷಗಾನ ಕಾರ್ಯಾಗಾರವನ್ನು ಅತ್ಯಂತ ಪರಿಶ್ರಮದಿಂದ ಸಂಘಟಿಸಿ, ಅಚ್ಚುಕಟ್ಟಾಗಿ ನಡೆಸಿದ "ಸೂಡಾ ಯಕ್ಷ ಕಲಾ ಭಾರತಿ'ಯ ಸಂಚಾಲಕ, ಭಾಗವತ, ಪ್ರಸಂಗ ಕರ್ತ ಮತ್ತು ಶಿಕ್ಷಕ ಹರೀಶ್‌ ಶೆಟ್ಟಿ ಸೂಡಾ ಮತ್ತು ಸಂಗಡಿಗರು ಅಭಿನಂದನಾರ್ಹರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus