ಪ್ರತಿಭಾ ಎಂ. ಎಲ್. ಸಾಮಗ | Jul 06, 2012
ಕಳೆದ 18-6-2012ರಿಂದ 24-6-2012ರ ವರೆಗೆ ಒಂದು ವಾರ ಕಾಲ ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ಶ್ರೀಪಾದರ ಕೃಪಾಶ್ರಯದ ಮುಂದಾಳುತ್ವದಲ್ಲಿ ತೆಂಕುತಿಟ್ಟಿನ ಅಗ್ರಮಾನ್ಯ ವೇಷಧಾರಿ, ತಾಳಮದ್ದಳೆ ಅರ್ಥಧಾರಿ, ಹರಿದಾಸ, ಕಥಕ್ಕಳಿ, ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯಕಲೆ ಗಳ ಅನುಭವಿ, 63 ವರ್ಷಗಳಷ್ಟು ದೀರ್ಘಾವಧಿ ಯಕ್ಷಲೋಕದಲ್ಲಿ ಸ್ವತ್ಛಂದವಾಗಿ ವಿಹರಿಸಿ, ಮೆರೆದು ಸೈ ಎನಿಸಿಕೊಂಡ ಯಕ್ಷಗಾನ ಗುರು ಸೂರಿಕುಮೇರು ಕೆ. ಗೋವಿಂದ ಭಟ್ಟರ "ಗೋವಿಂದ ವೈಭವ' ಸಪ್ತಾಹವು ನಡೆಯಿತು. ಅತಿ ವಿಜೃಂಭಣೆಯಿಂದ, ಸಾಂಪ್ರದಾಯಿಕ ಚೌಕಟ್ಟಿನ ಇತಿಮಿತಿಯೊಳಗೆ, ದಶಾವತಾರಿ ಕಲಾವಿದನ ಹಲವು ಮುಖಗಳ, ಹಲವು ಆಯಾಮಗಳ ಭರ್ಜರಿ ಪರಿಚಯವನ್ನು ಒತ್ತೂಟ್ಟಾಗಿ ಸಾಕ್ಷಾತ್ಕಾರಗೊಳಿಸುವಲ್ಲಿ "ಗೋವಿಂದ ವೈಭವ' ಸಮಿತಿಯ ಪ್ರಾಮಾಣಿಕ ಪ್ರಯತ್ನವು ಫಲದಾಯಕವಾಯಿತು ಎಂಬುದರಲ್ಲಿ ಸಂಶಯ ವಿಲ್ಲ. ಗೋವಿಂದ ಭಟ್ಟರ ಕಲಾ ಜೀವನ ದರ್ಶನದ ಆಶಯದಲ್ಲಿ ಗೋವಿಂದ ವೈಭವ ಸಮಿತಿ ಹಮ್ಮಿ ಕೊಂಡ ಏಳು ದಿನಗಳ ಈ ಕಾರ್ಯಕ್ರಮವನ್ನು ಜೂ.18ರಂದು ಗೋಧೂಳಿ ಮುಹೂರ್ತದಲ್ಲಿ ಪರ್ಯಾಯ ಸೋದೆ ಪೂಜ್ಯ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನಂದಾದೀಪ ಪ್ರಜ್ವಲಿಸುವ ಮೂಲಕ ವಿಧ್ಯುಕ್ತ ವಾಗಿ ಉದ್ಘಾಟಿಸಿದರು. ವೇದಿಕೆಯ ಮೇಲಿನ ಗಣ್ಯರು, ವಿದ್ವಾಂಸರು ಮತ್ತು ಪ್ರೇಕ್ಷಕರು ಇದಕ್ಕೆ ಸಾಕ್ಷಿಯಾದರು.
ಯಾವುದೇ ಒಂದು ಕಲಾ ಪ್ರಕಾರದಲ್ಲಿ ದೀರ್ಘಕಾಲ ವ್ಯವಸಾಯಿಯಾಗಿ ಹಲವಾರು ಅನುಭವವನ್ನು ತನ್ನದಾಗಿಸಿಕೊಂಡ ಕಲಾವಿದನೊಬ್ಬನ ವ್ಯಕ್ತಿತ್ವ ಹೇಗೆ ಸಂಪೂರ್ಣ ವಿಕಸನ (ಆಲ್ ರೌಂಡ್ ಡೆವಲಪ್‌ಮೆಂಟ್) ಗೊಳ್ಳಬಲ್ಲುದು ಎಂಬುದನ್ನು ಈ "ವೈಭವ ಸಪ್ತಾಹ' ಉಳಿದ ಕಲಾವಿದರಿಗೆ, ಶಿಕ್ಷಣಾರ್ಥಿಗಳಿಗೆ, ಅಭಿಮಾನಿಗಳಿಗೆ ಗೊತ್ತುಪಡಿಸಿತು. ಅಲ್ಲದೆ ಒಬ್ಬ ಕಲಾವಿದ ತನ್ನನ್ನು ತಾನು ಕಲಾಮಾತೆಗೆ ಕಾಯೇನ ವಾಚಾ ಮನಸಾ ಸಮರ್ಪಿಸಿಕೊಂಡು ತನ್ನ ಸಹ ಕಲಾವಿದರ, ತಾನಿರುವ ಮೇಳದ ಯಜಮಾನರ, ತನ್ನ ಅಭಿಮಾನಿಗಳ ಹಾಗೂ ತನ್ನ ಕುಟುಂಬದವರ ಬೆಂಬಲ, ಹರಕೆ, ಒಲವಿನೊಂದಿಗೆ ಅವರ ಭರವಸೆಗಳನ್ನು ಹೇಗೆ ಸಾಕಾರಗೊಳಿಸಬಲ್ಲ, ಎಲ್ಲರೊಂದಿಗೆ ಸಾಮರಸ್ಯದಿಂದ ಬೆರೆತು, ಕಲೆಯನ್ನು "ತನ್ಮಯತೆ'ಯಿಂದ ಹೇಗೆ ಜೀವಿಸಬಲ್ಲ ಎಂಬ ಒಂದು ಉತ್ತಮ ಆದರ್ಶವನ್ನೂ "ಗೋವಿಂದ ವೈಭವ' ತೆರೆದಿಟ್ಟಿತು.
ಗೋವಿಂದ ಭಟ್ಟರ ಬಹುಮುಖ ಪ್ರತಿಭೆಯನ್ನು, ಜೀವನ ದರ್ಶನವನ್ನು, ಸಾಧನೆಯನ್ನು ಅನಾವರಣ ಗೊಳಿಸುವ ಒಂದು ಬೃಹತ್ ಯೋಚನೆ, ಯೋಜನೆ ಯನ್ನು ಹಮ್ಮಿಕೊಂಡ ಈ ಸಮಿತಿಯು ಇದನ್ನು ಗೋವಿಂದ ಭಟ್ಟರ "ಕಲೋಪಾಸನಾ ವೈಭವ', "ನಾಟ್ಯಾಭಿ ನಯ ವೈಭವ', "ಸಾಧನಾ ವೈಭವ', "ಅರ್ಥ ವೈಭವ', "ವೇಷ ವೈಭವ' ಮುಂತಾದ ಶೀರ್ಷಿಕೆಗಳ ಮೂಲಕ ಯೋಜಿಸಿದ್ದು ಒಂದು ನವೀನ ರೀತಿಯ ಚಿಂತನೆ. ಇದು ಓರ್ವ ಕಲಾವಿದನ ಕಲಾಜೀವನದ ಸಂಪೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಿ ಬಹು ಅಂಶಗಳಲ್ಲಿ ಜಯಶೀಲವಾಯಿತು. ಇದು ನೆರೆದ ಎಲ್ಲಾ ಸ್ತರದ ಪ್ರೇಕ್ಷಕರಿಗೆ (ಕಲಾವಿದ, ಚಿಂತಕ, ಅಭಿಮಾನಿ) ಬೌದ್ಧಿಕ, ಮಾನಸಿಕ ರಸದೌತಣವನ್ನು ನೀಡಿತು.
ಈ ಸಪ್ತಾಹದ ಪ್ರಾರಂಭ ದಿನದಿಂದ ಅಂತ್ಯದ ದಿನದ ವರೆಗೆ ನಿತ್ಯವೂ ಸಂಜೆ ಗೋವಿಂದ ಭಟ್ಟರ ವೇಷ ವೈಭವದ ಸರಣಿ ಯಕ್ಷಗಾನ ಬಯಲಾಟ ಪ್ರದರ್ಶನ ಆಯೋಜಿಸಲ್ಪಟ್ಟಿತ್ತು. ಇದರಲ್ಲಿ ಗೋವಿಂದ ಭಟ್ಟರು ಯಕ್ಷಗಾನ ತಿರುಗಾಟದಲ್ಲಿ ನಿರ್ವಹಿಸಿದ ಪಾತ್ರಗಳಲ್ಲಿ ಅವರ ವಿಶಿಷ್ಟ ಛಾಪನ್ನು ಬಿತ್ತಿದ, ಅತಿ ಜನಪ್ರಿಯವಾದ ಕೆಲವು ಪಾತ್ರಗಳನ್ನು ಪ್ರಧಾನವಾಗಿರಿಸಿಕೊಂಡು, ಅವುಗಳನ್ನು ಪೋಷಿಸಿ, ಪುಷ್ಟೀಕರಿಸುವ ಇತರ ಉತ್ತಮ ಹಿಮ್ಮೇಳ-ಮುಮ್ಮೇಳದ ಕಲಾವಿದರುಗಳೊಂದಿಗೆ ಒಗ್ಗೂಡಿಸಿಕೊಂಡು ಉತ್ತಮ ಪ್ರದರ್ಶನಗಳನ್ನು ಸಂಘಟಿಸಿದ ರೀತಿ ಬಹಳ ಔಚಿತ್ಯಪೂರ್ಣವಾಗಿತ್ತು.
ಮುಖ್ಯವಾಗಿ ಭಟ್ಟರ ಮಾಗಧ, ವಾಲಿ, ಇಂದ್ರ, ಹಿಡಿಂಬಾ, ಜಾಂಬವಂತ, ಋತುಪರ್ಣ ಹಾಗೂ ಕೊನೆಯ ದಿನದ ಭೀಷ್ಮ ಹಾಗೂ ಕೌರವ -ಈ ವಿಶಿಷ್ಟ ಪಾತ್ರಗಳು ಪ್ರದರ್ಶನ ಕಂಡವು. ಭಟ್ಟರು 74ರ ಈ ಇಳಿ ವಯಸ್ಸಿನಲ್ಲೂ ವೇಷಭೂಷಣ ಹಾಗೂ ವೇದಿಕೆಯ ತೊಂದರೆಗಳ ಹೊರತಾಗಿಯೂ ಕುಣಿಯುವಲ್ಲಿ ಉತ್ಸಾಹ ದಿಂದ ಕುಣಿದು, ಕುಣಿಯಲು ತುಸು ಸೋತಾಗ ಅದನ್ನು ತನ್ನ ಅಭಿನಯ ಹಾಗೂ ವಾಕ್ಚಾತುರ್ಯದಿಂದ ಕಳೆಗಟ್ಟಿಸಿ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದು ಒಂದು ಅದ್ಭುತವೇ ಆಗಿತ್ತು. ಇದು ಗೋವಿಂದ ಭಟ್ಟರ ರಂಗ ಕ್ರಿಯೆಗಳು, ಸಹಪಾತ್ರಗಳೊಂದಿಗಿನ ಸಂವಹನ, ಹಿಮ್ಮೇಳದವರೊಂದಿಗೆ-ಮುಖ್ಯವಾಗಿ ಭಾಗವತರ ಆಲಾಪನೆ, ಪುನರಾವರ್ತನೆಯ ಸಾಲುಗಳಿಗೆ ಅವರು ತೋರಿದ ರಂಗ ಚಲನೆಗಳು, ಭಾವಾಭಿವ್ಯಕ್ತಿಗಳು ಕಣ್ಣಿಗೆ ಹಬ್ಬವಾಗಿ, ಅವರ ಆಳವಾದ ರಂಗಾನುಭವವನ್ನು ಪ್ರಕಟಿಸಿತು.
ಕೊನೆಯ ದಿನವಂತೂ ಬೆಳಗ್ಗೆ 9.30ರಿಂದ ವಿವಿಧ ಗೋಷ್ಠಿಗಳು, ಪ್ರಾತ್ಯಕ್ಷಿಕೆ, ತಾಳಮದ್ದಳೆ ಹಾಗೂ ಸುಮಾರು ಎರಡು ತಾಸುಗಳ ಕಾಲ ನಡೆದ ಸಮ್ಮಾನಗಳಲ್ಲಿ ಇಡೀ ದಿನ ತೊಡಗಿಸಿಕೊಂಡು ರಾತ್ರಿ 11 ಗಂಟೆಯ ಅನಂತರ ಬೆಳಗ್ಗಿನ ಜಾವ 8.30ರ ವರೆಗೆ ನಡೆದ ಬಯಲಾಟದಲ್ಲಿ ಭೀಷ್ಮ ಹಾಗೂ ಕೌರವ ಪಾತ್ರಗಳನ್ನು ಅತ್ಯುತ್ಸಾಹದಿಂದ ನಿರ್ವಹಿಸಿ ತಾನೊಬ್ಬ ಅಭಿಜಾತ, ಅನುಭವೀ, ಪರಿಪೂರ್ಣ ಕಲಾವಿದನೆಂದು ಸಾಬೀತುಪಡಿಸಿದರು. ಈ ಏಳು ದಿನ ಗಳ ಕಾಲ ಇವರ ಯಕ್ಷಗಾನ ಪ್ರದರ್ಶನದ ವೈವಿಧ್ಯಮಯ ಪಾತ್ರಗಳು ದಿನದಿಂದ ದಿನಕ್ಕೆ ಗರಿಗೆದರಿದ್ದು ಸತ್ಯ.
ಈ ಏಳೂ ದಿನಗಳ ಯಕ್ಷಗಾನ ವೇಷ ವೈಭವಕ್ಕೆ ಸ್ಥಾಯಿಯಾಗಿ ರಂಗ ನಿರ್ದೇಶಿಸಿ, ಗೋವಿಂದ ಭಟ್ಟರ ನಡೆಯನ್ನು ಸರಿಯಾಗಿ ಅರಿತು ಅವರ ಪ್ರತಿಭೆ ಹೊರ ಹೊಮ್ಮುವಂತೆ ತನ್ನ ಭಾಗವತಿಕೆಯಿಂದ ಅನುಕೂಲಿಸಿ ಸಹಕರಿಸಿದವರು ಭಾಗವತ ಪುತ್ತಿಗೆ ರಘುರಾಮ ಹೊಳ್ಳರು. ಅಲ್ಲದೆ ಪ್ರತೀ ಪ್ರದರ್ಶನದಲ್ಲೂ ಈ ವೈಭವಕ್ಕೆ ಪಾತ್ರ ಪೋಷಣೆ ಒದಗಿಸಿ, ಗೋವಿಂದ ಭಟ್ಟರನ್ನು ಪ್ರಕಾಶಿಸು ವಂತೆ ಮಾಡಿ, ಧನ್ಯತೆಯನ್ನು ಅನುಭವಿಸಿದ ಎಲ್ಲಾ ಹಿರಿಯ-ಕಿರಿಯ ಹಿಮ್ಮೇಳ-ಮುಮ್ಮೇಳದ ಕಲಾವಿದರು, ವೇಷ-ಭೂಷಣವನ್ನು ಸಮರ್ಪಕವಾಗಿ ವ್ಯವಸ್ಥೆಗೊಳಿಸಿದ ಶ್ರೀ ಗಣೇಶ ಕಲಾವೃಂದ ಪೈವಳಿಕೆ, ಉತ್ತಮ ಬೆಳಕು -ಧ್ವನಿ ವರ್ಧಕವನ್ನು ಒದಗಿಸಿಕೊಟ್ಟ ಐತಾಳ ಬಳಗದವರು, ಎಲ್ಲಾ ಕಾರ್ಯಕ್ರಮಗಳನ್ನು ವಿಡಿಯೋ ಚಿತ್ರೀಕರಿಸಿದ ಬೆಳ್ವಾಯಿಯ ಕಲಾವಿದ ದೇವಾನಂದ ಭಟ್ಟರು ಈ "ವೈಭವ'ದ ಹೆಚ್ಚಿನ ಪಾಲುದಾರರಾದರು. ಈ ಯಕ್ಷಗಾನ ವೇಷ ವೈಭವದ ದಾಖಲೀಕರಣದ ಧ್ವನಿತಟ್ಟೆಗಳನ್ನು, ಅಗತ್ಯ ಮಾಹಿತಿ, ವಿವರಣೆಗಳೊಂದಿಗೆ (ದಾಖಲೀಕರಣದ ಸಂದರ್ಭ, ಅದರ ಪ್ರಾಮುಖ್ಯ) ದಾಖಲಿಸಿದಾಗ ಅದು ಹಲವು ಕಾಲ ಮುಂದಿನ ಪೀಳಿಗೆಗೆ ಸಂಗ್ರಹ ಯೋಗ್ಯವಾಗಿ ಕಲಿಯಲು ಉಳಿಯಲು ಸಾಧ್ಯವಾದೀತು.