Thursday, June 20, 2013
Last Updated: 4:37:15 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹುಣಸೇ ಮರ ಮತ್ತು ಮುಂಗಾರು ಮಳೆಯ ರಾತ್ರಿ
    • ಆಗುಂಬೆಘಾಟಿಯ ತಪ್ಪಲಲ್ಲಿ
      • Udayavani | Jul 08, 2012

        ಒಂದಿಡೀ ರಾತ್ರಿಯನ್ನು ತುಂಬು ಮಳೆಗಾಲದ ರಾತ್ರಿ, ಆಗುಂಬೆ ಘಾಟಿಯ ಹುಣಿಸೇ ಮರದಡಿ ಕಳೆದ ನಂತರವೂ ನಿಚ್ಚಳವಾಗದ ಬೆಳಗು. ಅವಳು ಮತ್ತು ಅವನು ಯಾಕೆ ಜಗಳವಾಡುತ್ತಾರೆ ಅಂತ ಮಾತಾಡುತ್ತಿದ್ದರೆ ಬಗೆಹರಿಯದ ಪ್ರಶ್ನೆ. ಅವಳು ಹಿಮಾಲಯದ ತಪ್ಪಲಲ್ಲಿ ಬಿರಿದ ಮಲ್ಲಿಗೆಯ ಹಾಗೆ ನಗುತ್ತಾಳೆ ಎಂದು ಮೆಚ್ಚಿಕೊಳ್ಳುತ್ತಾ, ಅವನು ತಗಡಿನ ಮೇಲೆ ಮೊಳೆಯಿಂದ ಗೀರಿದ ಹಾಗೆ ಕಿರುಚುತ್ತಾನೆ ಎಂದು ರೇಜಿಗೆ ಪಡುತ್ತಾ ಇನ್ನೊಂದು ಜನ್ಮವಿಲ್ಲ, ಇನ್ನೊಂದು ದಿನವಿಲ್ಲ ಎಂಬಂತೆ ರಾತ್ರಿಯ ಕಳೆದಾಯಿತು.

        ಯಾರಿಗೂ ಹೇಳದ ಕತೆಯೊಂದು ಹಾಗೇ ಕುಂಟಾಬಿಲ್ಲೆಯಾಡುತ್ತ ಬಳಿಗೆ ಬಂತು. ವಿಷ್ಣುವಿಗೆ ಮಾತ್ರ ಯಾಕೆ ಅವತಾರಗಳು, ನಮಗೆ ಯಾಕಿಲ್ಲ ಅಂತ ಶಿವ ಮತ್ತು ಬ್ರಹ್ಮ, ಆದಿಪರಾಶಕ್ತಿಯ ಹತ್ತಿರ ಜಗಳಕ್ಕೆ ನಿಲ್ಲುತ್ತಾರೆ. ಸƒಷ್ಟಿಕರ್ತನಿಗೂ ವಿಲಯರುದ್ರನಿಗೂ ಅವತಾರ ಬೇಕಿಲ್ಲ. ಅದೇನಿದ್ದರೂ ಸಂಭಾಳಿಸಿಕೊಂಡು ಹೋಗುವವನಿಗೆ ಮಾತ್ರ. ಅವತಾರ ಅಂದರೆ ಕೇವಲ ಬ್ಯಾಲೆನ್ಸಿಂಗ್‌ ಆಕ್ಟ್ ಅಂತ ಪರಾಶಕ್ತಿ ಹೇಳುತ್ತಾಳೆ.
        ಅವರಿಬ್ಬರೂ ಅದಕ್ಕೆ ಒಪ್ಪದೇ ನಮಗೂ ಅವತಾರ ಬೇಕು ಅನ್ನುತ್ತಾಳೆ. ನಾವೂ ಭೂಮಿಯ ಮೇಲೆ ಹುಟ್ಟಬೇಕು ಎನ್ನುತ್ತಾರೆ. ಪರಾಶಕ್ತಿ ಸಿಟ್ಟು ಬಂತು ಅವರಿಬ್ಬರನ್ನೂ ಗಂಡು ಹೆಣ್ಣಾಗಿ ರೂಪಾಂತರ ಮಾಡುತ್ತಾರೆ. ಈಗ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಿ ನೋಡೋಣ ಅನ್ನುತ್ತಾಳೆ. ಗಂಡು ಹೆಣ್ಣಾಗಿ ದಂಪತಿಯರಾದ ತಕ್ಷಣ ಬ್ರಹ್ಮ ಸೃಷ್ಟಿಗೆ ಶಿವ ಅಡ್ಡಿಯಾಗುತ್ತಾನೆ. ನೀನು ಸƒಷ್ಟಿಸಕೂಡದು, ನಾನು ಸಂಹಾರ ಮಾಡಬೇಕಾಗುತ್ತದೆ ಅಂತ ಶಿವ. ನೀನು ಸಂಹರಿಸಕೂಡದು, ನಾನು ಸƒಷ್ಟಿಸುತ್ತೇನೆ ಎಂದು ಬ್ರಹ್ಮ. ಹೀಗೆ ಸƒಷ್ಟಿಯ ಭೀತಿಯಲ್ಲಿ ಶಿವ, ಸಂಹಾರದ ಭಯದಲ್ಲಿ ಬ್ರಹ್ಮ ಪರಸ್ಪರ ಜಗಳವಾಡುತ್ತ ಮೂರು ಮನ್ವಂತರ ಕಳೆಯುತ್ತಾರೆ.

        ಸƒಷ್ಟಿ ಮತ್ತು ಲಯ- ಎರಡೂ ಭಯಾನಕ. ನಾಶ ಮಾಡುವುದಕ್ಕೆಂದೇ ಹುಟ್ಟಿದವನಿಗೆ ಸƒಷ್ಟಿ ಭೀಕರವಾಗಿ ಕಾಣಿಸುತ್ತದೆ. ಸƒಷ್ಟಿಸಿ ಸಂತೋಷ ಪಡುವವನಿಗೆ ಸಂಹಾರ ಅಪರಾಧ ಅನ್ನಿಸುತ್ತದೆ. ಇವೆರಡರ ನಡುವೆ ನಿಂತ ಸ್ಥಿತಿ-ವಂತನಿಗೆ ಎರಡನ್ನು ಸಂಭಾಳಿಸುವುದೇ ಕೆಲಸ.

        ಹೀಗೆ ಯೋಚಿಸುತ್ತಾ ಮಳೆಗಾಲದ ರಾತ್ರಿಯನ್ನು ಕಳೆದದ್ದು ಒಂದು ಹುಣಸೇ ಮರದ ಕೆಳಗೆ ಅನ್ನುವುದು ಬೆಳಗ್ಗೆ ಗೊತ್ತಾಗಿ ನಗು ಬಂತು. ಹುಣಿಸೇ ಮರವೆಂದರೆ ಒಂದು ಕಾಲದಲ್ಲಿ ದೆವ್ವಗಳ ಮನೆ.

        -2-

        ಹುಣಿಸೇ ಮರವನ್ನು ಮೆಚ್ಚದವರು ಯಾರಿದ್ದಾರೆ? ತುಂಬು ಹೆರಳ ಸುಂದರಿಯ ಹಾಗೆ, ಕಂಗೊಳಿಸುವ ಹುಣಿಸೇಮರವೆಂದರೆ ನನಗಂತೂ ಇಷ್ಟ. ಅದೇ ಕಾರಣಕ್ಕೆ ಹುಣಸೂರು ಕೂಡ. ಮೈಸೂರಿನಿಂದ ಮಡಿಕೇರಿಗೆ ಹೋಗುವಾಗೆಲ್ಲ, ದಾರಿಯುದ್ದಕ್ಕೂ ಅವಧೂತರ ಹಾಗೆ ಸ್ವಸ್ಥ ನಿಂತಿರುವ ಹುಣಿಸೇಮರಗಳು ಖುಷಿ ಕೊಡುತ್ತವೆ. ಆ ಮರದ ಹಸುರೇ ಬೇರೆ, ಕತ್ತಲಾದರೆ ಅದರ ನಿಗೂಢವೇ ಬೇರೆ. ಹುಣಿಸೇಮರದ ಕೊಂಬೆಗಳು ಅದೆಷ್ಟು ಗಟ್ಟಿ ಅಂದರೆ ಕೊಂಬೆಯ ತುದಿಗೆ ಹೋದರೂ ಅದು ಬಾಗುತ್ತದೆಯೇ ಹೊರತು ಮುರಿಯುವುದಿಲ್ಲ. ಹಳ್ಳಿಯ ಶಾಲೆಯ ಮೇಷ್ಟ್ರುಗಳಿಗೆ ತುಂಟ ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಹುಣಿಸೆಯ ಬರಲೇ ಪಾಶುಪತಾಸ್ತ್ರ.

        ಹುಣಿಸೆಯ ಮರ ಎಲ್ಲಾ ಹಳ್ಳಿಗಳಲ್ಲೂ ಸಾಮಾನ್ಯ. ಹುಣಿಸೇಹಣ್ಣಿನ ಬೆಲೆ ಎಷ್ಟೇ ಆದರೂ ಹುಣಿಸೇಮರವನ್ನು ನಗದು ಬೆಳೆಯಾಗಿ ಬೆಳೆಸಿದವರನ್ನು ನಾನಂತೂ ನೋಡಿಲ್ಲ. ಹುಣಿಸೇ ತೋಟ ಇಟ್ಟುಕೊಂಡಿದ್ದೇನೆ ಅಂತ. ಯಾವೂರ ರೈತನೂ ಹೇಳಿಕೊಂಡಂತಿಲ್ಲ. ಹುಣಿಸೇಹಣ್ಣಿಗೆ ಬೆಂಬಲ ಬೆಲೆ ಘೋಷಿಸಿ ಅಂತ ಗದ್ದಲವಾದದ್ದೂ ಗೊತ್ತಿಲ್ಲ. ಆದರೆ, ಚಿತ್ರದುರ್ಗದ ಕಡೆಯ ಗೆಳೆಯರು ಅವರೂರಲ್ಲಿ ಬಂಜರು ಭೂಮಿ ಕೊಡು ಹುಣಿಸೇಮರ ಬಾಕಿ, ಹದಿನೈದೋ ಇಪ್ಪತ್ತೋ ವರುಷ, ಫಲಬರುವ ತನಕ ಕಾಯುತ್ತಾರಂತೆ.

        ಹುಣಿಸೇಮರದ ಲಾಭನಷ್ಟದ ಕತೆ ಹೇಗಾದರೂ ಇರಲಿ. ನಿಮಗೆಂದಾದರೂ ಎಲೆಯುದುರಿಸಿಕೊಂಡು ಬೆತ್ತಲೆ ನಿಂತ ಹುಣಿಸೇಮರ ನೋಡಿದ ನೆನಪಿದೆಯಾ? ನಾನಂತೂ ಎಲೆಯುದುರಿದ ಬೋಳು ಹುಣಿಸೇಮರ ನೋಡಿಲ್ಲ. ಹಾಗೇ ಯೌವನದಿಂದ ನಳನಳಿಸುವ ಹುಣಿಸೇಮರವನ್ನು ಕೂಡ. ಸಾಮಾನ್ಯವಾಗಿ ಎಲ್ಲಾ ಹುಣಿಸೇಮರವೂ ನೂರೋ ನೂರೈವತ್ತೋ ವರುಷವಾದಂತೆ ಋಷಿಗಳ ಹಾಗೆ ಕಾಣಿಸುತ್ತದೆ.

        ಹುಣಿಸೇಮರ ಹುಟ್ಟುಹಾಕುವ ಕತೆಗಳಿಗಂತೂ ಲೆಕ್ಕವಿಲ್ಲ. ಅದು ದೆವ್ವಗಳ ಅಡಗುದಾಣ. ಹುಣಿಸೇಮರದಡಿಯಲ್ಲಿ ಮಲಗಿ ಮರಣಹೊಂದಿದವರ ಕತೆಗಳಂತೂ ಪ್ರತಿ ಹಳ್ಳಿಯಲ್ಲೂ ಇವೆ. ಹಳೆಯ ಚಂದಮಾಮಗಳಲ್ಲಂತೂ ಹುಣಿಸೇಮರದ ಜೊತೆ ದೆವ್ವ ಫ್ರೀ. ಬ್ರಹ್ಮರಾಕ್ಷಸನ ಪಾಲಿಗೂ ಹುಣಿಸೇಮರವೇ ಅಂತಃಪುರ. ಆದರೆ, ಹುಣಿಸೇಮರಕ್ಕೆ ನೇಣುಹಾಕಿಕೊಳ್ಳುವವರು ಕಡಿಮೆ. ಅದ್ಯಾಕೋ ಸತ್ತವರ ಪಾಲಿಗೆ ಪ್ರಿಯವಾದಷ್ಟು ಹುಣಿಸೇಮರ ಸಾಯುವವರ ಪಾಲಿಗೆ ಆಪ್ತವಾಗಲಿಲ್ಲ.

        ಹಾಗೇ ಕವಿಗಳಿಗೂ ಕಾವ್ಯಕ್ಕೂ ಹುಣಿಸೇಹಣ್ಣು ರುಚಿಸಿದಂತಿಲ್ಲ. ಮರ ಮುಪ್ಪಾದರೆ ಹುಳಿ ಮುಪ್ಪೇ ಎಂಬ ಗಾದೆಗಷ್ಟೇ ಹುಣಿಸೇಮರ ಸೀಮಿತ. ಹುಣಿಸೇಹಣ್ಣು ಕೂಡ ವ್ಯರ್ಥಪ್ರಯತ್ನವನ್ನೂ ಸೂಚಿಸುವ ನುಡಿಗಟ್ಟನ್ನು ಕೊಟ್ಟಿತು. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ ಅಂತ ಹಿರಿಯರು ಈಗಲೂ ಹೇಳುವುದುಂಟು. ಇನ್ನೊಬ್ಬನ ಅಭಿವೃದ್ಧಿಯನ್ನು ಕಂಡು ಕರುಬುವವನನ್ನು ಹೊಟ್ಟೆಯಲ್ಲಿ ಹುಣಿಸೇಹಣ್ಣು ಕಿವುಚಿದಂತಾಯಿತು ಅನ್ನುತ್ತಾರೆ. ಅಷ್ಟು ಬಿಟ್ಟರೆ, ಬಸುರಿಯ ಬಯಕೆಗೆ ಮಾವಿನಕಾಯೇ ಬೇಕು. ಅದರ ಬದಲು ಅವರೇಕೆ ಹುಣಿಸೇಕಾಯಿ ಬಯಸರು?

        ಕವಿಗಳು ಇಷ್ಟೊಂದು ಚೆಂದದ ಮರವನ್ನು ಬಣ್ಣಿಸದೇ ಬಿಟ್ಟರೇಕೆ ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ಬೇಂದ್ರೆ ಬರೆದ ಹೂತದ ಹುಣಸೀ? ಕವಿತೆಯನ್ನು ನೆನಪಿಸಿದರು ಕಿ. ರಂ ನಾಗರಾಜ್‌. ಕವಿ ಜೀವದ ಬೇಸರ ತಣಿಸೋದಕ್ಕೆ ಬೇರೇನು ಬೇಕು, ಒಂದು ಹೂಬಿಟ್ಟ ಹುಣಿಸೇಮರ ಸಾಕು ಎಂದು ಕೊನೆಯಾಗುವ ಕವಿತೆ ಹುಣಿಸೇಮರದ ಸೊಬಗನ್ನು ವರ್ಣಿಸಿದೆ. ಆ ಕವಿತೆಗಿರುವ ಇನ್ನಿತರ ಅರ್ಥಾಂತರಗಳು ಸದ್ಯಕ್ಕೆ ಬೇಡ.

        -3-

        ಕಾವ್ಯ ವಿಮರ್ಶಕರು ಬೇರೆ ಥರ ಬರೆಯುವುದನ್ನು ಕಲಿಯಬೇಕಿದೆ. ಕವಿತೆಯನ್ನು ನಾವು ವಿಶ್ಲೇಷಿಸುವ ಕ್ರಮದಲ್ಲೇ ತಪ್ಪಿದೆ. ಸಂಸ್ಕŒƒತಿ ವಿಮರ್ಶೆಯ ಹೆಸರಲ್ಲಿ ತಮ್ಮ ತಮ್ಮ ವಾದಗಳನ್ನು ಮಂಡಿಸುವುದಕ್ಕೆ ಕವಿತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕವಿತೆಯನ್ನು ವಿಮರ್ಶೆ ಮಾಡುವುದು ಹಾಗಲ್ಲ. ಕವಿತೆಯ ಕಡೆ ಓದುಗ ಹೊರಳುವಂತೆ ಮಾಡುವುದು ವಿಮರ್ಶೆಯ ಉದ್ದೇಶವಾಗಬೇಕು. ಕಾವ್ಯ ವ್ಯಾಖ್ಯಾನದ ಹೆಸರಿನಲ್ಲಿ ಅಧಿಕಪ್ರಸಂಗತನವೇ ಜಾಸ್ತಿಯಾಗುತ್ತಿದೆ. ಕಾವ್ಯವನ್ನು ಹರಿಕಥೆಯಂತೆ ಬಳಸುವವರು ಹೆಚ್ಚಾಗಿದ್ದಾರೆ ಎಂದು ಹಿಂದೊಮ್ಮೆ ಯು. ಆರ್‌. ಅನಂತಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು.

        ವಿಮರ್ಶೆಯನ್ನು ಓದಿ ಕಾವ್ಯವನ್ನು ಓದುವವರ ಸಂಖ್ಯೆ ಎಷ್ಟಿದೆಯೋ ಗೊತ್ತಿಲ್ಲ. ಹಾಗೇ, ಕವಿತೆಯನ್ನು ಒಂದು ಗಣಿತದ ಸೂತ್ರದಂತೆ ಅಧ್ಯಯನ ಮಾಡುವುದೋ, ಒಗಟೆಂದು ಭಾವಿಸಿ ಬಿಡಿಸಲೆತ್ನಿಸುವುದೋ ಅದೊಂದು ಅರ್ಥವಾಗದ ಕಗ್ಗ ಎಂದು ಬೇರೆಯವರ ಹತ್ತಿರ ಇದಕ್ಕೆ ಅರ್ಥವೇನು ಎಂದು ಕೇಳುವುದೋ ಕವಿತೆಯನ್ನು ಮೆಚ್ಚುವವರು ಮಾಡುವ ಕೆಲಸ ಅಲ್ಲ. ಕಿ. ರಂ. ನಾಗರಾಜ್‌ ಹೇಳುತ್ತಿದ್ದರು: ಈ ಕವಿತೆ ಅರ್ಥವಾಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಅವರು ಉತ್ತರಿಸುತ್ತಾರಂತೆ; ಅರ್ಥವಾದಷ್ಟೇ ಕವಿತೆ. ಅದು ಪೂರ್ತಿ ಅರ್ಥವಾಗಬೇಕು ಎನ್ನುವ ಆತುರ ಯಾಕೆ? ಯಾವತ್ತೋ ಒಂದು ದಿನ ಅರ್ಥವಾಗುತ್ತೆ ಬಿಡಿ. ಅರ್ಥವಾಗದಿದ್ದರೂ ಸರಿಯೇ. ಅರ್ಥವಾಗಲೇಬೇಕು ಅನ್ನುವ ಹಠ ಯಾಕೆ?

        ಅದೇ ಸರಿ. ಅರ್ಥವಾದಷ್ಟೇ ಅರ್ಥ. ಕವಿತೆ ಇನ್ನೊಬ್ಬರ ಹಾಗೆ ಅಂದುಕೊಂಡುಬಿಡೋಣ. ಜೊತೆಗಿದ್ದವರೂ ಅಷ್ಟೇ, ಎಷ್ಟು ಅರ್ಥವಾಗುತ್ತಾರೋ ಅಷ್ಟೇ.

        ಉದಾಹರಣೆಗೆ ಬೆ„ರನ್ನಿನ ವೆನ್‌ ವಿ ಟು ಪಾರ್ಟೆಡ್‌ ಕವಿತೆಯನ್ನೇ ನೋಡಿ:

        WHEN we two parted

        In silence and tears,

        Half broken-hearted,

        To sever for years

        ...ಹೀಗೆ ಶುರುವಾಗುವ ಕವಿತೆಯ ಆರಂಭದಲ್ಲೇ ವಿದಾಯದ ಸೂಚನೆಯೂ ಇದೆ. ಅದು ಎಂಥಾ ವಿದಾಯ. ಆ ಹುಡುಗಿ ಮೋಸ ಮಾಡಿ ಹೋದಳಾ, ಸತ್ತೇ ಹೋದಳಾ ಅನ್ನುವುದು ಅವರವರ ಭಾವಕ್ಕೆ ತಕ್ಕಂತೆ. ಇದನ್ನು ಓದಿದ ಅಸಂಖ್ಯಾತ ಓದುಗರ ಪ್ರತಿಕ್ರಿಯೆ ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ.

        In secret we met:

        In silence I grieve

        That thy heart could forget,

        Thy spirit deceive.

        If I should meet thee

        After long years,

        How should I greet thee?

        ರಹಸ್ಯವಾಗಿ ಸಂಧಿಸಿದೆವು, ಮೌನದಲ್ಲಿ ಸ್ಪಂದಿಸಿದೆವು. ಮರೆಯಬಹುದು ನಿನ್ನ ಮನ, ನಲುಗಬಹುದು ನಿನ್ನ ಚೇತನ. ನಿನ್ನನ್ನು ಮತ್ತೆಂದೋ ಎಷ್ಟೋ ವರ್ಷಗಳ ನಂತರ ಕಂಡಾಗ ಹೇಗೆ ಎದುರುಗೊಳ್ಳಲಿ ಹೇಳು? ಕಂಬನಿ ಮತ್ತು ಮೌನದೊಂದಿಗೆ?

        ಆ ರಹಸ್ಯ ಪ್ರಣಯವನ್ನು ಮೌನದುಂಬಿದ ಕಂಬನಿಯೊಂದಿಗೆ, ಕಂಬನಿದುಂಬಿದ ಮೌನದೊಂದಿಗೆ ಎದುರಾಗುವ ತನ್ನ ಅವಸ್ಥೆಯನ್ನು ಹೇಳಿಕೊಳ್ಳುತ್ತಿದ್ದಾನೆ ಕವಿ. ಅದೇಕೆ ರಹಸ್ಯ ಪ್ರೇಮ? ಅವಳೂ ಅವನನ್ನು ಪ್ರೀತಿಸಿದ್ದಳೆ? ಅದು ಅವನ ಪ್ರೀತಿ ಮಾತ್ರವೇ? ಅವಳು ಅವನನ್ನು ವಂಚಿಸಿದಳೆ? ಅಥವಾ ಅಕಾಲ ಮರಣಕ್ಕೆ ತುತ್ತಾದಳೇ? ಹೇಳಿಕೊಳ್ಳಲಾಗದ ಪ್ರೀತಿ ಒಳಗೆ ಬಚ್ಚಿಟ್ಟುಕೊಂಡೇ ಬಳಲಿತೇ?

        ಈ ಪ್ರಶ್ನೆಗಳಿಗೆಲ್ಲ ಅವರವರೇ ಉತ್ತರ ಕಂಡುಕೊಳ್ಳಬೇಕು. ಅದು ಅವರವರ ಸತ್ಯ. ಆ ಕ್ಷಣದ ಸತ್ಯ. ಬೇರೊಬ್ಬರು ಎಷ್ಟೇ ಸಮರ್ಥವಾಗಿ ಅದನ್ನು ಸಮರ್ಥಿಸಿಕೊಂಡರೂ, ನಮಗೆಷ್ಟು ಅರ್ಥವಾಗುತ್ತದೋ ಅಷ್ಟೇ ಅರ್ಥ.

        ಅದನ್ನೇ ಇನ್ನೊಂದು ಕವಿತೆಯ ಮೂಲಕ ನೋಡೋಣ:

        ನಡೆದ ದಾರಿಯ ತಿರುಗಿ ನೋಡಬಾರದು ಏಕೆ

        ನೋಡಿದರೆ ಆ ಹೂವೆ ನಲುಗಬಹುದು

        ಮುಂದೆ ನಡೆವಾಗಲೂ ಮಾತಾಡದಿರಬೇಕೆ?

        ಹೌದು. ತುಂಬಿದ ಮನವ ತುಳುಕಲಿ ಬಿಡು

        ಸೋತಮಾತಿನ ನೂರು ಹಸೆಗೆ ದೀಪವನಿರಿಸು

        ಮಾತಿನಷ್ಟೇ ಮೌನ ಸಫಲವೆನಿಸು

        ಕಳೆದಿರುಳ ಆಚೆತುದಿಯಿಂದ ನಗೆಯನು ತರಿಸು

        ಮೊದಲ ಕನಸಿಗೆ ಮತ್ತೆ ಹೇಳಿಕಳಿಸು.

        ಮೊದಲ ಸಾಲನ್ನು ಕವಿ ಬರೆಯುವ ಹೊತ್ತಿಗೆ ಅವನ ಮನಸ್ಸಲ್ಲಿ ಏನಿತ್ತು ಅನ್ನುವುದು ಯಾರಿಗೂ ಗೊತ್ತಿರುವುದಕ್ಕೆ ಸಾಧ್ಯವಿಲ್ಲ. ಹಾಗೆ ನೋಡಿದರೆ ಯಾವ ಕವಿಯ ಮೂಲಭಾವವೂ ನಮಗೆ ಅರ್ಥವಾಗುವುದಿಲ್ಲ. ಕವಿತೆ ಬರೆಯುವ ಹೊತ್ತಿಗೆ ಉತ್ಕಟ ಭಾವಾಭಿವ್ಯಕ್ತಿಯಲ್ಲಿ ಹುಟ್ಟುತ್ತದೆ ಅನ್ನುವುದಾದರೆ, ಅದನ್ನು ಓದುವ ಹೊತ್ತಿಗಿನ ನಮ್ಮ ಭಾವಪರಿಸರ ಅದೇ ಆಗಿರಬೇಕು ಅಂತೇನಿಲ್ಲ.
        ಒಂದು ಮನಸ್ಥಿತಿಯಲ್ಲಿ ಹರಳುಗಟ್ಟಿದ ಚಿಂತನೆಯನ್ನು ಮತ್ತೂಂದು ಮನಸ್ಥಿತಿಯಲ್ಲಿ ನಮ್ಮೊಳಗೆ ಆವಾಹಿಸಿಕೊಳ್ಳುತ್ತೇವೆ ಅನ್ನುವುದೇ ವಿಶೇಷ. ನಾವಿರುವ ಸ್ಥಿತಿಯಲ್ಲಿ ನಾವು ಕಾವ್ಯವನ್ನು ಸವಿಯುತ್ತೇವಾ ಅಥವಾ ಕವಿಯ ಮನಸ್ಥಿತಿಗೆ ನಾವು ತಲುಪುತ್ತೇವಾ ಅನ್ನುವುದು ಮತ್ತೂಂದು ಪ್ರಶ್ನೆ. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿವುದು ಎಂದು ಕುವೆಂಪು ಹಾಡಿದ್ದನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೆ ಹೊಳೆಯುವುದೇ ಬೇರೆ. ಕಲಿಯುಗವನ್ನು ದ್ವಾಪರವಾಗಿಸುವ ಶಕ್ತಿ ಕವಿತೆಯಲ್ಲಿ ಇರಬೇಕಾಗುತ್ತದೆ. ಅದರ ಬದಲು ನಮ್ಮ ಕಲಿಯುಗವನ್ನು ಬೆನ್ನಿಗೆ ಕಟ್ಟಿಕೊಂಡು ನಾವು ಕವಿಯ ದ್ವಾಪರದೊಳಗೆ ಪ್ರವೇಶಿಸಲು ಯತ್ನಿಸಿದರೆ?

        ಮಾತಿನಷ್ಟೇ ಮೌನ ಸಫಲವೆನಿಸು ಎನ್ನುವ ಕವಿ ಮತ್ತೂಂದು ಮಾತನ್ನೂ ಹೇಳುತ್ತಾನೆ. ಕಳೆದಿರುಳ ಆಚೆ ತುದಿಯಿಂದ ನಗೆಯನು ತರಿಸು. ಅಂದರೆ ಹಿಂದಿನ ದಿನ ಅವಳ ಮುಖದಲ್ಲಿ ನಗುವಿತ್ತು. ಅದನ್ನು ವಾಪಸ್ಸು ತರಿಸು ಅನ್ನುತ್ತಿದ್ದಾನೆ ಕವಿ. ಹಾಗೇ, ಮೊದಲ ದಿನ ಕಂಡ ಆಪ್ಯಯಾಮಾನ ಕನಸಿನ ಬಗ್ಗೆ ಅವಳು ಅವನಿಗೆಂದೋ ಹೇಳಿಕೊಂಡಿರಬೇಕು. ಆ ಮೊದಲ ಕನಸಿಗೆ ಮತ್ತೆ ಹೇಳಿಕಳಿಸು ಅನ್ನುವ ವಿನಂತಿಯೂ ಅವನ ದನಿಯಲ್ಲಿದೆ. ಓದುಗರಾದ ನಾವೂ ಹಾಗೇ, ಕವಿ ಬರೆದಿರುಳ ಆಚೆತುದಿಯಿಂದ ಕವಿಭಾವವನ್ನು ತರಿಸುವ ಹಾಗಿದ್ದರೆ?


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus