ಲಕ್ಷ್ಮೀ ಮಚ್ಚಿನ | Jul 09, 2012
1.5 ಲಕ್ಷ ಚದರ ಎಕರೆ ಅರಣ್ಯ ಹುಲಿ ಸಂರಕ್ಷಣೆಗೆ ಮೀಸಲು.
ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶವನ್ನು ಹುಲಿ ಸಂರಕ್ಷಣಾ ಪ್ರದೇಶ ಮಾಡಲು ಹೊರಟ ಕೇಂದ್ರ ಸರಕಾರದ ನಿಲುವಿಗೆ ಪರ - ವಿರೋಧ ಅಭಿಪ್ರಾಯ ಕೇಳಿ ಬರುತ್ತಿದೆ.
ಕೇಂದ್ರ ಸರಕಾರ ಸಲಹೆ ಮಾತ್ರ ನೀಡಿದ್ದು ರಾಜ್ಯ ಸರಕಾರದ ಅನುಮತಿ ವಿನಹಾ ಇದರ ಅನುಷ್ಠಾನ ಅಸಾಧ್ಯ ಎಂಬುದು ಪ್ರಾಥಮಿಕ ಸತ್ಯ. ಆದರೆ ಈ ಭಾಗದ ಜನರಂತೂ ಮತ್ತೆ ಒಕ್ಕಲೆಬ್ಬಿಸುವಿಕೆ ಗುಮ್ಮಕ್ಕೆ ಹೆದರುತ್ತಿದ್ದಾರೆ. ರಾ. ಉದ್ಯಾನ ಘೋಷಣೆಯಾದಾಗ ನಕ್ಸಲ್ ಚಟುವಟಿಕೆ ಆರಂಭವಾಯಿತು. ಇದು ಇನ್ನೆಂತ ಅನಾಹುತಕ್ಕೆ ನಾಂದಿಯಾಗುವುದೋ ಕಾದು ನೋಡಬೇಕು.
ಹುಲಿ ಸಂರಕ್ಷಣೆ
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು ಈ ಕುರಿತು ಆಸಕ್ತಿ ತೋರಿದ್ದರು. ಹುಲಿ ಸಂತಾನ ವೃದ್ಧಿ ದೃಷ್ಟಿಯಿಂದ ಸಮೃದ್ಧವಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವು ಮಲಾ°ಡ್ - ಮೈಸೂರು, ಕುದುರೆಮುಖ - ಭದ್ರಾ ಹುಲಿ ವಲಯಗಳ ನಡುವಿದ್ದು ಮಹಾರಾಷ್ಟ್ರದ ಭೀಮಶಂಕರ್ ವರೆಗೆ ವ್ಯಾಪಿಸಿದೆ. ಈ ಪ್ರದೇಶ ಹುಲಿ ಸಂತಾನ ವೃದ್ಧಿಗೆ ಪೂರಕವಾಗಿದೆ ಎಂಬ ಅಂಶ ಹಲವು ಅಧ್ಯಯನಗಳಿಂದ ಕಂಡುಬಂದಿದೆ ಎಂದು ರಮೇಶ್ ಹೇಳಿದ್ದರು. ಈಚೆಗೆ ಧರ್ಮಸ್ಥಳಕ್ಕೆ ಬಂದಿದ್ದಾಗ ಮಾಧ್ಯಮದವರ ಜತೆ ಈ ಪ್ರಸ್ತಾವವನ್ನು ಪುನಃ ಮೆಲುಕು ಹಾಕಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಬಳಿ ಮಾತುಕತೆ ನಡೆಸಿದ್ದರು.
ಸಾವಿರಾರು ಕುಟುಂಬಗಳು ಬೀದಿಪಾಲು
ಈ ಯೋಜನೆಯಿಂದ 40,000 ಕುಟಂಬಗಳು ಬೀದಿಪಾಲಾಗುತ್ತವೆ ಎನ್ನುತ್ತಾರೆ ಹೋರಾಟಗಾರರು. ಈಗಾಗಲೇ ಚಿಕ್ಕಮಗಳೂರು, ಕಾರ್ಕಳ ಮೊದಲಾದೆಡೆ ಹೋರಾಟ ಆರಂಭವಾಗಿದೆ. ಈಗಾಗಲೇ ರಾಷ್ಟ್ರೀಯ ಉದ್ಯಾನವನ ಘೋಷಣೆಯಿಂದ ಇಲ್ಲಿನ ಕುಟುಂಬಗಳು ನಕ್ಸಲ್ ಚಟುವಟಿಕೆಗೆ ಕಾರಣವಾಗಿ ನೆಮ್ಮದಿ ಕಳಕೊಂಡಿವೆ. ಇನ್ನು ಹುಲಿ ಸಂರಕ್ಷಣೆ ಎಂದು ಗುಮ್ಮ ಬಿಟ್ಟರೆ ಮತ್ತೂಂದು ಗೆರಿಲ್ಲಾ ಯುದ್ಧಕ್ಕೆ ಅಣಿಯಾಗಬೇಕಾದೀತು ಎಂಬ ಆತಂಕವಿದೆ ಸ್ಥಳೀಯರಿಗೆ. ಕೇಂದ್ರ ಸಚಿವರು ಇಲ್ಲಿ 1,400 ಕುಟುಂಬಗಳಿದ್ದು ಈ ಪೈಕಿ ಈಗಾಗಲೇ 600 ಕುಟುಂಬಗಳು ಕಾಡು ಬಿಟ್ಟು ನಾಡಿಗೆ ಬರಲು ಅರ್ಜಿ ಗುಜರಾಯಿಸಿದ್ದಾರೆ ಎನ್ನುತ್ತಾರೆ. ಆದರೆ ಕಾಡೊಳಗಿರುವ ಮಂದಿ ಈ ಅಂಕಿ ಅಂಶವನ್ನು ನಿರಾಕರಿಸುತ್ತಾರೆ. ಈಗಾಗಲೇ ಸರಕಾರದ ಪರಿಹಾರಧನದಲ್ಲಿ ಯಾರ್ಯಾರೋ ಉಂಡು ದುಂಡಗಾಗಿದ್ದಾರೆ. ಈಗ ಮತ್ತೆ ಅಂತಹ ಅವಕಾಶವನ್ನು ಸರಕಾರವೇ ಕರೆದು ಕೊಡುವಂತಾಗಿದೆ.
ಕುದುರೆಮುಖ
ವಿಶ್ವ ಪಾರಂಪರಿಕ ಪಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಅರಣ್ಯ ಪ್ರದೇಶ ಸೇರಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದು ವ್ಯಾಪಿಸಿದೆ. ಜಗತ್ತಿನ 18 ಜೀವ ವೈವಿಧ್ಯ ಸೂಕ್ಷ್ಮ ತಾಣಗಳಲ್ಲಿ ಒಂದು ಈ ಪ್ರದೇಶದಲ್ಲಿ ಅಪರೂಪದ ಸಸ್ಯ ಹಾಗೂ ಪ್ರಾಣಿ ವೈವಿಧ್ಯವಿದೆ. ಶೋಲಾ ಕಾಡುಗಳಲ್ಲಿ ಇರುವ ಪಕ್ಷಿ ಸಂಕುಲವೂ ಅಪರೂಪದ್ದು. ಮುಸಿಯ ಇಲ್ಲಿನ ವಿಶಿಷ್ಟ ಪ್ರಾಣಿ. ಕಾಟಿ, ಕಾಳಿಂಗ ಸರ್ಪ, ಚಿರತೆ, ನಾನಾ ಜಾತಿಯ ಹಾವುಗಳು, ಹುಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿವೆ. ಕುದುರೆಮುಖದಲ್ಲೇ ತುಂಗಾ, ಭದ್ರಾ ಮತ್ತು ನೇತ್ರಾವದಿ ನದಿಗಳು ಉಗಮವಾಗುತ್ತವೆ. ಕುದುರೆಮುಖ ವಿಸ್ತೀರ್ಣ 1.50 ಲಕ್ಷ ಎಕರೆ.
ಹುಲಿ ಬಿಟ್ಟರೆ ಜನ ನಿಂದಾರೇ?
ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಬಲವಂತದ ಒಕ್ಕಲೆಬ್ಬಿಸುವಿಕೆ ಇಲ್ಲ ಎಂದು ಹೇಳಲಾಗುತ್ತಿದೆ. ಅನಂತರ ಯಾರಾದರೂ ವನ್ಯಪ್ರೇಮಿಗಳು, ಸಂಘಟನೆಯವರು ಸುಪೀÅಂ ಕೋರ್ಟ್ ಮೊರೆಹೋದರೆ ನ್ಯಾಯಾಲಯದಿಂದ ಯಾವ ರೀತಿಯ ಆದೇಶವೂ ಬರಬಹುದು. ಒಕ್ಕಲೆಬ್ಬಿಸುವುದಿಲ್ಲ ಆದರೆ ಹುಲಿ ಬಿಡುತ್ತೇವೆ ಎಂದು ಹೇಳಿದರೆ ಅಲ್ಲಿ ವಾಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡುತ್ತದೆ. ರಾ. ಉದ್ಯಾನ ಘೋಷಣೆಯಿಂದ ಹೊರ ಹೋಗದ ಕುಟುಂಬಗಳನ್ನು ಈ ಮೂಲಕವಾದರೂ ಹೊರ ಹಾಕಬೇಕೆಂಬ ಸಂಕಲ್ಪ ಸ್ಥಾಪಿತ ಹಿತಾಸಕ್ತಿಗಳಿಗೆ ಇದ್ದಂತಿದೆ. ಈಗಿನ ಲೆಕ್ಕಾಚಾರದಂತೆ ಈ ಭಾಗದಲ್ಲಿ ಇರುವ ಹುಲಿಗಳ ಸಂಖ್ಯೆ 3. ಬೆಳ್ತಂಗಡಿ, ಕಾರ್ಕಳ ತಾಲೂಕಿನ ರಾ. ಉದ್ಯಾನ ವ್ಯಾಪ್ತಿಯಲ್ಲಿ 1 ಹುಲಿ ಇದೆ ಎಂದು ಈಚೆಗೆ ನಡೆದ ಹುಲಿ ಗಣತಿಯಿಂದ ತಿಳಿದುಬಂದಿದೆ. ಹುಲಿ ಸಂಖ್ಯೆ ಹೆಚ್ಚಳಕ್ಕೆ ಆಮೇಲೆ ಕ್ರಮ ಕೈಗೊಳ್ಳಬೇಕಿದೆ. ಈಗ ಇರುವ 3 ಹುಲಿಗಳಿಗಾಗಿ ಇಷ್ಟು ಕುಟುಂಬಗಳ ಒಕ್ಕಲೆಬ್ಬಿಸುವಿಕೆ ಅನಿವಾರ್ಯವಾ ಎಂಬ ಪ್ರಶ್ನೆ ಹೋರಾಟಗಾರರದ್ದು. ಏನೇ ಇದ್ದರೂ ಅಂತಿಮ ತೀರ್ಮಾನ ರಾಜ್ಯ ಸರಕಾರದ್ದು. ನಕ್ಸಲರ ಸಮಸ್ಯೆ ಬಿಡಿ ಪಕ್ಷದ ಸಮಸ್ಯೆ ಬಗೆ ಹರಿಸುವುದೇ ಸರಕಾರಕ್ಕೆ ಸವಾಲಾಗಿರುವಾಗ ಇಂತಹ ಜನರ ಸಮಸ್ಯೆಗೆ ಸಮಯ ದೊರೆತೀತೇ ಎಂಬ ಅನುಮಾನ ಕಾಡ ಮಂದಿಯದ್ದು.
ಕರ್ನಾಟಕದಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 40 ಗ್ರಾಮಗಳು ಸೇರಿದಂತೆ ಸುಮಾರು 160 ಕಿ.ಮೀ. ವ್ಯಾಪ್ತಿಯನ್ನು ಪಶ್ಚಿಮ ಘಟ್ಟ ಪ್ರದೇಶ ವ್ಯಾಪಿಸಿದೆ. ಉಡುಪಿ ಜಿಲ್ಲೆಯ ಕೊಲ್ಲೂರಿನಿಂದ ಹಿಡಿದು ಜಡ್ಕಲ್, ಮಧೂರು, ಹಳ್ಳಿಹೊಳೆ, ಹೊಸಂಗಡಿ, ಶಂಕರನಾರಾಯಣ, ಅಮಾಸೆಬೆ„ಲು, ಮಡಾಮಕ್ಕಿ, ಹೆಬ್ರಿ, ಸೋಮೇಶ್ವರ, ಆಗುಂಬೆಯ ಅರ್ಧ ಪ್ರದೇಶ ಸೇರಿದಂತೆ ಒಂಬತ್ತು ಗ್ರಾಮಗಳ 70 ಕಿ.ಮೀ. ಪ್ರದೇಶದಲ್ಲಿ ವ್ಯಾಪಿಸಿದೆ.
ಸರಕಾರಿ ಲೆಕ್ಕದಲ್ಲಿ ಸಂರಕ್ಷಿತ ಕಾಡು
ಮಂಗಳೂರು ವೃತ್ತದ ಕಾರ್ಕಳ ವಿಭಾಗದ 600.32 ಚ.ಕಿ.ಮೀ.ನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, 88.40 ಚ.ಕಿ.ಮೀ. ಸೋಮೇಶ್ವರ ವನ್ಯಜೀವಿ ಸಂರಕ್ಷಿತ ಪ್ರದೇಶ, 247 ಚ.ಕಿ.ಮೀ. ಮೂಕಾಂಬಿಕಾ ವನ್ಯಜೀವಿ ಸಂರಕ್ಷಿತ ಪ್ರದೇಶ. ಉತ್ತರ ಕನ್ನಡ ವೃತ್ತದ 475.02 ಚ.ಕಿ.ಮೀ ದಾಂಡೇಲಿ ಅಭಯಾರಣ್ಯ, 339.866 ಅಣಶಿ ವನ್ಯಜೀವಿ ಸಂರಕ್ಷಿತ ಪ್ರದೇಶ, ಶಿವಮೊಗ್ಗ ವಲಯದ 395.60 ಚ.ಕೀ.ಮೀ. ಶೆಟ್ಟಿಹಳ್ಳಿ ವನ್ಯಜೀವಿ ಸಂರಕ್ಷಿತ ಪ್ರದೇಶ, 431.23 ಚ.ಕಿ.ಮೀ. ಶರಾವತಿ ವನ್ಯಜೀವಿ ಸಂರಕ್ಷಿತ ಪ್ರದೇಶ, 0.73 ಚ.ಕಿ.ಮೀ. ಗುಡವಿ ಪಕ್ಷಿಧಾಮವಿದೆ.