Monday, May 20, 2013
Last Updated: 5:29:07 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೇಂದ್ರ ಸಚಿವ ಹೇಳಿದ ಸತ್ಯ
    • ಕಾಂಗ್ರೆಸ್‌ನ ಸ್ಥಿತಿಗೆ ಸಲ್ಮಾನ್‌ ಖುರ್ಷೀದ್‌ ಕನ್ನಡಿ
      • Udayavani | Jul 12, 2012

        ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷದೊಳಗೆ ನಂ.2 ನಾಯಕರೇನೋ ಹೌದು. ಅದು ಭಟ್ಟಂಗಿಗಳು ನೀಡಿದ ಸ್ಥಾನ. ಅದನ್ನು ಬಿಟ್ಟರೆ ತಮ್ಮ ನಾಯಕತ್ವದ ಸ್ಯಾಂಪಲ್‌ ಹೀಗಿರುತ್ತದೆ ಎಂಬುದನ್ನು ತೋರಿಸುವುದಕ್ಕೂ ಅವರು ಹೊಸತೇನನ್ನೂ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಸಲ್ಮಾನ್‌ ಖುರ್ಷೀದ್‌ ಹೇಳಿದ್ದು ಸರಿಯಾಗಿಯೇ ಇದೆ.

        ಕೇಂದ್ರ ಸಚಿವ ಸಲ್ಮಾನ್‌ ಖುರ್ಷೀದ್‌ ವಾಚಾಳಿಯಲ್ಲದಿದ್ದರೂ ರಾಜಕೀಯ ವಲಯದಲ್ಲಿ ಇದ್ದುದನ್ನು ಇದ್ದಹಾಗೇ ಹೇಳಿಬಿಡುವ ನಾಯಕನೆಂದು ಪ್ರಸಿದ್ಧರು. ಸಾಮಾನ್ಯವಾಗಿ ರಾಜಕಾರಣಿಗಳು ಪತ್ರಿಕಾ ವರದಿಗಾರರ ಬಳಿ ಬಹಳ ಸಂಗತಿಗಳನ್ನು ಆಫ್ ದಿ ರೆಕಾರ್ಡ್‌ ಹಂಚಿಕೊಳ್ಳುತ್ತಾರೆ. ಅದರಲ್ಲಿ ತಮ್ಮ ಪಕ್ಷದೊಳಗಿನ ಹುಳುಕುಗಳು, ತಮ್ಮ ನಾಯಕರ ದೌರ್ಬಲ್ಯಗಳು, ತಮ್ಮ ಸರ್ಕಾರದ ಒಳಗುಟ್ಟುಗಳೂ ಸೇರಿರುತ್ತವೆ. ಆದರೆ, ಕಾನೂನು ಸಚಿವರಾಗಿದ್ದುಕೊಂಡು, ಎಲ್ಲಿ ಹೇಗೆ ಮಾತನಾಡಬೇಕೆಂಬುದನ್ನು ಚೆನ್ನಾಗಿ ಬಲ್ಲ ಖುರ್ಷೀದ್‌ ಇಂತಹ ಆಫ್ ದಿ ರೆಕಾರ್ಡ್‌ ವಿಷಯಗಳನ್ನು ಮುಕ್ತವಾಗಿ ಮಾತನಾಡಿರುವುದು ಮಾಧ್ಯಮಗಳ ದೃಷ್ಟಿಯಲ್ಲಿ ವಿವಾದವೆಂಬಂತೆ ಬಿಂಬಿಸಿಕೊಂಡರೂ ಅದು ಸದ್ಯದ ವಾಸ್ತವ ಎಂದೇ ಹೇಳಬೇಕಾಗುತ್ತದೆ.

        ಪತ್ರಿಕೆಯೊಂದರ ಬಳಿ ಸಲ್ಮಾನ್‌ ಮಾತನಾಡಿರುವುದರಲ್ಲಿ 3 ಪ್ರಮುಖ ಸಂಗತಿಗಳಿವೆ. ಮೊದಲನೆಯದು, ಕಾಂಗ್ರೆಸ್‌ ಪಕ್ಷ ಗೊತ್ತು ಗುರಿಯಿಲ್ಲದೆ ಸಾಗುತ್ತಿದೆ. ಎರಡನೆಯದು, ನಾಯಕತ್ವ ವಹಿಸಬೇಕಾದ ರಾಹುಲ್‌ ಗಾಂಧಿ ಕಿರುಪಾತ್ರಧಾರಿಯಂತೆ ಆಗಾಗ ಕಾಣಿಸಿ ಕೊಂಡು ಕಣ್ಮರೆಯಾಗುತ್ತಾರೆ. ಮೂರನೆ ಯದು, 1990ರ ದಶಕದ ಆರ್ಥಿಕ ಸುಧಾರಣಾ ನೀತಿಗಳನ್ನೇ ಇಟ್ಟುಕೊಂಡು ಪ್ರಧಾನಿ ಸಿಂಗ್‌ ತೌಡು ಕುಟ್ಟುತ್ತಿದ್ದಾರೆ.
        ಸಹಜವಾಗಿಯೇ ಇವು ಕಾಂಗ್ರೆಸ್‌ನೊಳಗೆ ಬಿರುಗಾಳಿ ಎಬ್ಬಿಸುವ ಹೇಳಿಕೆಗಳು. ಪ್ರತಿಕ್ಷಗಳಿಗಂತೂ ವಾಗ್ಧಾಳಿ ನಡೆಸಲು ಒಳ್ಳೆಯ ಸರಕು. ಕಾಂಗ್ರೆಸ್‌ನಲ್ಲಿ ನಾಯಕತ್ವದ ವಿರುದ್ಧ ಮಾತನಾಡಿ ಜೈಸಿಕೊಂಡವರಿಲ್ಲ. ಉತ್ತರ ಪ್ರದೇಶದಿಂದ ಬಂದ ಸಲ್ಮಾನ್‌ ಎಂಬ ಅಲ್ಪಸಂಖ್ಯಾತರ ನಾಯಕ ಈ ಹಿಂದೆಯೂ ಸಾಕಷ್ಟು ವಿವಾದಿತ ಹೇಳಿಕೆಗಳನ್ನು ನೀಡಿ ಅರಗಿಸಿಕೊಂಡಿದ್ದಾರಾದರೂ ನಾಯಕತ್ವದ ವಿರುದ್ಧ ಮಾತನಾಡಿದ ಇತಿಹಾಸ ಹೊಂದಿರುವವರಲ್ಲ.

        ಉತ್ತರ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್‌ ಪಕ್ಷ ಮುಸ್ಲಿಮರಿಗೆ ಇತರೆ ಹಿಂದುಳಿದ ವರ್ಗದ ಕೋಟಾದಲ್ಲಿ ಒಳಮೀಸಲು ನೀಡಿಯೇ ತೀರುತ್ತದೆ, ಚುನಾವಣಾ ಆಯೋಗ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಅವರು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.

        ವಿವಾದವನ್ನು ಬದಿಗಿಟ್ಟು ನೋಡಿದರೆ ಸಲ್ಮಾನ್‌ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಸದ್ಯ ಕಾಂಗ್ರೆಸ್‌ನದು ದಿಶಾಹೀನ ಸ್ಥಿತಿಯೇ. ಅದಕ್ಕೊಂದು  ಹೈಕಮಾಂಡ್‌ ಇದೆ ಮತ್ತು ಅದು ತನ್ನ ಕೆಲಸ ಮಾಡುತ್ತಿದೆಯೆಂಬುದು ನಿಜವಾದರೂ ಪಕ್ಷದ ಚಿಂತನೆಯಲ್ಲಿ 21ನೇ ಶತಮಾನದ ಆಧುನಿಕ ಭಾರತಕ್ಕೆ ಬೇಕಾದ ಯಾವ ಹೊಸತನವೂ ಕಾಣಿಸುತ್ತಿಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ದೇಶಾದ್ಯಂತ ಕಾಂಗ್ರೆಸ್‌ ನೀರಸ ಪ್ರದರ್ಶನ ನೀಡುತ್ತಿರುವುದಕ್ಕೆ ಮದ್ದರೆಯಲು ಅದು ಏನನ್ನೂ ಮಾಡಿದಂತಿಲ್ಲ. ಏಕಮೇವಾ ದ್ವಿತೀಯ ನಾಯಕಿ ಸೋನಿಯಾ ಗಾಂಧಿಯವರ ಆರೋಗ್ಯ ಚೆನ್ನಾಗಿಲ್ಲ. ಮನಮೋಹನ ಸಿಂಗ್‌ ಪ್ರಧಾನಿ ಎಂಬುದನ್ನು ಬಿಟ್ಟರೆ ಅವರು ಕಾಂಗ್ರೆಸ್‌ "ನಾಯಕ'ರಲ್ಲ. ಪ್ರಣಬ್‌ ರಾಷ್ಟ್ರಪತಿ ಭವನಕ್ಕೆ ಹೊರಟು ನಿಂತಿದ್ದಾರೆ.
        ಇನ್ನು ರಾಹುಲ್‌ ಗಾಂಧಿ ವಿಚಾರ. ಕಾಂಗ್ರೆಸ್‌ ಪಕ್ಷದೊಳಗೆ ಅವರು ನಂ.2 ನಾಯಕರೇನೋ ಹೌದು. ಅದು ಭಟ್ಟಂಗಿಗಳು ನೀಡಿದ ಸ್ಥಾನ. ಅದನ್ನು ಬಿಟ್ಟರೆ ತಮ್ಮ ನಾಯಕತ್ವದ ಸ್ಯಾಂಪಲ್‌ ಹೀಗಿರುತ್ತದೆ ಎಂಬುದನ್ನು ತೋರಿಸುವುದಕ್ಕೂ ಅವರು ಹೊಸತೇನನ್ನೂ ಮಾಡುತ್ತಿಲ್ಲ. ಆಗಾಗ ಮಾತ್ರ ಕಾಣಿಸಿಕೊಳ್ಳುವ ಅವರು ಇನ್ನುಳಿದ ದಿನ ಎಲ್ಲಿರುತ್ತಾರೆಂಬುದು ಕಾಂಗ್ರೆಸ್‌ನವರಿಗೂ ಗೊತ್ತಿರುವುದಿಲ್ಲ.

        ಮಂತ್ರಿಯಾಗದೆ ಏಕ್‌ದಂ ಪ್ರಧಾನಿಯಾಗಬೇಕೆಂದೇ ರಾಹುಲ್‌ ಕಾಯುತ್ತಿದ್ದಾರೋ ಅಥವಾ ತಮಗೆ ಅನುಭವ ಸಾಲದು ಎಂದು ನಿಜವಾಗಿಯೂ ಅವರಿಗೇ ಅನ್ನಿಸಿದೆಯೋ ಅಥವಾ ನಾಯಕತ್ವ ವಹಿಸಿ ಕೊಂಡು ರಾಜಕೀಯ ಜಂಜಡದಲ್ಲಿ ಪೂರ್ಣಾವಧಿ ಸಿಲುಕಿ ಕೊಳ್ಳಲು ಅವರಿಗಿಷ್ಟವಿಲ್ಲವೋ ಬಲ್ಲವರಾರು? ಅವರಾಗಲೀ ಅವರ ತಾಯಿ ಯಾಗಲೀ ಮಾಧ್ಯಮದ ಮುಂದೆ ಬಂದು ಮನಸ್ಸು ಬಿಚ್ಚುವ ವರಲ್ಲ. ಅವರ ಸಂದರ್ಶನ ಎಲ್ಲೂ ಕಾಣಸಿಗುವುದಿಲ್ಲ. ಅವರ ಆಂತರ್ಯ ವೇನೆಂಬುದು ನಿಗೂಢ. ಇಂತಹ ಸಂದರ್ಭದಲ್ಲಿ ಸಲ್ಮಾನ್‌ರಂಥವರು ಅಲ್ಲೊಂದು ಇಲ್ಲೊಂದು ಕಲ್ಲು ಎಸೆದು ನೋಡಿದರೆ ತಪ್ಪೇನು?
        ಸಲ್ಮಾನ್‌ ಹೇಳಿಕೆಯನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಲಿ. ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕಲ್ಲ, ಅವರ ಮಾತು ಕೇಂದ್ರ ಸರ್ಕಾರದ ಪ್ರತಿಯೊಬ್ಬ ಸಚಿವನ ಒಳಗುದಿ ಎಂದು ಅರ್ಥೈಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus