ಕೆ. ಕೆ. | Jul 13, 2012
ಇಂಜಿನಿಯರಿಂಗ್ ಕೊನೆಯ ವರ್ಷದ ವಿದ್ಯಾರ್ಥಿನಿಯರು ಸುಮಾರು ಮೂವತ್ತರಷ್ಟು ಮಂದಿ ನಮ್ಮಲ್ಲಿಗೆ ಭೇಟಿ ಕೊಟ್ಟಿದ್ದರು. ಸ್ನೇಹಿತೆ, ಸಹಪಾಠಿಯ ಮನೆ ಎಂಬ ಸಂಭ್ರಮದಲ್ಲಿ ಓಡಾಡಿದ್ದರು. ಪರಿಸರ, ಭಾಷೆ ಬೇರೆ ಆದರೂ ಮನೆ ಹೆಣ್ಣು ಮಕ್ಕಳಂತೆ ಒಳಗೆ-ಹೊರಗೆ ಸುತ್ತಾಡಿದ್ದರು. ಬೇರೆ ಬೇರೆ ಊರು, ಪಂಗಡಗಳ 20-22ರ ವಯಸ್ಸಿನ ಯುವತಿಯರು ಊಟದ ವೇಳೆಗೆ ತಾವು ಬಡಿಸಬಹುದೇ ಎಂಬ ಕೋರಿಕೆ.
ಊಟದ ನಂತರ ವಿರಾಮವಾಗಿ ಹರಟುತ್ತ ಕುಳಿತಿದ್ದಾಗ ನಾನು ಅವರಲ್ಲಿ ವಿಚಾರಿಸಿದ್ದೆ. ಇಂಜಿನಿಯರಿಂಗ್ ಕೊನೆ ವರ್ಷದ ಪರೀಕ್ಷೆಯೂ ಮುಗಿಯುತ್ತ ಬಂತು. ಮುಂದಿನ ಗುರಿ ಏನು ಎಂದು ಕೇಳಿದೆ. ಕೆಲವು ಹುಡುಗಿಯರಿಗೆ ಎಂ.ಟೆಕ್, ಎಂ.ಬಿ.ಎ. ಮಾಡುವ ಹಂಬಲ. ಉಳಿದವರಿಗೆ ಉದ್ಯೋಗದತ್ತ ಒಲವು. ಶಿಕ್ಷಣ ಮತ್ತು ನೌಕರಿಗೆ ಆದ್ಯತೆ ನೀಡಿದ್ದರು. ನಿಮ್ಮ ಮನೆಗಳಲ್ಲಿ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದು ಆಯ್ತು. ವಿವಾಹ ಮಾಡಿಬಿಡೋಣ ಅಂತ ಮಾತಾಡ್ಕೊಳ್ತಿದ್ದೀರಾ ತಾಯ್ತಂದೆ ಎಂದು ಕುತೂಹಲಕ್ಕೆ ಪ್ರಶ್ನಿಸಿದೆ.
""ಇಲ್ಲ. ನಮ್ಮ ಮನೆಗಳಲ್ಲಿ ಅಪ್ಪ-ಅಮ್ಮ ಹಾಗಂತ ಮಾತಾಡ್ಲಿಲ್ಲ. ಮತ್ತೆ ನಮಗೂ ಈಗಲೇ ಬೇಡ. ಮೊದಲು ಪಿ.ಜಿ. ಕೋರ್ಸ್ ಮುಗಿಯಬೇಕು. ಅಥವಾ ಉದ್ಯೋಗ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಮನೆಯಲ್ಲಿಯೂ ಅದಕ್ಕೇ ಒತ್ತು ಕೊಡ್ತಿದ್ದಾರೆ. ವಿವಾಹ ಏನಿದ್ದರೂ 4-6 ವರ್ಷಗಳ ನಂತರ'.

ಒಂದೇ ದನಿಯಲ್ಲಿ ಉತ್ತರಿಸಿದ ಯುವತಿಯರ ಮುಖದ ತುಂಬ ಪ್ರಾಮಾಣಿಕತೆ, ಗುರಿ ಸಾಧಿಸುವ ಹಂಬಲವಿದ್ದುದು ಕಾಣುತ್ತಿತ್ತು. ನನಗೂ ತುಂಬ ಸಂತೋಷವಾಯಿತು. ಅದರಲ್ಲಿಯೂ ಒಬ್ಬ ಯುವತಿ ಹೇಳಿದ ಮಾತು ಚಿಂತನೆಗೆ ಹಚ್ಚಿತ್ತು.
""ಓದು ಮುಗಿಸದೆ ಮದುವೆ ಆದರೆ ಆಮೇಲೆ ಓದಬಹುದು. ಆದರೆ ಈಗ ಇರುವಂತೆ ನಿರಾಂತಕವಾಗಿ ನಿಶ್ಚಿಂತೆಯಲ್ಲಿ ಇರಲಾಗುವುದಿಲ್ಲ'.
ತಂದೆತಾಯಿಯ ಜೊತೆ ಇದ್ದು ಶಿಕ್ಷಣ ಪಡೆಯುವ ಮಗಳಿಗೆ ಮನೆಯ ಜವಾಬ್ದಾರಿ ಕಡಿಮೆ. ಊಟ, ತಿಂಡಿಗೆ ಕರೆದಾಗ ಹೋಗಿ ತಿಂದು ಬಂದರೂ ಆಕ್ಷೇಪಿಸುವವರಿಲ್ಲ. ಹೋಗಿ ಅಮ್ಮನಿಗೆ ಸಹಾಯ ಮಾಡದಿದ್ದರೂ ತೊಂದರೆ ಏನೂ ಇಲ್ಲ. ಮನಸ್ಸು ಬಂದಾಗ ಮಲಗಿ, ಬೇಕೆಂದಾಗ ಎದ್ದರೂ ಬೈಯುವುದಿಲ್ಲ. ಅಕಸ್ಮಾತ್ ತಂದೆಯೋ ತಾಯಿಯೋ ನಿಷ್ಠುರವಾಗಿ ಬೈದು ಗದರಿಸಿದರೂ ಅದು ದೀರ್ಘಕಾಲ ಉಳಿಯುವುದಿಲ್ಲ ಅಥವಾ ಅದು ಕಿವಿಗೇ ಬೀಳುವುದಿಲ್ಲ. ತನಗೆ ಬೇಕಾದಂತೆ ಇರಬಹುದು, ಆಕ್ಷೇಪಿಸುವವರಿಲ್ಲ. ಉಡುಗೆತೊಡುಗೆ ತನ್ನಿಚ್ಛೆ . ಆದರೆ ಅರ್ಧ ವಿದ್ಯೆಯಲ್ಲಿ ಒಳ್ಳೆಯ ಸಂಬಂಧ ಬಂತು! ಹೇಗೆ ಬಿಡುವುದು ಎಂಬ ಸಂದಿಗ್ಧತೆಗೆ ಹೆತ್ತವರು ಸಿಕ್ಕಿ ವಿವಾಹವಾಗುವ ಯುವತಿಯರಿಗೆ ತಾಯ್ತಂದೆಯರ ಬಳಿ ಇದ್ದಾಗ ಇದ್ದಂತೆ ಈಗ ದಿನ ಕಳೆಯಲಾಗುವುದಿಲ್ಲ. ಪತಿ-ಪತ್ನಿ ಇಬ್ಬರೇ ಇದ್ದರೂ ಮನೆಯಲ್ಲಿ ಏನೂ ಮುಟ್ಟದೆ ಕಾಲೇಜಿಗೆಂದು ಹೋಗುವಂತಿಲ್ಲ ಅಥವಾ ಹಿರಿಯರಿರುವ ಮನೆಯಾದರೆ ಅವರ ಒಪ್ಪಿಗೆ ಪಡೆಯದೆ ಎಲ್ಲ ಕ್ಷೇತ್ರದಲ್ಲೂ ಮುಂದೆ ಕಾಲಿಡುವಂತಿಲ್ಲ. ಮನೆಯಿಂದ ನಿಗದಿತ ವೇಳೆ ಬಿಟ್ಟು ಬೇಗನೆ ಹೋಗಬೇಕಾದರೂ ಸಕಾರಣ ಕೊಡಬೇಕು; ತಡವಾಗಿ ಬಂದರೂ ಕಾರಣ ತಿಳಿಸಬೇಕು. ಅಮ್ಮ ಗದರಿದರೆ ಉಡಾಫೆ ಮಾಡಿದ ಮಗಳು ಪತಿ ಮನೆಯಲ್ಲಿ ಸಣ್ಣ ಆಕ್ಷೇಪದ ದನಿ ಎದ್ದರೂ ಸಹಿಸಿಕೊಳ್ಳಲಾರಳು. ದಾಂಪತ್ಯದ ಹೊಸ ದಿನಗಳೊಂದಿಗೆ ಓದಿಗೆ ವೇಳೆ ಹೊಂದಿಸಿಕೊಳ್ಳಬೇಕು.
ಯಾವುದೇ ದೃಷ್ಟಿಯಿಂದ ನೋಡಿದರೂ ವಿದ್ಯಾಭ್ಯಾಸ ಮುಂದುವರೆಸುವ ಇಚ್ಛೆ ಹೊಂದಿದ ಯುವತಿಯರು ಅದು ಮುಗಿದ ಮೇಲೇ ವೈವಾಹಿಕ ಬದುಕಿಗೆ ಕಾಲಿಡುವುದು ಉತ್ತಮ. ಅನೇಕ ಮನೆಗಳಲ್ಲಿ ಮಗಳಿಗೆ ಕೊನೆಯ ವರ್ಷದ ಪರೀಕ್ಷೆಗಿನ್ನೂ ಎರಡು ತಿಂಗಳಿದೆ ಎನ್ನುವಾಗಲೇ ನಿಶ್ಚಿತಾರ್ಥ ಮುಗಿಸುವುದುಂಟು. "ಈಗ ಬರೀ ನಿಶ್ಚಿತಾರ್ಥ ಅಷ್ಟೇ. ಮದುವೆ ಏನಿದ್ದರೂ ಪರೀಕ್ಷೆ ಮುಗಿದ ನಂತರವೇ' ಎಂಬ ಸಮಜಾಯಿಷಿ. ದಶಕಗಳ ಹಿಂದಿನ ದಿನಗಳು ಇಂದಿಗಿಲ್ಲ. ನಿಶ್ಚಿತಾರ್ಥವಾದ ವಧೂ-ವರರು ಅಂದು ಪುನಃ ಕಾಯುವುದಾಗಲಿ, ಮಾತನಾಡುವುದಾಗಲಿ ವಿವಾಹ ಮಂಟಪದಲ್ಲಿಯೇ. ಆದರೆ, ಇಂದಿನ ನಿಶ್ಚಯ ಶಾಸ್ತ್ರ ಮುಗಿಸಿದ ಜೋಡಿ ಹಾಗಲ್ಲ.
ಓದಿನಲ್ಲಿ ಮನಸ್ಸು ಕೇಂದ್ರೀಕರಿಸಲು ಕಷ್ಟ . ಮೊಬೈಲುಗಳು ಪರಸ್ಪರರನ್ನು ಹತ್ತಿರ ತರುತ್ತದೆ. ಅದು ತನಕ ವಿದ್ಯಾರ್ಥಿ ಜೀವನದಲ್ಲಿದ್ದ ಎಳೆ ಮನಸ್ಸಿಗೆ ದಾಂಪತ್ಯದ ನೂತನ ಕಲ್ಪನೆಗಳು ಲಗ್ಗೆಯಿಡುತ್ತವೆ. ಜೀವನ ಸಂಗಾತಿ ಆಗುವ ಯುವಕನ ಲಲ್ಲೆ, ಸರಸ, ವಿನೋದ ಪ್ರಿಯವಾಗುತ್ತದೆ. ಮನಸ್ಸು ಗಿರಕಿ ಹೊಡೆಯುತ್ತದೆ. ಮೊದಲಿನ ರೀತಿ ಮನಸ್ಸು ನಿಲ್ಲದು. ಪರಸ್ಪರರ ಆಕರ್ಷಣೆ ಹೆಚ್ಚಾಗಿ ಉಳಿದಿದ್ದು ಗೌಣವಾಗುತ್ತದೆ. ಸತತ ಛಲ, ಸಾಧನೆ ಎಲ್ಲರಿಂದಲೂ ಅಸಾಧ್ಯ.
ಹಾಗೆಂದು, ಅನೇಕ ಯುವತಿಯರು ವಿವಾಹಾನಂತರ ಶಿಕ್ಷಣ ಪಡೆದದ್ದುಂಟು. ಉನ್ನತ ಶಿಕ್ಷಣ ಮುಗಿಸಿ ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ. ಪತಿ ಮತ್ತು ಆತನ ಮನೆಯವರ ಸಂಪೂರ್ಣ ಬೆಂಬಲ, ಪ್ರೋತ್ಸಾಹದಿಂದಲೇ ಸಾಧ್ಯ. ಆದರೆ, ಎಲ್ಲರಲ್ಲೂ ಅಂಥ ಉನ್ನತ ಮನಸ್ಸು ಇರುವುದೆಂಬ ನಂಬಿಕೆ, ವಿಶ್ವಾಸ ಇಲ್ಲ.
ಇಂದಿಗೆ ಆರ್ಥಿಕ ಸ್ವಾತಂತ್ರ್ಯ ಹೆಣ್ಮಕ್ಕಳಿಗೆ ಅತ್ಯವಶ್ಯಕ. ಬದುಕು ನಾವಂದುಕೊಂಡಂತೆ ಅನೇಕ ಬಾರಿ ನಡೆಯದು. ಈ ದಿನಗಳಲ್ಲಿ ಬದುಕು ನಡೆಯಬೇಕಾದರೆ ಶಿಕ್ಷಣ, ಆರ್ಥಿಕ ಬಲ ಬೇಕೇಬೇಕು. ಆ ಎರಡೂ ಗುರಿ ಸಾಧಿಸುವ ಛಲವನ್ನು ಹೆತ್ತವರು ಮಕ್ಕಳಿಗೆ ತುಂಬಿಸಿ ಕೊಡಬೇಕು. ಎಲ್ಲಿಯೂ ಯಾರಿಂದಲೂ ಕದಿಯಲಾಗದ ಸಂಪತ್ತು ವಿದ್ಯೆ. ಹೆಣ್ಮಕ್ಕಳಿಗೆ ಆ ನಿಟ್ಟಿನಲ್ಲಿ ಸೂಕ್ತ ಅರಿವು ಮೂಡಿಸಬೇಕು.