Monday, May 20, 2013
Last Updated: 8:19:22 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಧುರ ಮಾತೃತ್ವ- 16
    • ಗರ್ಭಿಣಿ ಸ್ತ್ರೀಯರಿಗಾಗಿ ವಿಶೇಷ ಪಾಕ ವೈವಿಧ್ಯ
    • ಉದ್ದಿನ ಬೇಳೆ ಲಾಡು.

      • ಡಾ | ಅನುರಾಧಾ ಕಾಮತ್‌ | Jul 13, 2012

        ಗರ್ಭಿಣೀ ಅವಸ್ಥೆಯಲ್ಲಿ ಸ್ತ್ರೀಯರಿಗೆ 3ರಿಂದ 4 ಸಾವಿರ ಕ್ಯಾಲೋರಿಗಳಷ್ಟು ಆಹಾರ ಸೇವನೆ ಅವಶ್ಯ. ಜೊತೆಗೆ ಆಹಾರವು ಪೌಷ್ಟಿಕವೂ, ರುಚಿಕರವೂ, ಸುಲಭವಾಗಿ ಪಚನವಾಗುವಂಥದ್ದೂ ಸಂತುಲಿತವೂ ಆಗಿರುವುದು ಅಗತ್ಯ.

        ಗರ್ಭಿಣಿ ಸ್ತ್ರೀಯರಿಗಾಗಿಯೇ ಸುಲಭ, ಸರಳ ವಿಧಾನಗಳಿಂದ ತಯಾರಿಸಬಹುದಾದ ಸ್ವಾದಭರಿತ, ಪೌಷ್ಟಿಕ, ಸಂತುಲಿತ ಆಹಾರದ ಕೆಲವು ವಿಶಿಷ್ಟ ಪಾಕ ವೈವಿಧ್ಯಗಳು ಇಂತಿವೆ!

        ಪೌಷ್ಟಿಕ ಕಿಚಡಿ

        ಬೇಕಾಗುವ ಸಾಮಗ್ರಿ : ರವೆ ಅರ್ಧ ಕಪ್‌, ಓಟ್ಸ್‌ ಅರ್ಧ ಕಪ್‌, ಹಾಲು ಅರ್ಧ ಕಪ್‌, 3 ಚಮಚ ದ್ರಾಕ್ಷೆ , 2 ಚಮಚ ಬಾದಾಮಿಯ ತುಂಡುಗಳು, 3 ಚಮಚ ಸಕ್ಕರೆ, ಎರಡೂವರೆ ಕಪ್‌ ನೀರು.

        ತಯಾರಿಸುವ ವಿಧಾನ: ಮೊದಲು ಅಗಲ ಬಾಯಿಯ ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಸಬೇಕು. ಕುದಿಯುವ ನೀರಿಗೆ ಓಟ್ಸ್‌ ಹಾಗೂ ರವೆಯನ್ನು ಬೆರೆಸಿ, ಚೆನ್ನಾಗಿ ಕಲಸಬೇಕು. 5-7 ನಿಮಿಷ ಚೆನ್ನಾಗಿ ಬೆಂದ ಈ ಮಿಶ್ರಣಕ್ಕೆ ದ್ರಾಕ್ಷೆ ಹಾಗೂ ಬಾದಾಮಿಯ ತುಂಡುಗಳನ್ನು ಬೆರೆಸಬೇಕು. ಬಳಿಕ ಸಕ್ಕರೆ ಸೇರಿಸಬೇಕು. ನಂತರ ಹಾಲು ಸೇರಿಸಿ ಕುದಿಸಿದರೆ ರುಚಿಕರ ಪೌಷ್ಟಿಕ ಕಿಚಡಿ ತಯಾರು!

        ಮಿಶ್ರ ಬೇಳೆಗಳ ದೋಸೆ

        ಬೇಕಾಗುವ ಸಾಮಗ್ರಿ :
          ಅರ್ಧ ಕಪ್‌ ಹೆಸರುಬೇಳೆ, ಅರ್ಧ ಕಪ್‌ ಮಸೂರಿ ಬೇಳೆ, ಅರ್ಧ ಕಪ್‌ ಕಡಲೆಬೇಳೆ, ಕಾಲು ಕಪ್‌ ಗೋಧಿಹಿಟ್ಟು, ಕಾಲು ಕಪ್‌ ಸೋಯಾ ಹಿಟ್ಟು , ಸಣ್ಣಗೆ ಹೆಚ್ಚಿದ ಈರುಳ್ಳಿ ಚೂರು 3 ಚಮಚ, ಸಣ್ಣಗೆ ತುರಿದ ಹಸಿಶುಂಠಿ ಚೂರು, 1 ಚಮಚ ಜೀರಿಗೆ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು , ಉಪ್ಪು , ಮೆಣಸಿನ ಚೂರು, 2 ಚಮಚ ಕೊಬ್ಬರಿ ಎಣ್ಣೆ .

        ರಾತ್ರಿ 3 ವಿಧದ ಬೇಳೆಗಳನ್ನು ತೊಳೆದು, ನೀರಿನಲ್ಲಿ ನೆನೆಸಬೇಕು. ಮರುದಿನ ಬೆಳಿಗ್ಗೆ ಮತ್ತೆ ತೊಳೆದು, ನೀರನ್ನು ಸೋಸಿ, ಬೇಳೆಗಳನ್ನು ಮಿಕ್ಸರ್‌ನಲ್ಲಿ ಅರೆಯಬೇಕು. ಬಳಿಕ ಅದಕ್ಕೆ ಉಳಿದ ಸಾಮಗ್ರಿಗಳನ್ನು ಬೆರೆಸಿ, ನೀರು ಸೇರಿಸಿ ದೋಸೆಯ ಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಬೇಕು.

        ಕಾವಲಿಯ ಮೇಲೆ ಎಣ್ಣೆ ಹಚ್ಚಿ , ಹಿಟ್ಟು ಹೊಯ್ದು ಎರಡೂ ಬದಿಗಳನ್ನು ಕಾಯಿಸಿದರೆ, ಘಮಘಮಿಸುವ ಬಂಗಾರದ ಬಣ್ಣದ ದೋಸೆ ರೆಡಿ.

        ವಿವಿಧ ಸೊಪ್ಪಿನ ಚಟ್ನಿ

        ಬೇಕಾಗುವ ಸಾಮಗ್ರಿ
        : ಒಂದೆಲಗದ ಎಲೆ 4 ಚಮಚ, ಕೊತ್ತಂಬರಿ ಸೊಪ್ಪು 6 ಚಮಚ, ಪುದೀನಾ ಸೊಪ್ಪು 3 ಚಮಚ, ಅಮ್ಲಪತ್ರಿ ಅಥವಾ ಪುಳ್ಳಂಪುರ್ಚಿ ಸೊಪ್ಪು 2 ಚಮಚ, ಕಾಯಿತುರಿ 2 ಕಪ್‌, ಹುರಿದ ಒಣಮೆಣಸು 3, ಸ್ವಲ್ಪ ಉಪ್ಪು , ನಿಂಬೆರಸ, ಬೆಲ್ಲ.

        ತಯಾರಿಸುವ ವಿಧಾನ: ಉಪ್ಪು , ನಿಂಬೆರಸವನ್ನು ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಮಿಕ್ಸರ್‌ನಲ್ಲಿ ಅರೆಯಬೇಕು. ಚಟ್ನಿಯ ಹದಕ್ಕೆ ನೀರು ಸೇರಿಸಿ, ಬಳಿಕ ಉಪ್ಪು , ನಿಂಬೆರಸ ಬೆರೆಸಬೇಕು.
        ಸಣ್ತೀಯುತವೂ, ಸ್ವಾದಭರಿತವೂ ಆದ ಈ ಚಟ್ನಿ ದೋಸೆಯೊಂದಿಗೆ ಬಳಸಲು ಹಿತಕರ.

        ಉದ್ದಿನ ಬೇಳೆ ಲಾಡು

        ಎಂಟನೇ ತಿಂಗಳ ಗರ್ಭಿಣಿಯರಿಗೆ ಇದು ಅತ್ಯುತ್ತಮ ಆಹಾರ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ಬಲ್ಯ ಹಾಗೂ ಬೆನ್ನುಹುರಿಯ ನರಗಳನ್ನು ಶಕ್ತಿಯುತಗೊಳಿಸುತ್ತದೆ.

        ಬೇಕಾಗುವ ಸಾಮಗ್ರಿ : 2 ಕಪ್‌ ಉದ್ದಿನ ಬೇಳೆ, 1 ಕಪ್‌ ಸಕ್ಕರೆ, ಅರ್ಧ ಕಪ್‌ ಬೆಣ್ಣೆ , 2 ಚಿಟಿಕೆ ಕೇಸರಿ ದಳ, 4 ಚಿಟಿಕೆ ಯಾಲಕ್ಕಿ ಹುಡಿ.

        ತಯಾರಿಸುವ ವಿಧಾನ:  ದಪ್ಪ ತಳದ ಕಾವಲಿಯಲ್ಲಿ ಉದ್ದಿನ ಬೇಳೆಯನ್ನು ಕೆಂಪಗೆ ಹುರಿಯಬೇಕು. ಆರಿದ ಬಳಿಕ ಸಕ್ಕರೆಯನ್ನು ಬೆರೆಸಿ ಮಿಕ್ಸರ್‌ನಲ್ಲಿ ತರಿತರಿಯಾಗಿ ಪುಡಿ ಮಾಡಬೇಕು. ಬಳಿಕ ಕಾವಲಿಯಲ್ಲಿ ಬೆಣ್ಣೆ ತೆಗೆದುಕೊಂಡು ಬಿಸಿ ಮಾಡಿ ಅದರಲ್ಲಿ ಕೇಸರಿ ದಳಗಳನ್ನು ಹಾಕಬೇಕು. ಬಳಿಕ ಉದ್ದಿನಬೇಳೆ ಮತ್ತು ಸಕ್ಕರೆಯ ಮಿಶ್ರಣದ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ಕೊನೆಯಲ್ಲಿ ಯಾಲಕ್ಕಿ ಹುಡಿ ಬೆರೆಸಬೇಕು. ಲಾಡನ್ನು ಕಟ್ಟಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಬೇಕು. ಇದನ್ನು ನಿತ್ಯವೂ ನಿಯಮಿತವಾಗಿ ಸೇವಿಸುವುದು ಗರ್ಭಿಣಿಯರಿಗೆ ಹಿತಕರ.

        ಮಿಕ್ಸೆಡ್‌ ಫ್ರುಟ್‌ ರಸಾಯನ

        ಗರ್ಭಿಣೀ ಅವಸ್ಥೆಯಲ್ಲಿ ಎಲ್ಲಾ ಕಾಲದಲ್ಲೂ ಹಣ್ಣುಗಳು ಉತ್ತಮ ಆಹಾರ. ಹಾಲು ಅಥವಾ ಕಾಯಿಹಾಲು ಬೆರೆಸಿ ವಿವಿಧ ಹಣ್ಣುಗಳ ರಸಾಯನ ತಯಾರಿಸಿ ಸೇವಿಸುವುದರಿಂದ ನಾಲಿಗೆಗೂ ರುಚಿಕರ, ದೇಹಮನಗಳಿಗೂ ಮುದಕರ.

        ಬೇಕಾಗುವ ಸಾಮಗ್ರಿ :  ಸಕ್ಕರೆ, ಜೇನು, ಹಾಲು ಅಥವಾ ಕಾಯಿಹಾಲು, ಬಾಳೆಹಣ್ಣು , ಸೇಬು, ಸಪೋಟ, ಒಣದ್ರಾಕ್ಷೆ , ಹಸಿ ದ್ರಾಕ್ಷೆ , ಬಾದಾಮಿ, ಒಣ ಅಂಜೂರ, ಹಸಿ ಅಂಜೂರ, ದಾಳಿಂಬೆ.

        ತಯಾರಿಸುವ ವಿಧಾನ: ಎಲ್ಲಾ ಒಣ ಹಣ್ಣು ಹಾಗೂ ತಾಜಾ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ ಸಕ್ಕರೆ ರುಚಿಗೆ ತಕ್ಕಷ್ಟು ಬೆರೆಸಬೇಕು. ಬಳಿಕ ಒಂದು ಚಮಚ ಜೇನು ಸೇರಿಸಬೇಕು. ಇದಕ್ಕೆ ಕುದಿಸಿ ತಣಿಸಿದ ಹಾಲು ಅಥವಾ ಕಾಯಿತುರಿಯನ್ನು ರುಬ್ಬಿ , ಹಿಂಡಿ ತಯಾರಿಸಿದ ಕಾಯಿಹಾಲನ್ನು ಸೇರಿಸಬೇಕು. ಸಾಮಾನ್ಯವಾಗಿ ಉಷ್ಣದೇಹ ಪ್ರಕೃತಿಯ ಗರ್ಭಿಣಿ ಸ್ತ್ರೀಯರಿಗೆ ಕಾಯಿಹಾಲು ಬೆರೆಸಿ ಈ ರಸಾಯನ ಮಾಡಿದರೆ ಹಿತಕರ. ಶೀತಪ್ರಕೃತಿಯ ಗರ್ಭಿಣೀ ಸ್ತ್ರೀಯರಿಗೆ ಹಾಲು ಬೆರೆಸಿ ತಯಾರಿಸಿದ ಈ ಮಿಕ್ಸೆಡ್‌ ಫ‌ೂÅಟ್‌ ರಸಾಯನ ಉತ್ತಮ.

        ಸೌತೆಕಾಯಿ- ಶುಂಠಿ ಮಜ್ಜಿಗೆ

        ಬೇಕಾಗುವ ಸಾಮಗ್ರಿ :
          1 ಎಳೆ ಸೌತೆಕಾಯಿ, 2 ಇಂಚು ಹಸಿಶುಂಠಿ, ಸ್ವಲ್ಪ ಕಲ್ಲುಪ್ಪು ಅಥವಾ ಕಾಲಾನಮಕ್‌, ಹೆಚ್ಚಿದ ಕೊತ್ತಂಬರಿ ಸೊಪ್ಪು 3 ಚಮಚ, ಮಜ್ಜಿಗೆ 3 ಕಪ್‌.

        ಸೌತೆಕಾಯಿಯ ಸಿಪ್ಪೆ , ತಿರುಳು ತೆಗೆದು ಬಳಿಕ ಸಣ್ಣಗೆ ಹೆಚ್ಚಬೇಕು. ಬಳಿಕ ಕೊತ್ತಂಬರಿ ಸೊಪ್ಪು ಹಾಗೂ ಹೆಚ್ಚಿದ ಹಸಿಶುಂಟಿ ಬೆರೆಸಿ ಮಿಕ್ಸರ್‌ನಲ್ಲಿ ರುಬ್ಬಬೇಕು. ಬಳಿಕ ಇದನ್ನು ಮಜ್ಜಿಗೆಗೆ ಬೆರೆಸಿ ರುಚಿಗೆ ತಕ್ಕಷ್ಟು ಕಲ್ಲುಪ್ಪು ಬೆರೆಸಬೇಕು.

        ಊಟದ ಬಳಿಕ 1 ಕಪ್‌ ಈ ಸಂಸ್ಕರಿತ ಮಜ್ಜಿಗೆಯನ್ನು ಗರ್ಭಿಣಿಯರು ಸೇವಿಸುವುದರಿಂದ ಪಚನಕ್ರಿಯೆ ಉತ್ತಮಗೊಳ್ಳುತ್ತದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus