ಬೈಂದೂರು: ವಿವಾಹಿತೆಯೊರ್ವಳನ್ನು ಪ್ರೇಮಿಸುತ್ತಿರುವ ಕಾರಣದಿಂದಾಗಿ ಆಕೆಯ ಸಂಬಂಧಿಕರು ಯುವಕನನ್ನು ಮಾರಕ ಆಯುಧಗಳಿಂದ ಕೈ ಕಾಲು ಕಡಿದು ಅಮಾನುಷ ರೀತಿಯಲ್ಲಿ ಹಲ್ಲೆ ಮಾಡಿದ ಘಟನೆ ಉಪ್ಪುಂದ ಸಮೀಪ ಬಿಜೂರು ಗ್ರಾ.ಪಂ. ವ್ಯಾಪ್ತಿಯ ಮಾಣಿಹಾಡಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.ಘಟನೆಯ ಹಿನ್ನಲೆ: ರಾಘವೇಂದ್ರ ಪೂಜಾರಿ (31) ಪ್ರತಿಭಾನ್ವಿತ ಹಾಗೂ ಸ್ಥಳೀಯವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಯುವಕನಾಗಿದ್ದ. ಆತನಿಗೆ ಕಳೆದ ಐದು ವರ್ಷಗಳಿಂದ ಮನೆ ಸಮೀಪದ ವಿವಾಹಿತ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಎರಡು ಮಕ್ಕಳ ತಾಯಿಯಾಗಿರುವ ಈಕೆ ರಾಘವೇಂದ್ರನೊಂದಿಗೆ ಶಾಲಾ ದಿನಗಳಲ್ಲಿಯೇ ಪ್ರಿತಿಯ ಬಲೆಯಲ್ಲಿ ಸಿಲುಕಿದ್ದರು. ಬಳಿಕ ಗಂಡನನ್ನು ತೊರೆದು ಮೂರು ವರ್ಷ ಈತನೊಂದಿಗೆ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಇದಕ್ಕೆ ಯುವತಿಯ ಮನೆಯವರು ಸಮ್ಮತಿಸಿದ್ದರೂ ಕೂಡಾ ಕಳೆದ ವರ್ಷ ಆರಕ್ಷಕ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಠಾಣೆಗೆ ಕರೆಸಿಕೊಂಡ ಪೊಲೀಸರು ಯುವತಿಯನ್ನು ತಾಯಿ ಮನೆಗೆ ಕಳುಹಿಸಿದ್ದರು. ಆದರೆ ಯುವತಿಗೆ ಒಪ್ಪಿಗೆ ಇಲ್ಲದ ಕಾರಣ ಇವರೀರ್ವರ ನಡುವೆ ಪ್ರೇಮ ಸಲ್ಲಾಪ ಮುಂದುವರಿದಿತ್ತು ಎನ್ನುತ್ತಾರೆ ಯುವಕನ ಮನೆಯವರು.ವಿವಾಹಿತೆಯೊಂದಗಿನ ಪ್ರೇಮ ವ್ಯವಹಾರ ನಿಲ್ಲಸುವಲ್ಲಿ ರಾಘವೇಂದ್ರನ ಮನೆಯವರು ಪ್ರಯತ್ನಿಸಿದ್ದರು ಮತ್ತು ಬುದ್ದಿವಾದ ಹೇಳಿದ್ದರು. ಆದರೆ ಈತನ ಪ್ರಿಯತಮೆ ಮತ್ತೆ ಸಂಪರ್ಕ ಸಾಧಿಸಿದ ಹಿನ್ನಲೆಯಲ್ಲಿ ಪ್ರೇಮ ಮುಂದಿವರಿದಿತ್ತು. ಇದರಿಂದ ಕುಪಿತಗೊಂಡ ಯುವತಿ ಮನೆಯವರು ಕಳೆದ ಕೆಲವು ದಿನಗಳಿಂದ ಬೆದರಿಕೆಯೊಡ್ಡತ್ತಿದ್ದು ಶನಿವಾರ ರಾತ್ರಿ 9 ಗಂಟೆಗೆ ಕತ್ತಿ ಮೊದಲಾದ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದು, ಇದರಿಂದ ರಾಘವೇಂದ್ರ ಪೂಜಾರಿ ಗಂಭೀರ ಹಲ್ಲೆಗೊಳಗಾಗಿದ್ದಾರೆ. ಒಂದು ಕಾಲು ಹಾಗೂ ಕೈಯನ್ನು ಕಡಿದಿದ್ದು ಜೀವಮಾನವಿಡೀ ಕುಳಿತೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುವುದು ಆತನ ಸ್ನೇಹಿತರ ಅಭಿಪ್ರಾಯ.ಈತನ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ಮಾಡಿದ್ದರ ಹಿಂದೆ ಕೆಲವು ಪ್ರಮುಖ ವ್ಯಕ್ತಿಗಳ ಕೈವಾಡವಿದೆ ಮತ್ತು ಕ್ರಿಮಿನಲ್ ಪ್ರಕರಣದಲ್ಲಿ ತೊಡಗಿಸಿಕೊಂಡವರ ಹಸ್ತಕ್ಷೇಪವಿದೆ . ಪೊಲೀಶ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು. ಗ್ರಾಮೀಣಭಾಗದಲ್ಲಿ ಈ ರೀತಿಯ ಪ್ರಕರಣ ನಡೆಯುತ್ತಿರುವುದು ಜನರನ್ನು ಭಯಭೀತರನ್ನಾಗಿಸುತ್ತದೆ ಎನ್ನುವುದು ಗ್ರಾ.ಪಂ. ಮಂಜುನಾಥ ಪೂಜಾರಿ ಅವರ ಅಭಿಪ್ರಾಯ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.