ಹೊಸದಿಲ್ಲಿ : ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅವರು ಲಂಡನ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ವೇಳ ನಡೆಯುವ ಪಥಸಂಚಲನದಲ್ಲಿ ಭಾರತೀಯ ದಂಡಿನ ಧ್ವಜಧಾರಿಯಾಗಿರುತ್ತಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೆಶನ್ ಪ್ರಕಟಿಸಿದೆ.ಈ ಪ್ರತಿಷ್ಠಿತ ಗೌರವಕ್ಕಾಗಿ ಬಾಕ್ಸರ್ ವಿಜೇಂದರ್ ಸಿಂಗ್, ಟೆನಿಸ್ ಲೆಜೆಂಡ್ ಲಿಯಾಂಡರ್ ಪೇಸ್ ಮತ್ತು ಖ್ಯಾತ ಶೂಟರ್ ಅಭಿನವ್ ಬಿಂದ್ರಾ ಅವರ ಹೆಸರು ಕೂಡ ಕೇಳಿ ಬಂದಿತ್ತು. ಸುಶೀಲ್ ಅವರನ್ನು ಆಯ್ಕೆ ಮಾಡುವ ಮೂಲಕ ಎಲ್ಲ ಸಂಶಯಗಳಿಗೆ ಅಂತ್ಯ ಹಾಡಲಾಗಿದೆ. 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಅವರಲ್ಲದೇ ವಿಜೇಂದರ್ ಮತ್ತು ಬಿಂದ್ರಾ ಪದಕ ಜಯಿಸಿದ್ದರು.ಸುಶೀಲ್ ಭಾರತೀಯ ದಂಡಿನ ಧ್ವಜಧಾರಿ ಆಗಿರುತ್ತಾರೆ ಎಂದು ಐಒಎ ಪ್ರಭಾರ ಅಧ್ಯಕ್ಷ ವಿ.ಕೆ. ಮಲ್ಹೋತ್ರ ಪ್ರಕಟಿಸಿದರು. ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಥಮ ವೈಯಕ್ತಿಕ ಚಿನ್ನ ದೊರಕಿಸಿಕೊಟ್ಟ ಬಿಂದ್ರಾ ಅವರು ಈ ಗೌರವಕ್ಕೆ ಅರ್ಹ ಅಭ್ಯರ್ಥಿಯೆಂದು ಐಒಎ ಹೇಳಿತ್ತು. ಆದರೆ ಅವರ 10ಮೀ. ಏರ್ ರೈಫಲ್ ಸ್ಪರ್ಧೆ ಉದ್ಘಾಟನಾ ಸಮಾರಂಭದ ಬಳಿಕ ಮೂರು ದಿನಗಳಲ್ಲಿ ನಡೆಯುವ ಕಾರಣ ಅವರನ್ನು ಕೈಬಿಡಲಾಯಿತು. ತನ್ನ ಸಿದ್ದತೆಗೆ ಹೆಚ್ಚಿನ ಗಮನ ನೀಡಲು ಬಿಂದ್ರಾ ಬಯಸಿದ ಕಾರಣ ಅವರನ್ನು ಪರಿಗಣಿಸಿಲ್ಲ ಎಂದು ಮಲ್ಹೋತ್ರ ತಿಳಿಸಿದರು.ಅವರ ಹಾಗೇ ವಿಜೇಂದರ್ ಅವರ ದೇಹತೂಕ ನಿರ್ಧರಿಸುವುದು ಜು. 28ರಂದು ಆಗಿರುವ ಕಾರಣ ಧ್ವಜಧಾರಿ ಗೌರವ ಅವರಿಗೆ ಕಷ್ಟವಾಗಬಹುದೆಂದು ನಿರ್ಧರಿಸಲಾಯಿತು. ಪೇಸ್ 2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾರತೀಯ ದಂಡಿದ ಧ್ವಜಧಾರಿ ಆಗಿದ್ದರಿಂದ ಈ ಬಾರಿ ಸುಶೀಲ್ ಅವರಿಗೆ ನೀಡಲು ಐಒಎ ನಿರ್ಧರಿಸಿದೆ ಎಂದು ಮಲ್ಹೋತ್ರ ಹೇಳಿದರು.