ಹೊಸದಿಲ್ಲಿ: 2012-13ರ ಮೊದಲ ತ್ತೈಮಾಸಿಕ ಮುಗಿದಿರುವ ಹೊರತಾಗಿಯೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್)ಯ ಬಡ್ಡಿ ದರವನ್ನು ಇನ್ನೂ ಅಂತಿಮಗೊಳಿಸಿಲ್ಲ. ಇದು ಸದಸ್ಯರನ್ನು ಆತಂಕಕ್ಕೀಡು ಮಾಡಿದೆ.ಇಪಿಎಫ್ ಸಂಘಟನೆ ನಡೆಸುವ ನಿವೃತ್ತಿ ನಿಧಿ ಯೋಜನೆಗೆ ಸುಮಾರು 5 ಕೋಟಿ ಮಂದಿ ದೇಣಿಗೆ ನೀಡಿದ್ದಾರೆ. ಇಪಿಎಫ್ ಬಡ್ಡಿ ದರಗಳನ್ನು 2011-12ರಲ್ಲಿ ಶೇ. 8.25ಕ್ಕೆ ಇಳಿಸಲಾಗಿತ್ತು. 2010-11ರಲ್ಲಿ ಬಡ್ಡಿ ದರಗಳು ಶೇ. 9.5ರಲ್ಲಿತ್ತು.ಕಾರ್ಮಿಕ ಸಚಿವರ ನೇತೃತ್ವದ ಇಪಿಎಫ್ ಸಂಘಟನೆಯ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳು ಬಡ್ಡಿ ದರ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ. ಮೇ 25ರಂದು ಟ್ರಸ್ಟಿಗಳು ಸಭೆ ಸೇರಿದ್ದಾಗ ಬಡ್ಡಿ ದರದ ವಿಷಯ ಪ್ರಸ್ತಾವವಾಗಿರಲಿಲ್ಲ. ಟ್ರಸ್ಟಿಗಳ ಮುಂದಿನ ಸಭೆ ಯಾವಾಗ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಬಡ್ಡಿ ದರ ನಿರ್ಧಾರದ ವಿಷಯ ಇನ್ನಷ್ಟು ಮುಂದೆ ಹೋಗುವ ಲಕ್ಷಣಗಳಿವೆ.ದೇಣಿಗೆದಾರರಿಗೆ ಮಾಸಿಕ ಪಿಂಚಣಿಯನ್ನು ಕನಿಷ್ಠ ರೂ. 1,000ಕ್ಕೆ ನಿಗದಿಗೊಳಿಸುವ ವಿಷಯ ಕೂಡ ಹಿಂದಿನ ಸಭೆಯಲ್ಲಿ ತೀರ್ಮಾನವಾಗದೆ ಮುಂದೂಡಲ್ಪಟ್ಟಿತ್ತು. ಹೀಗಾಗಿ ಟ್ರಸ್ಟಿಗಳ ಮುಂದಿನ ಸಭೆ ಅತ್ಯಂತ ಮಹತ್ವದ್ದಾಗಿರುವ ನಿರೀಕ್ಷೆಯಿದೆ.