ಹೊಸದಿಲ್ಲಿ : ತಾನು ಕಾಂಗ್ರೆಸ್ ತೊರೆದು ಮರಳಿ ಬಿಜೆಪಿ ಸೇರಲು ತಯಾರಾಗಿದ್ದೆ ಎಂದಿರುವ ಮಾಜಿ ಸಚಿವ ಶಂಕರ್ ಸಿನ್ಹ ವಘೇಲ ಹೇಳಿಕೆಯನ್ನು ಆಕ್ಷೇಪಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ವಿಶೇಷ ಆಹ್ವಾನಿತ ಅನಿಲ್ ಶಾಸಿŒ , ಇಂತಹ ಗೊಣಗಾಟಗಳಿಂದ ಗುಜರಾತ್ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಸ್ಥೈರ್ಯ ಕುಸಿಯುತ್ತದೆ ಎಂದಿದ್ದಾರೆ.ಸಂದರ್ಶನವೊಂದರಲ್ಲಿ ವಘೇಲ ಒಂದು ಹಂತದಲ್ಲಿ ತಾನು ಕಾಂಗ್ರೆಸ್ ತೊರೆದು ಬಿಜೆಪಿ ಅಥವಾ ಎನ್‌ಸಿಪಿಯನ್ನು ಸೇರಲು ತಯಾರಾಗಿದ್ದೆ ಎಂದಿದ್ದಾರೆ. ಇಂತಹ ಹೇಳಿಕೆಗಳಿಂದ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯುವುದರಿಂದ ಈ ಹೇಳಿಕೆ ಖಂಡನಾರ್ಹ ಎಂದು ಶಾಸಿŒ ಹೇಳಿದ್ದಾರೆ.ಈ ವರ್ಷ ಗುಜರಾತಿನಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಬೇಕಾಗಿರುವುದರಿಂದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆ ವಘೇಲ ಮೇಲಿರುವುದರಿಂದ ಈ ರೀತಿಯಾಗಿ ಗೊಣಗುವ ಮೊದಲು ಅವರು ಬಹಳ ಎಚ್ಚರಿಕೆ ವಹಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.ಕಾಂಗ್ರೆಸ್ ಹಾದಿ ನನಗೆ ಸರಿ ಬರುತ್ತಿರಲಿಲ್ಲ. 2009ರಲ್ಲಿ ನನ್ನ ಪ್ರಚಾರವನ್ನೇ ಕಾಂಗ್ರೆಸ್ ನಾಯಕರು ಹಳಿ ತಪ್ಪಿಸಲು ಯತ್ನಿಸಿದಾಗ ಪಕ್ಷವನ್ನು ತೊರೆಯಲು ಮುಂದಾಗಿದ್ದೆ ಹಾಗೂ ಮರಳಿ ಬಜೆಪಿಗೆ ಹೋಗಲು ತಯಾರಾಗಿದ್ದೆ. ಕಾಂಗ್ರೆಸ್ ಪಕ್ಷ ಒಂದು ವರ್ಷ ಮುಂಚಿತವಾಗಿ ಅಲ್ಲದಿದ್ದರೂ ಕನಿಷ್ಠ ಆರು ತಿಂಗಳು ಮುಂಚಿತವಾಗಿಯಾದರೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಬೇಕಿತ್ತು. ಚುನಾವಣೆಗೆ ಇನ್ನು ಉಳಿದಿರುವುದು ಆರು ತಿಂಗಳು ಮಾತ್ರ, ಅಭ್ಯರ್ಥಿಗಳು ಎಲ್ಲಿದ್ದಾರೆ? ಪಕ್ಷದ ಮೇಲೆ ಈಗಲೂ ನನಗೆ ಮುನಿಸಿದೆ ಹಾಗೂ ಅದನ್ನು ಬಹಿರಂಗವಾಗಿ ತೋರಿಸುತ್ತಿದ್ದೇನೆ ಎಂದು ವಘೇಲ ಸಂದರ್ಶನದಲ್ಲಿ ಹೇಳಿದ್ದಾರೆ.