Thursday, May 23, 2013
Last Updated: 9:14:34 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸೋಯುಜ್‌ ವ್ಯೋಮನೌಕೆ ನಭಕ್ಕೆ
    • ಸುನೀತಾ ಸಹಿತ ಮೂವರು ಯಾನಿಗಳು ಬಾಹ್ಯಾಕಾಶಕ್ಕೆ
    • ಇದು ಸುನೀತಾ ಅವರ ದ್ವಿತೀಯ ವ್ಯೋಮಯಾನವಾಗಿದೆ.

      • Udayavani | Jul 15, 2012

        ಬೈಕಾನೂರ್‌(ಕಝಕ್‌ಸ್ಥಾನ್‌) : ಅಂತಾರಾಷ್ಟ್ರೀಯ ವ್ಯೋಮ ನಿಲ್ದಾಣದಲ್ಲಿ 2006ರಲ್ಲಿ ಆರು ತಿಂಗಳ ಕಾಲ ನೆಲೆನಿಂತು ಕಾರ್ಯ ನಿರ್ವಹಿಸುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದ ಭಾರತೀಯ ಮೂಲದ ಅಮೆರಿಕ ಪ್ರಜೆ ಸುನೀತಾ ವಿಲಿಯಮ್ಸ್‌ ಸಹಿತ ಮೂವರು ವ್ಯೋಮಯಾನಿಗಳನ್ನು ಹೊತ್ತ ರಶ್ಯದ ವ್ಯೋಮನೌಕೆಯೊಂದು ರವಿವಾರ ಕಝಕ್‌ಸ್ಥಾನದ ಬೈಕಾನೂರ್‌ ವ್ಯೋಮಕೇಂದ್ರದಿಂದ ಗಗನಕ್ಕೆ ನೆಗೆಯಿತು. ಇದು ಸುನೀತಾ ಅವರ ದ್ವಿತೀಯ ವ್ಯೋಮಯಾನವಾಗಿದೆ.


        46ರ ಹರೆಯದ ಸುನೀತಾ ಮತ್ತು ಫ್ಲೈಟ್‌ ಎಂಜಿನಿಯರ್‌ಗಳಾದ ಜಪಾನಿನ ಅಕಿಹಿಕೊ ಹೊಶಿಡೆ ಹಾಗೂ ರಶ್ಯದ ಯೂರಿ ಮಲೆಂಚೆಂಕೊ ಅವರನ್ನು ಹೊತ್ತ ರಶ್ಯದ ಸೋಯುಜ್‌ ವ್ಯೋಮನೌಕೆ ಭಾರತೀಯ ಸಮಯ ಬೆಳಗ್ಗೆ 8.10ಕ್ಕೆ ನಭಕ್ಕೆ ಚಿಮ್ಮಿತು. ಎರಡು ದಿನಗಳ ಯಾನದ ಬಳಿಕ ವ್ಯೋಮನೌಕೆ ಅಂತಾರಾಷ್ಟ್ರೀಯ ವ್ಯೋಮ ನಿಲ್ದಾಣ(ಐಎಸ್‌ಎಸ್‌)ವನ್ನು ತಲಪಲಿದೆಯೆಂದು ರಶ್ಯದ ವಾರ್ತಾ ಸಂಸ್ಥೆ 'ರಿಯಾ ನೊವೊಸ್ತಿ' ವರದಿ ಮಾಡಿದೆ.


        ಅಭಿಯಾನ 32ರ ಸಿಬಂದಿ ವರ್ಗದಲ್ಲಿ ಓರ್ವ ಫ್ಲೈಟ್‌ ಎಂಜಿನಿಯರ್‌ ಆಗಿರುವ ಸುನೀತಾ ವ್ಯೋಮ ನಿಲ್ದಾಣವನ್ನು ತಲಪಿದ ಬಳಿಕ ಅಭಿಯಾನ 33ರ ಕಮಾಂಡರ್‌ ಹೊಣೆಯನ್ನು ವಹಿಸಿಕೊಳ್ಳಲಿದ್ದಾರೆ. ಸೋಯುಜ್‌ ವ್ಯೋಮನೌಕೆ ಮಂಗಳವಾರ ಭಾರತೀಯ ಸಮಯ ಬೆಳಗ್ಗೆ 10.22ಕ್ಕೆ ವ್ಯೋಮ ನಿಲ್ದಾಣದೊಂದಿಗೆ ಜೋಡಿಕೊಳ್ಳಲಿದೆ.

        ಸೋಯುಜ್‌ ವ್ಯೋಮ ನೌಕೆಯಲ್ಲಿ ತೆರಳಿರುವ ಯಾನಿಗಳು ಮೇ ಮಧ್ಯಭಾಗದಿಂದೀಚೆ ವ್ಯೋಮ ನಿಲ್ದಾಣದಲ್ಲಿರುವ ರಶ್ಯದ ಗಗನಯಾತ್ರಿಗಳಾದ ಗೆನ್ನದಿ ಪದಲ್ಕ ಮತ್ತು ಸೆರ್ಗೆಯಿ ರೆವಿನ್‌ ಹಾಗೂ ನಾಸಾ ಗಗನಯಾತ್ರಿ ಜೋ ಅಕಾಬಾ ಅವರನ್ನು ಕೂಡಿಕೊಳ್ಳುವರು. ನೂತನ ಸಿಬಂದಿ ವರ್ಗ ವ್ಯೋಮ ನಿಲ್ದಾಣದಲ್ಲಿರುವ ವೇಳೆ 30ಕ್ಕೂ ಅಧಿಕ ವೈಜ್ಞಾನಿಕ ಅಭಿಯಾನಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.

        ಸುನೀತಾ ಮತ್ತು ಹೊಶಿಡೆ ಅವರು ಅಮೆರಿಕದ ವ್ಯೋಮ ನೌಕೆಯಲ್ಲಿ ತಲಾ ಒಂದು ಬಾರಿ ವ್ಯೋಮ ನಿಲ್ದಾಣಕ್ಕೆ ತೆರಳಿದ್ದಾರೆ. ಸೋಯುಜ್‌ ನೌಕೆಯಲ್ಲಿ ಇದು ಅವರ ಪ್ರಥಮ ಯಾನವಾಗಿದೆ.

        ಸುನೀತಾ ಅವರನ್ನು 1998ರಲ್ಲಿ ನಾಸಾ ಓರ್ವ ವ್ಯೋಮಯಾನ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಅವರು ಅಭಿಯಾನ 14ರ ಓರ್ವ ಸದಸ್ಯೆಯಾಗಿ ಅಂತಾರಾಷ್ಟ್ರೀಯ ವ್ಯೋಮ ನಿಲ್ದಾಣಕ್ಕೆ ತೆರಳಿದ್ದರು ಮತ್ತು ಅನಂತರ ಅಭಿಯಾನ 15ರಲ್ಲೂ ಸೇರ್ಪಡೆಯಾಗಿದ್ದರು. ಮಹಿಳಾ ವ್ಯೋಮಯಾನಿಗಳ ಪೈಕಿ ಅತ್ಯಂತ ದೀರ್ಘಾವಧಿ(195 ದಿನಗಳು) ವ್ಯೋಮದಲ್ಲಿದ್ದ ದಾಖಲೆ ಅವರ ಹೆಸರಿನಲ್ಲಿದೆ. ಸುನೀತಾ 1995ರಲ್ಲಿ ಫ್ಲೋರಿಡಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಸುನೀತಾ ತಂದೆ ಭಾರತದ ಗುಜರಾತ್‌ನಿಂದ ಅಮೆರಿಕಕ್ಕೆ ವಲಸೆ ಬಂದವರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus