Udayavani | Jul 15, 2012
ಮೈಸೂರು : ಮುಂದಿನ ಎರಡು ತಿಂಗಳ ಒಳಗಾಗಿ ಭಾರತದ 3,400 ಕೆ.ಜಿ. ಭಾರದ ಸಂಪರ್ಕ ಉಪಗ್ರಹ ಜಿಸ್ಯಾಟ್-10ನ್ನು ಅಂತರಿಕ್ಷಕ್ಕೆ ಉಡ್ಡಯಿಸಲು ಇಸ್ರೋ ಸಜ್ಜಾಗಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಉಡ್ಡಯನ ವಾಹನದ ಮೂಲಕ ಫ್ರೆಂಚ್ ಗಯಾನಾದ ಕೌರು ಉಡ್ಡಯನ ಕೇಂದ್ರದಿಂದ ಈ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
30 ಗ್ರಾಹಕ ಪ್ರೇಷಕ ಸಾಧನಗಳನ್ನು ಹೊಂದಿರುವ ಜಿಸ್ಯಾಟ್-10 ಉಪಗ್ರಹ ಉಡ್ಡಯನಕ್ಕೆ ಸಿದ್ಧವಾಗಿದ್ದು, ಸೆಪ್ಟಂಬರ್‌ನ ಮಧ್ಯ ಭಾಗದಲ್ಲಿ ಬಾಹ್ಯಾಕಾಶಕ್ಕೆ ಉಡ್ಡಯಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್ ತಿಳಿಸಿದರು.
ಮುಂದಿನ ವರ್ಷದ ಜನವರಿಯಲ್ಲಿ ಸ್ವದೇಶಿ ನಿರ್ಮಿತ ಇಂಜಿನ್‌ನ್ನು ಒಳಗೊಂಡ ಉಪಗ್ರಹ ಉಡ್ಡಯನ ವಾಹನವಾದ ಜಿಎಸ್‌ಎಲ್‌ವಿಯನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಯೋಜಿಸಲಾಗಿದೆ. ಎಪ್ರಿಲ್ 2010ರಲ್ಲಿ ಪ್ರಥಮ ಬಾರಿಗೆ ಜಿಎಸ್‌ಎಲ್‌ವಿಯನ್ನು ಪರೀಕ್ಷಾರ್ಥವಾಗಿ ಉಡ್ಡಯಿಸಿದ್ದು, ಅದೇ ವರ್ಷದ ಡಿಸೆಂಬರ್‌ನಲ್ಲಿ ರಶ್ಯಾದ ಇಂಜಿನ್‌ನ್ನು ಬಳಸಿ, ನಡೆಸಲಾದ ಪ್ರಯೋಗಾರ್ಥ ಪರೀಕ್ಷೆ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಎಸ್‌ಎಲ್‌ವಿ ಉಡ್ಡಯನದಲ್ಲಿನ ಲೋಪದೋಷಗಳ ಬಗೆಗೆ ವಿಸ್ತೃತ ಅಧ್ಯಯನ ನಡೆಸಿ ಬಳಿಕ ಇದೀಗ ಇದರ ಉಡ್ಡಯನಕ್ಕೆ ತೀರ್ಮಾನಿಸಲಾಗಿದೆ. ಸುಮಾರು 40ಕ್ಕೂ ಅಧಿಕ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗಿದೆ ಎಂದವರು ತಿಳಿಸಿದರು.
ನವೆಂಬರ್ ವೇಳೆಗೆ ಜಿಎಸ್‌ಎಲ್‌ವಿ ಸಿದ್ಧಗೊಳ್ಳಲಿದ್ದು, ಉಡ್ಡಯನಕ್ಕೂ ಮುನ್ನ ಇನ್ನೂ ಎರಡು ಪರೀಕ್ಷೆಗಳನ್ನು ನಡೆಸಲಾಗುವುದು. ಪ್ರಸಕ್ತ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ಜಿಎಸ್‌ಎಲ್‌ವಿಯನ್ನು ಉಡಾವಣೆ ಮಾಡಲಾಗುವುದು ಎಂದು ರಾಧಾಕೃಷ್ಣನ್ ತಿಳಿಸಿದರು.
ಎರಡು ಜಿಎಸ್‌ಎಲ್‌ವಿಗಳ ಯಶಸ್ವೀ ಉಡಾವಣೆಯ ಬಳಿಕ ಚಂದ್ರಯಾನ-2ಯೋಜನೆಗೆ 2014ರಲ್ಲಿ ಚಾಲನೆ ನೀಡಲಾಗುವುದು. ಅಲ್ಲದೆ 2013ರಲ್ಲಿ ಖಗೋಳ ಉಪಗ್ರಹವನ್ನು ಉಡಾಯಿಸುವ ಯೋಜನೆಯೂ ಇಸ್ರೋದ ಮುಂದಿದೆ. ಫ್ರಾನ್ಸ್‌ನ ಜಂಟಿ ಸಹಭಾಗಿತ್ವದೊಂದಿಗೆ 'ಸರಳ್' ಉಪಗ್ರಹವನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಪಿಎಸ್‌ಎಲ್‌ವಿ ಮೂಲಕ ಶ್ರೀಹರಿಕೋಟಾದಿಂದ ಅಂತರಿಕ್ಷಕ್ಕೆ ಉಡಾಯಿಸಲಾಗುವುದು. ಈ ಉಪಗ್ರಹ, ಹವಾಮಾನ ಮುನ್ಸೂಚನೆ, ಸಾಗರ ಹಾಗೂ ಭೂಮಿಯಲ್ಲಿನ ಹವಾಮಾನದ ಕುರಿತಾಗಿನ ಸಂಶೋಧನೆಗೆ ಸಹಕಾರಿಯಾಗಲಿದೆ ಎಂದವರು ಇಸ್ರೋದ ಭವಿಷ್ಯದ ಯೋಜನೆಗಳ ಬಗೆಗೆ ವಿವರಿಸಿದರು.
ಜಿಸ್ಯಾಟ್-10 ಉಪಗ್ರಹವನ್ನು ಸಂಪರ್ಕ ಸೇವೆಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಮೂರು ಟನ್‌ಗಳಿಗೂ ಅಧಿಕ ಭಾರದ ಈ ಉಪಗ್ರಹ ಭೂಸ್ಥಾಯಿಯಾಗಿ ಪರಿಭ್ರಮಣ ನಡೆಸಲಿದೆ. 12 ಸಾಮಾನ್ಯ ಸಿ-ಬ್ಯಾಂಡ್, ಆರು ವಿಸ್ತರಿತ ಸಿ-ಬ್ಯಾಂಡ್ ಹಾಗೂ 12 ಕೆಯು ಬ್ಯಾಂಡ್‌ನ ಗ್ರಾಹಕ ಪ್ರೇಷಕ (ಟ್ರಾನ್ಸ್‌ಪಾಂಡರ್)ಗಳನ್ನು ಹೊಂದಿರಲಿದೆ. ಈ ಉಪಗ್ರಹದ ಜೀವಿತಾವಧಿ 15 ವರ್ಷಗಳಾಗಿವೆ ಎಂದು ಇಸ್ರೋದ ಹಿರಿಯ ಅಧಿಕಾರಿಗಳು ಜಿಸ್ಯಾಟ್-10 ಉಪಗ್ರಹದ ವಿಶೇಷತೆಗಳನ್ನು ವಿವರಿಸಿದರು.