- 2011-12ರಲ್ಲಿ 154 ದಿನ ಬರೀ ಪ್ರವಾಸದಲ್ಲೇ ಕಳೆದ ರಾಜ್ಯಪಾಲ- ರಾಜ್ಯಪಾಲರ 3 ವರ್ಷದ ವಿಮಾನದ ಟಿಕೆಟ್ ಬಿಲ್ 16 ಲಕ್ಷ ರೂ.- 2 ಲಕ್ಷ ರೂ. ತೆತ್ತು ಅಕ್ರಮವಾಗಿ ಎರಡು ಐ-ಫೋನ್ ಖರೀದಿಸಿದ ರಾಜ್ಯಪಾಲ ಕೊನ್ವಾರ್- ಕಾನೂನು ಮೀರಿ ವೆಚ್ಚ ಮಾಡಿದ ಹಣ ಮರಳಿಸಬೇಕು: ಲೆಕ್ಕಪತ್ರ ನಿರ್ದೇಶಕರ ಶಿಫಾರಸುಪಟನಾ: ರಾಜ್ಯಪಾಲರು ರಾಜ್ಯದ ಪ್ರಥಮ ಪ್ರಜೆಯಾಗಿದ್ದರಿಂದ ಅವರ ಖರ್ಚುವೆಚ್ಚವನ್ನು ಸಾಮಾನ್ಯವಾಗಿ ಯಾರೂ ಚರ್ಚಿಸಲು ಹೋಗುವುದಿಲ್ಲ. ಆದರೆ ಬಿಹಾರದ ರಾಜ್ಯಪಾಲ ದೇವಾನಂದ್ ಕೊನ್ವಾರ್ ಅವರು ಕಳೆದ ಮೂರು ವರ್ಷಗಳಿಂದ ಮಾಡಿರುವ ಖರ್ಚುವೆಚ್ಚ ಎಲ್ಲರನ್ನೂ ಅಚ್ಚರಿಗೆ ಬೀಳಿಸಿದೆ. ಮಾತ್ರವಲ್ಲ ಲೆಕ್ಕಪತ್ರ ಪರಿಶೀಲನೆ ಮಾಡಿರುವ ಪ್ರಧಾನ ಲೆಕ್ಕಪತ್ರ ನಿರ್ದೇಶಕರು, ರಾಜ್ಯಪಾಲರು ಕಾನೂನು ಮೀರಿ ವೆಚ್ಚ ಮಾಡಿರುವ ಹಣವನ್ನು ಮರಳಿಸಬೇಕು ಎಂದು ಶಿಫಾರಸು ಮಾಡಿದ್ದಾರೆ.2009-10ರಲ್ಲಿ ಕೊನ್ವಾರ್ 79 ದಿನ ಪ್ರವಾಸ ಕೈಗೊಂಡಿದ್ದರು, 2010-11ರಲ್ಲಿ ಅವರ ಪ್ರಯಾಣ 73 ದಿನಗಳಾಗಿತ್ತು, 2011-12ರಲ್ಲಿ ರಾಜ್ಯಪಾಲರ ಪ್ರವಾಸ ಬಹುತೇಕ ದ್ವಿಗುಣಗೊಂಡು 154 ದಿನಗಳಿಗೆ ಏರಿ ನಿಂತಿದೆ.2011-12ರಲ್ಲಿ ಒಟ್ಟು 53 ಬಾರಿ ರಾಜ್ಯಪಾಲರು ವಿಮಾನದಲ್ಲಿ ಪ್ರಯಾಣ ಕೈಗೊಂಡಿದ್ದು, ಇದಕ್ಕಾಗಿ ಸರ್ಕಾರ ಜನರ ತೆರಿಗೆ ಹಣದಿಂದ 7.80 ಲಕ್ಷ ರೂ. ಪಾವತಿ ಮಾಡಿದೆ. ಅಚ್ಚರಿಯೆಂದರೆ ರಾಜ್ಯಪಾಲರು ಯಾಕಾಗಿ ಎಲ್ಲೆಲ್ಲಿಗೆ ಹೋಗಿದ್ದರು ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆಗಳನ್ನು ಅವರ ಕಚೇರಿ ಇಟ್ಟಿಲ್ಲ. ಒಟ್ಟಾರೆ 3 ವರ್ಷಗಳಲ್ಲಿ ರಾಜ್ಯಪಾಲರ ವಿಮಾನ ಪ್ರಯಾಣಕ್ಕೆಂದೇ 15.68 ಲಕ್ಷ ರೂ. ಖರ್ಚು ಮಾಡಲಾಗಿದೆ.ಫೋನ್ ಗೀಳು:ಇಷ್ಟು ಮಾತ್ರವಲ್ಲ 2011ರಲ್ಲಿ ನಿಯಮಗಳನ್ನು ಮೀರಿ ರಾಜ್ಯಪಾಲರು 2.05 ಲಕ್ಷ ರೂ. ಕೊಟ್ಟು 2 ಐಫೋನ್‌ಗಳನ್ನು ಖರೀದಿ ಮಾಡಿದ್ದಾರೆ.ವಿದೇಶ ಪ್ರವಾಸ:ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ರಾಜ್ಯಪಾಲರು ರಾಷ್ಟ್ರಪತಿಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಆದರೆ ಈ ನಿಯಮಗಳನ್ನೆಲ್ಲಾ ಮೀರಿ ಹಲವು ಬಾರಿ ಕೊನ್ವಾರ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಮೂರು ಬಾರಿ ಅವಧಿಗಿಂತ ಹೆಚ್ಚಿನ ಸಮಯ ಅಲ್ಲೇ ಉಳಿದುಕೊಂಡಿದ್ದಾರೆ.ತವರಿನ ಮೋಹ:ಕಾನೂನಿನ ಅನ್ವಯ ರಾಜ್ಯಪಾಲರು ಖಾಸಗೀ ಕೆಲಸಕ್ಕಾಗಿ ವರ್ಷದಲ್ಲಿ 2 ಬಾರಿ ತವರು ರಾಜ್ಯಕ್ಕೆ ಹೋಗಬಹುದು. ಆದರೆ ಕೊನ್ವಾರ್ 3 ವರ್ಷಗಳಲ್ಲಿ 25 ಬಾರಿ ತವರಿನ ಪ್ರವಾಸ ಕೈಗೊಂಡಿದ್ದಾರೆ.ಇಷ್ಟು ಮಾತ್ರವಲ್ಲದೆ ತಾವು ಹೋದಲ್ಲೆಲ್ಲಾ ತಮ್ಮ ಪತ್ನಿ, ಆಪ್ತ ಕಾರ್ಯದರ್ಶಿ, ಸಲಹೆಗಾರನನ್ನು ಕಾನೂನು ಮೀರಿ ಕರೆದುಕೊಂಡು ಹೋಗಿ ಬೊಕ್ಕಸಕ್ಕೆ ನಷ್ಟ ಮಾಡಲಾಗಿದೆ ಎಂದು ಲೆಕ್ಕಪತ್ರ ಅಧಿಕಾರಿಗಳ ವರದಿಯಲ್ಲಿ ಹೇಳಲಾಗಿದೆ.