Udayavani | Jul 15, 2012
ಪುತ್ತೂರು: ಶಿಶಿಲ ಗ್ರಾಮದ ಪರಿಸರಕ್ಕೆ ಹೊಂದಿಕೊಂಡಂತೆ ಕಳಂಜ ಕಾಯರ್ತಡ್ಕದ ಚಿಂಗಾಣಿಗುಡ್ಡ ಪ್ರದೇಶದಲ್ಲಿ ಸುಮಾರು 20ರಷ್ಟು ಮಂದಿ ಇರುವ ನಕ್ಸಲರ ತಂಡ ಗ್ರಾಮಸ್ಥರಿಗೆ ಕಾಣಸಿಕ್ಕಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಬೂಟುಗಳ ಗುರುತು ಪತ್ತೆಯಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯಂತೆ ಶೋಧ ಕಾರ್ಯಾಚರಣೆ ಶನಿವಾರ ಇಲ್ಲಿ ನಡೆದಿದೆ.
ಒಂದು ಮೂಲದ ಪ್ರಕಾರ ಶಿಶಿಲ ಗ್ರಾಮ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ತಂಡ ಅವಿತುಕೊಂಡಿದೆ. ಈ ಮಾಹಿತಿಯ ಆಧಾರದಲ್ಲಿ ಶಿಶಿಲ ಗ್ರಾಮವೂ ಸೇರಿದಂತೆ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಏಕಕಾಲದಲ್ಲಿ ನಡೆಸಲು ಎಲ್ಲಾ ಸಿದ್ಧತೆಗಳು ನಡೆದಿವೆ.
ಶಿಶಿಲ ಗ್ರಾಮದ ಸುದೆಗಂಡಿ ಪ್ರದೇಶದಲ್ಲಿ 30 ಮನೆಗಳಿವೆ. ಇಲ್ಲಿ ಆರು ಮಂದಿ ನಿವಾಸಿಗರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಉಳಿದಂತೆ ಎಲ್ಲರಿಗೂ ಹಕ್ಕುಪತ್ರ ಸಿಕ್ಕಿದೆ. ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಡಿ ಶಿಶಿಲ ಗ್ರಾಮ ಬರುತ್ತಿದ್ದು, ಇಲ್ಲಿನ ಅರಣ್ಯ ವಾಸಿ ಕೃಷಿಕರನ್ನು ಮತ್ತು ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ವದಂತಿಯನ್ನು ಹಬ್ಬಿಸಿರುವ ಕಾರಣ ನಕ್ಸಲರು ಈ ವದಂತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ನಮಗೆ ರಕ್ಷಣೆ ನೀಡಿ
ಶಿಶಿಲ ಗ್ರಾಮದ ಸುದೆಗಂಡಿ ಅಮ್ಮುಡಂಗೆ ಪ್ರದೇಶದ ಜನರು ನಕ್ಸಲರಿಂದ ನಮಗೆ ರಕ್ಷಣೆ ನೀಡಬೇಕು. ಈ ಕುರಿತು ಪೊಲೀಸರು ಮತ್ತು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರಲ್ಲಿ ತಮ್ಮ ಅಳಲು ತೋಡಿಕೊಂಡರು.
ನಕ್ಸಲರು ಕೋವಿ ಹಿಡಿದು ಬಂದು ಅಕ್ಕಿ, ಬೇಳೆ ಕೇಳಿದಾಗ ಇಲ್ಲವೆಂದರೆ ನಮ್ಮನ್ನು ಗದರಿಸುತ್ತಾರೆ. ಇವರು ಅಕ್ಕಿ, ಬೇಳೆ ಕೊಂಡುಹೋಗಿರುವ ವಿಚಾರವನ್ನು ಪೊಲೀಸರ ಬಳಿ ಮುಚ್ಚಿಟ್ಟರೆ ಪೊಲೀಸರು ನಮ್ಮನ್ನು ಸಂಶಯಿಸುತ್ತಾರೆ. ಪೊಲೀಸರಿಗೆ ನಾವು ವಿಚಾರ ತಿಳಿಸಿರುವುದು ನಕ್ಸಲರಿಗೆ ಗೊತ್ತಾದರೆ ಅವರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಶಿಶಿಲಕ್ಕೆ ನಕ್ಸಲರ ಭೇಟಿ ನಿಜ: ಆಲೋಕ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮಕ್ಕೆ ನಕ್ಸಲರು ಬಂದಿರುವುದು ನಿಜ. ಇಲ್ಲಿನ ನಾಲ್ಕು ಮನೆಗಳಿಗೆ ಭೇಟಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಮಂಗಳವಾರ ಮತ್ತು ಶುಕ್ರವಾರ ನಕ್ಸಲರ ತಂಡ ಭೇಟಿ ನೀಡಿರುವುದು ಖಚಿತವಾಗಿದೆ ಎಂದು ಕರ್ನಾಟಕ ನಕ್ಸಲ್ ನಿಗ್ರಹ ಪಡೆಯ ಐಜಿಪಿ ಆಲೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಶಿಶಿಲ ಗ್ರಾಮದ ಸುದೆಗಂಡಿ ಪ್ರದೇಶದಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಅರಣ್ಯ ಪರಿಸರದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಅವರು ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ನಕ್ಸಲರು ಚಟುವಟಿಕೆ ನಿರತರಾಗಿದ್ದಾರೆ. ನಕ್ಸಲ್ ಚಟುವಟಿಕೆಗಳ ನಿಗ್ರಹಕ್ಕೆ ಕಾರ್ಯ ಪಡೆ ಎಲ್ಲಾ ರೀತಿಯಿಂದಲೂ ಸನ್ನದ್ಧಗೊಂಡಿದೆ ಎಂದರು.
ಗೌಪ್ಯತೆ ದೃಷ್ಟಿಯಿಂದ ಕಾರ್ಯಾಚರಣೆ ಕುರಿತಂತೆ ಯಾವುದೇ ಮಾಹಿತಿಗಳನ್ನು ಮಾಧ್ಯಮಕ್ಕೆ ನೀಡಲು ನಿರಾಕರಿಸಿದ ಅವರು, ನಕ್ಸಲ್ ಪೀಡಿತ ಪ್ರದೇಶದ ಜನರ ಸಮಸ್ಯೆಗಳ ಕುರಿತಂತೆ ಸರಕಾರ ಎಲ್ಲಾ ರೀತಿಯ ಸ್ಪಂದನ ನೀಡುತ್ತಿದ್ದು, ಈ ಭಾಗದ ಜನರಲ್ಲಿ ನಕ್ಸಲರ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಜತೆಗೆ ರಕ್ಷಣೆಯನ್ನೂ ಇಲಾಖೆ ಮಾಡಲಿದೆ ಎಂದರು.
ನೆಲ್ಯಾಡಿ ಪೊಲೀಸ್ ಹೊರಠಾಣೆ ಮತ್ತು ಗುಂಡ್ಯದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಲೋಕ್ ಕುಮಾರ್ ಶಿಶಿಲ ಗ್ರಾಮದ ಅಮ್ಮುಡಂಗೆ, ಸುದೆಗಂಡಿ ಪ್ರದೇಶಗಳಿಗೆ ಭೇಟಿ ನೀಡಿ ನಕ್ಸಲರ ಕುರಿತಂತೆ ಮಾಹಿತಿ ಸಂಗ್ರಹ ಮಾಡಿದರು. ಕಾರ್ಯಾಚರಣೆ ಕುರಿತು ವಿವರವಾದ ಮಾಹಿತಿಯನ್ನು ಮುಂದೆ ನೀಡಲಾಗುವುದು ಎಂದು ಉತ್ತರಿಸಿದರು.
ಪುತ್ತೂರು ಎಎಸ್ಪಿ$ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು.