Udayavani | Jul 15, 2012
ಸುಬ್ರಹ್ಮಣ್ಯ: ಮಡೆಮಡೆ ಸ್ನಾನ ಹರಕೆ ಸೇವೆಯ ಕುರಿತು ಎದ್ದಿರುವ ಪರ-ವಿರೋಧ ಅಭಿಪ್ರಾಯಗಳ ನಿವಾರಣೆಗಾಗಿ, ಕ್ಷೇತ್ರದ ಪಾವಿತ್ರ ರಕ್ಷಣೆ ಹಾಗೂ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಬಾರದಂತೆ ಸರಕಾರವು ಈ ವಿಚಾರದ ಕುರಿತು ಆಯೋಗವನ್ನು ರಚಿಸುವಂತೆ ಇಂದು ಸುಬ್ರಹ್ಮಣ್ಯದಲ್ಲಿ ಜರಗಿದ ಊರ ನಾಗರಿಕರ ಸಭೆಯಲ್ಲಿ ಆಗ್ರಹಿಸಲಾಯಿತು.
ನಾಗಾರಾಧನೆಯ ಪ್ರಸಿದ್ಧ ಕೇಂದ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯಾದ ಷಷ್ಟಿ ವೇಳೆ ಮೂರು ದಿನಗಳ ಕಾಲ ನಡೆಯುವ ಮಡೆಮಡೆಸ್ನಾನ ಹರಕೆ ಸೇವೆ ಕ್ಷೇತ್ರದ ವಿಶಿಷ್ಟ ಸಂಪ್ರದಾಯವಾಗಿದೆ.
ಆಯೋಗವು ಮುಂದಿನ ಷಷ್ಟಿ ಸಮಯದಲ್ಲಿ ಸುಬ್ರಹ್ಮಣ್ಯಕ್ಕೆ ಬಂದು ಖುದ್ದಾಗಿ ಮಡೆಮಡೆಸ್ನಾನವನ್ನು ಪರಿಶೀಲಿಸಿ, ಪರ-ವಿರೋಧದವರ ಅಭಿಪ್ರಾಯದೊಂದಿಗೆ ಹರಕೆ ಸೇವಾರ್ಥಿಗಳ, ಊರವರ, ಭಕ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸಭೆ ಇಂಗಿತ ವ್ಯಕ್ತಪಡಿಸಿತು.
ಖಂಡನೀಯ: ರವೀಶ ತಂತ್ರಿ
ಕುಂಟಾರು ರವೀಶ ತಂತ್ರಿ ಅವರು ಮಾತನಾಡಿ, ಅನ್ಯಮತೀಯರ ಶ್ರದ್ಧಾ ಕೇಂದ್ರಗಳ ಬಗ್ಗೆ ಮಾತನಾಡದ ಸರಕಾರ ಯಾ ಇಲಾಖೆಯು ಹಿಂದೂ ಧಾರ್ಮಿಕ ಕೇಂದ್ರಗಳ ಆಚರಣೆ, ಸಂಪ್ರದಾಯಗಳ ಬಗ್ಗೆ ಹಸ್ತಕ್ಷೇಪ ಮಾಡುವುದು ಖಂಡನೀಯ. ಸಮಸ್ತ ಹಿಂದೂ ಬಾಂಧವರು ಶ್ರದ್ಧಾ ಕೇಂದ್ರಗಳ ಮೇಲೆ ಸಂಪ್ರದಾಯ ವಿರೋಧಿ ಹೆಸರಿನಲ್ಲಿ ಅನ್ಯರು ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ. ಇಲ್ಲವಾದಲ್ಲಿ ಸೂಕ್ತ ಬೆಲೆಯನ್ನು ತೆರಬೇಕಾದೀತು ಎಂದು ಎಚ್ಚರಿಸಿದರು.
ಏಕಪಕ್ಷೀಯವಾಗಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ರೂಪಾಂತರ ಮಾಡುವುದಕ್ಕೆ ಮೊದಲು ಅಷ್ಟಮಂಗಲ ಪ್ರಶ್ನೆ ಇರಿಸಿ ಅನಂತರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಭಕ್ತರ ಸಹಮತವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ದೇವಸ್ಥಾನವು ಭಕ್ತಿಶ್ರದ್ಧೆಯ ಕೇಂದ್ರವೇ ಹೊರತು ಸಾಮಾಜಿಕ ಚಟುವಟಿಕೆಗಳ ಕೇಂದ್ರವಲ್ಲ. ಕೆಲವರು ಇದರ ರೂಪಾಂತರಕ್ಕೆ ಸಂಚು ನಡೆಸುತ್ತಿರುವುದು ಖಂಡನೀಯ ಎಂದು ಲಕ್ಷ್ಮೀಶ ಗಬ್ಲಿಡ್ಕ ಹೇಳಿದರು.
ನಮ್ಮ ಆಕ್ಷೇಪ ಇಲ್ಲ
ದ.ಕ. ಜಿಲ್ಲೆಯ ಯಾವ ದಲಿತರೂ ಇಲ್ಲಿನ ಸಂಪ್ರದಾಯದ ಕುರಿತು ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ದಲಿತ ಮುಖಂಡ ಅಚ್ಯುತ ಮಲ್ಕಜೆ ಹೇಳಿದರು.
ಯಥಾವತ್ ಮುಂದುವರಿಯಲಿ
ಹೈಕೋರ್ಟ್ ನ್ಯಾಯವಾದಿ ಧರ್ಮಪಾಲ ಎಣ್ಣೆಮಜಲು, ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ, ಮೇಲಾ°ಡ್ ಚಂದ್ರಶೇಖರ್, ಮಲೆಕುಡಿಯ ಜನಾಂಗದ ಗುರಿಕಾರ ಮೋಂಟ, ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಸೇರಿದಂತೆ 20ಕ್ಕೂ ಅಧಿಕ ಮಂದಿ ಮಡೆಮಡೆಸ್ನಾನ ಯಥಾವತ್ತಾಗಿ ಮುಂದುವರಿಯಲೆಂದರು. 200ಕ್ಕೂ ಅಧಿಕ ಭಕ್ತರು ಉಪಸ್ಥಿತರಿದ್ದರು.
ಸಂಘಟಕ ರಾಜೇಶ್ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಮಾನವ ಹಕ್ಕುಗಳ ಆಯೋಗದವರು ಸುಬ್ರಹ್ಮಣ್ಯದ ನಾಗರಿಕರಿಗೆ ಕಳುಹಿಸಿದ ಪತ್ರಕ್ಕನುಗುಣವಾಗಿ ಇಂದು ನಡೆದ ಸಭೆಯ ವೀಡಿಯೋ, ಹಾಗೂ ಸಮಗ್ರ ವರದಿಯನ್ನು ಆಯೋಗಕ್ಕೆ ಕಳುಹಿಸಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ.