Udayavani | Jul 15, 2012
ಸುಳ್ಯ: ಸದಾನಂದ ಗೌಡ ಅವರನ್ನು ವಿನಾಕಾರಣ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಸುಳ್ಯ ಕ್ಷೇತ್ರದ ಬಿಜೆಪಿಯ ಜನಪ್ರತಿನಿಧಿಗಳು ಮತ್ತು ಪಕ್ಷದ ವಿವಿಧ ಜವಾಬ್ದಾರಿ ಹೊತ್ತ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿದ್ದು, ಸಚಿವ ಸ್ಥಾನ ಸಿಗದ ಶಾಸಕ ಎಸ್. ಅಂಗಾರ ಅವರು ತನ್ನವರ ನೋವಿಗೆ ಸ್ಪಂದಿಸಿ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ಬಗ್ಗೆ ಮತ್ತು ಬಿಜೆಪಿ ನಡೆ ಏನು ಎಂಬ ಕುರಿತು ಚರ್ಚಿಸಲು ಬಿಜೆಪಿ ಮುಖಂಡರು ಶಾಸಕ ಅಂಗಾರ ಮನೆಯಲ್ಲಿ ರವಿವಾರ ಸಭೆ ನಡೆಸಿದರು.
ಸುಳ್ಯ ಕ್ಷೇತ್ರವನ್ನು ಅವಗಣಿಸುತ್ತಾ ಬರಲಾಗುತ್ತಿದೆ. ಅನುದಾನ ನೀಡುವಲ್ಲೂ ಅಲ್ಲದೆ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವಲ್ಲೂ ಪ್ರಾತಿನಿಧ್ಯ ನೀಡಿಮ್ಮ ಸುಳ್ಯ ಕ್ಷೇತ್ರದ ಜನತೆಯ ಹಾಗೂ ಪಕ್ಷದ ಆಕ್ರೋಶ ವ್ಯಕ್ತಪಡಿಸಲು ಪಕ್ಷದ ವರಿಷ್ಠರಿಗೆ, ರಾಜ್ಯಾಧ್ಯಕ್ಷರಿಗೆ, ಮುಖ್ಯಮಂತ್ರಿ ಅವರಿಗೆ ಲಿಖೀತ ಹಾಗೂ ಮುಖತಃ ತಿಳಿಸಲು ನಿರ್ಧರಿಸಲಾಗಿದೆ. ಒಂದು ವಾರ ಕಾದು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ಮತ್ತು ಶಾಸಕ ಅಂಗಾರ ರಾಜೀನಾಮೆ ಕೊಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ಪಿ.ಜಿ.ಎಸ್.ಎನ್. ಪ್ರಸಾದ್, ಮುಳಿಯ ಕೇಶವ ಭಟ್, ನವೀನ್ ರೈ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಕಚೇರಿ ಬಂದ್
ಬಿಜೆಪಿಗೆ ಪಕ್ಷದ ಜನಪ್ರತಿನಿಧಿಗಳು ಮತ್ತು ವಿವಿಧ ಹುದ್ದೆ ಹೊತ್ತವರು ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ ಶುಕ್ರವಾರದಿಂದ ಬಿಜೆಪಿ ಕಚೇರಿಯ ಬೀಗ ತೆರೆದಿಲ್ಲ.
ನಾಲ್ಕು ಬಾರಿ ಶಾಸಕ ಎಸ್. ಅಂಗಾರ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಶಾಸಕರು, ಜಿ.ಪಂ., ತಾ.ಪಂ., ನ.ಪಂ., ಗ್ರಾ.ಪಂ.ಗಳಲ್ಲಿ ಬಿಜೆಪಿ ಪಾರಮ್ಯ ಮೆರೆದಿದ್ದು, ಸುಳ್ಯ ಬಿಜೆಪಿಯ ಭದ್ರಕೋಟೆಯಾಗಿದೆ. ಬಹಳಷ್ಟು ಬಿಜೆಪಿ ವರಿಷ್ಠರು ಸುಳ್ಯ ಕ್ಷೇತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಬಂದಿದ್ದರೂ ಸುಳ್ಯಕ್ಕೆ ಪ್ರಾತಿನಿಧ್ಯ ನೀಡುವಲ್ಲಿ ಮಾತ್ರ ಆಸಕ್ತಿ ತಳೆದಿಲ್ಲ ಎಂಬುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.