ಜಮ್ಮು : ಅಮರನಾಥ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಒಂದು ಕಮರಿಗೆ ಉರುಳಿ ಬಿದ್ದು 15 ಮಂದಿ ಸಾವನ್ನಪ್ಪಿದ್ದಾರೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮ್‌ಬನ್ ಜಿಲ್ಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, 18ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಕಾಶ್ಮೀರ ಕಣಿವೆಯಿಂದ ಜಮ್ಮುವಿಗೆ ತೆರಳುತ್ತಿದ್ದ ಈ ಸರಕಾರಿ ಬಸ್, ಶನಿವಾರ ರಾತ್ರಿ ಘಂಟೆ 11.20ರ ಸುಮಾರಿಗೆ ಸ್ಕಿಡ್ ಆಗಿ ಕಮರಿಗೆ ಉರುಳಿ ಬಿದ್ದಿತು ಎಂದು ರಾಮ್‌ಬನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಮಗೋತ್ರ ತಿಳಿಸಿದರು. ಅಫಘಾತದಲ್ಲಿ ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಫಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದರು. ರವಿವಾರ ಬೆಳಗ್ಗೆವರೆಗೆ ರಕ್ಷಣಾ ಕಾರ್ಯ ಮುಂದುವರಿದು, ಸ್ಥಳದಿಂದ 14 ಶವಗಳನ್ನು ಮೇಲಕ್ಕೆತ್ತಲಾಗಿದೆ. ಇನ್ನೋರ್ವ ಪ್ರಯಾಣಿಕ ಜಮ್ಮುವಿನ ಜಿಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಕೆಲ ಗಾಯಾಳುಗಳನ್ನು ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಬಹುತೇಕ ಮಂದಿ ಹೊರರಾಜ್ಯದವರಾಗಿದ್ದು, ಅಮರನಾಥ ಯಾತ್ರಾರ್ಥಿಗಳಾಗಿದ್ದಾರೆ. ಆದರೆ ಈ ಬಗ್ಗೆ ನೋಂದಣಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಖಚಿತಪಡಿಸಬಹುದಾಗಿದೆ ಎಂದು ಅನಿಲ್ ಮಗೋತ್ರ ತಿಳಿಸಿದರು.ಈ ನಡುವೆ ರಾಜ್ಯ ಸರಕಾರ, ಅಪಘಾತದಲ್ಲಿ ಸಾವಿಗೀಡಾದ ಅಮರನಾಥ ಯಾತ್ರಿಗಳ ಬಗೆಗೆ ವರದಿ ನೀಡುವಂತೆ ರಾಮ್‌ಬನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ.