Udayavani | Jul 15, 2012
-ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಯೋಜನೆ
-ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಒ ಕಚೇರಿಯಲ್ಲಿ 24ರಿಂದ ಆರಂಭ
-ಮತ್ತೂಬ್ಬರ ಜೀವ ಉಳಿಸಲು ಈ ಕ್ರಮ
ಬೆಂಗಳೂರು: ಮರಣದ ನಂತರ ಅಂಗಾಂಗ ದಾನ ಮಾಡಿ ಮತ್ತೂಂದು ಜೀವಕ್ಕೆ ನೆರವಾಗುವಿರಾ? ಹಾಗಾದರೆ, ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಹೋದಾಗ ನೋಂದಣಿ ಮಾಡಿಸಿ. ಏಕೆಂದರೆ, ಅಂಗಾಂಗ ದಾನ ಮಾಡಲು ಬಯಸುವ ವ್ಯಕ್ತಿಯ ವಾಹನ ಚಾಲನಾ ಪರವಾನಗಿ (ಡ್ರೆùವಿಂಗ್ ಲೈಸೆನ್ಸ್)ಯಲ್ಲಿ ಹಸಿರು ಬಣ್ಣದ ಹೃದಯ ಗುರುತು ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ರೂಪಿಸಿರುವ ಈ ಯೋಜನೆ ಬೆಂಗಳೂರಿನಲ್ಲಿ ಆರಂಭಗೊಳ್ಳುತ್ತಿದ್ದು ಜುಲೈ 24ರಂದು ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಓ (ಪ್ರಾದೇಶಿಕ ಸಾರಿಗೆ) ಕಚೇರಿಯಲ್ಲಿ ಚಾಲನೆ ದೊರೆಯಲಿದೆ.
ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಓ ಕಚೇರಿಯಲ್ಲಿ ಜು.24ರಿಂದ ಡ್ರೈವಿಂಗ್ ಲೈಸೆನ್ಸ್ ಅರ್ಜಿಯೊಂದಿಗೆ ಅಂಗಾಂಗ ದಾನದ ಅರ್ಜಿಯೂ ಸಿಗಲಿದ್ದು, ಅರ್ಜಿದಾರರು ಇಚ್ಛೆಪಟ್ಟಲ್ಲಿ ಆ ಅರ್ಜಿಯನ್ನು ಭರ್ತಿ ಮಾಡಬಹುದು. ನಂತರ ಚಾಲನಾ ಪರವಾನಗಿಯಲ್ಲಿ ಹಸಿರು ಹೃದಯದ ಗುರುತು (ಸ್ಟಿಕರ್) ಹಾಕಿಕೊಡಲಾಗುವುದು. ಇದರಿಂದ ಅಂಗದಾನಿಗಳನ್ನು ಗುರುತಿಸಲು ಸಹಾಯವಾಗುತ್ತದೆ.
ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಅಂಗಾಂಗ ಕೊರತೆಯನ್ನು ನೀಗಿಸುವ ಸಲುವಾಗಿ ಗಿಫ್ಟ್ ಯುರ್ ಆರ್ಗನ್ ಫೌಂಡೇಶನ್ ಸಾರಿಗೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಝೆಡ್‌ಸಿಸಿಕೆ ಸಂಸ್ಥೆಗಳ ಜತೆಗೂಡಿ ಈ ಯೋಜನೆ ರೂಪಿಸಿದೆ.
ಹಂತಹಂತವಾಗಿ ರಾಜ್ಯಾದ್ಯಂತ ವಿಸ್ತರಣೆ:
ಪ್ರತಿ ತಿಂಗಳು ಚಾಲನಾ ಪರವಾನಗಿಗಾಗಿ 1.50 ಲಕ್ಷ ಅರ್ಜಿಗಳು ಸಾರಿಗೆ ಇಲಾಖೆಯಲ್ಲಿ ಸ್ವೀಕಾರವಾಗಲಿದ್ದು, ಸಾರಿಗೆ ಇಲಾಖೆ ಮುಖಾಂತರವೇ ಈ ಯೋಜನೆ ಜಾರಿಗೊಳಿಸುವುದು ಸೂಕ್ತ ಎಂದು ಪ್ರಾರಂಭಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಓ ಕಚೇರಿಯಲ್ಲಿ ದೊರೆಯುವ ಪ್ರತಿಕ್ರಿಯೆ ನಂತರ ಬೆಂಗಳೂರಿನ ಇತರ ಆರ್‌ಟಿಓ ಕಚೇರಿಗಳಲ್ಲಿ ಪ್ರಾರಂಭಿಸಲಾಗುವುದು. ನಂತರ ಹಂತ ಹಂತವಾಗಿ ಇಡೀ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎನ್ನುತ್ತಾರೆ ಗಿಫ್ಟ್ ಯುರ್ ಆರ್ಗನ್ ಫೌಂಡೇಶನ್‌ನ ಬೆಂಗಳೂರು ನಗರ ಸಂಯೋಜಕಿ ಪ್ರಿಯಾಂಕಾ ಶೈಲೇಂದ್ರ.
2005 ರಿಂದ 2012ರವರೆಗೆ ಅಂಗಾಗಂಗಳ ಕೊರತೆಯಿಂದಾಗಿ ದೇಶದಲ್ಲಿ 30 ಲಕ್ಷ ಮಂದಿ ಮೃತಪಟ್ಟಿದ್ದಾರೆ. ವೈದ್ಯಲೋಕ ಬಹಳಷ್ಟು ಮುಂದುವರೆದಿರುವ ಈ ದಿನಗಳಲ್ಲಿ ಅಂಗಾಂಗಗಳ ಕಸಿ ಹೆಚ್ಚು ಉಪಯೋಗವಾಗುತ್ತಿವೆ. ಆದರೆ, ಭಾರತದಲ್ಲಿ ಈ ಬಗ್ಗೆ ಇಲ್ಲಿನ ಜನರಿಗೆ ಅರಿವೇ ಇಲ್ಲ. ಅಕಾಲಿಕ ಮರಣಕ್ಕೆ ತುತ್ತಾಗುವವರ ಅಂಗಾಂಗಳಲ್ಲಿ ಯಾವ ಸಮಸ್ಯೆಯೂ ಇರುವುದಿಲ್ಲ. ಹೀಗಾಗಿ, ಮೃತರ ಅಂಗಾಂಗಳನ್ನು ಅವರ ಕುಟುಂಬದವರು ದಾನ ಮಾಡಿದರೆ ಅನೇಕ ಮಂದಿಯ ಜೀವ ಉಳಿಯಲಿದೆ.
ಅಮೆರಿಕದಲ್ಲಿ ಶೇ.98.6ರಷ್ಟು ಮಂದಿ ಚಾಲನಾ ಪರವಾನಗಿ ಮೂಲಕವೇ ಅಂಗಾಂಗಗಳ ದಾನಕ್ಕೆ ಸಮ್ಮತಿ ಸೂಚಿಸಿದ್ದಾರೆ. ಅಲ್ಲದೇ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದು ಪ್ರಿಯಾಂಕಾ ಶೈಲೇಂದ್ರ ಹೇಳುತ್ತಾರೆ.
ಸಾರಿಗೆ ಇಲಾಖೆಯು ಈ ಯೋಜನೆಯ ಬಗ್ಗೆ ಆಸಕ್ತಿ ವಹಿಸಿದ್ದು, ಗಿಫ್ಟ್ ಯುರ್ ಆರ್ಗನ್ ಫೌಂಡೇಶನ್‌ಗೆ ಸಹಕಾರ ನೀಡಲಾಗಿದೆ. ಡಿ.ಎಲ್.ನಲ್ಲಿ ಹೃದಯ ಗುರುತಿನ ಸ್ಟಿಕರ್ ಅಂಟಿಸಲು ಅನುಮತಿ ನೀಡಲಾಗಿದೆ. ಇದರಿಂದ ಹೆಚ್ಚು ಅನುಕೂಲವಿದೆ. ಆದರೆ, ಜನರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ಶಾಮ್ ಭಟ್.
ಅರ್ಜಿ ಹೀಗಿರುತ್ತದೆ:
ಚಾಲನಾ ಪರವಾನಗಿ ಪಡೆಯಲು ಹೋದಾಗ ಅರ್ಜಿಯೊಂದಿಗೆ ಅಂಗದಾನದ ಅರ್ಜಿಯನ್ನೂ ನೀಡಲಾಗುವುದು. ಅರ್ಜಿಯಲ್ಲಿ ಅಂಗದಾನ ಮಾಡಲು ಇಚ್ಛಿಸುವಿರಾ? ಎಂಬ ಪ್ರಶ್ನೆ ಜತೆಗೆ ಹೌದು (ಯೆಸ್) ಹಾಗೂ ನೋ (ಇಲ್ಲ) ಎಂಬ ಆಯ್ಕೆಗಳಿರುತ್ತವೆ. ಅರ್ಜಿದಾರರು ಇಚ್ಛಿಸಿದಲ್ಲಿ ಯಾವ್ಯಾವ ಅಂಗಗಳನ್ನು ದಾನ ಮಾಡುವಿರಿ? ಎಂಬ ಪ್ರಶ್ನೆಯಡಿ ಕಿಡ್ನಿ, ಹೃದಯ, ಲಿವರ್, ಕಣ್ಣು, ಮೂಳೆ, ಚರ್ಮ, ಕರಳು ಸೇರಿದಂತೆ ಅನೇಕ ಅಂಗಾಂಗಗಳ ಪಟ್ಟಿ ಇರುತ್ತದೆ. ದಾನಿಯು ಈ ಅಂಗಾಂಗಗಳ ಹೆಸರಿನ ಮುಂದೆ ಸರಿ ಗುರುತನ್ನು ಹಾಕಬೇಕಾಗುತ್ತದೆ.
ಅಂಗದಾನಿ ಅಕಾಲಿಕ ಮರಣಕ್ಕೆ ಒಳಗಾದರೆ ಕುಟುಂಬ ಸದಸ್ಯರು ಸಂಬಂಧಪಟ್ಟ ವೈದ್ಯರಿಗೆ ತಿಳಿಸಬೇಕು ಅಥವಾ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ ವೈದ್ಯರು ಮುಂದಿನ ಪ್ರಕ್ರಿಯೆಗೆ ಮುಂದಾಗಲಿದ್ದಾರೆ. ಆದರೆ, ಇದಕ್ಕೆಲ್ಲಾ ಕುಟುಂಬದವರ ಅನುಮತಿ ಕಡ್ಡಾಯವಾಗಿರುತ್ತದೆ. ನಂತರ, 4 ಮಂದಿ ವೈದ್ಯರು ಮೃತರ ಶವವನ್ನು ಪರೀಕ್ಷಿಸಿ ಅಂಗಾಂಗಗಳ ದಾನ ಪಡೆಯಲು ಪ್ರಮಾಣ ಪತ್ರ ನೀಡಲಿದ್ದಾರೆ.