ಹುಬ್ಬಳ್ಳಿ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ತವರೂರಿಗೆ ಆಗಮಿಸಿದ ಜಗದೀಶ ಶೆಟ್ಟರ ಅವರನ್ನು ಸ್ವಾಗತಿಸಲು ಧಾರವಾಡ ಜಿಲ್ಲೆಯ ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ ಹಾಗೂ ಕುಂದಗೋಳ ಕ್ಷೇತ್ರದ ಶಾಸಕ ಎಸ್.ಐ. ಚಿಕ್ಕನಗೌಡ್ರ ವಿಮಾನ ನಿಲ್ದಾಣಕ್ಕೂ ಆಗಮಿಸಿರಲಿಲ್ಲ.ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರು ಹುಬ್ಬಳ್ಳಿಗೆ ಬಂದಾಗಲೆಲ್ಲ ಈ ಮೂವರೂ ಶಾಸಕರು ತಾವಲ್ಲದೆ ತಮ್ಮ ಬೆಂಬಲಿರನ್ನೂ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬಂದು ಸ್ವಾಗತಿಸುತ್ತಿದ್ದರು. ಆದರೆ ತಮ್ಮ ಜಿಲ್ಲೆಯವರೇ ಆದ ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಅನಂತರ ಜಿಲ್ಲೆಗೆ ಪ್ರಪ್ರಥಮವಾಗಿ ಆಗಮಿಸುತ್ತಿರುವ ಸಂದರ್ಭದಲ್ಲಿ ಈ ಮೂವರು ಶಾಸಕರು ಗೈರಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.ಸಚಿವ ಸ್ಥಾನ ದೊರಕದಿದ್ದರಿಂದ ಅಸಮಾಧಾನಗೊಂಡು ಬಂದಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಮೊದಲೇ ನಿಗದಿಯಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ತೆರಳಿದ್ದರಿಂದ ಇಲ್ಲಿಗೆ ಬಂದಿಲ್ಲ ಎಂದು ಹೇಳಿ ಚರ್ಚೆಗೆ ತೆರೆ ಎಳೆಯಲು ಪ್ರಯತ್ನಿಸಿದರು. ಆದರೆ ಇವರ ಗೈರು ಹಾಜರಿ ಸಾಕಷ್ಟು ಚರ್ಚೆಗಂತೂ ಕಾರಣವಾಯಿತು.ಸಮಜಾಯಿಷಿ: ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು, ರವಿವಾರ ಹುಬ್ಬಳ್ಳಿಗೆ ಬರುವುದು ಕೊನೇ ಕ್ಷಣದಲ್ಲಿ ನಿರ್ಧಾರವಾದ ಕಾರ್ಯಕ್ರಮ. ಹೀಗಾಗಿ ಪೂರ್ವನಿರ್ಧರಿತ ಕಾರ್ಯಕ್ರಮ ತಪ್ಪಿಸಿಕೊಳ್ಳಲಾಗದೆ ಮೂವರೂ ಶಾಸಕರು ಅನಿವಾರ್ಯವಾಗಿ ಇಲ್ಲಿಗೆ ಬರಲಿಲ್ಲ ಎಂದು ಜಿಲ್ಲಾ ಬಿಜೆಪಿ ಹೇಳಿದೆ.ಶಾಸಕ ಚಂದ್ರಕಾಂತ ಬೆಲ್ಲದ ಅವರು ವೈದ್ಯಕೀಯ ಕಾರಣಕ್ಕೆ ಮೊದಲೇ ಪಾಂಡಿಚೆರಿಗೆ ತೆರಳಿದ್ದು, ಹೀಗಾಗಿ ಅವರು ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ.ಶಾಸಕರಾದ ಎಸ್.ಐ. ಚಿಕ್ಕನಗೌಡ್ರ ಮೊದಲೇ ನಿಗದಿಯಾಗಿದ್ದ ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ತೆರಳಿದ್ದಾರೆ.ಸೀಮಾ ಮಸೂತಿ ಕೂಡ ಪೂರ್ವನಿಗದಿತ ಕಾರ್ಯಕ್ರಮಕ್ಕೆ ತೆರಳಿದ್ದರು ಎಂದು ಬಿಜೆಪಿ ತಿಳಿಸಿದೆ. ಆದರೆ ಸೀಮಾ ಮಸೂತಿ ಅವರ ಪತಿ ಅಶೋಕ ಮಸೂತಿ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.ಅವರು ಯಾವುದೇ ಕಾರಣದಿಂದ ಬರದಿದ್ದರೂ ಅವರು ಗೈರಾಗಿದ್ದು ಮಾತ್ರ ಚರ್ಚೆಗೆ ಕಾರಣವಾಯಿತು.