Udayavani | Jul 15, 2012
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮೊದಲು ಚಿವುಟಿ, ಆಮೇಲೆ ಮುಲಾಮು ಸವರುವ ಧಾಟಿಯಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆದರೆ, ಇವ್ಯಾವುವೂ ತನ್ನ ನೇರಾನೇರ ಅಭಿಪ್ರಾಯಗಳಲ್ಲ ಎಂಬಂತೆ ಬಿಂಬಿಸಿದ್ದಾರೆ.
ಭಾರತದಲ್ಲಿ ಎಫ್ಡಿಐಗೆ ಹಿತಕರವಾದ ವಾತಾವರಣ ಇಲ್ಲ, ಚಿಲ್ಲರೆ ಮಾರಾಟ ಸಹಿತ ಅನೇಕ ಕ್ಷೇತ್ರಗಳಲ್ಲಿ ಎಫ್ಡಿಐಗೆ ನಿರ್ಬಂಧ ಅಥವಾ ನಿಷೇಧವಿದೆ ಎಂಬುದಾಗಿ ಅಮೆರಿಕದ ಔದ್ಯಮಿಕ ಸಮುದಾಯ ಹೇಳುತ್ತಿದೆ. ಹಾಗಾಗಿ ಭಾರತ "ನಿರ್ಣಾಯಕ' ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಬೇಕು. ಆದರೆ ಆ ಬಗ್ಗೆ ನಿರ್ಧಾರ ಭಾರತದ್ದೇ ಆಗಿದೆ. ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಿರುವುದಾದರೂ "ಪ್ರಭಾವಶಾಲಿ'ಯಾಗಿಯೇ ಇದೆ. ಭಾರತ ಇನ್ನೊಂದು ಸುತ್ತಿನ ಆರ್ಥಿಕ ಸುಧಾರಣೆಗೆ ಸಿದ್ಧವಾಗಿರುವಂತೆ ಕಾಣುತ್ತಿದೆ. ಹಾಗೆ ಆರ್ಥಿಕ ಸುಧಾರಣೆ ನಡೆದರೆ ಭಾರತ-ಅಮೆರಿಕದ ಭಾಗೀದಾರಿಕೆ ಚೆನ್ನಾಗಿರುತ್ತದೆ ಎಂದೆಲ್ಲಾ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮೊದಲು ಚಿವುಟಿ, ಆಮೇಲೆ ಮುಲಾಮು ಸವರುವ ಧಾಟಿಯಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ಮೊದಲು ಚಿವುಟಿ, ಆಮೇಲೆ ಮುಲಾಮು ಸವರುವ' ಹೋಲಿಕೆ ಒಬಾಮಾ ಸಂದರ್ಶನಕ್ಕೆ ಸೂಕ್ತವಾದುದು. ಅಮೆರಿಕದ ಅಧ್ಯಕ್ಷರು ಇದುವರೆಗೆ ತಾನು ಅನುಸರಿಸಿಕೊಂಡು ಬಂದ ಭಾರತ ಸ್ನೇಹಿಯಲ್ಲದ ನಿಲುವಿಗೆ ಅನುಸಾರವಾಗಿಯೇ ಮಾತನಾಡಿದ್ದಾರೆ. ಆದರೆ, ಇವ್ಯಾವುವೂ ತನ್ನ ನೇರಾನೇರ ಅಭಿಪ್ರಾಯಗಳಲ್ಲ ಎಂಬಂತೆ ಬಿಂಬಿಸಿದ್ದಾರೆ.
ತನ್ನ ಅಧಿಕಾರಾವಧಿಯುದ್ದಕ್ಕೂ ಔದ್ಯಮಿಕ, ಉದ್ಯೋಗ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾರತಸ್ನೇಹಿಯಲ್ಲದ ಸ್ವಭಾವವನ್ನೇ ಪ್ರದರ್ಶಿಸುತ್ತ ಬಂದಿರುವ ಒಬಾಮಾ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಏಕೆ ಇಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂಬುದನ್ನು ತಿಳಿಯಲು ಬಲುದೊಡ್ಡ ವಿಶ್ಲೇಷಣೆಯ ಅಗತ್ಯವೇನೂ ಇಲ್ಲ. ಇದೇ ವರ್ಷದ ಕೊನೆಯಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷ ಪದವಿಗೆ ಚುನಾವಣೆಯಲ್ಲಿ ಒಬಾಮಾ ಮರಳಿ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಅಮೆರಿಕದ ಔದ್ಯಮಿಕ ಸಮೂಹದ ಕೃಪಾಕಟಾಕ್ಷ ಬೇಕೇಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತು. ಭಾರತದ ಚಿಲ್ಲರೆ ವ್ಯಾಪಾರ ಸಹಿತ ಅನೇಕ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಅತ್ಯಂತ ಉತ್ಸುಕತೆಯಿಂದಿರುವ ಅಮೆರಿಕನ್ ಔದ್ಯಮಿಕ ವಲಯವನ್ನು ಖುಷಿಪಡಿಸಲೆಂದೇ ಒಬಾಮಾ "ನಿರ್ಣಾಯಕ' ಆರ್ಥಿಕ ಸುಧಾರಣೆಯ, ಎಫ್ಡಿಐ ಭಾರತದಲ್ಲಿ ಇರುವ ನಿರ್ಬಂಧಾತ್ಮಕ ವಾತಾವರಣದ ಮಾತನ್ನಾಡಿದ್ದಾರೆ.
ಅಮೆರಿಕದ ಅಧ್ಯಕ್ಷಗಿರಿಗೆ ಸ್ಪರ್ಧಿಸುವ ಹುರಿಯಾಳುಗಳೆಲ್ಲರೂ ತಳೆಯುವ ಸಾಮಾನ್ಯ ನಿಲುವು ಇದು. ಅದರಲ್ಲೂ ದ್ವಿತೀಯ ಬಾರಿಗೆ ಸ್ಪರ್ಧಿಸುತ್ತಿರುವ ಹಾಲಿ ಅಧ್ಯಕ್ಷರು ಸೀನಿದರೂ ಕೆಮ್ಮಿದರೂ ಸುದ್ದಿಯಾಗುವ ಕಾರಣ ಅವರ ಅಭಿಪ್ರಾಯ ಜಾಗತಿಕ ಮಟ್ಟದ ಪ್ರಚಾರ ಪಡೆಯುತ್ತದೆ. ಅದಕ್ಕೆ ಹೆಚ್ಚು ಪ್ರಾಮುಖ್ಯ ಕೊಡುವ ಅಗತ್ಯ ಇಲ್ಲ.
ಆದರೆ, ಕೋಳಿ ಕೆದಕುವುದು ತನ್ನ ಕಾಲ ಬುಡಕ್ಕೇ ಎಂಬ ಹಾಗೆ ಒಬಾಮಾ ವ್ಯಕ್ತಪಡಿಸಿರುವ ನಿಲುವಿನ ಹಿಂದು-ಮುಂದುಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಬಿಪಿಒ, ಸಾಫ್ಟ್ವೇರ್ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಬಂಡವಾಳ ಹೂಡಿಕೆ, ಹೊರಗುತ್ತಿಗೆ, ಅಮೆರಿಕನ್ ಕಂಪೆನಿಗಳಲ್ಲಿ ಭಾರತೀಯ ಉದ್ಯೋಗಿಗಳು ಮುಂತಾದ ವಿಚಾರಗಳಲ್ಲಿ ರಕ್ಷಣಾತ್ಮಕ ನಿಲುವು ಪ್ರದರ್ಶಿಸುವ ಅಮೆರಿಕ, ಭಾರತದಲ್ಲಿ ಎಫ್ಡಿಐಗೆ ಸಾಕಷ್ಟು ಪ್ರೋತ್ಸಾಹಿ ವಾತಾವರಣವಿದ್ದೂ ಇನ್ನಷ್ಟು ಮುಕ್ತತೆ ಬೇಕು ಎನ್ನುತ್ತಿರುವುದು ಸಲ್ಲ. ಈ ನಿಟ್ಟಿನಲ್ಲಿ ಒಬಾಮಾ ಸಂದರ್ಶನಕ್ಕೆ ಭಾರತೀಯ ಔದ್ಯಮಿಕ ಕೂಟಗಳು ನೀಡಿರುವ ಪ್ರತಿಕ್ರಿಯೆ ಸರಿಯಾಗಿಯೇ ಇದೆ. ಹಲಕೆಲವು ಕುಂದುಕೊರತೆಗಳಿದ್ದರೂ ಬಂಡವಾಳ ಹೂಡಿಕೆಗೆ ಅನುಕೂಲವಾದ ವಾತಾವರಣವೇ ಇದೆ. ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ ಎಂಬ ಅವುಗಳ ನಿಲುವು ಸೂಕ್ತವಾದದ್ದು.
ಭಾರತವನ್ನು ಜಾಗತಿಕ ಆರ್ಥಿಕ ದೈತ್ಯರಿಗೆ ಸರಿಸಾಟಿಯಾದ ಸ್ಥಾನಕ್ಕೆ ಒಯ್ಯಲು ಇನ್ನಷ್ಟು ಆರ್ಥಿಕ ಸುಧಾರಣೆಗಳು ಅಗತ್ಯವಾದರೂ ದೇಶದ ಹಿತಾಸಕ್ತಿಗಳನ್ನು ಬಲಿಗೊಟ್ಟು ಅಮೆರಿಕದ ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬಾರದು. ಸ್ವತಃ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ, ತನ್ಮೂಲಕ ಜಾಗತಿಕ ಆರ್ಥಿಕ ಕುಸಿತಕ್ಕೆ ದೇಣಿಗೆ ನೀಡಿರುವ ಅಮೆರಿಕದಂತಹ ದೈತ್ಯರು ಅನ್ಯ ದೇಶಗಳ ಯಾವುದೇ ವಿಚಾರಗಳಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳು ಸ್ವಲಾಭದ ಉದ್ದೇಶದಿಂದಲೇ ಕೂಡಿರುತ್ತವೆ ಎಂಬುದನ್ನು ಈ ಹಿಂದಿನ ಅನೇಕ ನಿದರ್ಶನಗಳು ಸ್ಪಷ್ಟಪಡಿಸಿವೆ. ಹೀಗಾಗಿ ಈ ವಿಚಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯ.