Saturday, May 25, 2013
Last Updated: 7:59:17 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಾದದ ಕೀಲು - ಮೂಳೆ ಮುರಿತಗಳು
    • ಪಾದದ ಕೀಲು - ಮೂಳೆ ಮುರಿತಗಳು.

      • ಡಾ| ಎಸ್‌. ಪಿ. ಮೊಹಾಂತಿ,ಪ್ರೊಫೆಸರ್‌, ಮೂಳೆ ರೋಗಗಳ ಚಿಕಿತ್ಸಾ ವಿಭಾಗ | Jul 16, 2012

        ಬಹಳ ಜನರು ತಮ್ಮ ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ಮೂಳೆ ಮುರಿತಕ್ಕೆ ಒಳಗಾ ಗುತ್ತಾರೆ. ಪ್ರತಿ ಪಾದದಲ್ಲೂ 26 ಮೂಳೆಗಳನ್ನೂ, 3 ಮೂಳೆ ಸಂಧಿಗಳನ್ನೂ ಹೊಂದಿರುವ ಪಾದಗಳು ಒತ್ತಡ, ತಿರುಚುವಿಕೆ ಹಾಗೂ ಅಪಾಯಗಳಿಗೆ ಒಳಗಾಗುವ ಸಂಭವ ಹೆಚ್ಚು.

        ಪಾದದ ಮೂಳೆ ಮುರಿತದ ವ್ಯಾಪ್ತಿಯು ಕಡಿಮೆ ತೀವ್ರತೆ ಇರುವ ಮುರಿತ ಹಾಗೂ ಮೂಳೆಯಲ್ಲಾಗಿರುವ ಅತಿ ಸಣ್ಣ ಬಿರುಕಿನಿಂದ ಹಿಡಿದು ಚರ್ಮಕ್ಕೆ ಆಧಾರ-ಪೋಷಕವಾಗಿರುವ ಮೂಳೆಯ ಮುರಿತದವರೆಗೆ ಚಾಚಿಕೊಂಡಿದೆ.

        ಮುರಿತಕ್ಕೊಳಗಾದ ಜಾಗ ಹಾಗೂ ಮುರಿತದ ತೀವ್ರತೆಗಳನ್ನು ಹೊಂದಿಕೊಂಡು, ಪಾದದ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ. ತೀವ್ರವಾಗಿ ಜಖಂಗೊಂಡ ಪಾದದ ಮೂಳೆಗೆ ಶಸ್ತ್ರಚಿಕಿತ್ಸೆ ಅನಿವಾರ್ಯವೆನಿಸಬಹುದು, ಮಾತ್ರವಲ್ಲ ಜಖಂಗೊಂಡ ಭಾಗದ ವಿನ್ಯಾಸವನ್ನು ಸರಿಯಾಗಿ ಕಾಪಾಡಿಕೊಳ್ಳಲು ಗುಣಮುಖವಾಗುವ ಹಂತದಲ್ಲಿ  ಶರೀರದೊಳಗೆ ತಂತಿ, ಪ್ಲೇಟ್‌, ಕಂಬಿ ಅಥವಾ ಸೂðಗಳನ್ನು ಅಳವಡಿಸಬೇಕಾಗಬಹುದು.

        ಲಕ್ಷಣಗಳು

        ಪಾದದ ಮೂಳೆ ಮುರಿದಾಗ ಈ ಕೆಳಗಿನ ಚಿಹ್ನೆ ಹಾಗೂ ಲಕ್ಷಣಗಳಿರಬಹುದು.

         ಹಠಾತ್ತಾದ, ತೀವ್ರ ನೋವು.

         ಚಟುವಟಿಕೆಯಿಂದ ಹೆಚ್ಚಾಗುವ,

        ವಿಶ್ರಾಂತಿಯಿಂದ ತಗ್ಗುವ ನೋವು.

         ಬಾವು.

         ಜಜ್ಜಿ ಹೋಗಿರುವುದು.

         ಒತ್ತಿದಾಗ ನೋವು.

         ಆಕೃತಿಯನ್ನು ಕಳೆದುಕೊಳ್ಳುವುದು.

         ನಡೆಯಲು ಹಾಗೂ ಭಾರವನ್ನು

        ತಾಳಿಕೊಳ್ಳಲು ಆಗದಿರುವುದು.

         ಮುರಿಯುವುದು, ಒಡೆದು ಹುಣ್ಣಾಗುವುದು ಅಥವಾ ಮುರಿದ ಭಾಗ ಹೊರಚಾಚಿಕೊಳ್ಳುವುದು.

        ಕೆಲವರಲ್ಲಿ ಈ ರೀತಿ ಎಲುಬು ಮುರಿದಾಗ ಮುರಿಯುವ ಶಬ್ದವೂ ಕೇಳಿಸುತ್ತದೆ. ಈ ರೀತಿ ಕೇಳಿಸುವ ಶಬ್ದವು ಮುರಿದ ಅಥವಾ ಉಳುಕಿದ ಲಕ್ಷಣ.

        ಪಾದದ ಕೀಲು ಮುರಿತಕ್ಕೆ ಕಾರಣಗಳು

        ಪಾದದ ಕೀಲು ಮೂರು ಮೂಳೆಗಳ ಜೋಡಣೆಯಾಗಿದೆ. ಅವುಗಳನ್ನು ಮೊಣಕಾಲಿನ ಕೆಳಮೂಳೆ (ಟಿಬಿಯಾ), ಕೆಳಕಾಲಿನ ಮೂಳೆ (ಪಿಬ್ಯುಲಾ) ಹಾಗೂ ಪಾದದ ಕೀಲಿನ ಮೂಳೆ (ಟ್ಯಾಲಸ್‌) ಎಂದು ಕರೆಯುತ್ತಾರೆ. ಯಾವುದೇ ರೀತಿಯ ಹೊಡೆತ ಅಥವಾ ಬೀಳುವಿಕೆಯಿಂದ ಇವುಗಳಲ್ಲಿ ಒಂದು ಅಥವಾ ಹೆಚ್ಚು ಮೂಳೆಗಳು ಮುರಿಯಬಹುದು. ಟಿಬಿಯಾ ಹಾಗೂ ಪಿಬ್ಯುಲಾದ ಕೆಳಭಾಗಕ್ಕಾಗುವ ಬಲವಾದ ಪೆಟ್ಟಿನಿಂದಾಗಿ ಪಾದದ ಕೀಲು ತುಂಡಾಗಿ ಚಾಚಿಕೊಳ್ಳಬಹುದು. ಈ ಎರಡೂ ಮೂಳೆಗಳು ನಿಮ್ಮ ಪಾದದ ಮೂಳೆ ಸಂಧಿಯನ್ನು ಹಿಮ್ಮಡಿಗೆ ಜೋಡಿಸುತ್ತವೆ, ಮಾತ್ರವಲ್ಲ ಹೆಜ್ಜೆಯೂರಲು ಸಹಕರಿಸುತ್ತವೆ. ನಿಮ್ಮ ಪಾದದ ಮೂಳೆ ಸಂಧಿಯು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಿದಾಗ ಈ ಮೂಳೆಗಳಿಗೆ ಅಪಾಯವಾಗುತ್ತದೆ.

        ಪಾದದ ಮೂಳೆ ಮುರಿತಕ್ಕೆ ಕಾರಣಗಳು

        ಪ್ರತೀ ಪಾದವು 26 ಮೂಳೆಗಳನ್ನು ಹೊಂದಿದೆೆ. ಹೆಚ್ಚಾಗಿ ಪಾದದ ಮೂಳೆ ಮುರಿತವು ಹೆಬ್ಬೆರಳಿನ ಮೂಳೆ ಅಥವಾ ಹೆಬ್ಬೆರಳು ಹಾಗೂ ಮಧ್ಯದ ಪಾದವನ್ನು ಜೋಡಿಸುವ ಮೂಳೆಯಲ್ಲಿ ಸಂಭವಿಸುತ್ತವೆ. ಹೆಬ್ಬೆರಳಿನ ಮೂಳೆ ಮುರಿತವು ಹೆಚ್ಚಾಗಿ ಮೋಟಾರು ಅಪಘಾತವಾದಾಗ ಹಾಗೂ ಬೀಳುವುದರಿಂದ ಆಗುತ್ತದೆ.

        ಒತ್ತಡದಿಂದಾಗುವ ಮುರಿತ

        ಇಂತಹ ಸಣ್ಣ ಬಿರುಕುಗಳು ನಿರಂತರ ಭಾರವನ್ನು ತಾಳುವ ಪಾದ ಹಾಗೂ ಪಾದದ ಕೀಲು ಸಂಧಿ—ಯಲ್ಲಿ ಉಂಟಾಗುತ್ತವೆ. ನಿರಂತರ ಘರ್ಷಣೆ ಹಾಗೂ ಅತಿಬಳಕೆಯಿಂದಲೂ ಮೂಳೆಯಲ್ಲಿ ಈ ರೀತಿಯ ಒತ್ತಡದ ಮುರಿತವಾಗಬಹುದು. ಬಹಳ ದೂರದವರೆಗೆ ಒಂದೇ ಸಮನೆ ಓಡಿದರೆ, ಅಥವಾ ಅಸಮರ್ಪಕ ವಿನ್ಯಾಸದಲ್ಲಿ ಅತಿಯಾದ ಭಾರವೆತ್ತಿದರೆ ಹೀಗಾಗುತ್ತದೆ ಅಥವಾ ಅಸ್ಟಿಯೋಫೂರೋಸಿಸ್‌ ಸ್ಥಿತಿ ಇದ್ದರೆ ಸಹಜವಾದ ಬಳಕೆಯಿಂದಲೂ ಮೂಳೆಯು ಒತ್ತಡಕಾರಿ ಮುರಿತಕ್ಕೆ ಒಳಗಾಗಬಹುದು.

        ಅಪಾಯ ಪೂರಕ ಅಂಶಗಳು

        ಈ ಕೆಳಗಿನ ಅಪಾಯ ಪೂರಕ ಅಂಶಗಳು ನಿಮ್ಮ ಪಾದದ ಮೂಳೆ ಹಾಗೂ ಕೀಲು ಮುರಿಯಲು ಕಾರಣವಾಗಬಹುದು.

        ಅತಿಯಾದ ಭಾರ

        ಅತಿಯಾದ ಭಾರ ಹೊರುವಿಕೆಯು ನಿಮ್ಮ ಪಾದದ ಕೀಲು ಶೀಘ್ರವಾಗಿ ಉರುಳಲು ಅಥವಾ ಪಾದದ ಮೇಲೆ ಹೆಚ್ಚಿನ ಒತ್ತಡ ಬೀಳಲು ಕಾರಣವಾಗುತ್ತದೆ.

        ಹೆಚ್ಚು ಘರ್ಷಣೆಯ ಕ್ರೀಡೆಗಳಲ್ಲಿ
        ಭಾಗವಹಿಸುವಿಕೆ

        ಒತ್ತಡ, ನೇರ ಹೊಡೆತ ಹಾಗೂ ತಿರುಗುವಿಕೆಯಿಂದಾಗುವ ಪೆಟ್ಟು- ಇವೆಲ್ಲ ಫುಟ್‌ಬಾಲ್‌, ಹಾಕಿ, ಜಿಮ್ನಾ$Âಸ್ಟಿಕ್‌, ಟೆನ್ನಿಸ್‌ ಹಾಗೂ ಸಾಕರ್‌ನಂತಹ ಕ್ರೀಡೆಗಳಲ್ಲಿ ಸಂಭವಿಸುತ್ತವೆ ಹಾಗೂ ಇವು ಪಾದ ಹಾಗೂ ಪಾದದ ಸಂಧಿಯ ಮೂಳೆ ಮುರಿಯಲು ಇರುವ ಪ್ರಮುಖ ಕಾರಣಗಳು.

        ಕ್ರೀಡಾ ಸಲಕರಣೆಗಳ
        ಅಸಮರ್ಪಕ ಬಳಕೆ

        ಕ್ರೀಡಾ ಸಲಕರಣೆಗಳ ಅಸಮರ್ಪಕ ಬಳಕೆಯಿಂದಲೂ ಪಾದದ ಮೂಳೆ ಮುರಿತವಾಗಬಹುದು. ಅದು ಹೇಗೆಂದರೆ, ಅತ್ಯಂತ ಬಿಗಿಯಾದ ಅಥವಾ ಸಡಿಲವಾದ ಕ್ರೀಡಾ ಪಾದರಕ್ಷೆಗಳ ಬಳಕೆ, ಸ್ಪರ್ಧೆಗೆ ಅಥವಾ ಕ್ರೀಡೆಗೆ ಮುನ್ನ ಸರಿಯಾಗಿ ತಯಾರಾಗದೇ ನೇರವಾಗಿ ಪಾಲ್ಗೊಳ್ಳುವಿಕೆಯಂತಹ ಅಸಮರ್ಪಕ ಕ್ರೀಡಾ ತರಬೇತಿ... ಇವೆಲ್ಲವೂ ಪಾದಗಳ ಮೂಳೆ ಮುರಿಯಲು ಕಾರಣಗಳು.

        ವೃತ್ತಿಗೆ ಸಂಬಂಧಿಸಿದ ಕಾರಣಗಳು

        ಕಟ್ಟಡ ನಿರ್ಮಾಣದ ವೃತ್ತಿಯಲ್ಲಿ ಎತ್ತರದಿಂದ ಕೆಳಕ್ಕೆ ಬೀಳಬಹುದಾದ ಸಂಭವ ಹೆಚ್ಚು,   ಮಾತ್ರವಲ್ಲ ಕಾಲಿಗೆ ಅಪಾಯವಾಗುವ ಸಂಭವವೂ ಹೆಚ್ಚು.

        ಮನೆಯಲ್ಲಿನ ಅಸ್ತವ್ಯಸ್ತತೆ

        ಮನೆಯಲ್ಲಿ ಬೇಕಾಬಿಟ್ಟಿಯಾಗಿ ಬಿದ್ದಿರುವ ವಸ್ತುಗಳ ನಡುವೆ ಅಥವಾ ಕಡಿಮೆ ಬೆಳಕಿರುವ ಭಾಗದಲ್ಲಿನ ಓಡಾಟವು ನಿಮ್ಮ ಪಾದದ ಕೀಲಿನ ಮುರಿತಕ್ಕೆ ಕಾರಣವಾದೀತು.

        ಇತರ ಕೆಲವು ತೊಂದರೆಗಳು

        ಅಸ್ಟಿಯೋಪೊರೋಸಿಸ್‌ನಂತಹ ಖಾಯಿಲೆ ಇರುವುದು ಅಥವಾ ನರಗಳಿಗೆ ಸಂಬಂಧಿಸಿದಂತೆ ಕಾಲಿನಲ್ಲಿ ಸ್ಪರ್ಶಜ್ಞಾನ ಕಡಿಮೆ ಇರುವುದು... ಇವೂ ಸಹ ಪಾದದ ಮೂಳೆ ಮುರಿಯಲು ಕಾರಣವಾಗುವ ಅಂಶಗಳು.

        ವೈದ್ಯರ ಸಲಹೆ ಯಾವಾಗ?

        ಯಾವುದೇ ತೆರನಾದ ಪಾದದ ಮೂಳೆ ಅಥವಾ ಪಾದದ ಸಂಧಿಯ ಮೂಳೆಯು ಮುರಿದಾಗ ವೈದ್ಯರ ಸಲಹೆಯನ್ನು ಪಡೆಯಬೇಕು. ಸರಿಯಾದ ಕ್ರಮದ ಮರುಜೋಡಣೆ ಹಾಗೂ ಚಿಕಿತ್ಸೆ - ಇವುಗಳು ಮೂಳೆ ಮುರಿತವು ಗುಣಮುಖವಾಗಲು ಸಹಾಯಕವಾಗುವ ಅಂಶಗಳು. ಹಾಗಿದ್ದರೂ, ಹೆಬ್ಬೆರಳಿನ ಮೂಳೆಯಲ್ಲಿ ತೊಂದರೆಯಾದಾಗ ಹೆಚ್ಚಾಗಿ ಯಾರೂ ಚಿಕಿತ್ಸೆಯನ್ನು ಪಡೆಯುವುದಿಲ್ಲ. ಕೆಲವರು ಮಾಡುವ ತಪ್ಪು ಏನೆಂದರೆ, ಪಾದದ ಮೂಳೆ-ಸಂಧಿಯ ಮುರಿತವನ್ನು ಉಳುಕು ಎಂದುಕೊಳ್ಳುವುದು. ಉಳುಕು ಎಂದರೆ ಎಳೆತದಂತಹ ನೋವಿರುವ ಅಷ್ಟೊಂದು ಗಂಭೀರವಲ್ಲದ ನೋವಿನ ಸ್ಥಿತಿ. ಕೆಲವು ಲಕ್ಷಣ ಹಾಗೂ ಚಿಹ್ನೆಗಳಿಂದ ಮೂಳೆ ಮುರಿತ ಹಾಗೂ ಉಳುಕು ಇವು ಒಂದೇ ಎನ್ನುವಂತೆ ಭಾಸವಾಗುತ್ತದೆ. ಆದರೆ, ಉಳುಕು ಹಾಗೂ ಮೂಳೆಯ ಮುರಿತಕ್ಕೆ ನೀಡುವ ಚಿಕಿತ್ಸೆಗಳಲ್ಲಿ ವ್ಯತ್ಯಾಸವಿದೆ.

        ನಿಮಗೆ ಪೆಟ್ಟಾದ ಚರ್ಮದ ಹತ್ತಿರದ ಮೂಳೆ ಹೊರಚಾಚಿದಂತೆ ಕಂಡುಬಂದರೆ, ಕೂಡಲೇ ವೈದ್ಯರ ಶುಶ್ರೂಷೆಯನ್ನು ಪಡೆಯಿರಿ. ಯಾಕೆಂದರೆ, ಈ ಸ್ಥಿತಿಗೆ ಸರಿಯಾದ ಚಿಕಿತ್ಸೆ ನೀಡದೇ ಹೋದರೆ, ಇದು ಮುಂದೆ ತೀವ್ರ ಸೋಂಕಿಗೆ ಕಾರಣವಾಗುವ ಅಪಾಯವಿದೆ.

        ರೋಗ ಪತ್ತೆ ಹಾಗೂ ತಪಾಸಣೆ

        ನಿಮ್ಮದು ಪಾದದ ಮೂಳೆ ಅಥವಾ ಸಂಧಿಯ ಮುರಿತ ಅನ್ನುವ ಸಂದೇಹ ಇದ್ದಾಗ, ವೈದ್ಯರು ಆ ಭಾಗದ ಸುತ್ತಲೂ ಇರುವ ಊತ, ವಿರೂಪ ಅಥವಾ ತೆರೆದ ಗಾಯ ಇತ್ಯಾದಿಗಳನ್ನು ಪರೀಕ್ಷಿಸುತ್ತಾರೆ. ಮೂಳೆ ಮುರಿದಿರುವುದನ್ನು ಹಾಗೂ ಮುರಿದ ಜಾಗವನ್ನು ನಿಖರವಾಗಿ ಕಂಡುಕೊಳ್ಳಲು, ಎಕ್ಸ್‌ರೇಯ ಅಗತ್ಯ ಬೀಳಬಹುದು. ಒತ್ತಡದಿಂದಾದ ಮುರಿತವಾಗಿದ್ದರೆ, ಅಂದರೆ ಕಂಡುಹಿಡಿಯಲು ಸಾಧ್ಯವಾಗದೇ ಹೋದರೆ ಬಿಂಬ ಅಧ್ಯಯನ ಅಥವಾ ಇತರ ವಿಧಾನಗಳಿಂದ ಗುರುತಿಸಬೇಕಾಗಬಹುದು.

        ಎಕ್ಸ್‌-ರೇಯ ವಿವರವಾದ ವಿಶ್ಲೇಷಣೆಯಿಂದ ವೈದ್ಯರಿಗೆ ನಿಮ್ಮದು ಯಾವ ವಿಧವಾದ ಮೂಳೆ ಮುರಿತ ಎಂದು ಕಂಡುಹಿಡಿಯಲು ಸಹಾಯವಾಗುತ್ತದೆ. ಇದು ಚಿಕಿತ್ಸೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತದೆ.

        ಮೂಳೆ ಮುರಿತದ‌
        ಬೇರೆ ಬೇರೆ ಸ್ಥಿತಿಗಳು

        ಮುಚ್ಚಿದ ಮುರಿತ: ಮೂಳೆ ಮುರಿದಿರುತ್ತದೆ. ಆದರೆ ಸುತ್ತಲಿನ ಚರ್ಮಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಇದು ಮುಚ್ಚಿದ ಮೂಳೆ ಮುರಿತ; ಇದು ಹೆಚ್ಚು ತೀವ್ರವಲ್ಲದ ಮುರಿತ.

        ತೆರೆದ ಮುರಿತ: ಮೂಳೆ ಮುರಿದಿರುತ್ತದೆ, ಜೊತೆಗೆ ಮುರಿದ ಮೂಳೆಯಿಂದಾಗಿ ಸುತ್ತಲಿನ ಚರ್ಮವೂ ಕಿತ್ತುಹೋಗಿರುತ್ತದೆ. ಇದು ತುರ್ತು ಹಾಗೂ ಪರಿಣಾಮಕಾರಿ ಚಿಕಿತ್ಸೆ ಅಗತ್ಯವಿರುವ ಒಂದು ಗಂಭೀರ ಸ್ಥಿತಿ. ಸೋಂಕಾಗುವುದನ್ನು ತಡೆಯಲು ತಕ್ಷಣ ಚಿಕಿತ್ಸೆ ನೀಡಬೇಕಾದುದು ತೀರಾ ಅಗತ್ಯ.

        ಸ್ಥಳಾಂತರ ಮುರಿತ: ಈ ರೀತಿಯಲ್ಲಿ ಮೂಳೆ ಮುರಿದಾಗ, ಮುರಿದ ಮೂಳೆಯ ಎರಡೂ ಬದಿಗಳಲ್ಲಿ, ಮೂಳೆಯ ಅವಶೇಷಗಳು ತಮ್ಮ ಸಹಜ ಸ್ಥಾನದಿಂದ ಸರಿದಿರುತ್ತವೆ. ಈ ರೀತಿಯ ಸ್ಥಳಾಂತರ ಮುರಿತದಲ್ಲಿ, ಮೂಳೆಯ ಅವಶೇಷಗಳನ್ನು ಸರಿಯಾದ ಸ್ಥಾನದಲ್ಲಿರಿಸಲು ಶಸ್ತ್ರಚಿಕಿತ್ಸೆ ಅನಿವಾರ್ಯವಾಗಬಹುದು.

        ತೊಂದರೆಗಳು

        ಪಾದದ ಮೂಳೆ ಅಥವಾ ಸಂಧಿಯ ಮೂಳೆ ಮುರಿತದಲ್ಲಿ ತೊಂದರೆಗಳು ಅಪರೂಪ; ಆದರೂ ನಾವು ನಿರೀಕ್ಷಿಸಬಹುದಾದ ತೊಂದರೆಗಳೆಂದರೆ,

        ನರ ಅಥವಾ
        ರಕ್ತನಾಳಗಳಿಗಾಗುವ ಹಾನಿ

        ಪಾದಕ್ಕೆ ಪೆಟ್ಟಾದಾಗ ಆ ಭಾಗದ ಸಮೀಪದಲ್ಲಿರುವ ನರಗಳು ಹಾಗೂ ರಕ್ತನಾಳಗಳಿಗೆ ಹಾನಿಯಾಗಬಹುದು. ರಕ್ತ ಪರಿಚಲನೆಗೆ ತೊಂದರೆಯಾಗುವಂತಿದ್ದರೆ, ಅಥವಾ ಆ ಭಾಗ ಜಡವಾಗುವಂತಹ ಲಕ್ಷಣಗಳೇನಾದರೂ ಇದ್ದರೆ, ತಕ್ಷಣ ಚಿಕಿತ್ಸೆ ಪಡೆಯುವುದು ಅಗತ್ಯ.

        ಮೂಳೆ ಸೋಂಕು (ಅಸ್ಟಿಯೋಮೈಲೈಟಿಸ್‌)

        ನಿಮ್ಮದು ತೆರೆದ ಮೂಳೆ ಮುರಿತವಾಗಿದ್ದರೆ, ಬ್ಯಾಕ್ಟೀರಿಯಾ, ಫಂಗಸ್‌ (ಪರೋಪಜೀವಿ)ಗಳಿಗೆ ತೆರೆದುಕೊಳ್ಳುವ ನಿಮ್ಮ ಮೂಳೆಯು ಸೋಂಕಿಗೆ ಒಳಗಾಗಬಹುದು.

        ಕಂಪಾರ್ಟ್‌ಮೆಂಟ್‌
        ಸಿಂಡ್ರೋಮ್‌


        ಈ ತರದ ನರಸ್ನಾಯುಗಳ ತೊಂದರೆ ಯಲ್ಲಿ ನೋವು, ಬಾವು ಹಾಗೂ ಪೆಟ್ಟಾದ ಭಾಗವನ್ನು ಚಲಿಸಲಾರದೇ ಇರುವಂತಹ ಸ್ಥಿತಿ ಇರುತ್ತದೆ. ವಾಹನ ಅಪಘಾತಗಳಂತಹ ಬಹಳ ಗಂಭೀರ ತೆರನಾದ ಪೆಟ್ಟುಗಳಾದಾಗ, ಕಂಪಾರ್ಟ್‌ ಮೆಂಟ್‌ ಸಿಂಡ್ರೋಮ್‌ಗಳಾಗುತ್ತವೆ.

        ಸಂಧಿವಾತ

        ಮೂಳೆ ಮುರಿತವು ಹಲವು ವರ್ಷಗಳ ನಂತರ ಮುಂದುವರಿದು ಮೂಳೆ ಸಂಧಿಗೂ ಹಬ್ಬಿ, ಸಂಧಿವಾತಕ್ಕೆ ಕಾರಣವಾಗಬಹುದು. ಮೂಳೆ ಮುರಿದು ಕೆಲವು ವರ್ಷಗಳ ನಂತರ ಮತ್ತೆ ನೋವು ಕಾಣಿಸಿಕೊಂಡರೆ, ವಿಶ್ಲೇಷಣೆಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

        ನಿರಂತರ ನೋವು

        ಮುರಿದ ಮೂಳೆ ಗುಣಮುಖವಾದ ಬಳಿಕವೂ ಪೆಟ್ಟಾದ ಜಾಗದಲ್ಲಿ ನಿತ್ಯವೂ ನಿಮಗೆ ನೋವಿನ ಅನುಭವವಾದರೆ, ನಿಮ್ಮ ನಿರಂತರ ನೋವಿನ ಉಪಶಮನಕ್ಕಾಗಿ ನಿಮ್ಮ ವೈದ್ಯರನ್ನು ಕಾಣಬೇಕಾಗಬಹುದು.

        ನಿಧಾನ ಗುಣವಾಗುವುದು

        ಧೂಮಪಾನ ಮಾಡುವುದರಿಂದ ಮೂಳೆ ಮುರಿತವು ನಿಧಾನವಾಗಿ ಗುಣ ಹೊಂದುವ ಅಪಾಯವಿದೆ.

        ಚಿಕಿತ್ಸೆ

        ಪಾದದ ಮೂಳೆ ಅಥವಾ ಪಾದದ ಸಂಧಿಯ ಮೂಳೆ ಮುರಿತಕ್ಕೆ ಆರಂಭದ ಚಿಕಿತ್ಸೆಯು ಹೆಚ್ಚಾಗಿ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಆರಂಭವಾಗುತ್ತದೆ. ಇಲ್ಲಿ ವೈದ್ಯರು ನಿಮಗಾದ ಪೆಟ್ಟನ್ನು ವಿಶ್ಲೇಷಿಸಿ, ಪಾದದ ಭಾಗವನ್ನು ಅಲುಗಾಡದಂತೆ ಇರಿಸಿ, ಅದಕ್ಕೆ ಆಧಾರವಾಗಿ ದಬ್ಬೆ ಅಥವಾ ಕೋಲನ್ನು ಕಟ್ಟುತ್ತಾರೆ. ನಿಮ್ಮದು ಸ್ಥಳಾಂತರ ಮುರಿತವಾಗಿದ್ದರೆ, ವೈದ್ಯರು ಸ್ಥಳಾಂತರಗೊಂಡ ಎಲುಬಿನ ಭಾಗಗಳನ್ನು ಮತ್ತೆ ಮೊದಲಿನಂತೆ ಜೋಡಿಸಿ, ಆಮೇಲೆ ಆಧಾರವಾಗಿ ದಬ್ಬೆ ಕಟ್ಟುತ್ತಾರೆ. ನಿಮಗಿರುವ ನೋವು ಹಾಗೂ ಊತದ ಪ್ರಮಾಣಗಳನ್ನು ಅವಲಂಬಿಸಿಕೊಂಡು, ಸ್ನಾಯುಶಾಮಕ ಅಥವಾ ಅರಿವಳಿಕೆಯನ್ನು ಆರಂಭದಲ್ಲೇ ವೈದ್ಯರು ನಿಮಗೆ ನೀಡಬಹುದು.

        ನಿಮಗಾಗಿರುವುದು ಮುಚ್ಚಿದ ಮೂಳೆ ಮುರಿತವಾಗಿದ್ದರೆ, ಆಧಾರ ದಬ್ಬೆಯೊಂದನ್ನು ಕಟ್ಟಿ, ಮಂಜುಗಡ್ಡೆಯ ಉಪಚಾರ ಹಾಗೂ ಸಾಕಷ್ಟು ವಿಶ್ರಾಂತಿ ಪಡೆಯುವಂತೆ ಹೇಳಿ, ನಿಮ್ಮನ್ನು ಮನೆಗೆ ಕಳುಹಿಸಬಹುದು; 4-5 ದಿನ ಬಿಟ್ಟು ಮುಂದಿನ ಚಿಕಿತ್ಸೆಗಾಗಿ ಯಾವುದಾದರೂ ಮೂಳೆ ತಜ್ಞರನ್ನು ಭೇಟಿಯಾಗುವಂತೆ ಹೇಳಬಹುದು. ನಿಮಗಾಗಿರುವುದು ಬಹಳ ಗಂಭೀರ ಮೂಳೆ ಮುರಿತವಾಗಿದ್ದರೆ, ತುರ್ತು ಚಿಕಿತ್ಸೆಗಾಗಿ ನೀವು ಆಸ್ಪತ್ರೆ ಸೇರಬೇಕಾಗಬಹುದು. ಪಾದದ ಮೂಳೆ ಮುರಿತಕ್ಕೆ ನೀಡುವ ಚಿಕಿತ್ಸೆಯು ಮೂಳೆ ಮುರಿದ ಜಾಗ ಹಾಗೂ ತೀವ್ರತೆಯನ್ನು ಅವಲಂಬಿಸಿದೆ.

        ನಿಶ್ಚಲತೆ

        ನಿಮ್ಮ ಕಾಲೆºರಳಲ್ಲಿ ಒಂದಕ್ಕೊಂದನ್ನು ಬೆಸೆದು ಜೋಡಿಸಿ ಕಟ್ಟಿ, ಸಂಪೂರ್ಣ ಗುಣಮುಖವಾಗುವವರೆಗೆ ನಡೆದಾಡದಂತೆ, ಅಥವಾ ಅಲುಗಾಡಿಸ ದಂತೆ ನಿಮ್ಮನ್ನು ನಿರ್ಬಂಧಿಸುತ್ತಾರೆ ಅಥವಾ ಗುಣಮುಖವಾಗುವ ಕೆಲವು ವಾರಗಳವರೆಗೆ ನಿಮಗೆ ಅನುಕೂಲವಾಗಲೆಂದು ನಡೆದಾಡುವ ವಿಶಿಷ್ಟ ನಮೂನೆಯ ಪಾದರಕ್ಷೆ, ಕಾಲು-ಕಟ್ಟುಗಳು ಅಥವಾ ಆಧಾರ ದಬ್ಬೆಗಳನ್ನು ನೀಡಬಹುದು- ಇದು ನಿಮಗಾದ ಪೆಟ್ಟಿನ ತೀವ್ರತೆಯನ್ನು ಅವಲಂಬಿಸಿದೆ. ಅಥವಾ ನಿಮಗೆ ಕೃತಕ ಕಾಲುಗಳನ್ನು ಕೆಲವು ಸಮಯದವರೆಗೆ ಬಳಸಲು ನೀಡಬಹುದು. ಮಾತ್ರವಲ್ಲ, ಕೆಲವು ಸಮಯದವರೆಗೆ, ಜಖಂಗೊಂಡ ಪಾದವನ್ನು ಇಂತಿಷ್ಟೇ ಸಮಯ ಬಳಸಬೇಕು ಎನ್ನುವ ನಿರ್ಬಂಧವೂ ಇರಬಹುದು.

        ಶಸ್ತ್ರಚಿಕಿತ್ಸೆ

        ನಿಶ್ಚಲತೆಯು ಬಹುತೇಕ ಮೂಳೆ ಮುರಿತವನ್ನು ಗುಣಪಡಿಸುತ್ತದೆ. ಹಾಗಿದ್ದಾಗಲೂ, ಆಂತರಿಕ ಸಾಧನಗಳ ಅಳವಡಿಕೆಗಾಗಿ ನಿಮಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳಬಹುದು. ಅಂದರೆ ಗುಣಮುಖವಾಗುವ ಹಂತದಲ್ಲಿ ಮೂಳೆಯ ಸರಿಯಾದ ವಿನ್ಯಾಸ ಸಾಧಿಸಲು ಒಳಗಡೆ ತಂತಿ, ಪ್ಲೇಟು, ಮೊಳೆ ಅಥವಾ ಸೂðಗಳನ್ನು ಜೋಡಿಸಬೇಕಾಗಬಹುದು. ಕೆಳಗೆ ತಿಳಿಸಿದ ಯಾವುದಾದರೊಂದು ಬಗೆಯ ಮೂಳೆ ಮುರಿತ ನಿಮ್ಮದಾಗಿದ್ದರೆ, ಶಸ್ತ್ರಚಿಕಿತ್ಸೆಯನ್ನು ಸೂಚಿಸಬಹುದು.

         ಒಂದಕ್ಕಿಂತ ಹೆಚ್ಚಿನ ಮೂಳೆ ಮುರಿತ.

         ಸ್ಥಳಾಂತರ ಮುರಿತ.

         ಮುರಿದ ಮೂಳೆಯ ಭಾಗಗಳು ಸಂಧಿಯೊಳಗೆ ಹೊಕ್ಕಿರುವಾಗ.

         ಸುತ್ತಲಿನ ಅಸ್ಥಿಬಂಧಗಳಿಗೆ ಹಾನಿಯಾಗಿರುವಾಗ.

         ಮೂಳೆಯು ಸಂಧಿಯವರೆಗೂ ಮುರಿದಿದ್ದಾಗ.

        ಮೂಳೆಯು ಗುಣಮುಖವಾದ ಬಳಿಕ ಕೆಲವು ಆಂತರಿಕ ಅಳವಡಿಕೆಗಳನ್ನು ತೆಗೆಯಲಾಗುವುದು. ನಿಮ್ಮ ದೇಹಗತವಾಗುವಂತೆ ತಯಾರಿಸಲಾದ ಕೆಲವೊಂದು ಸಾಧನಗಳನ್ನು ಅಲ್ಲೇ ಬಿಡಲಾಗುವುದು. ಇದರಲ್ಲಿ ತೊಂದರೆಗಳು ಅಪರೂಪವಾದರೂ, ಗಾಯ ಮಾಯುವ, ಸೋಂಕಾಗುವ ಹಾಗೂ ಮೂಳೆ ಗುಣಮುಖವಾಗದೇ ಇರುವ ಅಪಾಯ ಇದ್ದೇ ಇದೆ.

        ಔಷಧೋಪಚಾರಗಳು

        ನೋವು ಹಾಗೂ ಉರಿಯೂತವನ್ನು ತಗ್ಗಿಸಲು ವೈದ್ಯರು ಶಿಫಾರಸಿನ ವಿನಾ ನೋವು ನಿವಾರಕಗಳಾದ ಅಸಿಟಾಮಿನೋಫೆನ್‌ ಅಥವಾ ಇಬುಪ್ರಫೇನ್‌ಗಳನ್ನು ತೆಗೆದುಕೊಳ್ಳುವಂತೆ ಸೂಚಿಸಬಹುದು. ನಿಮಗೆ ತಡೆಯಲಾಗದಷ್ಟು ತೀವ್ರವಾದ ನೋವಿದ್ದಾಗ, ಕೋಡೈನ್‌ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು.

        ನಿರ್ವಹಣೆ

        ಕಟ್ಟಿದ ಆಧಾರ ದಬ್ಬೆ ಇತ್ಯಾದಿಗಳನ್ನು ತೆಗೆದುಹಾಕಿದ ಬಳಿಕ, ನಿಮ್ಮ ಪಾದ ಹಾಗೂ ಪಾದದ ಸಂಧಿಮೂಳೆಯ ಬಿಗಿಯಾದ ಸ್ನಾಯುಗಳನ್ನು ಹಾಗೂ ಅಸ್ಥಿಬಂಧಗಳನ್ನು ಸಡಿಲಗೊಳಿಸಬೇಕಾಗುತ್ತದೆ, ಅದಕ್ಕಾಗಿ ಮನೆಯಲ್ಲೇ ಮಾಡುವಂತಹ ಕೆಲವೊಂದು ರೀತಿಯ ವ್ಯಾಯಾಮಗಳಾದ ಎಳೆಯುವುದು, ಸಾಮರ್ಥ್ಯ ತುಂಬುವುದು ಹಾಗೂ ಅನೇಕ ವಿಧದ ಚಲನೆಯ ವ್ಯಾಯಾಮಗಳನ್ನು ಹೇಳಲಾಗುತ್ತದೆ. ಇವು ನೀವು ಮತ್ತೆ ನಿಮ್ಮ ಹಿಂದಿನ ದಿನಚರಿಗೆ ಮರಳಲು ಸಹಾಯಕವಾಗುತ್ತವೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೆಲವು ಔಷಧಿಗಳು, ಕೆಲವು ಕಾಯಿಲೆಗಳು, ಅಧಿಕ ಮದ್ಯಪಾನ ಸೇವನೆ, ಮತ್ತು ಬ್ಯಾಕ್ಟೀರಿಯಾ ಹಾಗೂ ವೈರಸ್‌ ಸೋಂಕುಗಳ ಕಾರಣದಿಂದ ಹೆಪಾಟೈಟಿಸ್‌ ಬರಬಹುದು...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus