ಡಾ| ಬಿ. ಎಚ್. ಆನಂದ ರಾವ್,ಪ್ರೊಫೆಸರ್ ,ಸರ್ಜರಿ ವಿಭಾಗ | Jul 16, 2012
ಕೊಲೆಸ್ಟ್ರಾಲ್ ಅಥವಾ ಕ್ಯಾಲ್ಸಿಯಂ ಲವಣಗಳು ಪಿತ್ತಕೋಶ ಅಥವಾ ಪಿತ್ತರಸ ಗ್ರಂಥಿಯ ಸಮೀಪದಲ್ಲಿ ಸಂಗ್ರಹವಾಗಿ ಗಟ್ಟಿಯಾದಾಗ, ಅದನ್ನು ಪಿತ್ತಕೋಶದ ಕಲ್ಲು ಎಂದು ಕರೆಯುತ್ತಾರೆ. ಹೆಚ್ಚಾಗಿ ಈ ಕಲ್ಲುಗಳು ಯಾವುದೇ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ ಹಾಗೂ ಇವುಗಳಿಗೆ ಯಾವುದೇ ರೀತಿಯ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಆದರೆ, ಕೆಲವರಿಗೆ ಪಿತ್ತಕೋಶದಲ್ಲಿ ಇರುವ ಕಲ್ಲುಗಳಿಂದಾಗಿ ಪಿತ್ತಕೋಶಕ್ಕೆ ಹಾನಿಯಾಗುತ್ತದೆ. ಇದರಿಂದಾಗಿ ಮೇಲುಹೊಟ್ಟೆಯ ಬಲಭಾಗದಲ್ಲಿ ತೀವ್ರ ನೋವು, ವಾಕರಿಕೆ... ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಈ ನೋವುಗಳು ಕೆಲವೊಮ್ಮೆ ಅತ್ಯಂತ ತೀವ್ರವಾಗುವ ಸಾಧ್ಯತೆಯೂ ಇದೆ.
ವೃದ್ಧರಿಗೆ, ಹೆಂಗಸರಿಗೆ ಹಾಗೂ ಬೊಜ್ಜು ದೇಹಿಗಳಿಗೆ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಅಪಾಯ ಇನ್ನೂ ಹೆಚ್ಚು. ವೇಗವಾಗಿ ತೂಕ ಇಳಿಸಿಕೊಳ್ಳಬೇಕೆಂಬ ತರಾತುರಿಯಿಂದ, ಆಹಾರ ಸೇವನೆಯ ಪ್ರಮಾಣವನ್ನು ತಗ್ಗಿಸಿಕೊಂಡರೆ, ಆ ಕಾರಣದಿಂದಲೂ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಅಪಾಯವಿದೆ.
ಪಿತ್ತಕೋಶದ ಕಲ್ಲುಗಳಿಂದಾಗುವ ತೊಡಕುಗಳಿಗೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಅದು ತೀವ್ರವಾಗಿ ಮರಣಾಂತಿಕವಾಗಬಹುದು. ಅದೃಷ್ಟವಶಾತ್ ಇದೀಗ ಈ ಕಾಯಿಲೆಗೆ ಹೊಸ ರೀತಿಯ ಚಿಕಿತ್ಸೆಗಳು ಲಭ್ಯ ಇವೆ ಹಾಗೂ ಈ ಚಿಕಿತ್ಸೆಗಳಿಂದ ರೋಗಿ ಬಹಳ ಬೇಗ ಚೇತರಿಸಿಕೊಳ್ಳಲು ಸಾಧ್ಯವಿದೆ.
ಲಕ್ಷಣಗಳು
ಪಿತ್ತಕೋಶದಲ್ಲಿ ಕಲ್ಲುಗಳಾದಾಗ ಕೆಲವರಲ್ಲಿ ಅವು ಯಾವ ಲಕ್ಷಣಗಳನ್ನೂ ತೋರಿಸುವುದಿಲ್ಲ. ಸಾಮಾನ್ಯವಾಗಿ ನೀವು ಬೇರೆ ಯಾವುದೋ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಕಲ್ಲುಗಳ ಇರುವಿಕೆ ಪತ್ತೆ ಆಗುತ್ತದೆ. ಕೆಲವರಿಗೆ ಈ ಲಕ್ಷಣಗಳಿರಬಹುದು.
ದೀರ್ಘ ಕಾಲದಿಂದ
ಇರುವ ಅಜೀರ್ಣ
ವಾಕರಿಕೆ, ವಾಯು, ಅತಿಸಾರ, ಹೊಟ್ಟೆನೋವು ಇತ್ಯಾದಿ ಅಜೀರ್ಣದ ಲಕ್ಷಣಗಳು ಇರಬಹುದು. ಅಧಿಕ ಕೊಬ್ಬಿನ ಅಂಶವಿರುವ ಆಹಾರ ಸೇವನೆಯ ಬಳಿಕ ಈ ಲಕ್ಷಣಗಳು ಕಾಣಿಸಿಕೊಂಡು ತೀವ್ರವಾಗಬಹುದು. ಆದರೆ ಪಿತ್ತಕೋಶದ ಕಲ್ಲುಗಳ ಕಾರಣದಿಂದಲೇ ಯಾವಾಗಲೂ ಜೀರ್ಣಾಂಗ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ, ಅಂದರೆ ಅಜೀರ್ಣ ಇತ್ಯಾದಿಗಳು ಬಾಧಿಸುತ್ತವೆ ಎಂದು ಹೇಳುವಂತಿಲ್ಲ. ಕರುಳು ಅಥವಾ ಜಠರದ ಹುಣ್ಣು, ಆಹಾರ ಹಿಮ್ಮುಖವಾಗಿ ಚಲಿಸುವ ಕಾಯಿಲೆ ಅಥವಾ ವಿಸರ್ಜನಾಂಗದ ತೀವ್ರ ಕಾಯಿಲೆಗಳ ಕಾರಣದಿಂದಲೂ ಅಜೀರ್ಣದ ತೊಂದರೆ ಕಾಣಿಸಿಕೊಳ್ಳಬಹುದು. ಈ ಕಾರಣದಿಂದಾಗಿ, ನಿಮಗಿರುವ ಲಕ್ಷಣಗಳ ಬಗ್ಗೆ ವೈದ್ಯರೊಂದಿಗೆ ಸರಿಯಾಗಿ ಸಮಾಲೋಚಿಸಿದರೆ ಉತ್ತಮ.
ಮೇಲ್‌ಹೊಟ್ಟೆ ನೋವು
ಮೇಲ್‌ಹೊಟ್ಟೆಯ ಮಧ್ಯಭಾಗದಲ್ಲಿ ಅಥವಾ ಬಲಬದಿಯಲ್ಲಿ ಸಣ್ಣಗೆ ಕಾಣಿಸಿಕೊಂಡ ನೋವು ಹಠಾತ್ತಾಗಿ ತೀವ್ರವಾಗುವುದು ಪಿತ್ತಕೋಶದ ಕಲ್ಲಿನ ಅಪಾಯದ ಸೂಚನೆ ಇರಬಹುದು. ಅಹಾರ ಸೇವನೆಯ ಒಂದೆರಡು ಗಂಟೆಗಳ ಬಳಿಕ ಅಥವಾ ರಾತ್ರಿಯ ಯಾವುದಾದರೂ ಸಮಯದಲ್ಲಿ ಈ ನೋವು ಕಾಡುತ್ತದೆ. ಹೊಟ್ಟೆಯ ಮಧ್ಯ-ಬಲ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು, ಆ ಬಳಿಕ ಬೆನ್ನಿಗೆ ಅಥವಾ ಬಲ ಭುಜದ ಭಾಗಕ್ಕೆ ವರ್ಗಾವಣೆಯಾಗುತ್ತದೆ. ಈ ನೋವು ಅರ್ಧ ಗಂಟೆಯಿಂದ ಕೆಲವು ಗಂಟೆಗಳ ವರೆಗೂ ಇರಬಹುದು. ತೀವ್ರ ನೋವು ನಿಂತುಹೋದ ಬಳಿಕವೂ ಮೇಲುಹೊಟ್ಟೆಯಲ್ಲಿ ಸಣ್ಣಗೆ ನೋಯುತ್ತಿರುತ್ತದೆ. ಒಮ್ಮೆ ಈ ರೀತಿ ತೀವ್ರ ನೋವಿನ ಅವಧಿ ಬಂದು ಹೋದ ಬಳಿಕ, ಆ ಮೇಲೆಯೂ ಆಗಾಗ ಈ ರೀತಿ ತೀವ್ರ ನೋವು ಬಾಧಿಸಬಹುದು.
ವಾಂತಿ ಹಾಗೂ ವಾಕರಿಕೆ
ಪಿತ್ತಕೋಶಕ್ಕೆ ಅಪಾಯವಾದಾಗ ವಾಂತಿ ಹಾಗೂ ವಾಕರಿಕೆಯ ಲಕ್ಷಣಗಳು ಅದನ್ನು ಸೂಚಿಸುತ್ತವೆ.
ಜ್ವರ
ಪಿತ್ತಕೋಶದ ಕುತ್ತಿಗೆಯಲ್ಲಿ ಕಲ್ಲು ಸಿಕ್ಕಿಹಾಕಿಕೊಂಡರೆ, ಕೆಲವು ಗಂಟೆಗಳ ಕಾಲ ಅಸಹನೀಯ ನೋವು ಬಾಧಿಸುತ್ತದೆ. ಜೊತೆಗೆ ಜ್ವರವೂ ಇರಬಹುದು. ನಿಮಗೆ ಈ ರೀತಿಯಲ್ಲಿ ಆಗಾಗ ನೋವು ಬಾಧಿಸುತ್ತಿದ್ದರೆ, ಜೊತೆಗೆ ಜ್ವರವೂ ಇದ್ದರೆ, ಕೂಡಲೇ ವೈದ್ಯಕೀಯ ನೆರವನ್ನು ಪಡೆಯಿರಿ.
ಪಿತ್ತರಸ ಗ್ರಂಥಿಯ
ಅಡಚಣೆಯ ಲಕ್ಷಣಗಳು
ಕೆಲವು ಸಲ ಪಿತ್ತಕೋಶದಿಂದ ಹೊರಬಂದ ಸಣ್ಣ ಕಲ್ಲುಗಳು, ಪಿತ್ತಜನಕಾಂಗದಲ್ಲಿರುವ ಪಿತ್ತರಸ ಗ್ರಂಥಿಗಳ ಒಳಗೆ ಪ್ರವೇಶಿಸಿ, ಅಡಚಣೆ ಉಂಟುಮಾಡುತ್ತವೆ. ಈ ಸ್ಥಿತಿಯನ್ನು ಪಿತ್ತರಸ ಗ್ರಂಥಿಯ ಉರಿಯೂತ ಎಂದು (ಪ್ಯಾಂಕ್ರಿಯಾಟೈಟಿಸ್) ಹೇಳುತ್ತಾರೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೇ ಹೋದರೆ, ಜೀವಕ್ಕೇ ಅಪಾಯವಾಗಬಹುದು. ಅಡಚಣೆಯಾಗಿರುವ ಭಾಗದ ಸಮೀಪ ಉರಿಯೂತವಿರುವ ಕಾರಣದಿಂದ ನೋವು, ಜ್ವರ ಬಾಧಿಸಬಹುದು. ಚರ್ಮ ಹಾಗೂ ಕಣ್ಣಿನ ಬಿಳಿಯ ಭಾಗವು ಹಳದಿ ಆಗಬಹುದು, ಕಂದು ಬಣ್ಣದ ಮಲವಿಸರ್ಜನೆಯಾಗಬಹುದು. ಈ ಎಲ್ಲ ಲಕ್ಷಣಗಳ ಅನುಭವ ನಿಮಗೆ ಆಗುತ್ತಿದ್ದರೆ, ಆ ಕೂಡಲೇ ವೈದ್ಯರನ್ನು ಕಾಣಿರಿ.
ಕಾರಣಗಳು
ಪಿತ್ತ ಲವಣಗಳು, ಕೊಲೆಸ್ಟರಾಲ್, ಸಂಕೀರ್ಣ ಕೊಬ್ಬು ಹಾಗೂ ಇತರ ರಾಸಾಯನಿಕಗಳ ಮಿಶ್ರಣದ ಹಸಿರು - ಕಂದು ಬಣ್ಣದ ದ್ರಾವಣವೊಂದನ್ನು ಪಿತ್ತಕೋಶವು ಸ್ರವಿಸುತ್ತವೆ. ಇದನ್ನು ಪಿತ್ತರಸ ಎಂದು ಹೇಳುತ್ತಾರೆ. ಸಣ್ಣ ಕರುಳಿನಲ್ಲಿ ಕೊಬ್ಬಿನ ಅಂಶವಿರುವ ಆಹಾರವನ್ನು ಜೀರ್ಣಿಸಲು ಆವಶ್ಯಕವಿರುವ ಈ ಪ್ರಬಲ ಪಿತ್ತರಸವು ಪಿತ್ತಕೋಶದಲ್ಲಿ ಸಂಗ್ರಹವಾಗುತ್ತದೆ.
ನೀವು ಏನಾದರೂ ಆಹಾರ ಸೇವಿಸಿದಾಗ ಸಣ್ಣ ಸಣ್ಣ ಗುಳ್ಳೆಗಳಲ್ಲಿರುವ ಪಿತ್ತರಸ ಗ್ರಂಥಿಗಳಿಂದ ಪಿತ್ತರಸವು ಸಾಮಾನ್ಯ ರಸಗ್ರಂಥಿಗೆ ಸ್ರವಿಸುತ್ತದೆ. ಈ ಸಾಮಾನ್ಯ ರಸಗ್ರಂಥಿಯ ಮೂಲಕ ಸಣ್ಣ ಕರುಳಿನ ಮೇಲಿನ ಭಾಗಗಳಿಗೆ ಪಿತ್ತರಸವು ಸಾಗುತ್ತದೆ ಹಾಗೂ ಅಲ್ಲಿ ಆಹಾರದಲ್ಲಿರುವ ಕೊಬ್ಬಿನ ಅಂಶ ವಿಭಜನೆಯಾಗುತ್ತದೆ. ಆದರೆ ಕೆಲವೊಮ್ಮೆ ಪಿತ್ತಕೋಶದಲ್ಲಿ ಇರುವ ಪಿತ್ತರಸದಲ್ಲಿಯೇ ರಾಸಾಯನಿಕ ಬದಲಾವಣೆಗಳಾಗುವ ಅಸಹಜತೆ ಉಂಟಾಗುತ್ತದೆ.
ಈ ರಾಸಾಯನಿಕ ಬದಲಾವಣೆಯ ಕಾರಣದಿಂದಾಗಿ ಪಿತ್ತರಸದಲ್ಲಿಯೇ ಇರುವ ಅಂಶಗಳು ಕಲ್ಲುಗಳಾಗಿ ಬೆಳೆಯುತ್ತವೆ. ಈ ಕಲ್ಲುಗಳು ಗಾತ್ರದಲ್ಲಿ ಸಣ್ಣ ಮರಳಿನ ಕಣದಿಂದ ಹಿಡಿದು ಗಾಲ್ಫ್ಧಿ ಚೆಂಡಿನಷ್ಟು ದೊಡ್ಡದಿರಬಹುದು. ಉರುಟು ಅಥವಾ ನಿಖರ ಆಕಾರ ರಹಿತವಾಗಿ ಇರುವ ಈ ಕಲ್ಲುಗಳು ಒಂದು ಅಥವಾ ಹಲವಾರು ಇರಬಹುದು.
ಪಿತ್ತಕೋಶದ ಕಲ್ಲುಗಳಲ್ಲಿರುವ
ವಿಧಗಳು
ವಿವಿಧ ಆಕಾರ, ಗಾತ್ರ, ಸಂಖ್ಯೆಗಳಲ್ಲಿ ಇರುವ ಪಿತ್ತಕೋಶದ ಕಲ್ಲುಗಳಲ್ಲಿ ಎರಡು ವಿಧಗಳು.
ಕೊಲೆಸ್ಟ್ರಾಲಿನ ಪಿತ್ತಕೋಶದ ಕಲ್ಲು
ಈ ರೀತಿಯ ಕಲ್ಲುಗಳು ಹೆಚ್ಚಾಗಿ ಹಳದಿ ಬಣ್ಣದಲ್ಲಿ ಇರುತ್ತವೆ. ಕರಗದೇ ಇರುವ ಕೊಲೆಸ್ಟರಾಲ್, ಕ್ಯಾಲ್ಸಿಯಂ ಹಾಗೂ ಬಿಲಿರುಬಿನ್ ಎಂಬ ಕೆಂಪು ರಕ್ತ ಕಣದ ಅಂಶಗಳಿಂದ ಈ ಕಲ್ಲುಗಳು ಉಂಟಾಗುತ್ತವೆ. ಪ್ರತಿಶತ 80ರಷ್ಟು ಪಿತ್ತಕೋಶದ ಕಲ್ಲುಗಳು ಕೊಲೆಸ್ಟರಾಲ್ ವರ್ಗದವುಗಳು.
ಪಿಗ್‌ಮೆಂಟ್ ಗಾಲ್‌ಸ್ಟೋನ್ಸ್
ಪಿತ್ತರಸದಲ್ಲಿ ಬಿಲಿರುಬಿನ್ ಅಂಶವು ಹೆಚ್ಚು ಇದ್ದಾಗ, ಈ ರೀತಿಯ ಸೂಕ್ಷ್ಮ ಕಪ್ಪು ಅಥವಾ ಕಂದು ಬಣ್ಣದ ಕಲ್ಲುಗಳು ಉಂಟಾಗುತ್ತವೆ. ಈ ರೀತಿ ಬಿಲಿರುಬಿನ್ ಅಂಶವು ಹೆಚ್ಚಾಗಲು ಕಾರಣವೇನೆಂದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೂ ಸಿರೋಸಿಸ್, ಪಿತ್ತರಸ ನಾಳದ ಸೋಂಕು, ಸಿಕ್ಕಲ್ ಕೋಶದ
ಅನಿಮಿಯಾ... ಇಂತಹ ಕಾಯಿಲೆ ಇರುವವರಲ್ಲಿ ಬಿಲಿರುಬಿನ್
ಅಂಶ ಹೆಚ್ಚು ಉತ್ಪತ್ತಿಯಾಗುತ್ತದೆ ಎಂಬ ಭಾವನೆ ಇದೆ.
ಕಲ್ಲುಗಳಾಗಲು ಪ್ರೇರಿಸುವ
ಅಂಶಗಳು
ಪಿತ್ತಕೋಶದಲ್ಲಿ ಕಲ್ಲುಗಳುಂಟಾಗಲು ಪ್ರೇರೇಪಿಸುವ ಕೆಲವು ಅಂಶಗಳೆಂದರೆ,
ಕೊಲೆಸ್ಟರಾಲ್‌ನ ಹೆಚ್ಚಳ
ಪಿತ್ತಜನಕಾಂಗದಿಂದ ಹೊರಬಂದ ಕೊಲೆಸ್ಟರಾಲನ್ನು ಕರಗಿಸಲು, ಸಾಮಾನ್ಯವಾಗಿ ಪಿತ್ತರಸವು ಪಿತ್ತ ಲವಣ ಹಾಗೂ ಲ್ಯಾಸಿಟಿನ್‌ಎಂಬ ಸಂಕೀರ್ಣ ಕೊಬ್ಬಿನ ಅಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆ. ಆದರೆ ಪಿತ್ತರಸದಲ್ಲಿ ಕೊಲೆಸ್ಟರಾಲ್‌ನ ಪ್ರಮಾಣ ಹೆಚ್ಚಾದರೆ, ಅವು ಮುಂದಕ್ಕೆ ಬೆಳೆದು ಕಲ್ಲುಗಳಾಗುತ್ತವೆ.
ಪಿತ್ತರಸದಲ್ಲಿರುವ ಕೊಲೆಸ್ಟರಾಲಿಗೂ ನಿಮ್ಮ ರಕ್ತದಲ್ಲಿ ಇರುವ ಕೊಲೆಸ್ಟರಾಲಿಗೂ ಯಾವುದೇ ರೀತಿಯ ಸಂಬಂಧ ಇಲ್ಲದಿರುವುದರಿಂದ, ಕೊಲೆಸ್ಟರಾಲನ್ನು ತಗ್ಗಿಸುವ ಔಷಧಿಗಳಿಂದ ಪಿತ್ತಕೋಶದ ಕಲ್ಲುಗಳಾಗದಂತೆ ತಡೆಯಲು ಸಾಧ್ಯವಿಲ್ಲ.
ಪಿತ್ತಕೋಶ ಸಂಪೂರ್ಣ ಖಾಲಿ ಆಗದಿರುವುದು
ಪಿತ್ತಕೋಶವು ಸಂಪೂರ್ಣವಾಗಿ ಅಥವಾ ಸಾಕಷ್ಟು ಖಾಲಿ ಆಗದಿದ್ದರೆ, ಅದರಲ್ಲಿರುವ ಪಿತ್ತರಸವು ಪ್ರಬಲವಾಗಿ, ಕಲ್ಲುಗಳಾಗಬಹುದು. ಗರ್ಭಿಣಿಯರಲ್ಲಿ ಈ ರೀತಿ ಆಗುತ್ತದೆ. ಸ್ವಲ್ಪವೇ ಆಹಾರ ವನ್ನು ಸೇವಿಸುವುದು ಅಥವಾ ಬಹಳ ಸಮಯ ಹೊಟ್ಟೆಯನ್ನು ಖಾಲಿಯಾಗಿ ಇರಿಸುವುದು- ಇದರಿಂದ ಪಿತ್ತಕೋಶದ ಸಂಕುಚನೆಯು ಕುಗ್ಗುತ್ತದೆ. ಪಿತ್ತಕೋಶವು ಸಂಕುಚಿಸುವುದು ಕಡಿಮೆಯಾದರೆ, ಪಿತ್ತಕೋಶವು ಖಾಲಿಯಾಗಲು ಅಥವಾ ಪದೇ ಪದೇ ಖಾಲಿಯಾಗಲು ಕಷ್ಟವಾಗುತ್ತದೆ.
ಅಪಾಯ ಪೂರಕ ಅಂಶಗಳು
ಪಿತ್ತಕೋಶದ ಕಲ್ಲುಗಳಾಗುವ ಕಾಯಿಲೆಯು ಆನುವಂಶಿಕವಾಗಿ ಬರುವ ಸಾಧ್ಯತೆ ಇದೆ. ಇತರ ಅಪಾಯಕಾರಿ ಅಂಶಗಳೆಂದರೆ
ಲಿಂಗ
20ರಿಂದ 60 ವರ್ಷ ಪ್ರಾಯದೊಳ ಗಿನ ಮಹಿಳೆಯರಿಗೆ ಈ ಕಾಯಿಲೆ ಬರುವ ಸಾಧ್ಯತೆ, ಇದೇ ವಯೋಮಾನದ ಪುರುಷರಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಸ್ತ್ರೀ ಹಾರ್ಮೋನ್ ಈಸ್ಟ್ರೋಜನಿನ ಕಾರಣ ದಿಂದ ಅಧಿಕ ಪ್ರಮಾಣದ ಕೊಲೆಸ್ಟರಾಲ್ ಪಿತ್ತರಸಕ್ಕೆ ಸೇರುತ್ತದೆ. ಗರ್ಭಾವಸ್ಥೆಯು ಸ್ತ್ರೀಯರ ಈಸ್ಟ್ರೋಜನ್ ಮಟ್ಟವನ್ನು ಏರಿಸುತ್ತದೆ. ಇದರಿಂದ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಅಪಾಯವಿದೆ. ಇಷ್ಟು ಮಾತ್ರವಲ್ಲದೆ, ಜನನ ನಿಯಂತ್ರಣ ಮಾತ್ರೆಗಳು ಹಾಗೂ ಹಾರ್ಮೋನ್ ಚಿಕಿತ್ಸೆಗಳು ಪಿತ್ತರಸದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಏರಿಸುತ್ತವೆ. ಇದೇ ಕಾರಣದಿಂದ ಪಿತ್ತಕೋಶವು ಸಂಪೂರ್ಣವಾಗಿ ಖಾಲಿ ಆಗದೇ ಇರಬಹುದು. ಪಿತ್ತಕೋಶದಲ್ಲಿ ಕಲ್ಲುಗಳಿದ್ದು, ನೀವು ಮೇಲೆ ಹೇಳಿರುವ ಔಷಧೋಪಚಾರವನ್ನು ಪಡೆಯುತ್ತಿರುವಿರಾದರೆ, ಈ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.
ದೇಹ ತೂಕ
ದೇಹದ ಗಾತ್ರ ಸೂಚಕವು ನಿಮ್ಮ ದೇಹತೂಕವು ಹೆಚ್ಚುತ್ತಿರುವ ಸೂಚನೆಯನ್ನು ನೀಡುತ್ತಿದ್ದರೆ, ನಿಮಗೆ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಅಪಾಯವಿರಬಹುದು. ಒಂದು ಹದಕ್ಕಿಂತ ಹೆಚ್ಚು ಇರುವ ದೇಹ ತೂಕದಿಂದ ಪಿತ್ತರಸದಲ್ಲಿ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುವ ಅಪಾಯವಿದೆ. ದೇಹತೂಕ ಹೆಚ್ಚಾಗುವುದರಿಂದ, ಕೊಲೆಸ್ಟರಾಲ್ ಪ್ರಮಾಣವೂ ಹೆಚ್ಚು ತ್ತದೆ. ಇದರಿಂದಾಗಿ ಪಿತ್ತರಸದ ಪ್ರಮಾಣವು ತಗ್ಗುತ್ತದೆ. ಜೊತೆಗೆ ಪಿತ್ತಕೋಶವು ಸಂಕುಚನಗೊಳ್ಳುವ ಹಾಗೂ ಖಾಲಿಯಾಗುವ ಪ್ರಮಾಣವು ಕಡಿಮೆಯಾಗುತ್ತದೆ.
ಆಹಾರ ಕ್ರಮ
ಕಡಿಮೆ ಪೋಷಕಾಂಶವಿರುವ ಆಹಾರ, ಶೀಘ್ರವಾಗಿ ತೂಕವಿಳಿಸುವ ಆಹಾರ ಕ್ರಮಗಳಿಂದಾಗಿ ಪಿತ್ತರಸದ ಚಟುವಟಿಕೆಗಳಲ್ಲಿ ವ್ಯತ್ಯಾಸಗಳಾಗಬಹುದು. ಇದೇ ಕಾರಣದಿಂದ ಪಿತ್ತಕೋಶದ ಸಂಕೋಚನಾ ಪ್ರವೃತ್ತಿಯೂ ಕುಗ್ಗಬಹುದು. ವಾರಕ್ಕೆ ಮೂರು ಪೌಂಡುಗಳಿಗಿಂತಲೂ ಹೆಚ್ಚು ತೂಕವನ್ನು ಒಮ್ಮೆಲೇ ಕಳೆದುಕೊಳ್ಳುವುದರಿಂದ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಅಪಾಯವಿದೆ. ನಿಧಾನಕ್ಕೆ ತೂಕವನ್ನು ಇಳಿಸಿಕೊಳ್ಳುವಲ್ಲಿ ಈ ಅಪಾಯವಿರುವುದಿಲ್ಲ.
ತೂಕ ಇಳಿಸಿಕೊಳ್ಳಲು ಗ್ಯಾಸ್ಟ್ರೊಇಂಟೆಸ್ಟೈನಲ್ ಅಥವಾ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಒಳಗಾಗುವವಗೂ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಸಾಧ್ಯತೆ ಇದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾಗುವ ಪ್ರತೀ ಮೂವರಲ್ಲಿ ಒಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಕೆಲವು ತಿಂಗಳ ಬಳಿಕ ಪಿತ್ತಕೋಶದಲ್ಲಿ ಕಲ್ಲುಗಳಿರುವ ಲಕ್ಷಣಗಳು ಕಂಡುಬರುತ್ತವೆ.
ವಯಸ್ಸು
ವಯಸ್ಸು ಹೆಚ್ಚಾದಂತೆ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಸಾಧ್ಯತೆಯು ಹೆಚ್ಚುತ್ತದೆ. ಯುವಕರಿಗೆ ಹೋಲಿಸಿದರೆ, 60 ವರ್ಷ ಮೇಲ್ಪಟ್ಟವರಲ್ಲಿ ಪಿತ್ತಕೋಶದ ಕಲ್ಲಿನ ತೊಂದರೆ ಹೆಚ್ಚು ಕಂಡುಬರುತ್ತದೆ.
ವೈದ್ಯರ ಸಲಹೆ ಯಾವಾಗ
ಪಡೆಯಬೇಕು?
ಹೊಟ್ಟೆಯಲ್ಲಿ ಹಠಾತ್ತಾಗಿ ತೀವ್ರ ನೋವು ಕಾಣಿಸಿಕೊಂಡರೆ, ಜೊತೆಗೆ ವಾಂತಿ, ವಾಕರಿಕೆ, ಜ್ವರಗಳೂ ಇದ್ದರೆ ಕೂಡಲೇ ವೈದ್ಯರನ್ನು ಕಾಣಿರಿ. ಪಿತ್ತರಸ ಗ್ರಂಥಿಯ ಅಡಚಣೆಯ ಲಕ್ಷಣಗಳಾದ ಹೊಟ್ಟೆನೋವು, ಚರ್ಮ ಹಾಗೂ ಕಣ್ಣಿನ ಬಿಳಿ ಭಾಗಗಳು ಹಳದಿಯಾಗುವುದು, ಮೂತ್ರದ ಬಣ್ಣ ದಟ್ಟವಾಗುವುದು, ಚಳಿ ಹಾಗೂ ತೀವ್ರ ಜ್ವರ... ಇತ್ಯಾದಿ ಲಕ್ಷಣಗಳಲ್ಲಿ ಒಂದು ಅಥವಾ ಹೆಚ್ಚು ಲಕ್ಷಣಗಳು ಇದ್ದಲ್ಲಿ, ಕೂಡಲೇ ವೈದ್ಯಕೀಯ ನೆರವನ್ನು ಪಡೆಯಿರಿ.
ತಪಾಸಣೆ ಮತ್ತು ಪರೀಕ್ಷೆಗಳು
ಬೇರೆ ರೋಗ ಬಾಧೆಗಳ ಕಾರಣ ದಿಂದ ಮಾಡುವ ಅಲ್ಟ್ರಾಸೌಂಡ್ ಅಥವಾ ಕಂಪ್ಯೂಟರೈಸ್ಡ್ ಟೊಮೋ ಗ್ರಫಿಯ ಸಂದರ್ಭದಲ್ಲಿ ಚಿಹ್ನೆ ಹಾಗೂ ಲಕ್ಷಣಗಳು ಏನೂ ಇರದಿ ರುವ ಪಿತ್ತಕೋಶದ ಕಲ್ಲುಗಳು ಪತ್ತೆಯಾಗುತ್ತವೆ.
ಒಂದು ವೇಳೆ ನಿಮಗೆ ಪಿತ್ತಕೋಶದಲ್ಲಿ ಕಲ್ಲುಗಳಾಗಿರುವ ಲಕ್ಷಣಗಳು ಇದ್ದರೆ, ವೈದ್ಯರೂ ಅದನ್ನು ನಿಮ್ಮ ಆರೋಗ್ಯ ಹಿನ್ನೆಲೆ ಹಾಗೂ ದೈಹಿಕ ಪರೀಕ್ಷೆಯ ಮೂಲಕ ಪತ್ತೆ ಮಾಡುತ್ತಾರೆ. ನಿಮ್ಮ ದೇಹದ ಚರ್ಮ ಹಾಗೂ ಕಣ್ಣಿನ ಬಿಳಿಯ ಭಾಗ ಹಳದಿಯಾಗಿದೆಯೇ ಹೊಟ್ಟೆಯಲ್ಲಿ ನೋವು ಇದೆಯೇ ಎಂದು ಒತ್ತಿ ಪರೀಕ್ಷಿಸುತ್ತಾರೆ. ವೈದ್ಯರು ನಿಮ್ಮದು ಪಿತ್ತಕೋಶದ ಕಲ್ಲಿನ ತೊಂದರೆ ಎಂಬ ಸಂದೇಹ ನಿವಾರಣೆಗಾಗಿ ರಕ್ತಪರೀಕ್ಷೆಯನ್ನು ಮಾಡುವಂತೆ ಸೂಚಿಸಬಹುದು. ರಕ್ತದಲ್ಲಿ ಸೋಂಕಿರುವ ಲಕ್ಷಣಗಳಿದ್ದರೆ, ಅಂದರೆ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚಿದ್ದರೆ, ಪಿತ್ತಜನಕಾಂಗದ ಮಟ್ಟವು ಅಸಹಜವಾಗಿದ್ದರೆ ಅಥವಾ ಬಿಲಿರುಬಿನ್, ಪಿತ್ತಕೋಶದ ಕಿಣ್ವ... ಇತ್ಯಾದಿಗಳ ಪ್ರಮಾಣದಲ್ಲಿ ಅಸಹಜತೆಗಳಿದ್ದರೆ ಈ ಮೂಲಕ ವೈದ್ಯರು ನಿಮಗಾಗಿರುವುದು ಪಿತ್ತ ಕೋಶದ ಕಲ್ಲಿನ ತೊಂದರೆ ಎಂಬುದನ್ನು ಖಚಿತಗೊಳಿಸುತ್ತಾರೆ. ಇಷ್ಟಲ್ಲದೇ ನೀವು ಇತರ ತಪಾಸಣಾ ಪರೀಕ್ಷೆಗಳನ್ನೂ ಮಾಡಿಸಿಕೊಳ್ಳಬೇಕಾಗಬಹುದು.
ಅಲ್ಟ್ರಾಸೋನೋಗ್ರಫಿ
ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಎಕ್ಸ್-ರೇ ಕಿರಣಗಳು ಪಿತ್ತಕೋಶ ಇತ್ಯಾದಿ ಅಂಗಗಳ ಪ್ರತಿಬಿಂಬವನ್ನು ಮೂಡಿಸುತ್ತವೆ. ಪಿತ್ತಕೋಶದಲ್ಲಿ ಅಥವಾ ಸಾಮಾನ್ಯ ಪಿತ್ತರಸ ಗ್ರಂಥಿ ಯಲ್ಲಿ ಕಲ್ಲುಗಳಿವೆಯೇ ಎಂದು ಈ ಪರೀಕ್ಷೆಯಿಂದ ನಿಖರವಾಗಿ ತಿಳಿಯಬಹುದು.
ಕಂಪ್ಯೂಟರೈಸ್ಡ್ಟೋಮೊಗ್ರಫಿ
ಈ ಪರೀಕ್ಷೆಯಲ್ಲಿ ಕಂಪ್ಯೂಟರ್‌ನಿಂದ ಉತ್ಪಾದಿತ ಎಕ್ಸ್-ರೇಗಳ ಪ್ರವಾಹವು ದೇಹದ ಒಳ ಅಂಗಗಳ ವಿಸ್ತತ ಬಿಂಬವನ್ನು ಒದಗಿಸುತ್ತದೆ.
ರೇಡಿಯೋ ನ್ಯೂಕ್ಲೈಡ್‌ಸ್ಕ್ಯಾನ್
ಈ ಪರೀಕ್ಷೆಯಲ್ಲಿ ನಿಮಗೆ ರೇಡಿಯೋ ಆ್ಯಕ್ಟಿವ್ ಅಥವಾ ವಿಕಿರಣಶೀಲ ಪತ್ತೆಕಾರಕ ಅಂಶವೊಂದನ್ನು, ರಕ್ತನಾಳಕ್ಕೆ ಚುಚ್ಚುತ್ತಾರೆ ಹಾಗೂ ಸ್ಕ್ಯಾನ್ ಮೂಲಕ ಅದು ಕ್ರಮಿಸುವ ಹಾದಿಯನ್ನು ಗಮನಿಸುತ್ತಾರೆ. ಪಿತ್ತಕೋಶದಲ್ಲಿ ಕಲ್ಲುಗಳಿರದೆ ಯಾವುದೇ ರೀತಿಯ ಅಡಚಣೆಗಳು ಇಲ್ಲದಿದ್ದರೆ ವಿಕಿರಣಶೀಲ ಪತ್ತೆಕಾರಕವು ಪಿತ್ತಿಕೋಶದ ತೆರವಿನ ಮೂಲಕ ಹೊರಬರುತ್ತವೆ.
ಎಂಡೊಸ್ಕೋಪಿಕ್
ರೆಟ್ರಾಗ್ರೇಡ್ ಕೊಲಾಂಜಿಯೋ
ಪ್ಯಾಂಕ್ರಿಯಾಟೊಗ್ರಫಿ
ಪಿತ್ತಕೋಶದಲ್ಲಿ ಕಲ್ಲು ಇರುವ ಜಾಗ ಪತ್ತೆ ಮಾಡಲು ಹಾಗೂ ಕಲ್ಲನ್ನು ತೆಗೆದು ಹಾಕಲು ವೈದ್ಯರು ಈ ಪರೀಕ್ಷೆಯನ್ನು ನಡೆಸುತ್ತಾರೆ. ಉRಇಕಯಲ್ಲಿ ವೈದ್ಯರು ಸೂಕ್ಷ್ಮವಾದ, ಬಳುಕುವ, ಬೆಳಕು ಬೀರುವ ಎಂಡೊಸ್ಕೋಪ್ ಎಂಬ ಸಾಧನವನ್ನು ಬಾಯಿಯ ಮೂಲಕ, ಹೊಟ್ಟೆಗೆ ಅಂದರೆ ಸಣ್ಣ ಕರುಳಿನ ಮೇಲಿನ ಭಾಗಕ್ಕೆ ಇಳಿಸುತ್ತಾರೆ. ಮೇದೋಜೀರಕ ರಸಗ್ರಂಥಿ ಹಾಗೂ ಪಿತ್ತರಸ ಗ್ರಂಥಿಗಳ ತೆರವನ್ನು ಸರಿಯಾಗಿ ನೋಡಿಕೊಂಡು ಚಿಕಿತ್ಸೆ ನೀಡಲು ಜೀರ್ಣಾಂಗ ವ್ಯೂಹದೊಳಕ್ಕೆ ಗಾಳಿಯನ್ನು ಸೇರಿಸಿ ಅದನ್ನು ಉಬ್ಬಿಸುತ್ತಾರೆ. ಆಮೇಲೆ ಸೂಕ್ಷ್ಮ ನಳಿಕೆಯ ಮೂಲಕ ಗ್ರಂಥಿಗಳಿಗೆ ಬಣ್ಣವನ್ನು ಚುಚ್ಚುತ್ತಾರೆ. ಆ ಬಣ್ಣವು ಎಂಡೊಸ್ಕೋಪ್‌ನ ಮೂಲಕ ಚಲಿಸುತ್ತದೆ. ಅಂತಿಮವಾಗಿ ಇದರ ಎಕ್ಸ್-ರೇ ಬಿಂಬವನ್ನು ಪಡೆಯುತ್ತಾರೆ.
ಕಲ್ಲಿನಿಂದಾಗಿ ಯಾವುದಾದರೂ ಗ್ರಂಥಿಯಲ್ಲಿ ಅಡಚಣೆಯಾಗಿದ್ದರೆ; ಈ ಕಲ್ಲನ್ನು ಕತ್ತರಿಸಲು ವಿಶೇಷವಾದ ಸಾಧನವನ್ನು ಎಂಡೊಸ್ಕೋಪ್ ಮೂಲಕ ಆ ಜಾಗದಲ್ಲಿ ಅಳವಡಿಸುತ್ತಾರೆ. ಕೆಲವು ಆರೋಗ್ಯ ಕೇಂದ್ರಗಳಲ್ಲಿ ಮ್ಯಾಗ್ನೆಟಿಕ್ ರೆಸಾನೆನ್ಸ್ ಕೋಲ್ಯಾಂಜಿಯೋ ಪ್ಯಾಂಕ್ರಿಯಾಟೋಗ್ರಫಿ ಎಂಬ ವಿಧಾನದಿಂದ ಪಿತ್ತರಸ ಗ್ರಂಥಿಯಲ್ಲಿ ಅಡಚಣೆಯಾಗಿರುವ ಕಲ್ಲನ್ನು ಪತ್ತೆಮಾಡುತ್ತಾರೆ. ಆದರೆ ಈ ವಿಧಾನದಿಂದ ಕಲ್ಲನ್ನು ನಿವಾರಿಸಲು ಸಾಧ್ಯವಾಗಲಾರದು.
ಎಂಡೊಸ್ಕೋಪಿಕ್
ಅಲ್ಟ್ರಾಸೌಂಡ್
ಸಾಮಾನ್ಯ ಪಿತ್ತರಸ ಗ್ರಂಥಿಯಲ್ಲಿರುವ ಕಲ್ಲನ್ನು ವೈದ್ಯರು ಈ ವಿಧಾನದಿಂದ ಪತ್ತೆಮಾಡುತ್ತಾರೆ. ಒಂದು ಅಲ್ಟ್ರಾಸೌಂಡ್ ಟ್ರಾನ್ಸ್‌ಡ್ನೂಸರ್‌ನ್ನು ಎಂಡೊಸ್ಕೋಪ್‌ನ ತುದಿಯಲ್ಲಿ ಇರಿಸಿ, ಅದನ್ನು ಬಾಯಿಯ ಮೂಲಕ ಹೊಟ್ಟೆಗೆ ಇಳಿಸುತ್ತಾರೆ. ಪಿತ್ತರಸ ಗ್ರಂಥಿಗೆ ಈ ಅಲ್ಟ್ರಾಸೌಂಡ್ ಸಾಧನವು ಅತ್ಯಂತ ಸಮೀಪದಲ್ಲಿ ಇರುವುದರಿಂದ, ಇತರ ವಿಧಾನಗಳಿಗಿಂತ ಈ ವಿಧಾನದಲ್ಲಿ ಬಿಂಬವು ಹೆಚ್ಚು ನಿಖರವಾಗಿ ದೊರಕುತ್ತದೆ. ಆದರೆ ಈ ವಿಧಾನದಲ್ಲಿ ಕಲ್ಲುಗಳನ್ನು ಪತ್ತೆಮಾಡಲು ಮಾತ್ರ ಸಾಧ್ಯವಿರುವುದರಿಂದ ಕಲ್ಲುಗಳ ನಿವಾರಣೆಗೆ ಮತ್ತೆ ಉRಇಕ ವಿಧಾನವನ್ನೇ ಮಾಡಬೇಕಾಗುತ್ತದೆ.
ತೊಡಕುಗಳು
ಸಾಮಾನ್ಯ ಪಿತ್ತರಸ ಗ್ರಂಥಿಯ ಅಡಚಣೆ
ಕೆಲವು ಸಲ ಪಿತ್ತಕೋಶ, ಪಿತ್ತಜನಕಾಂಗ ಅಥವಾ ಮೇದೋಜಿರಕದಿಂದ ಸಣ್ಣ ಕರುಳಿನ ವರೆಗಿನ ಗ್ರಂಥಿಗಳು ಕಲ್ಲಿನಿಂದ ಅಡಚಣೆಗೊಂಡಿರುತ್ತವೆ. ಈ ರೀತಿಯ ಅಡಚಣೆಯನ್ನು ಪಿತ್ತರಸ ಗ್ರಂಥಿಯ ಅಡಚಣೆ ಎಂದು ಹೇಳುತ್ತಾರೆ. ಇದರ ಲಕ್ಷಣವೆಂದರೆ ಕಣ್ಣಿನ ಬಿಳಿಭಾಗ ಹಾಗೂ ಚರ್ಮ ಹಳದಿಯಾಗುವುದು, ಮೂತ್ರದ ಬಣ್ಣ ದಟ್ಟವಾಗುವುದು ಹಾಗೂ ಮೇಲಿನ ಹೊಟ್ಟೆಯಲ್ಲಿ ನೋವು... ಇತ್ಯಾದಿ. ಒಂದು ವೇಳೆ ನಿಮಗೆ ಚಳಿ ಹಾಗೂ ಜ್ವರಗಳೂ ಇದ್ದರೆ, ಅದು ಪಿತ್ತಕೋಶದ ಉರಿಯೂತ ಅಥವಾ ಪಿತ್ತರಸ ಗ್ರಂಥಿಯ ಸೋಂಕಿನ ಸೂಚನೆ ಇರಬಹುದು.